Advertisement

Education:ಶಿಕ್ಷಣ ಮಾರ್ಗದರ್ಶಿ-ಪಬ್ಲಿಕ್‌ ಪರೀಕ್ಷೆಯ ಸಿದ್ಧತೆಇಂದಿನಿಂದಲೇ ಆರಂಭಗೊಳ್ಳಲಿ…

11:01 AM Jul 08, 2024 | Team Udayavani |

ಮೌರ್ಯಸಾಮ್ರಾಜ್ಯದ ಸ್ಥಾಪಕನಾದ ಚಂದ್ರಗುಪ್ತನ ಇತಿಹಾಸ ಪ್ರಸಿದ್ಧ ಮಂತ್ರಿ ಹಾಗೂ ಗುರು ಚಾಣಕ್ಯ ಯಾರಿಗೆ ಯಾವುದು ಭೂಷಣವೆಂಬುದನ್ನು ಒಂದು ಶ್ಲೋಕದ ಮೂಲಕ ತಿಳಿಸುತ್ತಾನೆ. ಶ್ಲೋಕದ ಸಾರಾಂಶ ಇಷ್ಟೆ: ಆಕಾಶದಲ್ಲಿ ಕೋಟಿಕೋಟಿ
ನಕ್ಷತ್ರಗಳಿರುತ್ತವೆ. ಅವುಗಳಿಗೆ ಚಂದ್ರನೇ ಅಲಂಕಾರವಾಗಿರುತ್ತಾನೆ. ಅಂದರೆ ಚಂದ್ರನಿಂದ ನಕ್ಷತ್ರಗಳು ಅಲಂಕರಿಸಲ್ಪಡುತ್ತವೆ.
ಸ್ತ್ರೀಯರಿಗೆ ಗಂಡನೇ ಅಲಂಕಾರ. ಭೂಮಿಗೆ ರಾಜನೇ ಅಲಂಕಾರ. ಹಾಗೆಯೇ ವಿದ್ಯೆಯೇ ಸಕಲ ಜನರಿಗೂ ಅಲಂಕಾರವಾಗಿರುತ್ತದೆ.

Advertisement

ವಿದ್ಯೆ ಇಲ್ಲದೆ ಯಾವುದು ಪ್ರಕಾಶಿಸುವುದಿಲ್ಲ. ಹೌದು! ವಿದ್ಯೆ ಸರ್ವಕಾಲದಲ್ಲಿಯೂ ಅತೀ ಮಹತ್ವದ ಸ್ಥಾನ ಪಡೆದಿದೆ. ವ್ಯಕ್ತಿ ಸಮಾಜದಲ್ಲಿ ಗೌರವಯುಕ್ತ ಬಾಳುವೆ ಮಾಡಲು ಸಂಸ್ಕಾರಯುಕ್ತ ವಿದ್ಯೆ ಅನಿವಾರ್ಯ. ಶಿಕ್ಷಣವು ಕೇವಲ ಶಾಲೆ-ಕಾಲೇಜುಗಳಲ್ಲಿ ಮಾತ್ರವಲ್ಲದೇ ಹುಟ್ಟಿನಿಂದ ಚಟ್ಟದವರೆಗೆ ಕಂಡುಂಡ ಎಲ್ಲ ಬಗೆಯ ಅನುಭವಗಳನ್ನು ಒಳಗೊಂಡಿರುತ್ತದೆ. ಆದರೆ ಬದುಕಿನ ಜತೆ ಸಾಗುವ ಶಿಕ್ಷಣದಿಂದ ಹಲವಾರು ಬಗೆಯ ಜೀವನ ಮೌಲ್ಯಗಳು ದೊರೆತರೆ, ಶಾಲಾ-ಕಾಲೇಜುಗಳ ಶಿಕ್ಷಣ ಜೀವನ
ಮೌಲ್ಯಗಳೊಂದಿಗೆ ಬದುಕಿನ ಗುರಿಗೆ ನಿರ್ದಿಷ್ಟ ರೂಪವನ್ನು ನೀಡುವ ಸಾಮರ್ಥ್ಯ ಹೊಂದಿದೆ. ಆದ್ದರಿಂದ ಪ್ರಸ್ತುತ ದಿನದಲ್ಲಿ ಪಬ್ಲಿಕ್‌ ಪರೀಕ್ಷೆಯುಳ್ಳ ಶಾಲಾ-ಕಾಲೇಜುಗಳ ಶಿಕ್ಷಣಕ್ಕೆ ಸಮಾಜ ಅತೀ ಹೆಚ್ಚಿನ ಗಮನವನ್ನು ನೀಡುತ್ತಿದೆ. ಈ ನಿಟ್ಟಿನಲ್ಲಿ ನಿಮ್ಮ ವಿದ್ಯಾರ್ಥಿ ಜೀವನದ ಪ್ರಮುಖ ಪರೀಕ್ಷೆಯನ್ನು ಎಸ್‌ಎಸ್‌ ಎಲ್‌ಸಿಯಲ್ಲಿ ಎದುರಿಸಬೇಕಿದೆ.

