ಹೊಸದಿಲ್ಲಿ: ಲಾಕ್‌ಡೌನ್ ಬಳಿಕ ದೇಶದ ಆರ್ಥಿಕತೆ ಚೇತರಿಕೆ ಕಂಡಿದ್ದು, ಮುಂದಿನ ಆರ್ಥಿಕ ವರ್ಷದಲ್ಲಿ ಜಿಡಿಪಿ ಶೇ. 11ಕ್ಕೇರುವ ಸಾಧ್ಯತೆ ಇದೆ.
-ಇದು ಶುಕ್ರವಾರ ಆರಂಭವಾದ ಸಂಸ ತ್ತಿನ ಬಜೆಟ್ ಅಧಿವೇಶನದಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿ ಆರ್ಥಿಕ ಸಮೀಕ್ಷೆಯ ಪ್ರಧಾನ ಅಂಶ.
ಕೊರೊನಾದಿಂದ ಸಂಕಷ್ಟಕ್ಕೆ ಒಳಗಾಗಿರುವ ಅರ್ಥವ್ಯವಸ್ಥೆಗೆ ಮುಂದಿನ ವಿತ್ತೀಯ ವರ್ಷ ಚೇತೋಹಾರಿಯಾಗಿರಲಿದೆ ಎಂದು ಆರ್ಥಿಕ ಸಮೀಕ್ಷೆ ಪ್ರತಿ ಪಾದಿಸಿದೆ. ಮಾ. 31ಕ್ಕೆ ಮುಕ್ತಾಯವಾಗಲಿರುವ 2020-21ನೇ ಆರ್ಥಿಕ ವರ್ಷದಲ್ಲಿ ಅದು ಶೇ. 7ರಷ್ಟು ಕುಸಿಯುವ ಬಗ್ಗೆ ಈಗಾಗಲೇ ಮುನ್ಸೂಚನೆ ನೀಡಿದೆ. ಕೃಷಿ ಕ್ಷೇತ್ರದಲ್ಲಿ ಮಾತ್ರ ಆಶಾದಾಯಕ ಬೆಳವಣಿಗೆ ನಿರೀಕ್ಷಿಸಲಾಗಿದ್ದು, ಶೇ. 3.4ರಷ್ಟು ಪ್ರಗತಿಯ ನಿರೀಕ್ಷೆ ಮಾಡಲಾಗಿದೆ. ಸೇವಾ ಕ್ಷೇತ್ರದಲ್ಲಿ ಉತ್ತಮ ಬೆಳವಣಿಗೆಯ ನಿರೀಕ್ಷೆ ಇಲ್ಲ. ದೇಶದಲ್ಲಿ “V’ ಮಾದರಿಯ ಅಭಿವೃದ್ಧಿ ಈಗ ಕಾಣುತ್ತಿದೆ. ಖರೀದಿ, ಬೇಡಿಕೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಸುಧಾರಣ ಕ್ರಮಗಳು, ಉತ್ಪಾದನೆ – ಮೂಲ ಸೌಕರ್ಯ ಕ್ಷೇತ್ರ ಗಳಲ್ಲಿ ಬಂಡವಾಳ ಹೂಡಿಕೆಗೆ ಪ್ರೋತ್ಸಾಹಗಳು ಚೇತರಿಕೆ, ಬೆಳವಣಿಗೆಗೆ ಕಾರಣವಾಗಲಿವೆ.
ಜೀವ ಕಾಪಾಡಿದೆ ಲಾಕ್‌ಡೌನ್
1. ಮುಂದಿನ 2 ವರ್ಷಗಳಲ್ಲಿ ಭಾರತ ಅತ್ಯಂತ ವೇಗವಾಗಿ ಬೆಳವಣಿಗೆ ಸಾಧಿಸುವ ಅರ್ಥ ವ್ಯವಸ್ಥೆ ಆಗಲಿದೆ.
2. ಶೇ. 11.5ರಷ್ಟು ಜಿಡಿಪಿ ಬೆಳವಣಿಗೆ ಮೂಲಕ ಕೊರೊನಾ ಅವಧಿಯಲ್ಲಿ ಎರಡಂಕಿ ಪ್ರಗತಿ ದಾಖಲಿಸಿದ ಏಕೈಕ ರಾಷ್ಟ್ರ ಭಾರತ.
3. ಕಠಿನ ನಿಯಂತ್ರಣಗಳಿಂದ ಜನರ ಜೀವಗಳನ್ನು ಮತ್ತು ಜೀವನೋಪಾಯ ವ್ಯವಸ್ಥೆ ಕಾಪಾಡಿಕೊಳ್ಳಲಾಗಿದೆ.
4. ಲಾಕ್‌ಡೌನ್ ಜಾರಿಯಿಂದ ಧನಾತ್ಮಕ ಪರಿಣಾಮವೇ ಆಗಿದೆ. ಅರ್ಥ ವ್ಯವಸ್ಥೆಗೆ ಪ್ರತಿಕೂಲವಾಗಿದ್ದರೂ ಈಗ ಚೇತರಿಕೆ ಹಾದಿಯಲ್ಲಿದೆ.
5. ಸುದೃಢ ಕರೆನ್ಸಿ, ಉತ್ತಮ ಸ್ಥಿತಿಯಲ್ಲಿ ಚಾಲ್ತಿ ಖಾತೆ, ನಿರೀಕ್ಷೆಗೆ ಮಿಕ್ಕಿ ವಿದೇಶಿ ವಿನಿಮಯ ಮೀಸಲು, ಉತ್ಪಾದನೆ ಚಟುವಟಿಕೆ ಹೆಚ್ಚಳ.