ಕೊಲ್ಲೂರು: ಅಭಯಾರಣ್ಯ ಸೇರಿದಂತೆ ಪಶ್ಚಿಮ ಘಟ್ಟದ ವ್ಯಾಪ್ತಿಯ ಲ್ಲಿರುವ ಹಲವು ಬಗೆಯ ಹಕ್ಕಿಗಳ ಬಗ್ಗೆ ಹಕ್ಕಿ ಹಬ್ಬದ ಮೂಲಕ ನಾಡಿಗೆ ಪರಿಚಯಿಸುವ ಕಾರ್ಯ ಉತ್ತಮವಾದದ್ದು ಎಂದು ಶಾಸಕ ಬಿ.ಎಂ. ಸುಕುಮಾರ್ ಶೆಟ್ಟಿ ಹೇಳಿದರು.
ಹಾಲ್ಕಲ್‌ನಲ್ಲಿ ಜ. 6ರಿಂದ 8ರ ವರೆಗೆ ಕರ್ನಾಟಕ ರಾಜ್ಯ ಅರಣ್ಯ ಇಲಾಖೆ ಹಾಗೂ ಕರ್ನಾಟಕ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿಯ ಸಹಯೋಗದಲ್ಲಿ ಆಯೋಜಿಸಲಾದ ಕರ್ನಾಟಕ ಹಕ್ಕಿ ಹಬ್ಬ ಉದ್ಘಾಟಿಸಿ ಅವರು ಮಾತನಾಡಿದರು.
ಕೊಲ್ಲೂರು ರಸ್ತೆಯಲ್ಲಿ ಕಾಡು ಪ್ರಾಣಿಗಳು ಅಡ್ಡ ಬರುವುದರಿಂದ ಅನೇಕ ಅಪಘಾತ ಸಂಭವಿಸುತ್ತಿದ್ದು ಇದರ ತಡೆಗೆ ಅಪಾಯಕಾರಿ ಸ್ಥಳಗಳನ್ನು ಗುರುತಿಸಿ, ಫೆನ್ಸಿನ್Y ಅಳವಡಿಸುವಂತೆ ಹೇಳಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಕರ್ನಾಟಕ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿಯ ಕಾರ್ಯಕಾರಿ ಸಮಿತಿ ಅಧ್ಯಕ್ಷ ಎಂ.ಮದನ ಗೋಪಾಲ್, ರಾಜ್ಯದಲ್ಲಿ 9ನೇ ಬಾರಿ ಹಕ್ಕಿ ಹಬ್ಬ ಉತ್ಸವ ಕಾರ್ಯಕ್ರಮ ನಡೆಯುತ್ತಿದ್ದು, ಈ ಭಾಗದಲ್ಲಿ ವಲಸೆ ಮತ್ತು ಸ್ಥಳೀಯ ಸುಮಾರು 300ಕ್ಕೂ ಹೆಚ್ಚು ಹಕ್ಕಿಗಳಿದ್ದು, ಈ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲಾಗುವುದು.
ಈ ಬಾರಿಯ ಹಕ್ಕಿ ಹಬ್ಬದಲ್ಲಿ ಮಲಬಾರ್ ಟ್ರೋಗನ್ ಅನ್ನು ರಾಯಭಾರಿ ಹಕ್ಕಿಯನ್ನಾಗಿ ಆಯ್ಕೆ ಮಾಡಲಾಗಿದ್ದು, ರಾಜ್ಯ ಮತ್ತು ದೇಶದ ವಿವಿಧ ವನ್ಯಜೀವಿ ಛಾಯಾಚಿತ್ರಗ್ರಾಹಕರು ಭಾಗವಹಿಸಲಿದ್ದಾರೆ ಎಂದರು.
ಜಡ್ಕಲ್ ಗ್ರಾ.ಪಂ. ಅಧ್ಯಕ್ಷೆ ವನಜಾಕ್ಷಿ ಶೆಟ್ಟಿ, ಕೊಲ್ಲೂರು ಗ್ರಾ.ಪಂ. ಅಧ್ಯಕ್ಷ ಶಿವರಾಮ ಕೃಷ್ಣ ಭಟ್, ವನ್ಯಜೀವಿ ವಿಭಾಗದ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾ ಧಿಕಾರಿ ಹಾಗೂ ಮುಖ್ಯ ಕಾರ್ಯನಿರ್ವಹಣಾ ಧಿಕಾರಿ ಕರ್ನಾಟಕ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ಕುಮಾರ್ ಪುಷ್ಕರ್, ಭದ್ರಾ ಹುಲಿ ಯೋಜನೆ ನಿರ್ದೇಶಕ ಪ್ರಭಾಕರನ್, ಡಿ.ಎಫ್.ಒ.ಗಳಾದ ಉದಯ ನಾಯಕ್, ದಿನೇಶ, ಸತೀಶ ಬಾಬಾ ರೈ, ಶ್ರೀಪತಿ, ಸಿದ್ಧರಾಮಪ್ಪ ಮತ್ತಿತರರಿದ್ದರು.
ಮಲಬಾರ್ ಟ್ರೋಗನ್ ಪಕ್ಷಿಯ ವಿವರ ಕುರಿತು ಪುಸ್ತಕ ಬಿಡುಗಡೆ ಮಾಡಲಾಯಿತು. ಕಾರ್ಕಳ ವನ್ಯಜೀವಿ ವಿಭಾಗದ ಡಿ.ಎಫ್.ಒ. ಗಣಪತಿ ಸ್ವಾಗತಿಸಿದರು. ಜ.8ರ ತನಕ ನಡೆಯಲಿರುವ ಈ ಹಕ್ಕಿಹಬ್ಬ ಕಾರ್ಯಕ್ರಮದಲ್ಲಿ ಸ್ಥಳೀಯ ಮತ್ತು ವಲಸೆ ಹಕ್ಕಿಗಳ ವೀಕ್ಷಣೆ, ವಿಚಾರಗೋಷ್ಠಿಗಳು ನಡೆಯಲಿವೆ.