Advertisement

ಮಕ್ಕಳ ಸಂಖ್ಯೆ ಆಧಾರದಲ್ಲಿ ಶಿಕ್ಷಣ ಸಂಸ್ಥೆ ಅಭಿವೃದ್ಧಿ: ಸಚಿವ ನಾಗೇಶ್‌

07:34 PM Oct 08, 2021 | Team Udayavani |

ಕುಂದಾಪುರ: ಮಕ್ಕಳ ಸಂಖ್ಯೆ ಹಾಗೂ ಶಿಕ್ಷಕರ ಸಂಖ್ಯೆಯ ಅನುಪಾತದಲ್ಲಿ ಅಸಮತೋಲನ ಇದ್ದು ಮಕ್ಕಳ ಸಂಖ್ಯೆ ಆಧಾರದಲ್ಲಿ ಶೈಕ್ಷಣಿಕ ಸಂಸ್ಥೆಗಳ ಅಭಿವೃದ್ಧಿಯ ಕುರಿತು ಚಿಂತನೆ ನಡೆದಿದೆ. ಪಂಚಾಯತ್‌ ಮಟ್ಟದಲ್ಲಿ ಬಸ್‌ ಸೌಲಭ್ಯ ಸೇರಿದಂತೆ ಮಾದರಿ ಶಾಲೆ ಸ್ಥಾಪನೆ ಕುರಿತು ಯೋಚನೆಗಳು ನಡೆಯುತ್ತಿವೆ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ಹೇಳಿದರು.

Advertisement

ಅವರು ಶುಕ್ರವಾರ ಇಲ್ಲಿನ ಸರಕಾರಿ ಜೂನಿಯರ್‌ ಕಾಲೇಜಿಗೆ ಭೇಟಿ ನೀಡಿ, ಎಲ್ಲೆಡೆ ಒಂದೇ ಬಾರಿಗೆ ಒಂದೇ ಮಾದರಿಯ ಶಿಕ್ಷಣ ಸಂಸ್ಥೆಗಳನ್ನು ತೆರೆದಾಗ ವಿದ್ಯಾರ್ಥಿಗಳ ಮುಂದಿನ ಭವಿಷ್ಯದ ಮೇಲೆ ತೊಡಕಾಗುತ್ತದೆ. ವಿಸ್ತರಣೆ ಮಾಡುವಾಗ ಮೂಲ ಸೌಕರ್ಯ ನೀಡದಿದ್ದಾಗ ಪರಿಪೂರ್ಣ ಶಿಕ್ಷಣ ನೀಡಲು ವಿಫ‌ಲರಾದಂತೆ. ಶೈಕ್ಷಣಿಕ ವಿಚಾರದಲ್ಲಿ ರಾಜಕೀಯ ನಿರ್ಧಾರ ಬಂದರೆ ಕಷ್ಟವಾಗುತ್ತದೆ ಎಂದರು.

ಶಿಕ್ಷಣ ಇಲಾಖೆ ವ್ಯಾಪ್ತಿಯಲ್ಲಿ ರಾಜ್ಯದಲ್ಲಿ 48ಸಾವಿರ ಪ್ರಾಥಮಿಕ ಶಾಲೆಗಳು, 18 ಸಾವಿರ ಪದವಿ ಪೂರ್ವ ಕಾಲೇಜುಗಳು, 2 ಲಕ್ಷ ಶಿಕ್ಷಕರು ಇದ್ದಾರೆ. 5 ಸಾವಿರ ಶಿಕ್ಷಕರ ನೇಮಕಾತಿ ಆಗುತ್ತಿದ್ದು ಹಾಗಿದ್ದರೂ 12 ಸಾವಿರ ಶಿಕ್ಷಕರ ಕೊರತೆಯಾಗುತ್ತದೆ. ಕೊಠಡಿ ಕೊರತೆ ಇರುವಲ್ಲಿ ವೇಳಾಪಟ್ಟಿ ಬದಲಿಸಿ ತರಗತಿ ನಡೆಸುವ ಮೂಲಕ, ಕಡಿಮೆ ಮಕ್ಕಳು ಇರುವಲ್ಲಿ ಹೆಚ್ಚುವರಿ ಶಿಕ್ಷಕರಿದ್ದರೆ ಮುಂದಿನ ಕ್ರಮದ ಕುರಿತು ಚಿಂತನೆ ನಡೆಸಲಾಗುವುದು ಎಂದರು.

