Advertisement

ಕೇಂದ್ರ ಸರಕಾರದಿಂದ ಆರ್ಥಿಕ ವಲಯ ಸುಧಾರಣೆ

11:59 PM Sep 21, 2019 | Lakshmi GovindaRaju |

ಉಡುಪಿ: ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ.ಸದಾನಂದಗೌಡರು ಶನಿವಾರ “ಉದಯವಾಣಿ’ ಕಚೇರಿಗೆ ಭೇಟಿ ನೀಡಿದರು. ಮಣಿಪಾಲ್‌ ಗ್ರೂಪ್‌ನ ಆಡಳಿತ ನಿರ್ದೇಶಕ ಟಿ.ಗೌತಮ್‌ ಪೈ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ ಅವರು, ಸಾರ್ವಜನಿಕರ ಅಭಿಪ್ರಾಯಗಳನ್ನು ಪರಿಗಣಿಸಿ, ಕೇಂದ್ರ ಸರಕಾರ ಆರ್ಥಿಕ ವಲಯವನ್ನು ಸುಧಾರಿಸುವಲ್ಲಿ ಕ್ರಮ ಕೈಗೊಳ್ಳುತ್ತಿದೆ ಎಂದರು.

Advertisement

ವಾಹನೋದ್ಯಮದ ಪ್ರಗತಿಗೂ ಸರ್ಕಾರ ಪ್ರಯತ್ನಿಸುತ್ತಿದೆ ಎಂದ ಅವರು, ಸಾರ್ವಜನಿಕ ಸ್ವಾಮ್ಯದ ಬ್ಯಾಂಕುಗಳಿಂದ ಸಾಲ ಮೇಳವನ್ನು ಸಂಘಟಿಸಲಾಗುತ್ತಿದೆ. ಜಿಎಸ್‌ಟಿ ಜಾರಿಗೆ ಬರುವಾಗ ಅನೇಕ ತೊಡಕುಗಳಾದವು. ರಾಜ್ಯಗಳನ್ನು ಒಪ್ಪಿಸಬೇಕಿತ್ತು. ಅದನ್ನು ಪಾರಾಗಿ ಬಂದೆವು. ನೋಟು ನಿಷೇಧ ಮಾಡಿದಾಗಲೂ ಶೇ.7.2ರಷ್ಟು ಜಿಡಿಪಿ ಬೆಳವಣಿಗೆ ಇತ್ತು.

ಶೇ.8.2ರಷ್ಟು ಅಭಿವೃದ್ಧಿ ಕಂಡ ಜಿಡಿಪಿ, ಶೇ.5ಕ್ಕೆ ಕುಸಿದಾಗ ಅದನ್ನು ಸರಿಪಡಿಸಲು ಸುಧಾರಣಾ ಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆ. ನಾವು ನಿಮ್ಮಂತಹ ಜನರಿಂದ ಮಾಹಿತಿ ಪಡೆದು ಕೇಂದ್ರ ಗೃಹ ಸಚಿವಾಲಯಕ್ಕೆ ಸಲ್ಲಿಸುತ್ತೇವೆ. ಅಲ್ಲಿಂದ ಅದು ತಿಂಕ್‌ಟ್ಯಾಂಕ್‌ (ಚಿಂತನ ಚಿಲುಮೆ) ಸಮಿತಿಗೆ ರವಾನೆಯಾಗಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳಲಿದೆ ಎಂದರು.

ಪ್ರವಾಸೋದ್ಯಮ ಅಭಿವೃದ್ಧಿಗೆ ಕ್ರಮ: ಇತ್ತೀಚೆಗೆ ಶಾಸಕ ಕೆ.ರಘುಪತಿ ಭಟ್‌ ಅವರು ಪ್ರವಾಸೋದ್ಯಮ ಅಭಿವೃದ್ಧಿ ಕುರಿತು ಕೇಳಿದ್ದರು. ಇಲ್ಲಿ ಸಿಆರ್‌ಝಡ್‌ ವ್ಯಾಪ್ತಿಯ ಸಮಸ್ಯೆ ಇತ್ತು. ಈಗ ಇದರ ಮಾನದಂಡವನ್ನು 50 ಮೀ.ಗೆ ಇಳಿಸಲಾಗಿದೆ. ಇನ್ನು ಪ್ರವಾಸೋದ್ಯಮ ಅಭಿವೃದ್ಧಿಗೆ ತೊಂದರೆಯಾಗದು ಎಂದರು.