ಎಸ್‌ಎಸ್‌ಎಲ್‌ಸಿ ಬಂತೆಂದರೆ ಸಾಕು; ಪಾಲಕರ ಮತ್ತು ವಿದ್ಯಾರ್ಥಿಗಳ ಹೃದಯ ಬಡಿತ ಜಾಸ್ತಿಯಾಗುತ್ತದೆ! ನಮ್ಮ ಮಗ/ಮಗಳು ಅತೀ ಹೆಚ್ಚು ಅಂಕ ಗಳಿಸಬೇಕೆಂಬುದು ಪಾಲಕರ ತುಡಿತವಾದರೆ, ವಿದ್ಯಾರ್ಥಿಗೆ ಅತೀ ಸುಲಭವಾಗಿ ಹೆಚ್ಚು ಅಂಕ ಗಳಿಸುವುದು ಹೇಗೆ ಎಂಬ ಚಿಂತೆ! ಶಾಲಾ ಮುಖ್ಯೋಪಾಧ್ಯಾಯರಿಗೆ, ಶಿಕ್ಷಕರಿಗೆ, ಶಾಲಾಭಿವೃದ್ಧಿ ಸಮಿತಿಯವರಿಗೆ, ಆಡಳಿತ ಮಂಡಳಿಯವರಿಗೆ ವಿದ್ಯಾರ್ಥಿಗಳ ಫ‌ಲಿತಾಂಶ ಕಡ್ಡಾಯವಾಗಿ ಏರಿಕೆಯ ಕ್ರಮದಲ್ಲಿಯೇ ಸಾಗಬೇಕೆಂಬ ನಿರೀಕ್ಷೆ. ಈ ಎಲ್ಲ ಹಿನ್ನೆಲೆಯಲ್ಲಿ ಅತ್ಯಂತ ಕಟ್ಟುನಿಟ್ಟಾಗಿ ಸಿಸಿ ಟಿವಿ ಕಣ್ಗಾವಲಿನಲ್ಲಿ ನಡೆಯಲಿರುವ ಈ ಪರೀಕ್ಷೆಯನ್ನು ಎದುರಿಸುವಾಗ ವಿದ್ಯಾರ್ಥಿಗಳು ಹೆಚ್ಚಿನ
ಒತ್ತಡಕ್ಕೊಳಗಾಗುತ್ತಾರೆ.

ಪ್ರಿಯ ವಿದ್ಯಾರ್ಥಿಗಳೇ… ಒತ್ತಡಕ್ಕೊಳಗಾಗದಿರಿ. ಸನ್ನಿವೇಶವನ್ನು ತಾಳ್ಮೆಯಿಂದ ನಿಭಾಯಿಸಿ. ಒಂಭತ್ತು ತರಗತಿಗಳಲ್ಲಿ ವಿದ್ಯಾಭ್ಯಾಸ ಮಾಡಿ ಪರೀಕ್ಷೆಗಳನ್ನು ಎದುರಿಸಿದ ಅನುಭವ ನಿಮ್ಮೊಂದಿಗಿದೆ. ಈ ವರ್ಷ ಸ್ವಲ್ಪ ಬದಲಾವಣೆ ಮಾತ್ರ. ಅದೇನೆಂದರೆ ನಿಮ್ಮ ಉತ್ತರಪತ್ರಿಕೆಗಳನ್ನು ನೋಡುವವರು ಬೇರೆಬೇರೆ ಜಿಲ್ಲೆಯ ವಿಷಯ ಶಿಕ್ಷಕರು. ಇದಕ್ಕಾಗಿ ಭಯ-ಆತಂಕ ಬೇಡ. ಧೈರ್ಯ ಮತ್ತು ಆತ್ಮಸ್ಥೈರ್ಯವನ್ನು ರೂಢಿಸಿಕೊಳ್ಳಿ. ಹಿಂದಿನ ತರಗತಿಯ ವಾರ್ಷಿಕ ಪರೀಕ್ಷೆಯಲ್ಲಿ ಪಡೆದ ಅಂಕಗಳ ಹಿನ್ನೆಲೆಯಲ್ಲಿ ನೀವು ಈ ವರ್ಷ ಎಷ್ಟು ಅಂಕಗಳನ್ನು ಗಳಿಸಬೇಕೆಂಬುದನ್ನು ನಿರ್ಧರಿಸಿಕೊಳ್ಳಬೇಕು. ನಿಮ್ಮ ನಿಮ್ಮ ಗುರಿಗೆ ತಕ್ಕಂತೆ ಸಸತ ಪ್ರಯತ್ನವಿರಲಿ.

