Advertisement

ವಲಸಿಗ ಕಾರ್ಮಿಕರಿಗೆ ತೊಂದರೆಯಾಗದಿರಲಿ

01:58 AM Apr 20, 2020 | Hari Prasad |

ಲಾಕ್‌ ಡೌನ್‌ನ ಗಂಭೀರ ಪರಿಣಾಮವು ವಲಸಿಗ ಕಾರ್ಮಿಕರ ಮೇಲೆ ಬೀಳುತ್ತಿದೆ. ಅವರು ಪ್ರತಿ ದಿನ ಹೊಸ ಸವಾಲುಗಳನ್ನು ಎದುರಿಸುವಂತಾಗಿದೆ. ಆದಾಗ್ಯೂ ಎಲ್ಲಾ ರಾಜ್ಯ ಸರ್ಕಾರಗಳು ಅವರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲಾಗುತ್ತಿದೆ ಎಂದು ಭರವಸೆಯ ಮಾತನ್ನೇನೋ ಹೇಳುತ್ತಿವೆ.

Advertisement

ಆದರೆ, ಈ ಶ್ರಮಿಕರಲ್ಲೀಗ ಭರವಸೆಯೇ ಕುಸಿದಂತೆ ಕಾಣುತ್ತಿದೆ. ಅವರ ಎದುರೀಗ ಭವಿಷ್ಯದ ಚಿಂತೆ ನಿಂತಿರುವುದಿರಲಿ, ವರ್ತಮಾನದಲ್ಲಿ ಊಟಕ್ಕೇನು ಮಾಡುವುದು ಎಂಬ ಸಂಕಟ ಬೃಹದಾಕಾರವಾಗಿ ಬೆಳೆದು ನಿಂತಿದೆ.

ಇವರೆಲ್ಲರ ಬದುಕು ದಿನನಿತ್ಯದ ಗಳಿಕೆಯ ಮೇಲೆ ನಿಂತಿರುತ್ತದೆ. ಲಾಕ್‌ಡೌನ್‌ನ ನಂತರ ಇವರ ಜೀವನೋಪಾಯದ ಮಾರ್ಗಗಳೂ ಮುಚ್ಚಿ, ಪರಿವಾರಕ್ಕೆ ಒಂದು ಹೊತ್ತಿನ ಊಟ ಸಂಪಾದಿಸಲಿಕ್ಕೂ ಕಷ್ಟವಾಗಿದೆ.

ಮೊದಲ ಲಾಕ್‌ ಡೌನ್‌ ಸಮಯದಲ್ಲೇ ಸಾವಿರಾರು ಸಂಖ್ಯೆಯಲ್ಲಿ ವಲಸಿಗ ಕಾರ್ಮಿಕರು, ಬಡವರು ತಮ್ಮ ನೆಲೆಗಳಿಗೆ ಹಿಂದಿರುಗಲಾರಂಭಿಸಿದ್ದರು. ಇದರಿಂದ ಸಾಂಕ್ರಾಮಿಕ ಹರಡುವ ಅಪಾಯವಿದೆಯೆಂದು ಸರ್ಕಾರಗಳು, ಇವರನ್ನು ನಡುಹಾದಿಯಲ್ಲೇ ತಡೆದು ವಾಪಸ್‌ ಕಳುಹಿಸಿದವು ಇಲ್ಲವೇ ಶಿಬಿರಗಳಲ್ಲಿಟ್ಟವು. ಶಿಬಿರಗಳಲ್ಲಿರುವವರಿಗೆ ಭೋಜನದ ವ್ಯವಸ್ಥೆಯೇನೋ ಆಗುತ್ತಿರಬಹುದು, ಆದರೆ ಅವರ ಸಮಸ್ಯೆಗಳಿಗೆ ಪರಿಹಾರವಂತೂ ಕಾಣಿಸುತ್ತಿಲ್ಲ.

ಇದೇ ಕಾರಣಕ್ಕಾಗಿಯೇ, ಮೊದಲ ಲಾಕ್‌ ಡೌನ್‌ ಅವಧಿ ಮುಗಿದು, ಅದು ವಿಸ್ತರಣೆಯಾಗುತ್ತಿದ್ದಂತೆಯೇ, ವಲಸಿಗರ ಸಹನೆಯ ಕಟ್ಟೆ ಒಡೆಯಿತು. ಅವರು ತಮ್ಮ ಊರುಗಳಿಗೆ ವಾಪಸ್‌ ಹೋಗಲು ವಿಫ‌ಲ ಯತ್ನ ನಡೆಸಿದರು.

