ಮೈಸೂರು/ಮಂಗಳೂರು: ಮಕ್ಕಳಿಗೆ ಹೈಸ್ಕೂಲ್‌ವರೆಗೆ ಮಾತೃಭಾಷೆಯಲ್ಲೇ ಶಿಕ್ಷಣ ದೊರೆ ಯಬೇಕು ಎಂದು ಎಂದು ಉಪ ರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಸಲಹೆ ನೀಡಿದ್ದಾರೆ. ಸುರತ್ಕಲ್ ಎನ್‌ಐಟಿಕೆಯಲ್ಲಿ ಶನಿವಾರ ಜರುಗಿದ 17ನೇ ಘಟಿಕೋತ್ಸವದಲ್ಲಿ ಘಟಿಕೋತ್ಸವ ಭಾಷಣ ಮಾಡಿದ ಅವರು, ಮಾತೃಭಾಷೆ ಎಂಬುದು ನಮ್ಮ ಕಣ್ಣಿನ ದೃಷ್ಟಿ ಇದ್ದಂತೆ. ಅನ್ಯಭಾಷೆಗಳು ಕನ್ನಡಕ ಇದ್ದಂತೆ. ಅದುದರಿಂದ ಮಾತೃಭಾಷೆಯನ್ನು ಪ್ರೀತಿಸಬೇಕು.
ಪೋಷಿಸಬೇಕು. ಭಾಷಾ ಔರ್ ಭಾವನಾ ಏಕ್ ಸಾಥ್ ಚಲ್ತಾ ಹೈ (ಭಾಷೆ ಮತ್ತು ಭಾವನೆ ಜತೆಯಾಗಿ ಸಾಗುತ್ತದೆ) ಎಂದರು. ಭಾರತ ಇಂದು ಜ್ಞಾನ ಆಮದು ರಾಷ್ಟ್ರದ ಬದಲಾಗಿ ಜ್ಞಾನ ರಫ್ತು ರಾಷ್ಟ್ರವಾಗಿ ಹೊರಹೊಮ್ಮಿದೆ. ತಂತ್ರಜ್ಞಾನಗಳಿಗೆ ವಿಶ್ವ ಇಂದು ನಮ್ಮತ್ತ ಮುಖ ಮಾಡುತ್ತಿದೆ. ಭಾರತ ಹಿಂದೆ ಹೊಂದಿದ್ದ ವಿಶ್ವಗುರು ಸ್ಥಾನ ಮರಳಿ ಸ್ಥಾಪನೆಯಾಗುವ ಗುರಿ ಸಾಧನೆಯಲ್ಲಿ ಎಲ್ಲರೂ ಶ್ರಮಿಸಬೇಕು ಎಂದರು.
ಬಳಿಕ, ಮೈಸೂರಿನ ಜೆಎಸ್‌ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯ ಹತ್ತನೇ ವಾರ್ಷಿಕ ಘಟಿಕೋತ್ಸವ ಸಮಾರಂಭದಲ್ಲಿ ಮಾತನಾಡಿ, ಯುವ ಜನತೆ ಉತ್ತಮ ಜೀವನ ಶೈಲಿಯನ್ನು ರೂಢಿಸಿಕೊಂಡು ಆರೋಗ್ಯ ಕಾಪಾಡಿಕೊಳ್ಳುವುದರ ಜತೆಗೆ ದೈಹಿಕ ಸಾಮರ್ಥ್ಯ ಹೆಚ್ಚಿಸಿಕೊಂಡಾಗ ಸಮಾಜ ಮತ್ತು ದೇಶದ ಅಭಿವೃದ್ಧಿಗೆ ಕೊಡುಗೆ ನೀಡಲು ಸಾಧ್ಯ ಎಂದು ಸಲಹೆ ನೀಡಿದರು.
ಕರ್ನಾಟಕದ ರಾಗಿ ಮುದ್ದೆ, ನೀರ್‌ದೋಸೆ ಎಲ್ಲೆಡೆ ಫೇಮಸ್: ಇಂಥದ್ದೇ ಆಹಾರ ತಿನ್ನಿ ಎಂದು ನಾನು ಸಲಹೆ ನೀಡಲ್ಲ. ಸಸ್ಯಾಹಾರಿಗಳು ಸಸ್ಯಾಹಾರವನ್ನು, ಮಾಂಸಹಾರಿಗಳು ಮಾಂಸಾಹಾರವನ್ನು, ಎರಡನ್ನೂ ತಿನ್ನುವವರೂ ತಿನ್ನಿ. ಆದರೆ, ಆರೋಗ್ಯದ ದೃಷ್ಟಿಯಿಂದ ಪುರಾತನ ಭಾರತದ ಆಹಾರ ಪದ್ಧತಿಗೆ ಮರಳುವುದು ಸೂಕ್ತ. ಕರ್ನಾಟಕದಲ್ಲಿ ದೊರೆಯುವ ರಾಗಿ ಮುದ್ದೆ, ನೀರ್ ದೋಸೆಯಂತಹ ಆರೋಗ್ಯಕರ ಆಹಾರ ಭಾರತದಾದ್ಯಂತ ಪ್ರಸಿದ್ಧವಾಗಿದೆ ಎಂದರು.
ಜಮ್ಮು-ಕಾಶ್ಮೀರದಲ್ಲಿ 370ನೇ ವಿಧಿ ರದ್ಧತಿಗೆ ನಿರೀಕ್ಷೆಗೂ ಮೀರಿ ಬೆಂಬಲ ಸಿಕ್ಕಿತು. ರಾಜ್ಯಸಭೆಯಲ್ಲಿ ಆಡಳಿತ ಪಕ್ಷಕ್ಕೆ ಬಹುಮತ ಇರಲಿಲ್ಲ. ಆದರೂ ಅಲ್ಲಿ ಮೂರನೇ ಎರಡರಷ್ಟು ಬಹುಮತ ಸಿಕ್ಕಿತು. ರಾಜ್ಯಸಭೆಯ ಸಭಾಧ್ಯಕ್ಷನಾಗಿ ಆ ಕ್ಷಣ ನನ್ನ ಜೀವನದಲ್ಲಿ ಮರೆಯಲಾಗದ ಕ್ಷಣವಾಗಿತ್ತು.
-ಎಂ.ವೆಂಕಯ್ಯ ನಾಯ್ಡು, ಉಪರಾಷ್ಟ್ರಪತಿ