Advertisement

ವಾದ್ರಾ ಕಚೇರಿಗೆ ಇಡಿ ದಾಳಿ

06:00 AM Dec 08, 2018 | Team Udayavani |

ಹೊಸದಿಲ್ಲಿ: ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್‌ ವಾದ್ರಾ ಹಾಗೂ ಅವರ ಸಹಚರರಿಗೆ ಸಂಬಂಧಿಸಿದ ಬೆಂಗಳೂರು ಹಾಗೂ ದಿಲ್ಲಿಯಲ್ಲಿನ ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯ ಶುಕ್ರವಾರ ದಾಳಿ ನಡೆಸಿದೆ. ಸ್ಕೈಲೈಟ್‌ ಹಾಸ್ಪಿಟಾಲಿಟಿ ಹಗರಣದಲ್ಲಿನ ರಾಜಸ್ಥಾನದ ಕೊಲಾಯತ್‌ ಭೂ ಅವ್ಯವಹಾರ, ರಕ್ಷಣಾ ಒಪ್ಪಂದವೊಂದರಲ್ಲಿ ಕಮಿಷನ್‌ ಪಡೆದ ಪ್ರಕರಣ ಹಾಗೂ ವಿದೇಶಗಳಲ್ಲಿ ಅಕ್ರಮ ಆಸ್ತಿ ಪ್ರಕರಣಗಳಿಗೆ ಸಂಬಂಧಿಸಿದಂತೆ ಈ ದಾಳಿ ನಡೆಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Advertisement

ವಾದ್ರಾಗೆ ಸಂಬಂಧಿಸಿದ ದಿಲ್ಲಿಯಲ್ಲಿನ ಸುಖದೇವ್‌ ವಿಹಾರ್‌ ಕಚೇರಿಯ ಮೇಲೆ ಜಾರಿ ನಿರ್ದೇಶನಾಲಯ ಬೆಳಗ್ಗೆ 11ರ ವೇಳೆಗೆ ದಾಳಿ ನಡೆಸಿದೆ. ಹೊಸದಾಗಿ ಸಿಕ್ಕ ಸಾಕ್ಷ್ಯಗಳ ಆಧಾರದಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದೂ ಇ.ಡಿ. ತಿಳಿಸಿದೆ. ಅಗಸ್ಟಾ ವೆಸ್ಟ್‌ಲ್ಯಾಂಡ್‌ ಹಗರಣದ ಆರೋಪಿ ಕ್ರಿಶ್ಚಿಯನ್‌ ಮೈಕಲ್‌ ಗಡೀಪಾರಾದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

ನ.30ರಂದು ನೀಡಿದ್ದ ಸಮನ್ಸ್‌ಗೆ ವಾದ್ರಾ ಹಾಜರಾಗದೆ, ಅವರ ಕಾನೂನು ಸಲಹೆಗಾರರನ್ನು ಕಳುಹಿಸಿದ್ದರು. ಆದರೆ ಜಾರಿ ನಿರ್ದೇಶನಾಲಯವು ವಾದ್ರಾ ಖುದ್ದಾಗಿ ಹಾಜರಾಗಿ ಹೇಳಿಕೆ ನೀಡುವಂತೆ ಸೂಚಿಸಿತ್ತು. ಆದರೂ ಅವರು ಹಾಜರಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದೆ ಎಂದು ಜಾರಿ ನಿರ್ದೇಶನಾಲಯ ವಿವರಿಸಿದೆ.

ಕಾಂಗ್ರೆಸ್‌ ಕೆಂಡ
ಮತದಾನೋತ್ತರ ಸಮೀಕ್ಷೆ ಫ‌ಲಿತಾಂಶವನ್ನು ಮರೆ ಮಾಚಲು ಬಿಜೆಪಿ ಈ ತಂತ್ರವನ್ನು ಹೆಣೆದಿದೆ. ಇಂತಹ ಮೂರ್ಖ ಕ್ರಮವು ಕಾಂಗ್ರೆಸ್‌ ಪಕ್ಷ ಹಾಗೂ ಕಾರ್ಯಕರ್ತರನ್ನು ಹಿಮ್ಮೆಟ್ಟಿಸಲಾಗದು ಎಂದು ಕಾಂಗ್ರೆಸ್‌ ವಕ್ತಾರ ರಣದೀಪ್‌ ಸುಜೇìವಾಲಾ ಹೇಳಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದಲೂ ಈ ತಂತ್ರ ನಡೆಯುತ್ತಿದೆ. ಈವರೆಗೆ ಯಾವ ಸಾಕ್ಷ್ಯವೂ ಸಿಕ್ಕಿಲ್ಲ. ಹೀಗಾಗಿ ನಮ್ಮನ್ನು ಕಚೇರಿಯ ಒಳಗೆ ಕೂಡಿ ಹಾಕಿ ಸಾಕ್ಷ್ಯ ಸೃಷ್ಟಿಸಲು ಕೇಂದ್ರ ಸರಕಾರ ಪ್ರಯತ್ನಿಸುತ್ತಿದೆ ಎಂದು ವಾದ್ರಾ ಪರ ವಕೀಲರು ಆಕ್ಷೇಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next