Advertisement

ಅವಮಾನಕ್ಕೊಳಗಾಗಿ ಆತ್ಮಹತ್ಯೆಗೆ ಯತ್ನಿಸಿದ್ದ ವಿದ್ಯಾರ್ಥಿಗೆ ಧೈರ್ಯ ತುಂಬಿದ ಶಿಕ್ಷಣ ಸಚಿವ

07:42 PM Feb 11, 2021 | Team Udayavani |

ಬೆಂಗಳೂರು: ಶಾಲಾ ಶುಲ್ಕ ಪಾವತಿಸದಿರುವುದರಿಂದ ಪ್ರಾಚಾರ್ಯರಿಂದ ಬಹಿರಂಗ ಅವಮಾನಕ್ಕೊಳಗಾಗಿ ಆತ್ಮಹತ್ಯೆಗೆ ಯತ್ನಿಸಿದ್ದ ವಿದ್ಯಾರ್ಥಿಯ ಮನೆಗೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಭೇಟಿ ನೀಡಿ ಧೈರ್ಯ ತುಂಬಿ ಸಮಾಧಾನ ಪಡಿಸಿದ್ದಾರೆ.

Advertisement

ನಗರದ ಎಚ್.ಎಸ್.ಆರ್. ಲೇಔಟ್‍ನ ಸೋಮಸುಂದರ ಪಾಳ್ಯದ ರವೀಂದ್ರ ಭಾರತಿ ಗ್ಲೋಬಲ್ ಶಾಲೆಯ 10ನೇ ತರಗತಿ ವಿದ್ಯಾರ್ಥಿ ಶಾಲಾ ಶುಲ್ಕ ಪಾವತಿಸಿಲ್ಲವಾದ್ದರಿಂದ ಶಾಲೆಯ ಪ್ರಾಚಾರ್ಯರು ಎಲ್ಲ ವಿದ್ಯಾರ್ಥಿಗಳ ಮುಂದೆ ನಿಂದಿಸಿ ಅಪಮಾನಿಸಿ ಶಾಲಾ ಮಟ್ಟದ ಪರೀಕ್ಷೆಗೆ ನಿರಾಕರಣೆ ಮಾಡಿದ್ದರು. ಸಹಪಾಠಿಗಳೆದುರಿಗೆ ಆದ ಅವಮಾನದಿಂದ ಮನನೊಂದ ವಿದ್ಯಾರ್ಥಿ ಆತ್ಮಹತ್ಯೆಗೆ ಮುಂದಾಗಿದ್ದ,

ವಿದ್ಯಾರ್ಥಿ ಮತ್ತು ಪೋಷಕರೊಂದಿಗೆ ಕುಳಿತು, ಶಾಲೆಯಲ್ಲಿ ಏನೇನು ನಡೆಯಿತೆಂದು ವಿಚಾರಿಸಿದರು. ಶಾಲೆಯ ಎಲ್ಲ ವಿದ್ಯಾರ್ಥಿಗಳೆದುರಿಗೆ ಆದ ಅವಮಾನದಿಂದ ನಾನು ಬದುಕುವುದೇ ಬೇಡ ಎಂದು ನಿರ್ಧರಿಸಿ ಆತ್ಮಹತ್ಯೆಗೆ ಮುಂದಾದೆ ಎಂದು ಹೇಳುತ್ತಿದ್ದಂತೆ ಅವನ ಮಾತನ್ನು ತಡೆದು,  ಹೆಗಲ ಮೇಲೆ ಕೈಹಾಕಿ, ಜೀವನ ಇಷ್ಟಕ್ಕೆ ಮುಗಿಯುವುದಿಲ್ಲ. ಸಮಾಜದಲ್ಲಿ ಎಲ್ಲ ರೀತಿಯ ಜನ ಇರುತ್ತಾರೆ, ಇಂತಹದಕ್ಕೆಲ್ಲ ಹೆದರಿ ಕೂರಬಾರದು, ಎಲ್ಲದನ್ನೂ ಧೈರ್ಯವಾಗಿ ಎದುರಿಸಬೇಕು ಎಂದು ಧೈರ್ಯ ತುಂಬಿದ್ದಾರೆ.

ಇದನ್ನೂ ಓದಿ:ಭಾಂಡೂಪ್‌ ಪಶ್ಚಿಮದ ಭಟ್ಟಿಪಾಡಾದ ಶ್ರೀ ಶನೀಶ್ವರ ಮಂದಿರ: 37ನೇ ವಾರ್ಷಿಕ ಮಹಾಪೂಜೆ

ಯಾರೊಬ್ಬರೂ ಇಂತಹುದೇ ಜಾತಿಯಲ್ಲಿ ಹುಟ್ಟಬೇಕೆಂದು ಅರ್ಜಿ ಹಾಕುವುದಿಲ್ಲ. ಯಾರೂ ಮೇಲಲ್ಲ, ಯಾರೂ ಕೀಳಲ್ಲ, ಎಲ್ಲರೂ ಸಮಾನರು. ಶಿಕ್ಷಣವೊಂದು ಮಾತ್ರವೇ  ಎಲ್ಲವನ್ನೂ ಭೇದಿಸಿ ನಿಲ್ಲಬಲ್ಲದು ಎಂದು ಸಚಿವರು ಹೇಳಿದರು.

