Advertisement

Education: ಎಸೆಸೆಲ್ಸಿ ಉತ್ತೀರ್ಣಕ್ಕೆ ಸಿಬಿಎಸ್‌ಇ ಮಾದರಿ?

02:40 AM Aug 11, 2024 | Team Udayavani |

ಬೆಂಗಳೂರು: ರಾಜ್ಯದ ಎಸೆಸೆಲ್ಸಿ ಪರೀಕ್ಷೆ ಮಾದರಿಯಲ್ಲಿ ಬದಲಾವಣೆ ತರಬೇಕು ಎಂದು 80:20 ಅಂಕಗಳ ಪರೀಕ್ಷಾ ಮಾದರಿಯನ್ನು ಶಿಫಾರಸು ಮಾಡಿದ್ದ ತಜ್ಞರೇ ಈಗ ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

Advertisement

ಈ ಬಾರಿ ಎಸೆಸೆಲ್ಸಿಯ “ನೈಜ’ ಫ‌ಲಿತಾಂಶ ಶೇ. 50ರ ಅಸುಪಾಸಿಗೆ ಕುಸಿದಿರುವ ಹಿನ್ನೆಲೆಯಲ್ಲಿ ಮಕ್ಕಳ ಉತ್ತೀರ್ಣತೆಗೆ ಆಂತರಿಕ ಅಂಕ ಮತ್ತು ಲಿಖೀತ ಪರೀಕ್ಷೆಯ ಅಂಕಗಳನ್ನು ಒಟ್ಟಾಗಿ ಪರಿಗಣಿಸುವ ಮೂಲಕ ಶೇ. 99ಕ್ಕಿಂತ ಹೆಚ್ಚು ಫ‌ಲಿತಾಂಶ ಪ್ರಕಟವಾಗುವ ಸಿಬಿಎಸ್‌ಇ, ಐಸಿಎಸ್‌ಇ ಮಾದರಿ ಜಾರಿಗೆ ತರಬೇಕು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದರು.

ಎಂಇಎಸ್‌ ಟೀಚರ್ಸ್‌ ಕಾಲೇಜಿನ ಅಂದಿನ ಪ್ರಾಂಶುಪಾಲರಾಗಿದ್ದ ಡಾ| ಎಚ್‌.ಎಸ್‌. ಗಣೇಶ ಭಟ್ಟ ಅವರ ನೇತೃತ್ವದ ತಜ್ಞರ ಸಮಿತಿಯು ಎಸೆಸೆಲ್ಸಿ ಪರೀಕ್ಷೆಯ ಸುಧಾರಣೆ ನಿಟ್ಟಿನಲ್ಲಿ 2014ರಲ್ಲಿ ನಿರಂತರ ಸಮಗ್ರ ಮೌಲ್ಯಮಾಪನ (ಸಿಸಿಇ) ಶೀರ್ಷಿಕೆಯಡಿ ಅಂದಿನ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಗೆ ವರದಿ ನೀಡಿತ್ತು.

80 ಅಂಕಗಳನ್ನು ಲಿಖಿತ ಉತ್ತರಕ್ಕೆ ಮತ್ತು 20 ಆಂತರಿಕ ಆಂಕಗಳನ್ನು ಶಿಫಾರಸು ಮಾಡಿತ್ತು. ಅದನ್ನಾಧರಿಸಿ ರಾಜ್ಯ ಸರಕಾರ ಈ ವರ್ಷ ಮೊದಲ ಬಾರಿಗೆ ಎಸೆಸೆಲ್ಸಿಯಲ್ಲಿ 80:20 ಮಾದರಿಯಲ್ಲಿ ಪರೀಕ್ಷೆ ನಡೆಸಿತ್ತು. ಆದರೆ ಫ‌ಲಿತಾಂಶ ಭಾರೀ ಕುಸಿತ ಕಂಡ ಹಿನ್ನೆಲೆಯಲ್ಲಿ ಡಾ| ಗಣೇಶ ಭಟ್ಟ ಅವರು ತಾವೇ ಶಿಫಾರಸು ಮಾಡಿದ ಪದ್ಧತಿಯ ಪರಾಮರ್ಶೆ ನಡೆಸಿ ಹಲವು ಲೋಪಗಳನ್ನು ಸರಿಪಡಿಸುವ ಕ್ರಮಗಳ ವರದಿಯನ್ನು ಸಿದ್ಧಪಡಿಸಿದ್ದಾರೆ.

