ಹೊಸದಿಲ್ಲಿ : ಹಣಕಾಸು ಅಕ್ರಮ ಕೇಸಿಗೆ ಸಂಬಂಧಿಸಿ ರಾಬರ್ಟ್ ವಾದ್ರಾಗೆ ಮಂಜೂರು ಮಾಡಲಾಗಿದ್ದ ನಿರೀಕ್ಷಣಾ ಜಾಮೀನನ್ನು ರದ್ದು ಮಾಡುವಂತೆ ಕೋರಿ ಜಾರಿ ನಿರ್ದೇಶನಲಾಯ ದಿಲ್ಲಿ ಹೈಕೋರ್ಟ್ ಮೆಟ್ಟಲೇರಿದೆ.
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಭಾವ, ರಾಬರ್ಟ್ ವಾದ್ರಾ ಗೆ ಕಳೆದ ಎಪ್ರಿಲ್ 1ರಂದು ವಿಚಾರಣಾ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು.
ವಾದ್ರಾಗೆ ನಿರೀಕ್ಷಣಾ ಜಾಮೀನು ಮಂಜೂರಾಗಿರುವುದು ತನಿಖಾ ಪ್ರಕ್ರಿಯೆಗೆ ಹಾನಿಕರವಾಗಿದೆ ಎಂದು ಜಾರಿ ನಿರ್ದೇಶನಾಲಯ, ಪ್ರಾಸಿಕ್ಯೂಟರ್ ಡಿ ಪಿ ಸಿಂಗ್ ಮೂಲಕ ದಿಲ್ಲಿ ಹೈಕೋರ್ಟಿಗೆ ಸಲ್ಲಿಸಿರುವ ಅರ್ಜಿಯಲ್ಲಿ ಹೇಳಿದೆ.
ವಾದ್ರಾ ಮಾತ್ರವಲ್ಲದೆ ಆತನ ನಿಕಟವರ್ತಿಯಾಗಿರುವ ಮನೋಜ್ ಅರೋರಾ ಗೆ ಕೂಡ ನಿರೀಕ್ಷಣಾ ಜಾಮೀನು ಮಂಜೂರು ಮಾಡಿರುವುದನ್ನು ಜಾರಿ ನಿರ್ದೇಶನಾಲಯ ಪ್ರಶ್ನಿಸಿದೆ.
ವಾದ್ರಾ ಅವರು ಲಂಡನ್ ನ 12, ಬ್ರಾನ್‌ಸ್ಟನ್ ಚೌಕದಲ್ಲಿ 19 ಲಕ್ಷ ಪೌಂಡ್ ಮೌಲ್ಯದ ಆಸ್ತಿಯನ್ನು ಖರೀದಿಸಿರುವ ವಿಷಯದಲ್ಲಿ ಹಣಕಾಸು ಅಕ್ರಮ ಕೇಸನ್ನು ಎದುರಿಸುತ್ತಿದ್ದಾರೆ.