ಮುಂಬಯಿ : ದಾವೂದ್ ಇಬ್ರಾಹಿಂ ಜತೆ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಅವರನ್ನು ಬುಧವಾರ ಜಾರಿ ನಿರ್ದೇಶನಾಲಯ ಬಂಧಿಸಿದೆ.
ನವಾಬ್ ಮಲಿಕ್ ಅವರನ್ನು ಗಂಟೆಗಳ ಕಾಲ ವಿಚಾರಣೆ ನಡೆಸಿದ ನಂತರ ಇಡಿ ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮುಂಬಯಿ ಭೂಗತ ಜಗತ್ತಿನ ಚಟುವಟಿಕೆಗಳಿಗೆ ಸಂಬಂಧಿಸಿದ ತನಿಖೆಯಲ್ಲಿ ಇಡಿ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವರನ್ನು ಪ್ರಶ್ನಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎನ್‌ಸಿಪಿ ನಾಯಕ ಇಡಿ ಕಚೇರಿಗೆ ಆಗಮಿಸಿದ್ದು, ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಸಂಸ್ಥೆಯು ಅವರ ಹೇಳಿಕೆಯನ್ನು ದಾಖಲಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎನ್‌ಸಿಪಿಯ ರಾಷ್ಟ್ರೀಯ ವಕ್ತಾರರು ಮತ್ತು ಪಕ್ಷದ ಮುಂಬಯಿ ಘಟಕದ ಮುಖ್ಯಸ್ಥರೂ ಆಗಿರುವ ನವಾಬ್ ಮಲಿಕ್ ಬಂಧನವನ್ನು ಕಾರ್ಯಕರ್ತರು ಪ್ರತಿಭಟಿಸಿದರು. ಉದ್ರಿಕ್ತ ಕಾರ್ಯಕರ್ತರು ಇಡಿ ಕಚೇರಿಯತ್ತ ಹೋಗುತ್ತಿರುವುದನ್ನು ಪೊಲೀಸರು ತಡೆದಿದ್ದಾರೆ.
“ಬಂಧಿತನಾಗಿದ್ದೇನೆ, ಆದರೆ ಹೆದರುವುದಿಲ್ಲ. ನಾವು ಹೋರಾಡುತ್ತೇವೆ ಮತ್ತು ಗೆಲ್ಲುತ್ತೇವೆ” ಎಂದು ಮಲಿಕ್ ಹೇಳಿದ್ದಾರೆ.
ಮಲಿಕ್ ಅವರನ್ನು ಮುಂಬೈನ ವಿಶೇಷ ಪಿಎಂಎಲ್‌ಎ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.