ಚಿಂಚೋಳಿ: ಶೋಷಿತ ಹಿಂದುಳಿದ ವರ್ಗದವರ ಮಕ್ಕಳಿಗೆ ಆಂಧ್ರಪ್ರದೇಶ ಸರಕಾರ ಉಚಿತ ಶಿಕ್ಷಣ ಮತ್ತು ಶಾಲಾ ಶುಲ್ಕ ಭರಿಸುತ್ತಿದೆ. ಹಿಂದುಳಿದ ವರ್ಗದವರು ತಮ್ಮ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸಿದರೆ ಕುಟುಂಬ ಮತ್ತು ಸಮಾಜ ಅಭಿವೃದ್ದಿಗೊಳ್ಳಲಿದೆ ಎಂದು ಆಂಧ್ರಪ್ರದೇಶ ತೆಲುಗುದೇಶಂ ಪಕ್ಷದ ಶಾಸಕ ಹಾಗೂ ರಾಷ್ಟ್ರೀಯ ಹಿಂದುಳಿದ ವರ್ಗಗಳ ಅಧ್ಯಕ್ಷ ಆರ್. ಕೃಷ್ಣಯ್ಯ ಹೇಳಿದರು.
ತಾಲೂಕಿನ ಸುಲೇಪೇಟ ಗ್ರಾಮದ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯ ಆವರಣದಲ್ಲಿ ರವಿವಾರ ತಾಲೂಕು ಡಿ. ದೇವರಾಜ ಅರಸು ಹೋರಾಟ ಸಮಿತಿ ಡಿ. ದೇವರಾಜ ಅರಸು ಜನ್ಮ ಶತಮಾನೋತ್ಸವದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಶೋಷಿತ ವರ್ಗಗಳ ಬೃಹತ್ ಸಮಾವೇಶದಲ್ಲಿ ಅವರು ಮಾತನಾಡಿದರು.
ಕರ್ನಾಟಕದ ಮಾಜಿ ಮುಖ್ಯಮಂತ್ರಿ ದಿ| ಡಿ. ದೇವರಾಜ ಅರಸು ಅವರು 1976-77ರಲ್ಲಿ ಅಂಧ್ರಪ್ರದೇಶಕ್ಕೆ ಭೇಟಿ ನೀಡಿ ಹಿಂದುಳಿದ ವರ್ಗಗಳ ಹೋರಾಟದಲ್ಲಿ ಭಾಗವಹಿಸಿದ್ದರು. ಅವರ ಹೋರಾಟದ ಫಲವಾಗಿ ಈಗ ಆಂಧ್ರಪ್ರದೇಶ ಸರಕಾರ ಹಿಂದುಳಿದ ವರ್ಗದ ಮಕ್ಕಳಿಗೆ 1ನೇ ತರಗತಿಯಿಂದ ಪದವಿ ಹಾಗೂ ವೈದ್ಯಕೀಯ, ಇಂಜಿನಿಯರಿಂಗ್ ಶಿಕ್ಷಣದಲ್ಲಿ ಅಭ್ಯಸಿಸುವ ವಿದ್ಯಾರ್ಥಿಗಳಿಗೆ 1.20 ಲಕ್ಷ ರೂ. ಶುಲ್ಕ ಭರಿಸುತ್ತಿದೆ.
ಕರ್ನಾಟಕ ರಾಜ್ಯದಲ್ಲಿ ಬಡತನ ಹಾಗೂ ಕೂಲಿ ಕಾರ್ಮಿಕರ ಮಕ್ಕಳಿಗೆ ಶಿಕ್ಷಣ ನೀಡುವುದು ಮತ್ತು ಹಿಂದುಳಿದ ವರ್ಗಕ್ಕೆ ಸೇರಿದ ಬಾಲಕ ಮತ್ತು ಬಾಲಕಿಯರಿಗೆ ಪ್ರತ್ಯೇಕವಾಗಿ ವಸತಿ ನಿಲಯ ಪ್ರಾರಂಭಿಸಬೇಕು. ವಿದ್ಯಾರ್ಥಿ ವೇತನ ಹೆಚ್ಚಿಸಬೇಕು ಎಂದು ಹೇಳಿದರು.
ಹಿಂದುಳಿದ ವರ್ಗದವರಿಗೆ 50 ಲೋಕಸಭೆ ಸ್ಥಾನ ಮೀಸಲಿಡಬೇಕು. ಪ್ರಜಾಪ್ರಭುತ್ವ ಸರಕಾರದಲ್ಲಿ ಎಲ್ಲ ಸಮಾಜದ ಉದ್ಧಾರ ಆಗಬೇಕು. ಜನಸಂಖ್ಯೆಗನುಣವಾಗಿ ಆರ್ಥಿಕ ಸಾಲ ಸೌಲಭ್ಯಗಳು ಸಿಗಬೇಕು. ಡಿ. ದೇವರಾಜ ಅರಸು ಒಬ್ಬ ಆದರ್ಶ ರಾಜಕಾರಣಿಯಾಗಿದ್ದರು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸಚಿವ ಡಾ| ಶರಣಪ್ರಕಾಶ ಪಾಟೀಲ, ಸಂಸದೀಯ ಕಾರ್ಯದರ್ಶಿ ಡಾ| ಉಮೇಶ ಜಾಧವ, ತಿಪ್ಪಣ್ಣಪ್ಪ ಕಮಕನೂರ, ಬಸವರಾಜ ಪಾಟೀಲ ಊಡಗಿ, ತೆಲಂಗಾಣದ ಶ್ರೀನಿವಾಸ ಗೌಡ, ಜಿಪಂ ಸದಸ್ಯ ಗೌತಮ ಪಾಟೀಲ, ಶರಣಪ್ಪ ಮಾನೇಗಾರ, ಬಸವರಾಜ ಸುಲೇಪೇಟ, ಶರಣಪ್ಪ ತಳವಾರ, ಬಸವರಾಜ ಸಜ್ಜನಶೆಟ್ಟಿ, ರುದ್ರಶೆಟ್ಟಿ ಪಡಶೆಟ್ಟಿ ಇದ್ದರು.