Advertisement

ಕೋವಿಡ್ 19 ವೈರಸ್ : ಹಲವು ಸವಾಲು ಉಗ್ರ ದಮನವೂ ಅಗತ್ಯ

12:13 AM Apr 16, 2020 | Team Udayavani |

ಸಂಕಷ್ಟವೊಂದು ತನ್ನ ಜತೆಗೆ ಅನೇಕ ಸಮಸ್ಯೆಗಳನ್ನೂ ಹೊತ್ತು ತಂದುಬಿಡುತ್ತದೆ. ಸಾಮಾನ್ಯವಾಗಿ ನಮ್ಮ ಗಮನವೆಲ್ಲ, ಮೂಲ ಆಪತ್ತಿನ ಮೇಲೆಯೇ ಇರುತ್ತದೆ. ಆದರೆ ಅದರ ಜತೆಗೆ ಬೆಸೆದುಕೊಂಡ ಇತರೆ ಅಪಾಯಗಳು ನಮ್ಮ ಗಮನಕ್ಕೆ ಬರುವುದೇ ಇಲ್ಲ. ವಿಶ್ವಸಂಸ್ಥೆಯು, ಕೋವಿಡ್ 19 ವೈರಸ್ ಎದುರಾಗಬಹುದಾದ ಈ ರೀತಿಯ ಸಂಭಾವ್ಯ ಸವಾಲುಗಳ ಬಗ್ಗೆ ಎಚ್ಚರಿಕೆ ನೀಡಿದೆ.

Advertisement

ವಿಶ್ವಸಂಸ್ಥೆಯ ಮಹಾಪ್ರಧಾನ ಕಾರ್ಯದರ್ಶಿ ಆ್ಯಂಟೊನಿಯಾ ಗುಟೆರೆಸ್‌ ಅವರು, ಕೊರೊನಾ ಖಂಡಿತ ಸ್ವಾಸ್ಥ್ಯ ಸಂಕಷ್ಟವಾಗಿರಬಹುದು, ಆದರೆ ಈ ಮಹಾಮಾರಿಯಿಂದಾಗಿ ಅನೇಕ ದೂರಗಾಮಿ ಪರಿಣಾಮ ಉಂಟಾಗಬಹುದು ಎಂದು ಹೇಳಿದ್ದಾರೆ. ಇಂದು ಎಲ್ಲಾ ದೇಶಗಳೂ ಈ ಆಪತ್ತಿನೊಂದಿಗೆ ಹೋರಾಡಲು ವ್ಯಸ್ತವಾಗಿದ್ದರೆ ಇನ್ನೊಂದೆಡೆ ಉಗ್ರ ಸಂಘಟನೆಗಳು ಇದರ ಲಾಭ ಪಡೆದುಕೊಳ್ಳಲು ಪ್ರಯತ್ನಿಸುತ್ತಿವೆ.

ಅದರಲ್ಲೂ ಮುಖ್ಯವಾಗಿ, ಉಗ್ರರು ಪ್ರಸಕ್ತ ಪರಿಸ್ಥಿತಿಯನ್ನು ದುರುಪಯೋಗಪಡಿಸಿಕೊಂಡು ಹಿಂಸಾತ್ಮಕ ಕೃತ್ಯಗಳಿಗೆ ಮುಂದಾಗಬಹುದು. ಇದರಿಂದಾಗಿ ಕೊರೊನಾ ಮಹಾಮಾರಿಯ ವಿರುದ್ಧದಲ್ಲಿನ ನಮ್ಮ ಪ್ರಯತ್ನಗಳಿಗೆ ಅಡ್ಡಿಗಳು ಎದುರಾಗಬಹುದು ಎಂದು ಗುಟೆರೆಸ್‌ ಎಚ್ಚರಿಸಿದ್ದಾರೆ.

