Advertisement

ದೇಶದ ಅಭಿವೃದ್ಧಿಗೆ ಸುಶಿಕ್ಷಿತರಾಗಿ: ತೋಂಟದಾರ್ಯ ಶ್ರೀ

05:15 PM Jul 19, 2018 | Team Udayavani |

ಗದಗ: ಒಂದು ದೇಶದ ಜನರ ಜೀವನಮಟ್ಟದ ಉತ್ಕೃಷ್ಠತೆಗೆ ಜನಸಂಖ್ಯೆ ಮೂಲಕಾರಣವಾಗುತ್ತದೆ. ಸೀಮಿತ ಸಂಪನ್ಮೂಲಗಳನ್ನು ಬಹುಜನರು ಬಳಸಿಕೊಂಡಾಗ ಕೊರತೆ, ಸಮಸ್ಯೆಗಳು ಉಲ್ಬಣಿಸುತ್ತವೆ ಎಂದು ಜಗದ್ಗುರು ತೋಂಟದ ಸಿದ್ಧಲಿಂಗ ಸ್ವಾಮೀಜಿ ಹೇಳಿದರು. ಲಿಂಗಾಯತ ಪ್ರಗತಿಶೀಲ ಸಂಘದಿಂದ ನಗರದ ತೋಂಟದಾರ್ಯ ಮಠದಲ್ಲಿ ನಡೆದ 2389ನೇ ಶಿವಾನುಭವದಲ್ಲಿ ಅವರು ಆಶೀರ್ವಚನ ನೀಡಿದರು.

Advertisement

ದೇಶದ ಅಭಿವೃದ್ಧಿ ದೃಷ್ಠಿಯಿಂದ ಜನರು ಶಿಕ್ಷಣ ಹೊಂದುವುದು ಅಗತ್ಯವಾಗಿದೆ. ಇದರಿಂದ ಮೂಢನಂಬಿಕೆ, ಬಾಲ್ಯವಿವಾಹ, ಲಿಂಗ ತಾರತಮ್ಯ ನಿವಾರಣೆ ಸಾಧ್ಯವಾಗುತ್ತದೆ. ನಾವಿಬ್ಬರು ನಮಗೊಬ್ಬರು ಎಂಬ ತತ್ವವನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ದೇಶದ ಜನತೆ ಸೌಖ್ಯದಿಂದ ಬದುಕಲು ಸಾಧ್ಯವಾಗುತ್ತದೆ ತಿಳಿಸಿದರು.

ಜನಸಂಖ್ಯಾ ಶಿಕ್ಷಣದ ಮಹತ್ವ ವಿಷಯವಾಗಿ ಎಂ.ಎ. ಶಿಕ್ಷಣ ಮಹಾವಿದ್ಯಾಲಯದ ನಿವೃತ್ತ ಪ್ರಾಚಾರ್ಯ ಡಾ| ಎಚ್‌.ವಿ. ವಾಮದೇವಪ್ಪ ಮಾತನಾಡಿ, 2022ರ ಹೊತ್ತಿಗೆ ಜನಸಂಖ್ಯೆಯಲ್ಲಿ ಭಾರತ ಚೀನಾ ದೇಶವನ್ನು ಹಿಂದಿಕ್ಕಿ ಪ್ರಪಂಚದ ಮೊದಲನೇ ಸ್ಥಾನಕ್ಕೆ ತಲುಪಲಿದೆ. ದೇಶದಲ್ಲಿ ಶೇ. 35 ರಷ್ಟು ಜನರು ಇನ್ನೂ ಕುಟುಂಬ ಯೋಜನೆಯನ್ನು ಪಾಲಿಸುತ್ತಿಲ್ಲ ಎಂದರು.

