ನವದೆಹಲಿ: ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಸಂಬಂಧಿಸಿದ ಹಣಕಾಸು ಅವ್ಯವಹಾರ ಪ್ರಕರಣದಲ್ಲಿ ಎರಡನೇ ದಿನವಾದ ಮಂಗಳವಾರ(ಜೂನ್ 14)ವೂ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಜಾರಿ ನಿರ್ದೇಶನಾಲಯದ ವಿಚಾರಣೆಗೆ ಹಾಜರಾಗಿದ್ದಾರೆ.
ಇದನ್ನೂ ಓದಿ:ಒಂದೂವರೆ ವರ್ಷದಲ್ಲಿ 10 ಲಕ್ಷ ಮಂದಿಗೆ ಉದ್ಯೋಗ: ಪ್ರಧಾನಿ ನರೇಂದ್ರ ಮೋದಿ
ಮತ್ತೊಂದೆಡೆ ದೆಹಲಿಯ ಜಾರಿ ನಿರ್ದೇಶನಾಲಯದ ಹೊರಗಡೆ ಇಂದೂ ಹೈಡ್ರಾಮಾ ಮುಂದುವರಿದಿದ್ದು, ಕಾಂಗ್ರೆಸ್ ಕಾರ್ಯಕರ್ತರು ಮತ್ತು ಪೊಲೀಸರ ನಡುವೆ ಹೊಯ್ ಕೈ ನಡೆದಿದೆ. ಸಂಸದ ಡಿಕೆ ಸುರೇಶ್, ದಿನೇಶ್ ಗುಂಡೂರಾವ್ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರನ್ನು ಪೊಲೀಸರು ಎಳೆದೊಯ್ಯುತ್ತಿರುವ ವಿಡಿಯೋ ವೈರಲ್ ಆಗಿದೆ.
ರಾಹುಲ್ ಗಾಂಧಿ ವಿಚಾರಣೆ ನಡೆಯುತ್ತಿದ್ದರೆ, ಜಾರಿ ನಿರ್ದೇಶನಾಲಯದ ಹೊರ ಭಾಗದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಕಾಂಗ್ರೆಸ್ ಹಿರಿಯ ಮುಖಂಡರಾದ ಅಧೀರ್ ರಂಜನ್ ಚೌದುರಿ, ರಣದೀಪ್ ಸುರ್ಜೇವಾಲಾ, ಹರೀಶ್ ರಾವತ್, ಭೂಪೇಶ್ ಬಾಘೇಲ್ ಸೇರಿದಂತೆ ಹಲವು ಮುಖಂಡರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
“ನಮ್ಮ ಸವಲತ್ತುಗಳ ಬಗ್ಗೆ ನಮಗೆ ಕಳವಳ ಇಲ್ಲ, ಆದರೆ ದಬ್ಬಾಳಿಕೆ ಸರ್ಕಾರದ ಬಗ್ಗೆ ಜನರ ಗಮನ ಸೆಳೆಯಲು ನಾವು ಪ್ರತಿಭಟನೆ ನಡೆಸುತ್ತಿದ್ದೇವೆ. ವಿಪಕ್ಷ ಮುಖಂಡರನ್ನು ಭಯೋತ್ಪಾದಕರ ರೀತಿ ವಶಕ್ಕೆ ಪಡೆಯುತ್ತಿದ್ದಾರೆ. ಕೇಂದ್ರ ಸರ್ಕಾರ ನಮ್ಮ ಧ್ವನಿಯನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದೆ” ಎಂದು ಕಾಂಗ್ರೆಸ್ ಸಂಸದ ಅಧೀರ್ ರಂಜನ್ ವಾಗ್ದಾಳಿ ನಡೆಸಿದ್ದಾರೆ.
ಸೋಮವಾರ ಬೆಳಗ್ಗೆ ದೆಹಲಿಯ ಎಐಸಿಸಿ ಪ್ರಧಾನ ಕಚೇರಿಗೆ ರಾಹುಲ್ ಗಾಂಧಿ ಆಗಮಿಸಿದ್ದು, ಬಳಿಕ ಪಕ್ಷದ ಹಿರಿಯ ಮುಖಂಡರ ಜತೆ ಇ.ಡಿ ಕಚೇರಿಗೆ ಪ್ರಯಾಣಿಸಿದ್ದರು. 11.10ಕ್ಕೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಮುಂದೆ ರಾಹುಲ್ ಹಾಜರಾಗಿದ್ದು, ಮಧ್ಯಾಹ್ನ 2.10ರವರೆಗೆ ವಿಚಾರಣೆ ನಡೆದಿತ್ತು.
ಊಟದ ವಿರಾಮದ ನಂತರ 3.30ಕ್ಕೆ ಮತ್ತೆ ವಿಚಾರಣೆಗೆ ಹಾಜರಾಗಿದ್ದ ರಾಹುಲ್, ರಾತ್ರಿ 9ಗಂಟೆವರೆಗೆ ವಿಚಾರಣೆ ನಡೆದಿತ್ತು. ಸೋಮವಾರವೂ ದೇಶಾದ್ಯಂತ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದು, ಹಲವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು.