ಬೆಂಗಳೂರು: ಸರಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ 2022-23ನೇ ಸಾಲಿನ ಸಾಮಾನ್ಯ ವರ್ಗಾವಣೆಗೆ ದಿನಗಣನೆ ಆರಂಭ ವಾಗಿದ್ದು, ಅಗತ್ಯ ಸಿದ್ಧತೆ ಮಾಡಿ ಕೊಳ್ಳುವಂತೆ ಅಧಿಕಾರಿಗಳಿಗೆ ಶಿಕ್ಷಣ ಇಲಾಖೆ ಸೂಚಿಸಿದೆ.
2021-22ನೇ ಸಾಲಿನಲ್ಲಿ ಕೊರೊನಾ ಕಾರಣದಿಂದ ವಲಯ ವರ್ಗಾವಣೆ/ಹೆಚ್ಚುವರಿ ಶಿಕ್ಷಕರ ಮರು ಹಂಚಿಕೆ ಪ್ರಕ್ರಿಯೆಯನ್ನು ಕೈಬಿಡಲಾಗಿತ್ತು. ಇದೀಗ ಹೆಚ್ಚುವರಿ ಶಿಕ್ಷಕರ ಮರುಹಂಚಿಕೆ ಮಾರ್ಗಸೂಚಿ ಮತ್ತು ವೇಳಾಪಟ್ಟಿಯನ್ನು ಪ್ರಕ ಟಿಸಲು ಸಿದ್ಧತೆ ನಡೆದಿದೆ.
ಪ್ರಕ್ರಿಯೆಯನ್ನು ಗೊಂದಲಗಳಿಲ್ಲದೆ ಪೂರ್ಣಗೊಳಿಸಬೇಕಿದೆ. ಹೀಗಾಗಿ ಡಿಡಿಪಿಐ ಹಾಗೂ ಬಿಇಒಗಳು ಅಗತ್ಯ ಮಾಹಿತಿ ಅಪ್‌ಲೋಡ್ ಮಾಡಬೇಕು. ವರ್ಗಾವಣೆ ಪ್ರಕ್ರಿಯೆಯನ್ನು ಆನ್‌ಲೈನ್ ಮೂಲಕವೇ ನಿರ್ವಹಿಸಬೇಕಿದ್ದು, ಶಿಕ್ಷಕರ ಅಂಕಗಳ ಪ್ರಕಟ, ಆಕ್ಷೇಪಣೆ ಸಲ್ಲಿಕೆ ಇತ್ಯಾದಿ ಕ್ರಮಗಳನ್ನು ಅನು ಸರಿಸಿ ಅಂತಿಮ ಆದ್ಯತಾ ಪಟ್ಟಿಯನ್ನು ಪ್ರಕಟಿಸ ಲಾಗುತ್ತದೆ. ಅನಂತರ ಕೌನ್ಸೆಲಿಂಗ್ ಮೂಲಕ ಪ್ರಕ್ರಿಯೆ ನಡೆಯಲಿದೆ.
ಕಳೆದ ಸಾಲಿನ ವರ್ಗಾವಣೆ ಪ್ರಕರಣವು ನ್ಯಾಯಾಲಯದಲ್ಲಿದ್ದರಿಂದ ಪ್ರಕ್ರಿಯೆ ವಿಳಂಬಕ್ಕೆ ಕಾರಣ ವಾಗಿದೆ. ಆದ್ದರಿಂದ ಶಿಕ್ಷಕ ರಿಂದ ಸಲ್ಲಿಕೆಯಾಗುವ ಮನವಿ/ಆಕ್ಷೇ ಪಣೆ ಗಳಿಗೆ ಸೂಕ್ತ ಹಿಂಬರಹ ನೀಡು ವುದರಿಂದ ನ್ಯಾಯಾಲಯಕ್ಕೆ ತೆರಳುವ ಪ್ರಕರಣಗಳನ್ನು ತಪ್ಪಿಸ ಬಹುದು. ಈ ನಿಟ್ಟಿನಲ್ಲಿ ಈಗಾಗಲೇ ವರ್ಗಾವಣೆ ಸಂಬಂಧ ಕರ್ನಾಟಕ ಆಡಳಿತ ನ್ಯಾಯ ಮಂಡಳಿ (ಕೆಎಟಿ)ಯಿಂದ ಬಂದಿರುವ ತೀರ್ಪನ್ನು ಅವಲೋಕಿಸಿ ಅರ್ಜಿದಾರ ಶಿಕ್ಷಕರಿಗೆ ತುರ್ತಾಗಿ ಚಾಲ್ತಿಯಲ್ಲಿರುವ ನಿಯಮಗಳ ಹಿಂಬರಹ ನೀಡುವಂತೆ ಸೂಚಿಸಿದೆ.
ನಿಯಮಾನುಸಾರ ಕಾರ್ಯನಿರ್ವಹಿಸದೆ ಬೇಜವಾಬ್ದಾರಿ ತೋರುವ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆ ತಿಳಿಸಿದೆ.
ಪೂರ್ವ ಸಿದ್ಧತಾ ವೇಳಾಪಟ್ಟಿ ಪ್ರಕಟ
ಶಿಕ್ಷಕರ ವರ್ಗಾವಣೆ- 2022-23ನೇ ಸಾಲಿನ ಪೂರ್ವ ಸಿದ್ಧತೆಯ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಎಲ್ಲ ಶಿಕ್ಷಕರ ಅಂಕಗಳ (ವೇಟೇಜ್) ಕರಡು ಪಟ್ಟಿಯನ್ನು ಅ.12ರಂದು ಆನ್‌ಲೈನ್‌ನಲ್ಲಿ ಪ್ರಕಟಿಸಿದೆ. ಇದರ ಆಧಾರದಲ್ಲಿ ಶಿಕ್ಷಕರಿಂದ ಸ್ವೀಕೃತವಾಗುವ ಆಕ್ಷೇಪಣೆಗಳನ್ನು ಪರಿ ಶೀಲಿಸಿ ದಾಖಲೆಗಳೊಂದಿಗೆ ಅ.20ರೊಳಗೆ ಶಿಕ್ಷಕ ಮಿತ್ರ ತಂತ್ರಾಂಶದಲ್ಲಿ ಅಪ್‌ಲೋಡ್ ಮಾಡಬೇಕು. ಶಿಕ್ಷಕರ ಅಂತಿಮ ಪಟ್ಟಿಯನ್ನು ಅ.25ರಂದು ಪ್ರಕಟಿಸಲಾಗುತ್ತದೆ.
ಶಿಕ್ಷಕರ ವರ್ಗಾವಣೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಸದನದಲ್ಲಿ ಮಂಡನೆಯಾಗಿರುವ ಶಿಕ್ಷಕರ ವರ್ಗಾವಣೆ ಕಾಯ್ದೆಯನ್ನು ರಾಜ್ಯಪಾಲರು ಅಂಗೀಕರಿಸಿದ ಅನಂತರ ಕಾನೂನು ರೂಪಿಸಿ ಪ್ರಕ್ರಿಯೆ ಆರಂಭಿಸಲಾಗುತ್ತದೆ.
– ಡಾ. ಆರ್. ವಿಶಾಲ್, ಆಯುಕ್ತರು, ಸಾರ್ವಜನಿಕ ಶಿಕ್ಷಣ ಇಲಾಖೆ