ಸದ್ಯ ನಿವೃತ್ತರಾಗಿರುವ ಡಾ| ಗಣೇಶ ಭಟ್ಟ, ಎಂಇಎಸ್‌ ಕಾಲೇಜಿನ ಸಹಾಯಕ ಪ್ರೊಫೆಸರ್‌ಗಳಾದ ಪೂರ್ಣಿಮಾ ಎಚ್‌., ಡಾ| ಕೆ.ಎಸ್‌. ಪ್ರಭು ಅವರು ಕರ್ನಾಟಕ ರಾಜ್ಯ ಶಾಲಾ ಶಿಕ್ಷಣ ಗುಣಮಟ್ಟ ಅಭಿವೃದ್ಧಿ ಚಿಂತನ ಸಮಿತಿಯ ಮೂಲಕ ಅಧ್ಯಯನ ನಡೆಸಿ ಈ ವರದಿ ತಯಾರಿಸಿದ್ದರು.

Advertisement

ಸಿಬಿಎಸ್‌ಇ ಮತ್ತು ಐಸಿಎಸ್‌ಇಯಲ್ಲಿ ಆಂತರಿಕ ಮತ್ತು ಲಿಖೀತ ಪರೀಕ್ಷೆಗಳಲ್ಲಿ ಒಟ್ಟು ಸೇರಿ 33 ಅಂಕ ಪಡೆದರೆ ಉತ್ತೀರ್ಣರಾಗುತ್ತಾರೆ. ಆದರೆ ಎಸೆಸೆಲ್ಸಿಯಲ್ಲಿ ಲಿಖೀತ ಪರೀಕ್ಷೆಯಲ್ಲಿ 28 ಅಂಕ ಪಡೆಯುವುದನ್ನು ಕಡ್ಡಾಯಗೊಳಿಸಲಾಗಿದೆ. ಇದು ಫ‌ಲಿತಾಂಶ ಕುಸಿತಕ್ಕೆ ಪ್ರಮುಖ ಕಾರಣ ಎಂದು ವರದಿಯಲ್ಲಿ ಬೊಟ್ಟು ಮಾಡಲಾಗಿದೆ.

ವರದಿ ಹೇಳುವುದೇನು?
ಒಂದು ವೇಳೆ 15 ಆಂತರಿಕ ಅಂಕ ಮತ್ತು ಲಿಖೀತ ಪರೀಕ್ಷೆಯಲ್ಲಿ 20 ಅಂಕ ಪಡೆದ ವಿದ್ಯಾರ್ಥಿ ಆ ವಿಷಯದಲ್ಲಿ 35 ಅಂಕ ಪಡೆದಂತಾಗಲಿದ್ದು ಆತನನ್ನು ಉತ್ತೀರ್ಣ ಎಂದೇ ಪರಿಗಣಿಸಬೇಕು. ಲಿಖಿತ ಪರೀಕ್ಷೆಯಲ್ಲಿ 28 ಅಂಕ ಪಡೆದಿಲ್ಲ ಎಂದು ಅನುತ್ತೀರ್ಣಗೊಳಿಸ ಬಾರದು ಎಂದು ವರದಿ ಹೇಳಿದೆ.

ಸಿಬಿಎಸ್‌ಇ ಮತ್ತು ಐಸಿಎಸ್‌ಇಯಲ್ಲಿ ಆಂತರಿಕ ಅಂಕಗಳನ್ನು ಮಗುವಿನ ಸಮಗ್ರ ಅಭಿವೃದ್ಧಿಯ ಭಾಗ ಎಂದು ಭಾವಿಸಲಾಗಿದೆ. ಆದರೆ ಎಸೆಸೆಲ್ಸಿಯಲ್ಲಿ ಈ ಅಂಶವನ್ನು ಕೈಬಿಡಲಾಗಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ. ಅದೇ ರೀತಿ ಸಿಬಿಎಸ್‌ಇ ಮತ್ತು ಐಸಿಎಸ್‌ಇಯಲ್ಲಿ 33 ಅಂಕ ಪಡೆದರೆ ಉತ್ತೀರ್ಣ ಎಂದು ಪರಿಗಣಿಸಲಾಗುತ್ತದೆ. ರಾಜ್ಯ ಪಠ್ಯಕ್ರಮದಲ್ಲಿ ಉತ್ತೀರ್ಣಕ್ಕೆ 35 ಅಂಕ ಬೇಕಿದ್ದು, ಇದನ್ನು 33ಕ್ಕೆ ಇಳಿಸುವಂತೆ ಸಲಹೆ ನೀಡಲಾಗಿದೆ.