ಇಂದು ಬಹುತೇಕ ದೇಶಗಳ ಸಂಪೂರ್ಣ ಆಡಳಿತ ಯಂತ್ರಗಳು ಕೋವಿಡ್ 19 ವೈರಸ್ ಜತೆಗೆ ಹೋರಾಡಲು ವ್ಯಸ್ತವಾಗಿವೆ. ಭದ್ರತಾ ಸಿಬಂದಿ, ಪೊಲೀಸ್‌ ವ್ಯವಸ್ಥೆಯೂ ಈ ಕೆಲಸದಲ್ಲಿ ನಿರತರಾಗಿದ್ದಾರೆ. ಇಂಥ ಸಮಯದಲ್ಲಿ ಉಗ್ರವಾದಿಗಳು ತಮ್ಮ ಉಪಟಳ ಅಧಿಕ ಮಾಡಿದರೆ ಭಾರೀ ಸಮಸ್ಯೆ ಎದುರಾಗಬಹುದು. ಇತ್ತೀಚೆಗಷ್ಟೇ ಕಾಶ್ಮೀರದ ಗಡಿಯೊಳಕ್ಕೆ ನುಸುಳಲು ಪ್ರಯತ್ನಿಸಿ ಹತರಾದ ಪಾಕಿಸ್ಥಾನಿ ಉಗ್ರರು ಇದಕ್ಕೊಂದು ಉದಾಹರಣೆ. ಉಗ್ರದಮನದ ಈ ಹೋರಾಟದಲ್ಲಿ ಭಾರತದ 5 ಸೈನಿಕರು ವೀರಮರಣವಪ್ಪಿದ್ದಾರೆ.

ಸತ್ಯವೇನೆಂದರೆ, ಪಾಕಿಸ್ಥಾನ ಇಂಥ ಸಂಕಷ್ಟದ ಸಮಯದಲ್ಲೂ ತನ್ನ ದುಷ್ಟಬುದ್ಧಿ ಬಿಡುವುದಿಲ್ಲ ಎನ್ನುವುದು ಭಾರತಕ್ಕೆ ಅರಿವಿದೆ. ಈ ಕಾರಣಕ್ಕಾಗಿಯೇ, ನಮ್ಮ ಸೇನೆ, ಗುಪ್ತಚರ ವಿಭಾಗಗಳು ತುಂಬಾ ಎಚ್ಚರಿಕೆ ವಹಿಸುತ್ತಿವೆ. ಅತ್ತ ಮಧ್ಯಪ್ರಾಚ್ಯದಲ್ಲಿ ಅವಸಾನದಂಚು ತಲುಪಿರುವ ಐಸಿಸ್‌ ಕೂಡ, ಜೆಹಾದ್‌ ನಡೆಸಲು ಉಗ್ರರಿಗೆ ಪ್ರಚೋದಿಸುತ್ತಿದೆ.

Advertisement

ಇಂಥ ಸಂದರ್ಭದಲ್ಲಿ ಕೋವಿಡ್ 19 ವೈರಸ್ ಜತೆಜತೆಗೆ ಉಗ್ರರೆಂಬ ವೈರಸ್‌ಗಳ ವಿರುದ್ಧವೂ ಹೋರಾಡುವ ಸವಾಲು ಎಲ್ಲಾ ದೇಶಗಳಿಗೂ ಇದೆ. ಕೋವಿಡ್ 19 ವೈರಾಣು, ಉಗ್ರರಿಗೆ ‘ಜೈವಿಕ ಅಸ್ತ್ರ’ವಾಗಬಹುದು, ಹೀಗಾಗಿ, ಈ ಹೋರಾಟದಲ್ಲೂ ಜಗತ್ತಿನ ರಾಷ್ಟ್ರಗಳೆಲ್ಲ ಒಂದಾಗಬೇಕು. ಗುಪ್ತಚರ ಮಾಹಿತಿಗಳನ್ನು ನಿಯಮಿತವಾಗಿ ಹಂಚಿಕೊಂಡು ಪರಸ್ಪರರನ್ನು ರಕ್ಷಿಸಬೇಕು.

Advertisement

Udayavani is now on Telegram. Click here to join our channel and stay updated with the latest news.

Next