Advertisement

ನೀನು ಆತ್ಮಹತ್ಯೆ ಮಾಡಿಕೊಂಡಿದ್ದರೆ ಇಷ್ಟು ದಿನ ಕಷ್ಟದಲ್ಲಿ ಸಂಪಾದನೆ ಮಾಡಿ ನಿನ್ನನ್ನು ಕಷ್ಟಪಟ್ಟು ಬೆಳೆಸಿ ನಿನ್ನ ಮೇಲೆ ಅಪಾರ ವಿಶ್ವಾಸವಿಟ್ಟುಕೊಂಡಿರುವ  ನಿನ್ನ ತಂದೆ  ತಾಯಿ, ನಿನ್ನ ಪುಟ್ಟ ತಂಗಿಗೆ ಯಾರು ಗತಿ, ಅವರ ಕಥೆ ಏನಾಗುತಿತ್ತು ಎಂಬುದನ್ನು ನೀನು ಯೋಚಿಸಿದ್ದೀಯಾ? ಆತ್ಮಹತ್ಯೆಗೆ ಯಾವತ್ತೂ ಪ್ರಯತ್ನಿಸಬಾರದು. ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳುವಂತಹ ಮನಸ್ಸು ಕೆಲವರಿಗೆ ಇರುವುದಿಲ್ಲ. ಇಷ್ಟಕ್ಕೇ ಜೀವನವೂ ಮುಗಿಯುವುದಿಲ್ಲ.  ಒಳ್ಳೆ ಕಾಲ ಬಂದೇ ಬರುತ್ತದೆ. ಅಲ್ಲಿತನಕ ಸಮಾಧಾನದಿಂದ  ಇರಬೇಕು ಎಂದರು.

ವಲಸೆ ಕಾರ್ಮಿಕರೊಬ್ಬರ ಪುತ್ರ ಮಹೇಶ ಎಂಬಾತ ಕಳೆದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣನಾದಾಗ ಅವನ ಶಿಕ್ಷಣ ಮುಂದುವರೆಕೆಗೆ ಹಲವಾರು ಮಂದಿ ಮುಂದೆ ಬಂದರು, ಅಪಮಾನ-ನಿಂದನೆ ಎಲ್ಲದನ್ನೂ ಮೆಟ್ಟಿ ನಿಂತಾಗ ಮಾತ್ರವೇ ಪ್ರಸ್ತುತ ಕಾಲಮಾನದಲ್ಲಿ ಜೀವನ ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಬೆಂಗಳೂರು ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ, ತರಗತಿಗಳಲ್ಲಿ ವಿದ್ಯಾರ್ಥಿಗಳನ್ನು ನಿಂದಿಸುವುದು ಇಲ್ಲವೇ ಅಪಮಾನ ಮಾಡುವುದು ದುರ್ನಡತೆಯ ಪ್ರದರ್ಶನವಾಗಿರುವ ಹಿನ್ನೆಲೆಯಲ್ಲಿ ಶಾಲೆಗೆ ನೋಟಿಸ್ ನೀಡಲಾಗಿದೆ. ವಿದ್ಯಾರ್ಥಿಯ ಆತ್ಮಹತ್ಯೆ ಯತ್ನಕ್ಕೆ ಶಾಲೆಯೇ ನೇರ ಹೊಣೆಯಾಗಿರುವುದರಿಂದ ಅಮಾನವೀಯತೆ ಮತ್ತು ಕ್ರೂರ ನಡವಳಿಕೆಯನ್ನು ಗಂಭೀರವಾಗಿ ಪರಿಗಣಿಸಿ ಶಾಲೆಯ ವಿರುದ್ಧ ಸಾಂಕ್ರಾಮಿಕ ರೋಗಗಳ ಅಧಿನಿಯಮ 1897ರ ಸೆಕ್ಷನ್ (3),  ಪ್ರಕೃತಿ ವಿಕೋಪ ನಿರ್ವಹಣಾ ಅಧಿನಿಯಮ, ಭಾರತೀಯ ದಂಡ ಸಂಹಿತೆ-188ನೇ ಪ್ರಕರಣಗಳಡಿ ಕ್ರಿಮಿನಲ್ ಮೊಕದ್ದಮೆ ಮತ್ತು ಕರ್ನಾಟಕ ಶಿಕ್ಷಣ  ಕಾಯ್ದೆ-1995ರಡಿ ಶಾಲೆಯ ಮಾನ್ಯತೆ ಹಾಗೂ ಕೇಂದ್ರ ಪಠ್ಯಕ್ರಮ  ಸಂಯೋಜನೆಗೆ ರಾಜ್ಯ ಸರ್ಕಾರದ  ನಿರಪೇಕ್ಷಣಾ ಪತ್ರವನ್ನು ಹಿಂಪಡೆಯಲು ಏಕೆ ಶಿಫಾರಸು ಮಾಡಬಾರದೆಂದು ಸಮುಜಾಯಿಷಿ ಕೇಳಿ ಸದರಿ ಶಾಲೆಗೆ ನೋಟಿಸ್ ಈಗಾಗಲೇ ನೀಡಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next