ಉನ್ನತ ಸಮಿತಿ ರಚಿಸಿ
ಎಸೆಸೆಲ್ಸಿ ಪರೀಕ್ಷಾ ವ್ಯವಸ್ಥೆಯ ಸುಧಾರಣೆಗೆ ಶಾಲಾ ಶಿಕ್ಷಣ ಸಚಿವರು, ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ ನಿರ್ದೇಶಕರು, ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆಯ ನಿರ್ದೇಶಕರು, ಅಧಿಕಾರಿಗಳು, ಶಿಕ್ಷಕರು, ಪೋಷಕರು, ವಿದ್ಯಾರ್ಥಿಗಳು, ಸಿಬಿಎಸ್‌ಇ ಮತ್ತು ಐಸಿಎಸ್‌ಇ ಮಂಡಳಿಗಳ ಪ್ರತಿನಿಧಿಗಳನ್ನು ಒಳಗೊಂಡ ಸಮಿತಿಯನ್ನು ರಚಿಸಬೇಕು ಎಂದು ವರದಿಯಲ್ಲಿ ಹೇಳಲಾಗಿದೆ.

ವರದಿಯಲ್ಲಿರುವ ಸಲಹೆಗಳೇನು?
ಸಿಬಿಎಸ್‌ಇಯಲ್ಲಿ 20 ವಸ್ತುನಿಷ್ಠ ಪ್ರಶ್ನೆಗಳಿದ್ದರೆ ರಾಜ್ಯ ಪಠ್ಯಕ್ರಮದಲ್ಲಿ ಬರೀ 8 ವಸ್ತು ನಿಷ್ಠ ಪ್ರಶ್ನೆಗಳಿವೆ. ಅದೇ ರೀತಿ ಪ್ರಶ್ನೆ ಪತ್ರಿಕೆ ದ್ವಿಭಾಷೆಯಲ್ಲಿ ಇರಬೇಕು.

 ಎಸೆಸೆಲ್ಸಿ ಪಠ್ಯದ ಕೆಲವು ಅಂಶಗಳು ಪಿಯುಗಿಂತಲೂ ಕಠಿಣವಾಗಿದ್ದು, ಗಮನಹರಿಸಿ

 8ನೇ ತರಗತಿಗೆ ಆಂಗ್ಲ ಮಾಧ್ಯಮಕ್ಕೆ ಪ್ರವೇಶಿ ಸುವ ವಿದ್ಯಾರ್ಥಿಗಳಿಗೆ ಗ್ರಹಿಕೆ ಕಷ್ಟವಾಗುತ್ತಿದ್ದು, ಇವರಿಗೆ ಹೆಚ್ಚಿನ ಒತ್ತು ನೀಡಬೇಕು.

ಜೀವಶಾಸ್ತ್ರ, ಭೌತಶಾಸ್ತ್ರ, ರಸಾಯನಶಾಸ್ತ್ರಗಳ ಪ್ರಶ್ನೆಗಳ ಕಠಿಣತೆಯ ಮಟ್ಟದ ಮೇಲೆ ನಿಗಾ ಇಡಲು ಟೀಚರ್ ಲೀಡರ್‌ ನೇಮಿಸಬೇಕು.

ಸಮೂಹ ಮಾಧ್ಯಮಗಳಲ್ಲಿ ಮಕ್ಕಳ ಕಲಿಕಾ ಅವಧಿಗೆ ಪೂರಕವಾದ ಸಮಯದಲ್ಲಿ ಎಸೆಸೆಲ್ಸಿ ಸಿಲೆಬಸ್‌ ಸಂಬಂಧಿ ಕಾರ್ಯಕ್ರಮ ಪ್ರಸಾರ ಮಾಡಬೇಕು.

 ಶಾಲೆಗಳಲ್ಲಿ ಆಚರಣೆ, ಇತರ ಚಟುವಟಿಕೆ, ಗಣತಿ ಕಾರ್ಯಗಳು ಬೋಧನಾ ಕಾರ್ಯಕ್ಕೆ ಅಡ್ಡಿಯಾಗಿವೆ. ಶಿಕ್ಷಕರನ್ನು ಪ್ರಭಾರಿಗಳನ್ನಾಗಿ ಕಳುಹಿಸಬಾರದು, ಜನವರಿ ಬಳಿಕ ಶಿಕ್ಷಕರಿಗೆ ತರಬೇತಿ ಇಟ್ಟುಕೊಳ್ಳಬಾರದು.

– ರಾಕೇಶ್‌ ಎನ್‌.ಎಸ್‌.

Advertisement

Udayavani is now on Telegram. Click here to join our channel and stay updated with the latest news.

Next