ಹುಬ್ಬಳ್ಳಿ: ಶಿಕ್ಷಣ ಕ್ಷೇತ್ರದಲ್ಲಿ ವ್ಯಾಪಾರಿ ಮನೋಭಾವ ಇರಬಾರದು. ಬಡವರಲ್ಲಿ ದೇವರನ್ನು ಕಾಣುವ ಸೇವಾ ಮನೋಭಾವ ಹೊಂದಿದಾಗ ಮಾತ್ರ ಶಿಕ್ಷಣ ಕ್ಷೇತ್ರ ಪ್ರಗತಿ ಕಾಣಲು ಸಾಧ್ಯವೆಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎನ್.ಎಚ್. ನಾಗೂರ ಹೇಳಿದರು.
ಇಲ್ಲಿನ ಕೇಶ್ವಾಪುರ ಭುವನೇಶ್ವರಿ ನಗರದ ಗುರುಕುಮಾರ ಮೆಮೋರಿಯಲ್ ಟ್ರಸ್ಟ್‌ನ ಗುರುಕುಮಾರ ಪೂರ್ವ ಪ್ರಾಥಮಿಕ ಶಾಲೆ ಹಾಗೂ ನೂತನ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಇಂದಿನ ಪೈಪೋಟಿ ಯುಗದಲ್ಲಿ ಸಮಾಜದ ಅನೇಕ ರಂಗಗಳಲ್ಲಿ ಸರಣಿಯಂತೆ ಪೈಪೋಟಿ ಹೆಚ್ಚಾಗಿದೆ.
ಶಿಕ್ಷಣ ಕ್ಷೇತ್ರವೂ ಇದಕ್ಕೆ ಹೊರತಾಗಿಲ್ಲ. ಬಡವರೂ ಉತ್ತಮ ಶಿಕ್ಷಣವಂತರಾಗಲು ಶಿಕ್ಷಣ ಸಂಸ್ಥೆಗಳು ಸೇವಾ ಮನೋಭಾವದೊಂದಿಗೆ ಕಾರ್ಯ ನಿರ್ವಹಿಸಬೇಕು ಎಂದರು. ನೂತನ ಶಾಲಾ ಕಟ್ಟಡವನ್ನು ಟ್ರಸ್ಟ್‌ನ ಸಂಸ್ಥಾಪಕಿ ಯಶೋದಾದೇವಿ ಎಸ್. ವಿದ್ವಾನ ಉದ್ಘಾಟಿಸಿದರು.
ಪೂರ್ವ ಪ್ರಾಥಮಿಕ ಶಾಲೆ ಉದ್ಘಾಟಿಸಿದ ಮಹಾಪೌರ ಡಿ.ಕೆ. ಚವ್ಹಾಣ, ಶೋಷಿತ ಬಡಮಕ್ಕಳಿಗೂ ಕೂಡ ಉತ್ತಮ ಶಿಕ್ಷಣ ಒದಗಿಸಲು ಸಂಸ್ಥೆಯವರು ಮುಂದಾಗಬೇಕು ಎಂದರು. ಶಹರ ಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ ಬೊಮ್ಮಕ್ಕನವರ, ಎಫ್.ಎಚ್. ಜಕ್ಕಪ್ಪನವರ ಮಾತನಾಡಿದರು.
ಶಿಕ್ಷಣ ರಂಗದಲ್ಲಿ ಅಪಾರ ಕಾಳಜಿ ಹೊಂದಿದ್ದ ಎಸ್. ಎಸ್. ವಿದ್ವಾನ್ ಅವರ ಪುತ್ರ ವಿಶ್ವನಾಥ ಲಂಡನ್ ಮಾದರಿಯಲ್ಲಿ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಮಕ್ಕಳಿಗೆ ಪೂರ್ವ ತಳಹದಿಯಾಗಿ ಶಿಕ್ಷಣ ಒದಗಿಸಲು ಮುಂದಾಗಿರುವುದು ಒಳ್ಳೆಯ ಕಾರ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಡಾ| ಎಸ್. ವಿಶ್ವನಾಥ ಮಾತನಾಡಿದರು. ಶೀತಲ ಮದನರಾಜ, ಸೋಮಾದಾಸ ಪ್ರಾರ್ಥಿಸಿದರು. ಕೃಷ್ಣಾ ಜಕ್ಕಪ್ಪನವರ ಸ್ವಾಗತಿಸಿದರು. ಪ್ರಾಚಾರ್ಯೆ ನಂದಿನಿ ಕರಿಕಟ್ಟಿ ನಿರೂಪಿಸಿದರು. ಗಂಗಾಧರ ಕಮಲದಿನ್ನಿ ವಂದಿಸಿದರು.