ತನ್ನ ನೆಲದಲ್ಲಿ ಆಂತರಿಕ ಬಿಕ್ಕಟ್ಟು ಸೃಷ್ಟಿಯಾದಾಗಲೆಲ್ಲ ಪಾಕಿಸ್ಥಾನ, ಜನರ ಹಾಗೂ ಜಗತ್ತಿನ ಗಮನವನ್ನು ಬೇರೆಡೆ ಸೆಳೆಯುವುದಕ್ಕಾಗಿ ಗಡಿ ಭಾಗದಲ್ಲಿ ಭಾರತ ವಿರೋಧಿ ಕೃತ್ಯಗಳಿಗೆ ಮುಂದಾಗುತ್ತದೆ.
ಜಮ್ಮು-ಕಾಶ್ಮೀರವು ಕೇಂದ್ರಾಡಳಿತ ಪ್ರದೇಶವಾಗಿ ಬದಲಾದ ಬಳಿಕವಂತೂ ಗಡಿ ಭಾಗದಲ್ಲಿ ಉಗ್ರರನ್ನು ನುಸುಳಿಸುವ, ಗುಂಡಿನ ದಾಳಿ ನಡೆಸುವ ಕೃತ್ಯವನ್ನು ಅದು ಹೆಚ್ಚಿಸಿಬಿಟ್ಟಿದೆ.
ಕೆಲವು ದಿನಗಳ ಹಿಂದೆ ಪಾಕಿಸ್ಥಾನದ ಇಂಥದ್ದೇ ಒಂದು ಕುಕೃತ್ಯದಲ್ಲಿ ಭಾರತದ ಮೂವರು ಸೈನಿಕರು ಹುತಾತ್ಮರಾಗಿ, ಐವರು ಗಾಯಗೊಂಡಿದ್ದಾರೆ. ಇದಕ್ಕೆ ಭಾರತ ಸಮರ್ಥವಾಗಿಯೇ ಪ್ರತ್ಯುತ್ತರವನ್ನೂ ನೀಡಿದೆ.
ಒಂದೆಡೆ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಮಾನವ ಹಕ್ಕುಗಳ ಬಗ್ಗೆ ಭಾಷಣ ಮಾಡುವ, ನೆರವಿಗಾಗಿ ಅಂಗಲಾಚುವ ಪಾಕಿಸ್ಥಾನ ಇನ್ನೊಂದೆಡೆ ಕದನ ವಿರಾಮದ ಉಲ್ಲಂಘನೆ ಮಾಡುತ್ತಾ ಅನಗತ್ಯವಾಗಿ ಭಾರತಕ್ಕೆ ತೊಂದರೆ ಮಾಡುತ್ತಲೇ ಇರುತ್ತದೆ. ಭಾರತವು ಪಾಕಿಸ್ಥಾನದ ಮೇಲೆ ಎರಡು ಬಾರಿ ಸರ್ಜಿಕಲ್ ಸ್ಟ್ರೈಕ್‌ಗಳನ್ನು ನಡೆಸಿ, ನಮ್ಮ ತಂಟೆಗೆ ಬಂದರೆ ಸುಮ್ಮನಿರುವುದಿಲ್ಲ ಎಂದು ಪ್ರಬಲವಾಗಿಯೇ ಎಚ್ಚರಿಸಿದ್ದರೂ, ಪಾಕಿಸ್ಥಾನ ಪಾಠ ಕಲಿಯುವುದಕ್ಕೆ ಸಿದ್ಧವಿಲ್ಲವೆನಿ ಸುತ್ತದೆ ಅಥವಾ ಚೀನದ ಕುಮ್ಮಕ್ಕಿನಿಂದಾಗಿ ಅದು ತನಗೇನೂ ಆಗುವುದಿಲ್ಲ ಎಂಬ ಭಾÅಮಕ ಜಗತ್ತಿನಲ್ಲಿ ಬದುಕುತ್ತಿದೆಯೆನಿಸುತ್ತದೆ.