Advertisement

ಮುಂಬಯಿ, ಠಾಣೆ, ಸೂರತ್‌, ದೆಹಲಿ ಸೇರಿದಂತೆ ದೇಶದ ಹತ್ತಾರು ನಗರಗಳಿಂದ ತಮ್ಮ ಹಳ್ಳಿಗಳಿಗೆ ತೆರಳಲು ಸಾವಿರಾರು ಜನ ಜಮೆಯಾದರು. ಆಡಳಿತಗಳು ಕೂಡಲೇ ಸಕ್ರಿಯಗೊಂಡು ಇವರನ್ನೆಲ್ಲ ತಡೆಯಲು ಸಫ‌ಲವಾದವು.

ಮೇಘಾಲಯದಲ್ಲಿ ವಲಸಿಗ ಕಾರ್ಮಿಕರ ಗುಂಪೊಂದು 65 ಕಿಲೋಮೀಟರ್‌ ದೂರ ಸಾಗಿದ್ದಾಗ ಅವರನ್ನು ತಡೆದ ಪೊಲೀಸರು ವಾಪಸ್‌ ನಗರಕ್ಕೆ ತಂದುಬಿಟ್ಟಿದ್ದಾರೆ. ಇದೇ ರೀತಿಯಲ್ಲೇ, ಹರ್ಯಾಣದಲ್ಲಿ ಟ್ರಕ್ಕೊಂದರಲ್ಲಿ ಅಡಗಿ ತಮ್ಮ ಊರಿನತ್ತ ಹೊರಟಿದ್ದ ಜನರನ್ನು ಪೊಲೀಸರು ಹುಡುಕಿ ವಾಪಸ್‌ ಕಳುಹಿಸಿದ್ದಾರೆ.

ಕೆಲವೆಡೆಯಂತೂ, ವಲಸಿಗ ಕಾರ್ಮಿಕರು ಆ್ಯಂಬುಲೆನ್ಸ್‌ಗಳ ಸಹಾಯದಲ್ಲಿ ತಮ್ಮೂರಿಗೆ ತೆರಳುವ ವಿಫ‌ಲ ಯತ್ನ ನಡೆಸಿದ್ದಾರೆ. ಒಟ್ಟಲ್ಲಿ ಹೇಗಾದರೂ ಮಾಡಿ, ತಮ್ಮೂರಿಗೆ ತಮ್ಮ ಮನೆಯವರ ಬಳಿ ತೆರಳಲು ಇವರು ಕಾತರರಾಗಿದ್ದಾರೆ ಎನ್ನುವುದು ಇದರಿಂದ ವಿದಿತವಾಗುತ್ತದೆ.

ಸತ್ಯವೇನೆಂದರೆ, ಅವರಿಗೆ ಕೋವಿಡ್ ಸಾಂಕ್ರಾಮಿಕಕ್ಕಿಂತಲೂ ಹಸಿವಿನ ಭಯವಿದೆ. ಯಾವ ಕನಸುಗಳನ್ನು ಹೊತ್ತು ಅವರು ನಗರಗಳಿಗೆ ಬಂದಿದ್ದರೋ, ಆ ಕನಸುಗಳೀಗ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ನಗರಗಳಲ್ಲಿ ಮತ್ತೆ ತಮಗೆ ದುಡಿಮೆಯ ಅವಕಾಶ ಯಾವಾಗ ಸಿಗುತ್ತದೆ ಎನ್ನುವುದೂ ತಿಳಿದಿಲ್ಲ.

ಸರ್ಕಾರಗಳೇನೋ ವಲಸಿಗ ಕಾರ್ಮಿಕರಿಗೆ, ಬಡವರಿಗೆ ಊಟ-ವಸತಿಯ ವ್ಯವಸ್ಥೆ ಮಾಡುವ ಭರವಸೆ ನೀಡುತ್ತಿವೆ. ಆದರೆ, ಇದು ವಾಸ್ತವದಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ಬರುತ್ತಿಲ್ಲ ಎನ್ನುವುದು ಈ ಹತಭಾಗ್ಯರ ಪರದಾಟದಲ್ಲಿ ಕಾಣಿಸುತ್ತಿದೆ.

ಸದ್ಯಕ್ಕೆ ಸರ್ಕಾರಗಳಿಗೆ ಇವರ ಉದ್ಯೋಗವನ್ನು ಬಂದೋಬಸ್ತ್ ಮಾಡುವುದು, ಚಾಲನೆ ನೀಡುವಂಥ ಕ್ರಮಗಳನ್ನು ಕೈಗೊಳ್ಳುವುದು ಕಷ್ಟವಾಗಿರಬಹುದು, ಆದರೆ ಈ ಜನರ ಊಟ-ನೀರಿಗೆ ತೊಂದರೆಯಾಗದಂತೆ ಖಾತ್ರಿಪಡಿಸಿಕೊಳ್ಳಲೇಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next