ಅತೀ ಹೆಚ್ಚು ಅಂಕ ಗಳಿಕೆಗೆ ಪ್ರೇರಕವಾಗಬಲ್ಲ ಅಂಶಗಳು:

Advertisement

*ವ್ಯವಸ್ಥಿತ ಓದಿಗಾಗಿ ನಿಮ್ಮ ವೈಯಕ್ತಿಕ ಯೋಜನೆಯನ್ನು(ವೇಳಾಪಟ್ಟಿ)ಯನ್ನು ತಯಾರಿಸಿಕೊಳ್ಳಿ.
*ನಿಮ್ಮ ಸಾಮರ್ಥ್ಯದ ಅರಿವು ನಿಮಗಿರಲಿ.
*ಓದಿನ ವಿಷಯದಲ್ಲಿ ಶ್ರದ್ಧೆ-ದೃಢನಿಷ್ಠೆ ಇರಲಿ.
*ಆಟ ಮತ್ತು ಮನೋರಂಜನೆಗೂ ಕಾಲ ನಿಗದಿಪಡಿಸಿಕೊಳ್ಳಿ.
*ಪ್ರತಿದಿನ ಬೆಳಿಗ್ಗೆ 5 ಗಂಟೆಗೆ ಎದ್ದು ಓದುವ ಅಭ್ಯಾಸ ರೂಢಿಸಿಕೊಳ್ಳಿ.
*ಪ್ರತಿದಿನ 7-8 ಗಂಟೆಗಳ ಕಾಲ ಪರಿಪೂರ್ಣ ನಿದ್ರೆಗೆ ಅವಕಾಶವಿರಲಿ.
*ಅಭ್ಯಾಸದಲ್ಲಿ ಕ್ರಮಬದ್ಧತೆ ಇರಲಿ. ಶಾಲೆಯ ಎಲ್ಲ ಬಗೆಯ ಪಠ್ಯೇತರ ಚಟುವಟಿಕೆಗಳಲ್ಲಿಯೂ ಭಾಗವಹಿಸಿ.
*ತರಗತಿ ಕೋಣೆಯಲ್ಲಿ ಕ್ರಿಯಾಶೀಲತೆ ಇರಲಿ. ಪಾಠಗಳನ್ನು ಗಮನವಿಟ್ಟು ಕೇಳಿ ಟಿಪ್ಪಣಿ ಮಾಡಿಕೊಳ್ಳಿ.
*ಎಲ್ಲ ವಿಷಯಗಳಲ್ಲಿ ನಿಮಗೆ ಅನುಕೂಲಕರ ನೋಟ್ಸ್‌ ತಯಾರಿಸಿಕೊಳ್ಳಿ.
*ಹೋಮ್‌ವರ್ಕ್‌ಗಳನ್ನು ಆಯಾಯ ದಿನವೇ ಪೂರೈಸಿಕೊಳ್ಳಿ.
*ಕಠಿನ ವಿಷಯಗಳಿಗೆ ಹೆಚ್ಚಿನ ಆದ್ಯತೆ -ಸಮಯ ನಿಗದಿಪಡಿಸಿಕೊಳ್ಳಿ.