ಜನಸಂಖ್ಯೆ ಹೆಚ್ಚಳದಿಂದ ನೈಸರ್ಗಿಕ ಸಂಪನ್ಮೂಲ ಮತ್ತು ಜನಜೀವನದ ಮಧ್ಯೆ ಅಸಮತೋಲನ ಉಂಟಾಗಿದೆ. ಅಭಿವೃದ್ಧಿಪರ ಯೋಜನೆಗಳು ಎಲ್ಲ ಜನರನ್ನು ತಲುಪಲು ಸಾಧ್ಯವಾಗುವುದಿಲ್ಲ. ನಗರೀಕರಣ, ವಲಸೆ, ಕೈಗಾರೀಕರಣ, ಆಹಾರ ಕೊರತೆ, ನೀರು, ವಾಯು, ಶಬ್ದಮಾಲಿನ್ಯ, ಕಾಡುನಾಶ, ಸಾಂಕ್ರಾಮಿಕ ರೋಗಗಳು, ವಾತಾವರಣ ವೈಪರೀತ್ಯಕ್ಕೆ ಕಾರಣವಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ಮುಖ್ಯ ಅತಿಥಿ ಎಸ್‌.ಎಂ.ಭಂಡಾರಿ ಹಾಗೂ ರಾಟಿ ಕಾಲೇಜು ಗುಳೇದಗುಡ್ಡದ ಪ್ರಾಚಾರ್ಯ ಸಿದ್ಧಲಿಂಗಪ್ಪ ಬರಗುಂಡಿ ಮಾತನಾಡಿ, ಶರಣರು ಕಾಯಕ, ದಾಸೋಹಕ್ಕೆ ವಿಶೇಷ ಆದ್ಯತೆ ಕಲ್ಪಿಸಿದರು. ದುಡಿಮೆಯಿಂದ ಬರುವ ಆದಾಯವನ್ನು ಹಂಚುವ ಪ್ರಜ್ಞೆ ಜನರಲ್ಲಿ ಜಾಗೃತಗೊಳಿಸಿದರು. ಈ ಹಾದಿಯಲ್ಲಿ ಶರಣೆ ನೀಲಮ್ಮ ಪಟ್ಟಣಶೆಟ್ಟಿ ಅವರು ಸಾಗಿಬಂದು ಸಮಾಜಸೇವೆಯಲ್ಲಿ ತೊಡಗಿಕೊಂಡು ಸ್ವಾವಲಂಬಿಯಾಗಿ ಬದುಕು ಸಾಗಿಸಿದರು ಎಂದು ತಿಳಿಸಿದರು. 2018ರ ಮಾರ್ಚ್‌ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಬೆಳಗಾವಿಯ ಮೊಹಮ್ಮದ್‌ ಕೈಫ್‌ ಎಚ್‌. ಮುಲ್ಲಾ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಶ್ರೀಮಠದಿಂದ ಪ್ರಕಟಗೊಂಡ ಪಂ.ಬಸವರಾಜ ರಾಜಗುರು ಪುಸ್ತಕವನ್ನು ಶಿಕ್ಷಕಿ ಶಾಂತಲಾ ಹಂಚಿನಾಳ ಪರಿಚಯಿಸಿದರು.

Advertisement

ಪ್ರಪುಲ್‌ ವ್ಯಾಪಾರಿ ಅವರಿಂದ ವಚನ ಸಂಗೀತ ಪ್ರಸ್ತುತಪಡಿಸಿದರು. ಧರ್ಮಗ್ರಂಥ ಪಠಣವನ್ನು ಸಾಕ್ಷಿ ಶಂಭುಲಿಂಗಪ್ಪ ಬಡಿಗಣ್ಣವರ ಹಾಗೂ ವಚನ ಚಿಂತನೆಯನ್ನು ಸ್ನೇಹಾ ಶಂಭುಲಿಂಗಪ್ಪ ಬಡಿಗಣ್ಣವರ ನೆರವೇರಿಸಿದರು. ವೇದಿಕೆ ಮೇಲೆ ಡಾ| ಎಂ.ಎಂ. ಪಟ್ಟಣಶೆಟ್ಟಿ ಗುಳೇದಗುಡ್ಡ ಉಪಸ್ಥಿತರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next