ಭಾರತ ಮತ್ತು ಪಾಕಿಸ್ಥಾನದ ನಡುವೆ 17 ವರ್ಷಗಳ ಹಿಂದೆ ನಿಯಂತ್ರಣ ರೇಖೆಯ ಬಳಿ ಯುದ್ಧ ವಿರಾಮದ ಒಪ್ಪಂದವಾಗಿತ್ತು. ಆದರೆ, ಈ ವಿಚಾರದಲ್ಲಿ ಇತಿಹಾಸವನ್ನು ತೆರೆದು ನೋಡಿದರೆ, ಈ ಒಪ್ಪಂದವನ್ನು ನಿಭಾಯಿಸುವ ಸಂಪೂರ್ಣ ಜವಾಬ್ದಾರಿ ಭಾರತಕ್ಕೇ ಬಿಟ್ಟ ವಿಚಾರ ಎಂಬಂತೆ ವರ್ತಿಸುತ್ತಾ ಬಂದಿದೆ ಪಾಕಿಸ್ಥಾನ. ಪ್ರತಿ ಬಾರಿಯೂ ಭಾರತದ ವಿರುದ್ಧ ದುಷ್ಕೃತ್ಯಗಳನ್ನು ಎಸಗಿದಾಗಲೆಲ್ಲ ಪಾಕಿಸ್ಥಾನ, ಅದನ್ನು ಮುಚ್ಚಿಹಾಕಲು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಜಮ್ಮು-ಕಾಶ್ಮೀರದ ವಿಚಾರವನ್ನು ಪ್ರಸ್ತಾವಿಸಿ ಮೊಸಳೆ ಕಣ್ಣೀರು ಸುರಿಸುತ್ತದೆ.
ಈ ಕಾರಣದಿಂದಾಗಿಯೇ, ವೈಶ್ವಿಕ ಸಮುದಾಯವೂ ಗಡಿ ಭಾಗದಲ್ಲಿ ಪಾಕಿಸ್ಥಾನದ ವರ್ತನೆಗಳನ್ನು ಹೆಚ್ಚಾಗಿ ಖಂಡಿಸುವುದೇ ಇಲ್ಲ. ಒಂದು ವರದಿಯ ಪ್ರಕಾರ ಕಳೆದ ಎಂಟು ತಿಂಗಳುಗಳಲ್ಲಿ ಪಾಕಿಸ್ಥಾನ ಅತ್ಯಧಿಕ ಬಾರಿ ಯುದ್ಧವಿರಾಮ ಉಲ್ಲಂಘನೆ ಮಾಡಿದೆ. ಅಲ್ಲದೇ, ಪ್ರತಿ ಬಾರಿಯೂ ಭಾರತದಿಂದ ಇದಿರೇಟು ತಿಂದಿದೆ. ಈ ಕಾರಣಕ್ಕಾಗಿಯೇ ಪಾಕಿಸ್ಥಾನವನ್ನು ಅಂತಾರಾಷ್ಟ್ರೀಯ ಸ್ತರದಲ್ಲಿ ರಾಜತಾಂತ್ರಿಕವಾಗಿ ಕಟ್ಟಿಹಾಕುವ ಅಗತ್ಯ ಹಿಂದೆಂದಿಗಿಂತಲೂ ಅಧಿಕವಾಗಿದೆ.
ಈಗ ಪಾಕಿಸ್ಥಾನ ಗಿಲ್ಗಿಟ್-ಬಾಲ್ಟಿಸ್ಥಾನಕ್ಕೆ ತನ್ನ 5ನೇ ಪ್ರಾಂತ್ಯದ ದರ್ಜೆ ಕೊಡಲು ಶತಾಯಗತಾಯ ಪ್ರಯತ್ನಿಸುತ್ತಿದೆ. ಆದರೆ ಅಲ್ಲಿನ ಜನರು ಇದಕ್ಕೆ ಪ್ರಬಲ ಪ್ರತಿರೋಧ ತೋರಿಸುತ್ತಿದ್ದು ಈ ಕಾರಣಕ್ಕಾಗಿಯೇ ಇಮ್ರಾನ್ ಸರಕಾರ ಆ ಭಾಗದಲ್ಲಿ ಮಾನವಹಕ್ಕು ಉಲ್ಲಂಘನೆಯಲ್ಲಿ ತೊಡಗಿದೆ. ಇನ್ನು ಬಲೂಚಿಸ್ಥಾನದಲ್ಲೂ ಪಾಕ್‌ನ ಅಕ್ರಮಗಳು ಮುಂದುವರಿದಿದೆ. ಈ ವಿಚಾರಗಳನ್ನು ಭಾರತ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಹೆಚ್ಚು ಚರ್ಚೆಯಾಗುವಂತೆ ಮಾಡಿ, ಪಾಕಿಸ್ಥಾನದ ಧ್ವನಿಯನ್ನು ಅಡಗಿಸಲೇಬೇಕಿದೆ.