ಮುಂಬೈ: ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶಮುಖ್ ವಿರುದ್ಧ ಅಕ್ರಮ ಹಣ ವರ್ಗಾವಣೆ ಪ್ರಕರಣದಡಿ ಇಡಿ ಮಂಗಳವಾರ ( ಮೇ.11) ಕ್ರಿಮಿನಲ್ ಪ್ರಕರಣ ದಾಖಲಿಸಿದೆ.
ದೇಶಮುಖ್ ವಿರುದ್ಧ ಇತ್ತೀಚೆಗೆ ದಾಖಲಾದ ಸಿಬಿಐ ಎಫ್‌ಐಆರ್ ಅಧ್ಯಯನ ಮಾಡಿದ ನಂತರ ಮನಿ ಲಾಂಡರಿಂಗ್ ತಡೆ ಕಾಯ್ದೆ (ಪಿಎಂಎಲ್‌ಎ) ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಇಡಿ ಅಧಿಕಾರಿಗಳು ತಿಳಿಸಿದ್ದಾರೆ.
ವಿಚಾರಣೆಗೆ ಹಾಜರಾಗುವಂತೆ ದೇಶಮುಖ್ ಅವರಿಗೆ ಇಡಿ ಅಧಿಕಾರಿಗಳು ಸಮನ್ಸ್ ನೀಡಬಹುದು.
ಇನನ್ಉ ಮುಂಬೈನ ಪೊಲೀಸ್ ಅಧಿಕಾರಿಯಾಗಿದ್ದ ವೇಳೆ ಪರಂ ಬೀರ್ ಸಿಂಗ್ ಅವರು ಗೃಹ ಸಚಿವ ಅನಿಲ್ ದೇಶಮುಖ್ ವಿರುದ್ಧ ಗಂಭೀರವಾದ ಭ್ರಷ್ಟಾಚಾರ ಆರೋಪ ಮಾಡಿದ್ದರು. ಸಚಿವರು ವಸೂಲಿ ದಂಧೆ ಮತ್ತು ವರ್ಗಾವಣೆ ದಂಧೆ ಮೂಲಕ ಬ್ರಹ್ಮಾಂಡ ಭ್ರಷ್ಟಾಚಾರ ನಡೆಸಿದ್ದಾರೆ ಎಂದು ಹೇಳಿದ್ದರು. ಆ ಆರೋಪ ಬಂದ ಕೆಲ ದಿನಗಳಲ್ಲಿ ಅನಿಲ್ ದೇಶಮುಖ್ ತಮ್ಮ ಗೃಹ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಆ ಬಳಿಕ ಪರಂ ಬೀರ್ ಸಿಂಗ್ ಅವರನ್ನು ವರ್ಗಾವಣೆ ಮಾಡಲಾಯಿತು. ಬೇರೊಂದು ಪ್ರಕರಣದಲ್ಲಿ ಸರಿಯಾಗಿ ತನಿಖೆ ಮಾಡಿಲ್ಲ ಎಂಬ ಕಾರಣವೊಡ್ಡಿ ಪರಂ ಬೀರ್ ಅವರ ಟ್ರಾನ್ಸ್ಫರ್ ಮಾಡಲಾಯಿತು. ಸಚಿವರ ಭ್ರಷ್ಟಾಚಾರಗಳ ಬಗ್ಗೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ದೂರು ಕೊಟ್ಟಿದ್ದರಿಂದ ತನ್ನನ್ನು ವರ್ಗಾವಣೆ ಮಾಡಲಾಗಿದೆ ಎಂದು ಪರಂ ಬೀರ್ ಹೇಳುತ್ತಾರೆ.
ಇತ್ತೀಚಿಗಷ್ಟೆ ಭ್ರಷ್ಟಾಚಾರ ಆರೋಪ ಸಂಬಂಧ ದೇಶಮುಖ್ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿದೆ. ಹಾಗೂ ಅವರ ಮನೆ ಮೇಲೆ ದಾಳಿ ನಡೆಸಿ ವಿವಿಧ ದಾಖಲೆಗಳಿಗಾಗಿ ಶೋಧ ನಡೆಸಿತ್ತು.