ಈ ಭಾಗದಲ್ಲಿ ಶಿಕ್ಷಣಕ್ಕೆ ಮೊದಲಿನಿಂದಲೂ ಪ್ರೋತ್ಸಾಹ ದೊರೆಯುತ್ತಿದೆ. 135 ವರ್ಷಗಳ ಹಿಂದಿನ ಈ ಸಂಸ್ಥೆ ಮೇಲೆ ಹಳೆ ವಿದ್ಯಾರ್ಥಿಗಳು ಅಭಿವೃದ್ಧಿಯಲ್ಲಿ ತೊಡಗಿಕೊಂಡಿದ್ದು ಸ್ಮರಣೀಯ. ಉತ್ತಮ ಶಾಸಕರು ದೊರೆತಿದ್ದಾರೆ. ಈ ಶಾಲೆಗೆ ಗ್ರಂಥಾಲಯಕ್ಕೆ ಸಿಬಂದಿ ಬೇಡಿಕೆಯಿಟ್ಟಿದ್ದು ಈಡೇರಿಸಲಾಗುವುದು ಎಂದರು.

ಇದನ್ನೂ ಓದಿ:ಮಕ್ಕಳೊಂದಿಗೆ ಕೆಲವು ಕ್ಷಣ ಕಳೆದು ಖುಷಿ ಪಟ್ಟ ಶಿಕ್ಷಣ ಸಚಿವರು

Advertisement

ಪ್ರಾಂಶುಪಾಲ ಬಿ.ಜಿ. ರಾಮಕೃಷ್ಣ, ಶಾಲೆಗೆ ಕೊಠಡಿಗಳ ಕೊರತೆಯಿದೆ. ಶೌಚಾಲಯ ಕೊರತೆಯಿದೆ. ಲೈಬ್ರರಿಗೆ ಸಿಬಂದಿ ಬೇಕಿದೆ. 22 ವಿಭಾಗಗಳಲ್ಲಿ ಶಿಕ್ಷಣ ನೀಡಲಾಗುತ್ತಿದ್ದು ಪ್ರಥಮ ಪಿಯುಸಿಗೆ 1,026, ದ್ವಿತೀಯ ಪಿಯುಸಿಗೆ 776 ವಿದ್ಯಾರ್ಥಿಗಳಿದ್ದು ಪ್ರೌಢಶಾಲೆಯಲ್ಲಿ 496 ವಿದ್ಯಾರ್ಥಿಗಳಿದ್ದಾರೆ. ಅಟಲ್‌ ಟಿಂಕರಿಂಗ್‌ ಲ್ಯಾಬ್‌ ಇದೆ. 135 ವರ್ಷಗಳ ಈ ಶಾಲೆಯಲ್ಲಿ ಗೋಪಾಲಕೃಷ್ಣ ಅಡಿಗ, ಶಿವರಾಮ ಕಾರಂತ, ವೈದೇಹಿ ಮೊದಲಾದವರು ಕಲಿತಿದ್ದು ಕವಿ ಮುದ್ದಣ ಶಿಕ್ಷಕರಾಗಿದ್ದರು ಎಂದರು.

ಪಿಯುಸಿಯಲ್ಲಿ ವಾಣಿಜ್ಯ ವಿಭಾಗದಲ್ಲಿ 600 ಅಂಕ ಗಳಿಸಿ ರಾಜ್ಯಕ್ಕೆ ಮೊದಲ ಸ್ಥಾನ ಪಡೆದ ರಶ್ಮಿ ನಾಗೇಶ್‌ ಉಡುಪ ಅವರನ್ನು ಸಮ್ಮಾನಿಸಲಾಯಿತು.ಹಳೆ ವಿದ್ಯಾರ್ಥಿ ಸಂಘದಿಂದ ಕಾಲೇಜು ಮಕ್ಕಳಿಗೆ ಬಿಸಿಯೂಟ ನೀಡಲಾಗುತ್ತಿದ್ದು ಸರಕಾರದಿಂದ ನೆರವಿಗೆ ಮನವಿ ನೀಡಲಾಯಿತು.

