ಮೂಗೂರು: ಕಲಿತ ವಿದ್ಯೆಯನ್ನು ದೈನಂದಿನ ಜೀವನಕ್ಕೆ ಅಳವಡಿಸಿಕೊಂಡಾಗ ಮಾತ್ರ ಶಿಕ್ಷಣ ಸಾರ್ಥಕವಾಗುತ್ತದೆ ಎಂದು ಪಟ್ಟಣದ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎನ್.ಮೋಹನ್ ಕುಮಾರ್ ತಿಳಿಸಿದರು.
ಪಟ್ಟಣದ ಸರ್ಕಾರಿ ಫ್ರೌಡಶಾಲೆಯಲ್ಲಿ ನಡೆದ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆ ಹಾಗೂ ಹಸಿರು ಪಡೆ ವಿಜಾnನ ಮತ್ತು ಸಾಹಿತ್ಯ ಸಂಘದ ಸಮಾರೋಪ ಸಮಾರಂಭ, ಶಾಲಾ ವಾರ್ಷಿಕೋತ್ಸವದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳ ಪ್ರಗತಿಯ ಹಿಂದೆ ಶಿಕ್ಷಕರ ಶ್ರಮ ಅಡಗಿದೆ ಎಂದರು.
ವಿದ್ಯಾರ್ಥಿಗಳನ್ನು ಸಂಸ್ಕಾರವಂತರನ್ನಾಗಿ ಮಾಡುವ ಶಿಕ್ಷಣ ಅತಿಮುಖ್ಯ. ಆದಕಾರಣ ಶಿಕ್ಷಕರು ಇದರತ್ತ ಗಮನ ಹರಿಸಬೇಕು ಎಂದು ಕಿವಿಮಾತು ಹೇಳಿದರು. ವಿದ್ಯಾರ್ಥಿಗಳು ಸಹ ಅತ್ಯಂತ ಶ್ರದ್ಧೆಯಿಂದ ಅಭ್ಯಾಸ ಮಾಡಬೇಕು. ವಿದ್ಯಾವಂತರಾಗುವ ಮೂಲಕ ಜನ್ಮನೀಡಿದ ಊರು, ಪೋಷಕರು ಹಾಗೂ ಶಿಕ್ಷಕರಿಗೆ ಕೀರ್ತಿ ತರಬೇಕು. ಪಠ್ಯದ ಜತೆಗೆ ಪಠ್ಯತೇತರ ಚಟುವಟಿಕೆಗಳಲ್ಲೂ ಆಸಕ್ತಿವಹಿಸಬೇಕು.
ವಿದ್ಯಾರ್ಥಿ ಜೀವನ ಎಂಬುದು ಕೇಲವ ಪುಸ್ತಕಕ್ಕೆ ಮಾತ್ರ ಸೀಮಿತವಾಗಬಾರದು. ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆ, ಸಾಹಿತ್ಯ ಹೀಗೆ ನಾನಾ ಕ್ಷೇತ್ರಗಳಲ್ಲಿ ವಿದ್ಯಾರ್ಥಿಗಳು ಸಕ್ರಿಯರಾಗಬೇಕು ಎಂದು ಆಶಿಸಿದರು. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಮೊದಲು ತಮ್ಮಲ್ಲಿರುವ ಕೀಳರಿಮೆಯನ್ನು ದೂರ ಮಾಡಬೇಕು.
ನಿರಂತರ ಅಧ್ಯಯನದ ಮುಖಾಂತರ ತಮ್ಮ ಭವಿಷ್ಯವನ್ನು ಉಜ್ವಲಗೊಳಿಸಿಕೊಳ್ಳುವತ್ತ ಗಮನ ಹರಿಸಬೇಕು. ಗ್ರಾಮಾಂತರ ಪ್ರದೇಶದ ಮಕ್ಕಳು ಉನ್ನತ ಶಿಕ್ಷಣ ಪಡೆಯಬೇಕು. ಇದಕ್ಕಾಗಿ ನಿರಂತರ ಶ್ರಮವಹಿಸಬೇಕು ಎಂದು ಕಿವಿಮಾತು ಹೇಳಿದರು.
ಇದೇ ವೇಳೆ ಕ್ರೀಡೆ ಸೇರಿದಂತೆ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಈ ಸಂದರ್ಭದಲ್ಲಿ ಮಕ್ಕಳು ನೀಡಿದ ಸಾಂಸ್ಕೃತಿಕ ಕಾರ್ಯಕ್ರಮ ನೋಡುಗರ ಮನಸೂರೆಗೊಂಡಿತು.
ಎಸ್‌ಡಿಎಂಸಿ ಅಧ್ಯಕ್ಷ ಎನ್.ನಾಗೇಂದ್ರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮುಖ್ಯಶಿಕ್ಷಕರಾದ ಜಗದೀಶ್‌ಮೂರ್ತಿ, ನಿಂಗರಾಜು, ಜಯಶಂಕರ್ ಮೂರ್ತಿ, ಕಾಂತರಾಜು, ಸಹಶಿಕ್ಷಕರಾದ ಕಾವೇರಿ, ಮಹದೇವು, ಕೇಶವ, ಶಂಕರ್, ಶಂಕರಯ್ಯ, ಮಲ್ಲೇಶ್, ಶಾಲಾ ಶಿಕ್ಷಕ ವೃಂದ, ಗ್ರಾಮಸ್ಥರು ಹಾಜರಿದ್ದರು.