*ಶುದ್ಧ, ಸ್ಫುಟವಾದ, ಅಂದವಾದ ಬರವಣಿಗೆ ರೂಢಿಸಿಕೊಳ್ಳಿ. ತರಗತಿ ಕೋಣೆಯಲ್ಲಿ ನಡೆಸುವ ಘಟಕ ಪರೀಕ್ಷೆ, ಸಾಧನಾ ಪರೀಕ್ಷೆ, ಅರ್ಧವಾರ್ಷಿಕ ಪರೀಕ್ಷೆ, ಪೂರ್ವತಯಾರಿ ಪರೀಕ್ಷೆಗಳಿಗೆ ಹೆಚ್ಚಿನ ಮಹತ್ವ ನೀಡಿ ನಿರಂತರ ಅಭ್ಯಾಸ ಮಾಡಿ.
*ಸೂತ್ರಗಳು, ವಿಜ್ಞಾನದ ಚಿತ್ರಗಳು/ಸೂತ್ರಗಳು, ವ್ಯಾಕರಣ, ಕವಿಪರಿಚಯ, ಛಂದಸ್ಸು, ಅಲಂಕಾರ, ನಕಾಶೆ ಮೊದಲಾದ ಚಾರ್ಟ್‌ ಗಳು ನಿಮ್ಮ ಕೋಣೆಯಲ್ಲಿ ಇರಲಿ.
*6 ವಿಷಯಗಳ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಇಡೀ ವರ್ಷದಲ್ಲಿ ಪ್ರತಿ ವಿಷಯಕ್ಕೆ ಎಂಟು ಚಟುವಟಕೆಗಳನ್ನು ನೀಡಬೇಕಿದ್ದು, ಶಿಕ್ಷಕರ ಸಲಹೆಯಂತೆ ಚಟುವಟಿಕೆಗಳಿಗೆ ಸಂಬಂಧಪಟ್ಟ ವಿಷಯಗಳನ್ನು ಆಯ್ದು ಬಿಡುವಿನ ವೇಳೆಯಲ್ಲಿ ತಯಾರಿಸಿ ಶಿಕ್ಷಕರಿಗೆ ಒಪ್ಪಿಸಿ. ಇದಕ್ಕಾಗಿ ಅಗತ್ಯಕ್ಕಿಂತ ಹೆಚ್ಚಿನ ಕಾಲಹರಣ ಮಾಡುವುದು ಬೇಡ.
*ಟೆಲಿವಿಷನ್‌, ಮೊಬೈಲ್‌, ಸಾಮಾಜಿಕ ಜಾಲತಾಣ ಮೊದಲಾದವುಗ ಳನ್ನು ಅಗತ್ಯವಿದ್ದಾಗ ಮಾತ್ರ ಬಳಸಿ. ನಿಮ್ಮ ಮನಸ್ಸನ್ನು ವಿಚಲಿತಗೊಳಿಸಬಹುದಾದ ಮನೋರಂಜನೆ ಮತ್ತು ಸಿನೆಮಾಗಳಿಂದ ದೂರವಿರಿ.
*ನಿಮ್ಮ ಬಳಿ ಪ್ರತಿಯೊಂದು ವಿಷಯಗಳ ನೋಟ್ಸ್‌/ ಪಿಡಿಎಫ್ ಪ್ರತಿಯನ್ನು ಕಡ್ಡಾಯವಾಗಿ ಇಟ್ಟುಕೊಳ್ಳಿ. ಇದಕ್ಕಾಗಿ ಇನ್ನೊಬ್ಬರನ್ನು ಅವಲಂಬಿಸದಿರಿ.