ಪ.ಪೂ. ಶಿಕ್ಷಣ ಇಲಾಖೆ ಉಪನಿರ್ದೇಶಕ ಮಾರುತಿ, ವಿದ್ಯಾಂಗ ಉಪನಿರ್ದೇಶಕ ಎಚ್‌.ಎಸ್‌. ನಾಗೂರ, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್‌.ಕೆ. ಪದ್ಮನಾಭ, ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ಉಪಾಧ್ಯಕ್ಷ ಕಿರಣ್‌ ಕೊಡ್ಗಿ, ಪುರಸಭೆ ಅಧ್ಯಕ್ಷೆ ವೀಣಾ ಭಾಸ್ಕರ್‌, ಉಪಾಧ್ಯಕ್ಷ ಸಂದೀಪ್‌ ಖಾರ್ವಿ, ಸ್ಥಾಯಿ ಸಮಿತಿ ಅಧ್ಯಕ್ಷ ಶೇಖರ್‌ ಪೂಜಾರಿ, ಸದಸ್ಯರಾದ ಮೋಹನದಾಸ ಶೆಣೈ, ವನಿತಾ ಬಿಲ್ಲವ, ಪ್ರಭಾಕರ್‌ ವಿ., ಸಂತೋಷ್‌ ಶೆಟ್ಟಿ, ರಾಘವೇಂದ್ರ ಖಾರ್ವಿ, ದಿವಾಕರ್‌ ಕಡ್ಗಿ, ಪುಷ್ಪಾ ಶೇಟ್‌, ರತ್ನಾಕರ್‌, ಬಿಜೆಪಿ ಅಧ್ಯಕ್ಷ ಶಂಕರ ಅಂಕದಕಟ್ಟೆ, ಮುಖಂಡರಾದ ಕಾಡೂರು ಸುರೇಶ್‌ ಶೆಟ್ಟಿ, ಸುರೇಶ್‌ ಶೆಟ್ಟಿ ಗೋಪಾಡಿ, ಸತೀಶ್‌ ಪೂಜಾರಿ, ಸದಾನಂದ ಬಳ್ಕೂರು, ಸತೀಶ್‌ ಶೆಟ್ಟಿ, ಸುನಿಲ್‌ ಶೆಟ್ಟಿ, ಅಭಿವೃದ್ಧಿ ಸಮಿತಿಯ ಅನಂತ ಕೊಡ್ಗಿ, ರಾಜೀವ ಕೋಟ್ಯಾನ್‌, ನಾರಾಯಣ ದೇವಾಡಿಗ ಮೊದಲಾದವರಿದ್ದರು.
ಉಪನ್ಯಾಸಕ ಉದಯ ಕುಮಾರ್‌ ಶೆಟ್ಟಿ ಕಾಳಾವರ ನಿರ್ವಹಿಸಿದರು.

ಹಾಲಾಡಿ ಭೇಟಿಯಾದ ಶಿಕ್ಷಣ ಸಚಿವರು
ಕುಂದಾಪುರ: ರಾಜ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ಅವರು ಶುಕ್ರವಾರ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರನ್ನು ಅವರ ನಿವಾಸದಲ್ಲಿ ಭೇಟಿಯಾದರು.


ಈ ವೇಳೆ ಉಭಯ ನಾಯಕರು ಪರಸ್ಪರ ಕುಶಲೋಪರಿ ವಿಚಾರಿಸಿದರು. ರಾಜ್ಯ ಆಹಾರ ನಿಗಮ ಮಂಡಳಿ ಉಪಾಧ್ಯಕ್ಷ ಕಿರಣ್‌ ಕೊಡ್ಗಿ, ಕುಂದಾಪುರ ಬಿಜೆಪಿ ಮಂಡಲದ ಅಧ್ಯಕ್ಷ ಶಂಕರ ಅಂಕದಕಟ್ಟೆ, ಪಕ್ಷದ ಮುಖಂಡರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next