ಮುಂಬಯಿ: ಹಣಕಾಸು ತಂತ್ರಜ್ಞಾನ (ಫಿನ್‌ಟೆಕ್) ಕ್ಷೇತ್ರದ 365 ಕಂಪೆನಿಗಳು ಮತ್ತು ಅವುಗಳಿಗೆ ನಿಕಟವರ್ತಿಗಳಾಗಿರುವ ಕೆಲವು ಬ್ಯಾಂಕೇತರ ವಿತ್ತೀಯ ಸಂಸ್ಥೆಗಳು (ಎನ್‌ಬಿಎಫ್ಸಿ) 800 ಕೋಟಿ ರೂ.ಗಳಿಗಿಂತಲೂ ಅಧಿಕ ಮೊತ್ತದ ವಂಚನೆ ಎಸಗಿದ ಪ್ರಕರಣ ಬೆಳಕಿಗೆ ಬಂದಿದೆ.
ಜಾರಿ ನಿರ್ದೇಶನಾಲಯ (ಇ.ಡಿ) ಈ ಬಗ್ಗೆ ದೀರ್ಘ ಕಾಲದ ತನಿಖೆ ನಡೆಸಿ, ಅಕ್ರಮ ನಡೆಸಿದ್ದರ ಬಗ್ಗೆ ಖಚಿತ ಪಡಿಸಿಕೊಂಡಿದೆ. ಕೊರೊನಾ ಸೋಂಕಿನ ಸಮಸ್ಯೆ ಹೆಚ್ಚಾಗಿದ್ದ ಮತ್ತು ಲಾಕ್‌ಡೌನ್ ಅವಧಿಯಲ್ಲಿ ಉದ್ಯೋಗ ನಷ್ಟ ಸಂಭವಿಸಿದ್ದ ವೇಳೆ ಈ ಅಕ್ರಮ ನಡೆದಿದೆ. ದೇಶದಲ್ಲಿ ಚೀನಾ ಲೋನ್ ಆ್ಯಪ್ ಹಾವಳಿಯ ನಡುವೆಯೇ ಹೊಸ ರೀತಿಯ ಆರ್ಥಿಕ ಅಕ್ರಮಗಳು ನಡೆದಿದೆ.
ಹಣಕಾಸು ತಂತ್ರಜ್ಞಾನ ಕ್ಷೇತ್ರದ ಕಂಪೆನಿಗಳು 4 ಸಾವಿರ ಕೋಟಿ ರೂ.ಗಳಿಗೂ ಅಧಿಕ ಮೊತ್ತದ ಸಾಲವನ್ನೂ ವಿತರಿಸಿದ್ದವು. ಇಂಥ ಪಿನ್‌ಟೆಕ್ ಕಂಪೆನಿಗಳು ಮೂಲತಃ ಚೀನಾ ಹೂಡಿಕೆಯಿಂದ ಬೆಂಬಲಿತವಾಗಿದ್ದವು ಎಂದು ಇ.ಡಿ. ತನಿಖೆಯಿಂದ ಬೆಳಕಿಗೆ ಬಂದಿದೆ. ಅದಕ್ಕಾಗಿ ಅವುಗಳಿಗೆ ಶೇ.0.5ರಿಂದ ಶೇ.1ರ ವರೆಗೆ ಲಾಭಾಂಶವನ್ನೂ ನೀಡಲಾಗುತ್ತಿತ್ತು.
700 ಕೋಟಿ ರೂ. ವಾಪಸ್: ನೀಡಲಾಗಿದ್ದ ಸಾಲದ ಮೊತ್ತದ ಪೈಕಿ 700 ಕೋಟಿ ರೂ.ಮೊತ್ತವನ್ನು ಈ ಕಂಪೆನಿಗಳು ವಸೂಲು ಮಾಡಿಕೊಂಡಿವೆ. ಬಡ್ಡಿಯ ಮೊತ್ತ, ಪರಿಷ್ಕರಣಾ ಶುಲ್ಕದ ಹೆಸರಿನಲ್ಲಿ ಈ ಮೊತ್ತ ವಾಪಸಾಗಿದೆ. ಜತೆಗೆ ಈ ವಹಿವಾಟು ನಡೆಸಲು ಆರ್‌ಬಿಐನಿಂದ ಪರವಾನಗಿಯನ್ನು ಪಡೆದೇ ಇರಲಿಲ್ಲ. ಫಿನ್‌ಟೆಕ್ ಕಂಪೆನಿಗಳು ಮತ್ತು ಎನ್‌ಬಿಎಫ್ಸಿಗಳು ಜತೆಗೂಡಿ ಸಾಲ ನೀಡುತ್ತಿದ್ದವು. ಮೊಬೈಲ್ ಆ್ಯಪ್ ಮೂಲಕ ನೀಡಲಾಗುತ್ತಿದ್ದ ಸಾಲಕ್ಕೆ ಎನ್‌ಬಿಎಫ್ಸಿಗಳು ಶೇ.0.5 ಬಡ್ಡಿ ವಿಧಿಸುತ್ತಿದ್ದವು. ಹಣ ನೀಡುವ ಮತ್ತು ವಸೂಲು ಜಾಲದಲ್ಲಿ ಕೆಲವೊಂದು ಆನ್‌ಲೈನ್ ಪಾವತಿ ಕಂಪೆನಿಗಳೂ ಭಾಗಿಯಾಗಿರುವ ಸಾಧ್ಯತೆ ಇದೆ ಎಂದು ಇ.ಡಿ. ತನಿಖೆಯಿಂದ ಗೊತ್ತಾಗಿದೆ.
ಈ ಉದ್ದೇಶ ದಿಂದಲೇ ಕೆಲವೊಂದು ಕಂಪೆನಿಗಳ ಮುಖ್ಯಸ್ಥರನ್ನು ಫೆಬ್ರವರಿಯಲ್ಲಿ ಇ,ಡಿ.ಕರೆಯಿಸಿಕೊಂಡು ಹೇಳಿಕೆ ದಾಖಲು ಮಾಡಿ ಕೊಂಡಿತ್ತು ಎಂದು “ದ ಇಕನಾಮಿಕ್ ಟೈಮ್ಸ್’ ವರದಿ ಮಾಡಿದೆ.