ಬೆಂಗಳೂರು: ಶಾಲಾ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯಲ್ಲಿ ಖಾಲಿ ಹುದ್ದೆಗಳನ್ನು ಅದಲು-ಬದಲುಗೊಳಿಸಿ, ಸ್ವಜನ ಪಕ್ಷಪಾತ ಮಾಡುತ್ತಿದ್ದ ಅಧಿಕಾರಿಗಳನ್ನು ನಿಯಂತ್ರಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ವರ್ಗಾವಣೆ ನಿಯಮದಲ್ಲಿ ತಿದ್ದುಪಡಿ ತಂದಿದೆ. ವರ್ಗಾವಣೆ ಪ್ರಕ್ರಿಯೆ ಆರಂಭದಲ್ಲಿ ಅರ್ಹ ಅಭ್ಯರ್ಥಿಗಳಿಗೆ ಆನ್‌ಲೈನ್‌ನಲ್ಲಿ ತೋರಿಸುವ ಹುದ್ದೆ ಮತ್ತು ಆಯ್ಕೆ ಮಾಡಿಕೊಳ್ಳುವಾಗ ಲಭ್ಯವಾಗುವ ಹುದ್ದೆಗೆ ಸಾಕಷ್ಟು ವ್ಯತ್ಯಾಸ ಉಂಟಾಗುತ್ತದೆ. ಸೇವಾ ಜೇಷ್ಠತೆ ಸೇರಿ ಎಲ್ಲ ರೀತಿ ಅರ್ಹತೆ ಹೊಂದಿ, ವರ್ಗಾವಣೆಯಲ್ಲಿ ಮೊದಲ ಸ್ಥಾನದಲ್ಲಿರುವ ಅಭ್ಯರ್ಥಿಗೆ ತಾನು ಇಚ್ಛಿಸಿದ ಹುದ್ದೆ ಖಾಲಿ ಇದ್ದರೂ ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಕಾರಣ, ವರ್ಗಾವಣೆ ಪ್ರಕ್ರಿಯೆ ಆರಂಭವಾದ ನಂತರವೂ ಅಧಿಕಾರಿಗಳು “ಕೈಚಳಕ’ ತೋರಿಸಿ ಆ ಹುದ್ದೆ ಖಾಲಿ ಇಲ್ಲದಂತೆ ಮಾಡುತ್ತಿದ್ದರು. ನಂತರ ಪಟ್ಟಿ ಪರಿಷ್ಕರಣೆ ಹೆಸರಿನಲ್ಲಿ ಮತ್ತದೇ ಹುದ್ದೆ ತೋರಿಸುತ್ತಿದ್ದರು ಎಂದು ಹೇಳಲಾಗಿದೆ. ಇದರಿಂದ ಹೆಚ್ಚಿನ ಶಿಕ್ಷಕರಿಗೆ ತಮ್ಮ ಅರ್ಹತೆಗೆ ಅನುಗುಣವಾದ ಹುದ್ದೆ ಲಭ್ಯವಿದ್ದರೂ, ಪಡೆದು ಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಒಮ್ಮೆ ವರ್ಗಾವಣೆ ಪಡೆದುಕೊಂಡ ನಂತರ ಮತ್ತೆ ಅದನ್ನು ಬದಲಿಸಲು ಸಾಧ್ಯವಿಲ್ಲ. ಹೀಗಾಗಿ ಅಧಿಕಾರಿಗಳು ತಮಗೆ ಬೇಕಾದ ಅಭ್ಯರ್ಥಿಗಳಿಗೆ ಆನ್‌ಲೈನ್ ಮೂಲಕವೇ ಉತ್ತಮ
ಶಾಲೆಯಲ್ಲಿ ಖಾಲಿ ಹುದ್ದೆ ಹಂಚಿಕೆಯಾಗುವಂತೆ ಮಾಡುತ್ತಿದ್ದರು ಎಂಬ ಆರೋಪವಿದೆ.
ಜಿಲ್ಲಾ ಉಪನಿರ್ದೇಶಕರು (ಡಿಡಿಪಿಐ) ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು (ಬಿಇಒ) ಹಂತದಲ್ಲಿ ಮಾತ್ರ ಈ ರೀತಿ ಮಾಡಲು ಸಾಧ್ಯ. ವರ್ಗಾವಣೆಯ
ಜವಾಬ್ದಾರಿಯ ಬಹುಪಾಲು ಈ ಅಧಿಕಾರಿಗಳ ಮೇಲಿರುತ್ತದೆ. ವರ್ಗಾವಣೆ ಪ್ರಕ್ರಿಯೆ ಆರಂಭವಾದ ನಂತರವೂ ಖಾಲಿ ಹುದ್ದೆಯ ಪಟ್ಟಿ ಪರಿಷ್ಕರಣೆ
ಮಾಡುತ್ತಿದ್ದರು. ಇನ್ಮುಂದೆ ಇದಕ್ಕೆಲ್ಲ ಬ್ರೇಕ್ ಬೀಳಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಶಿಕ್ಷಕರ ವರ್ಗಾವಣೆ ಮಾರ್ಗಸೂಚಿಯಲ್ಲಿ
ಸಾರ್ವಜನಿಕ ಶಿಕ್ಷಣ ಇಲಾಖೆಯ ಉನ್ನತಾಧಿಕಾರಿಗಳು ಮಹತ್ವದ ತಿದ್ದುಪಡಿ ಮಾಡಿ, ಸರ್ಕಾರಕ್ಕೆ ಸಲ್ಲಿಸಿದರು. ಸರ್ಕಾರದಿಂದಲೂ ಅದಕ್ಕೆ ಒಪ್ಪಿಗೆ ಸಿಕ್ಕಿದೆ. ಪ್ರಸಕ್ತ ಸಾಲಿನ ವರ್ಗಾವಣೆ ಪ್ರಕ್ರಿಯೆಯಲ್ಲಿ ಇದು ಜಾರಿಗೆ ಬರಲಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಕಚೇರಿಯ ಮೂಲಗಳೇ ಖಚಿತಪಡಿಸಿವೆ.
ತಿದ್ದುಪಡಿ ಏನು?: ವರ್ಗಾವಣೆಗೆ ಸಂಬಂಧಿಸಿದಂತೆ ಶಿಕ್ಷಣ ಇಲಾಖೆ ಪ್ರಕಟಿಸುವ ಖಾಲಿ ಹುದ್ದೆಗಳ ಪಟ್ಟಿ ಪರಿಷ್ಕರಿಸುವ ಅಧಿಕಾರ ಬಿಇಒ ಹಾಗೂ ಡಿಡಿಪಿಐ ಗಳಿಗೆ ಇತ್ತು. ಈಗ ಅದನ್ನು ತಿದ್ದುಪಡಿ ಮಾಡಲಾಗಿದೆ. ನಿಗದಿತ ದಿನಾಂಕದಂದು ಪ್ರಕಟಿಸಿದ ಖಾಲಿ ಹುದ್ದೆಯ ಪಟ್ಟಿಗೆ ನಂತರದ ದಿನಾಂಕದಲ್ಲಿ ಯಾವುದೇ ಸೇರ್ಪಡೆಗೆ ಅವಕಾಶ ಇರುವುದಿಲ್ಲ. ಪಟ್ಟಿಯಲ್ಲಿ ಯಾವುದೇ ವ್ಯತ್ಯಾಸವಾದರೂ, ಕ್ಷೇತ್ರ ಶಿಕ್ಷಣಾಧಿಕಾರಿಗಳೇ ಹೊಣೆಯಾಗಿರುತ್ತಾರೆಂದು ತಿದ್ದುಪಡಿ ಮಾಡಲಾಗಿದೆ. ಖಾಲಿ ಹುದ್ದೆಗಳ ಪಟ್ಟಿಗೆ ಸೇರ್ಪಡೆ ಅಥವಾ ಕಡಿತಗೊಳಿಸಿರುವುದು ಕಂಡುಬಂದಲ್ಲಿ
ತಕ್ಷಣವೇ ಕ್ಷೇತ್ರ ಶಿಕ್ಷಣಾಧಿಕಾರಿಯನ್ನು ಅಮಾನತು ಮಾಡಿ, ತ್ವರಿತ ವಿಚಾರಣೆ ನಡೆಸಲಾಗುತ್ತದೆ. ಆರೋಪ ಸಾಬೀತಾದರೆ ಕಾನೂನಿನನ್ವಯ ಕಠಿಣ ಕ್ರಮ ತೆಗೆದು ಕೊಳ್ಳಲಾಗುತ್ತದೆಂದು ಇಲಾಖೆಯ ಉನ್ನತಾಧಿಕಾರಿಯೊಬ್ಬರು ಉದಯವಾಣಿಗೆ ತಿಳಿಸಿದ್ದಾರೆ.
ಅನುಮತಿ ಕಡ್ಡಾಯ
ವರ್ಗಾವಣೆ ಪ್ರಕ್ರಿಯೆ ಆರಂಭದಲ್ಲಿ ಪ್ರಕಟಿಸುವ ಖಾಲಿ ಹುದ್ದೆಯ ಪಟ್ಟಿಯಲ್ಲಿ ನಂತರ ಯಾವುದೇ ಸೇರ್ಪಡೆ ಅಥವಾ ಖಡಿತ ಮಾಡುವುದಿದ್ದರೂ, ಇಲಾಖೆಯ ಆಯುಕ್ತರ ಲಿಖಿತ ಅನುಮತಿ ಪಡೆಯಲೇ ಬೇಕು. ಮೌಖೀಕ ಆದೇಶವಿದೆ ಎಂದು ಪಟ್ಟಿ ಬದಲಾವಣೆ ಮಾಡಲು ಅವಕಾಶವಿಲ್ಲ. ಈ ಸಂಬಂಧ ಎಲ್ಲ ಬಿಇಒ ಹಾಗೂ ಡಿಡಿಪಿಐಗಳಿಗೆ ನಿರ್ದೇಶನ ನೀಡಲಾಗಿದೆ.
ವರ್ಗಾವಣೆ ನಿಯಮದಲ್ಲಿ ತಿದ್ದುಪಡಿ ಮಾಡಿ ಸಲ್ಲಿಸಿದ್ದ ಶಿಫಾರಸಿಗೆ ಸರ್ಕಾರ ಒಪ್ಪಿಗೆ ಸೂಚಿಸಿದೆ. ಇದರಿಂದ ವರ್ಗಾವಣೆಯ ಶೇ.90ರಷ್ಟು ಸಮಸ್ಯೆ ಬಗೆಹರಿಯುವ ಸಾಧ್ಯತೆಯಿದೆ.
● ಡಾ.ಪಿ.ಸಿ.ಜಾಫರ್, ಆಯುಕ್ತ, ಸಾರ್ವಜನಿಕ ಶಿಕ್ಷಣ ಇಲಾಖೆ
ರಾಜು ಖಾರ್ವಿ ಕೊಡೇರಿ