ವಿಜ್ಞಾನ ಅಧ್ಯಯನ ಹೇಗೆ?
ವಿಜ್ಞಾನವು ಜ್ಞಾನ, ಅರ್ಥಗ್ರಹಣ, ಕೌಶಲ ಅನ್ವಯಿಕೆ, ಪ್ರಶಂಸೆ ಇತ್ಯಾದಿ ಎಲ್ಲವನ್ನು ಒಳಗೊಂಡಿರುವ ಸಂಪೂರ್ಣ ವಿಷಯ. ಪಾಠವನ್ನು ಅಧ್ಯಾಪಕರಿಂದ ಕೇಳಿ ಕಳೆದುಕೊಂಡು, ಪ್ರಯೋಗವನ್ನು ಮಾಡಿ ಮಾಹಿತಿ ಯನ್ನು ಬೇರೆ ಮೂಲಗಳಿಂದಲೂ ಸಂಗ್ರಹಿಸಿ ಪ್ರಶ್ನೆಗಳನ್ನು ಕೇಳಿ ಉತ್ತರ ಕಂಡುಹಿಡಿಯಿರಿ. ನಿಯಮಗಳ ಬಗ್ಗೆ (ಒಮನ ನಿಯಮ, ಜಾಲನ ನಿಯಮ, ರಾಶಿ ಸಂರಕ್ಷಣ ನಿಯಮ ಇತ್ಯಾದಿ) ಅಧ್ಯಾಪಕರು ಪಾಠ ಮಾಡಿದಾಗ ಅದೇ ದಿನ ಮನನ ಮಾಡಿಕೊಳ್ಳಿ.

ಸಂಖ್ಯೆಯನ್ನು ಒಳಗೊಂಡಿರುವ ಸಮಸ್ಯೆಗಳು ಬಂದಾಗ ಸಮಸ್ಯೆಗೆ ಸಂಬಂಧಿಸಿದ ಸೂತ್ರ, ಆ ಸೂತ್ರವನ್ನು ಬಳಸಿ ಹೇಗೆ ಸಮಸ್ಯೆ ಬಗೆಹರಿಸಬಹುದು ಎಂದು ತಿಳಿದುಕೊಳ್ಳಿ. ಪರೀಕ್ಷೆಗೆ ಕೇಳಬಹುದಾದ ಚಿತ್ರ ಬಿಡಿಸುವ ಪ್ರಶ್ನೆಗಳ ಪಟ್ಟಿಯನ್ನು ಅಧ್ಯಾಪಕರ ಸಹಾಯದಿಂದ ತಯಾರಿಸಿ. ಪ್ರತೀ ಪಾಠ ಮುಗಿದಾಗ ಆ ಪಾಠದಿಂದ ಪರೀಕ್ಷೆಗೆ ಕೇಳಬಹುದಾದ ಚಿತ್ರವನ್ನು ಅನೇಕ ಬಾರಿ ರಚಿಸಿ
ಕೌಶಲವನ್ನು ಗಳಿಸಿ. ವಿಜ್ಞಾನದಲ್ಲಿ ಭೌತಶಾಸ್ತ್ರ, ರಸಾಯನ ಶಾಸ್ತ್ರ, ಜೀವ ಶಾಸ್ತ್ರ ವಿಭಾಗಗಳಿವೆ. ನಿಮಗೆ ಎಲ್ಲ ವಿಭಾಗಗಳೂ ಸುಲಭವಾಗುತ್ತವೆಯೇ ಎಂದು ಪರೀಕ್ಷಿಸಿ.

ಪಾಠವನ್ನು ಕೇಳುವಾಗ/ನೋಡುವಾಗ ಅನ್ವಯಿಕ ಪ್ರಶ್ನೆಗಳ ಕಡೆಗೆ ಗಮನವಿರಲಿ. ಉದಾಹರಣೆಗೆ 2Mg+ O2 → 2Mgo ಈ ರಾಸಾಯನಿಕ ಕ್ರಿಯೆಯನ್ನು ರಾಸಾಯನಿಕ ಸಂಯೋಗ ಎನ್ನುತ್ತಾರೆ, ಏಕೆ? ಪ್ರತೀ ಅಧ್ಯಾಯವಾರು ಪರೀಕ್ಷೆಗೆ ನಿಗದಿಪಡಿಸಿರುವ
ಅಂಕಗಳನ್ನು ಕೇಳಿ ಪಡೆಯಿರಿ. ಹೆಚ್ಚು ಅಂಕಗಳನ್ನು ನಿಗದಿಪಡಿಸುವ ಪಾಠಗಳ ಕಡೆಗೆ ಹೆಚ್ಚು ಗಮನವಿರಲಿ. 10ನೇ ತರಗತಿಯ ಎಲ್ಲ ವಿದ್ಯಾರ್ಥಿಗಳಿಗೆ ಶುಭವಾಗಲಿ…

Advertisement

Udayavani is now on Telegram. Click here to join our channel and stay updated with the latest news.

Next