Advertisement
ರಾಜ್ಯದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಮಕ್ಕಳು ಶಾಲೆಯಿಂದ ಹೊರಗುಳಿದ ವಿಚಾರಕ್ಕೆ ಸಂಬಂಧಿಸಿದಂತೆ ಕಳೆದ ಐದು ವರ್ಷಗಳಿಂದ ನಡೆಯುತ್ತಿರುವ ಕಾನೂನು ಹೋರಾಟ ಹಾಗೂ ಹೈಕೋರ್ಟ್ ಮಧ್ಯ ಪ್ರವೇಶಿಸಿ ಗಡುವು ನೀಡಿದ್ದರ ಪರಿಣಾಮ ಆರ್‌ಟಿಇ ಕಾಯ್ದೆ ಅನುಷ್ಠಾನ ಕುರಿತ “ವಲಸೆ ಮಕ್ಕಳು ಹಾಗೂ ವಲಸೆ ಕಾರ್ಮಿಕರ ಮಕ್ಕಳ ಶಿಕ್ಷಣ ನೀತಿ-2019’ನ್ನು ಸರ್ಕಾರ ಜಾರಿಗೆ ತಂದಿದೆ. ಈ ನೀತಿಯಿಂದಾಗಿ ಪ್ರಾಥಮಿಕ ಶಿಕ್ಷಣದಿಂದ ವಂಚಿತರಾಗುವ ವಲಸೆ ಮಕ್ಕಳು ಹಾಗೂ ವಲಸೆ ಕಾರ್ಮಿಕರ ಮಕ್ಕಳನ್ನು ಶಾಲಾ ಶಿಕ್ಷಣದ ಮುಖ್ಯ ವಾಹಿನಿಗೆ ತರಲು ಸಾಧ್ಯವಾಗಲಿದೆ.
Related Articles
Advertisement
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್, ಕಂದಾಯ ಆರೋಗ್ಯ ಇಲಾಖೆಗಳು ಒಳಗೊಂಡಂತೆ ನೀತಿಯ ಅನುಷ್ಠಾನಕ್ಕೆ ಪ್ರತಿಯೊಂದು ಇಲಾಖೆಗಳಿಗೆ ಜವಾಬ್ದಾರಿಗಳನ್ನು ನಿಗದಿಪಡಿಸಲಾಗಿದೆ. ಸಾರ್ವಜನಿಕ ಸಹಭಾಗಿತ್ವದ ಉದ್ದೇಶದಿಂದ ನಾಗರಿಕ ಸಂಘ-ಸಂಸ್ಥೆಗಳಿಗೂ ಹೊಣೆಗಾರಿಕೆ ನೀಡಲಾಗಿದೆ. ಎಲ್ಲ ಇಲಾಖೆಗಳ ನಡುವೆ ಸಮನ್ವಯ ಸಾಧಿಸಲು ಕಾರ್ಯತಂತ್ರ ರೂಪಿಸಲಾಗಿದೆ. ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ನೀತಿಯ ಅನುಷ್ಠಾನದ ಮೇಲ್ವಿಚಾರಣೆ ವಹಿಸಲಿದ್ದು, ಇಲಾಖೆಗಳ ನಡುವಿನ ಗೊಂದಲ-ಸಮಸ್ಯೆಗಳ ಪರಿಹಾರಕ್ಕೆ ಮಧ್ಯವರ್ತಿಯಾಗಿ ಕೆಲಸ ಮಾಡಲಿದೆ.
ಉದ್ಯೋಗ ಅರಸಿ ಒಂದು ಪ್ರದೇಶದಿಂದ ಮತ್ತೂಂದು ಪ್ರದೇಶಕ್ಕೆ ವಲಸೆ ಹೋಗುವ ಹಾಗೂ ಬರುವ ಕುಟುಂಬಗಳ ಪೋಷಕರ ಮಕ್ಕಳ ಶಿಕ್ಷಣ, ಆರೋಗ್ಯ, ಮೂಲಭೂತ ಹಕ್ಕುಗಳ ರಕ್ಷಣೆಗೆ ಸಂಬಂಧಿಸಿದಂತೆ “ಅಂತರರಾಜ್ಯ ವಲಸೆ ಮಹಳೆಯರು (ಉದ್ಯೋಗ ನಿಯಂತ್ರಣ ಮತ್ತು ಸೇವೆಗಳ ಸ್ಥಿತಿಗತಿ) ಕಾಯ್ದೆ-1979, “ಗುತ್ತಿಗೆ ಕಾರ್ಮಿಕರು (ನಿಯಂತ್ರಣ ಮತ್ತು ರದ್ದತಿ) ಕಾಯ್ದೆ-1970,
“ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ (ಉದ್ಯೋಗ ನಿಯಂತ್ರಣ) ಕಾಯ್ದೆ-1996, “ಕನಿಷ್ಠ ವೇತನ ಕಾಯ್ದೆ-1948′ “ಬಾಲ ನ್ಯಾಯ (ಮಕ್ಕಳ ಅರೈಕೆ ಮತ್ತು ಸಂರಕ್ಷಣೆ) ಕಾಯ್ದೆ, “ಜೀತ ಪದ್ದತಿ ನಿಷೇಧ ಕಾಯ್ದೆ-1976′, ಆರ್‌ಟಿಇ ಕಾಯ್ದೆ-2009′, ಅನೈತಿಕ ಸಾಗಾಣಿಕೆ (ತಡೆಗಟ್ಟುವಿಕೆ) ಕಾಯ್ದೆ-1956 ಹಾಗೂ ಪೋಕ್ಸೋ ಕಾಯ್ದೆಯಡಿಯ ವಲಸೆ ಮಕ್ಕಳ ಶಿಕ್ಷಣದ ಕಾನೂನು ಅವಕಾಶಗಳಿಗೆ ಒಂದೇ ವೇದಿಕೆಯಲ್ಲಿ ಪರಿಹಾರ ಕಂಡುಕೊಳ್ಳಲು ಈ ನೀತಿಯಿಂದ ಸಾಧ್ಯವಾಗಲಿದೆ.
ವಲಸೆ ಮಕ್ಕಳು ಹಾಗೂ ವಲಸೆ ಕಾರ್ಮಿಕರ ಮಕ್ಕಳ ಶಿಕ್ಷಣ ನೀತಿ-2019 ಅನ್ನು ಜಾರಿಗೆ ತರಲಾಗಿದೆ. ಅದರ ಅನುಷ್ಠಾನಕ್ಕೆ ತನ್ನದೇ ಆದ ಸಮಯಾವಕಾಶ ಬೇಕಾಗುತ್ತದೆ. ನೀತಿಯು ಸದ್ಯ ಅನುಷ್ಠಾನದ ಹಾದಿಯಲ್ಲಿದೆ.-ಡಾ. ಕೆ.ಜಿ. ಜಗದೀಶ್, ಆಯುಕ್ತರು, ಸಾರ್ವಜನಿಕ ಶಿಕ್ಷಣ ಇಲಾಖೆ * ರಫೀಕ್ ಅಹ್ಮದ್