ಕಾಶ್ಮೀರದಲ್ಲಿ ನಾರ್ಮಲ್‌: ಕಾಶ್ಮೀರದಲ್ಲಿ ಎಲ್ಲ ನಾರ್ಮಲ್‌ ಆಗಿದೆ. ಏಳು ದಶಕಗಳಿಂದ ಇದ್ದ ಸಮಸ್ಯೆಯನ್ನು ಬಗೆಹರಿಸಿದ್ದೇವೆ. ಅಹಿತಕರ ಘಟನೆ ನಡೆಯಬಾರದೆಂದು ಸೈನಿಕರ ನಿಯೋಜನೆ, ಪ್ರತಿಭಟನೆ ಇತ್ಯಾದಿಗಳು ನಡೆಯದಂತೆ ಕೆಲವು ನಾಯಕರ ಗೃಹಬಂಧನ ನಡೆಸಿದ್ದೆವು. ಅಲ್ಲಿನವರ ಹಿತಕ್ಕಾಗಿ ಸೇಬಿಗೆ ಮೊದಲ ಬಾರಿ ಕನಿಷ್ಠ ಉತ್ತೇಜನ ಬೆಲೆ ನಿಗದಿಪಡಿಸಿ ಖರೀದಿಸುತ್ತಿದ್ದೇವೆ. ಇಡೀ ಜಗತ್ತೇ ನಮ್ಮ ಪರವಾಗಿದೆ ಎಂದರು.

Advertisement

ಸಚಿವರೊಂದಿಗೆ ಶಾಸಕರಾದ ಕೆ. ರಘುಪತಿ ಭಟ್‌, ಲಾಲಾಜಿ ಮೆಂಡನ್‌, ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಬಿಜೆಪಿ ನಾಯಕರಾದ ಕೆ. ಉದಯ ಕುಮಾರ ಶೆಟ್ಟಿ, ಕುಯಿಲಾಡಿ ಸುರೇಶ ನಾಯಕ್‌, ಮಹೇಶ್‌ ಠಾಕೂರ್‌, ದ.ಕ. ಜಿಲ್ಲೆಯ ಅಶೋಕಕುಮಾರ್‌ ರೈ ಮೊದಲಾದವರು ಇದ್ದರು.

“ತೆರಿಗೆ ಕಿರುಕುಳ ನಿಯಂತ್ರಣಕ್ಕೆ ಆನ್‌ಲೈನ್‌ ವ್ಯವಸ್ಥೆ’: ತೆರಿಗೆ ಸಂಗ್ರಹ ಕುರಿತು ಅಧಿಕಾರಿಗಳು ಕೊಡುವ ಕಿರುಕುಳದ ಬಗ್ಗೆ ನಮ್ಮ ಗಮನಕ್ಕೆ ಬಂದಿದೆ. ಮಾಲೀಕರಿಗೂ, ಅಧಿಕಾರಿಗಳಿಗೂ ನೇರ ಸಂಪರ್ಕವಿಲ್ಲದೆ ಎಲ್ಲ ವ್ಯವಹಾರಗಳೂ ಆನ್‌ಲೈನ್‌ನಲ್ಲಿ ಆಗುವಂತೆ ನೋಡಿಕೊಳ್ಳುವ ವ್ಯವಸ್ಥೆ ಅ. 1ರಿಂದ ಜಾರಿಗೊಳ್ಳಲಿದೆ. ಬಳಿಕ ಯಾರ ಹಸ್ತಕ್ಷೇಪಕ್ಕೂ ಅವಕಾಶವಿರುವುದಿಲ್ಲ ಎಂದು ಸದಾನಂದ ಗೌಡ ಹೇಳಿದರು.

ತೆರಿಗೆದಾರರ ಕ್ಷೇಮವನ್ನು ಸರಕಾರ ಕಾಪಾಡಬೇಕು. ತೆರಿಗೆ ಕಿರುಕುಳದಿಂದ ಉದ್ಯಮ ನಿಲ್ಲಿಸುವ ಸ್ಥಿತಿ ಬರಬಾರದು. ಆದ್ದರಿಂದ ಅದನ್ನು ನಿಯಂತ್ರಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದ ಗೌತಮ್‌ ಪೈ ಅವರು, ದೇಶದ ಆರ್ಥಿಕ ಹಿಂಜರಿತ ತಡೆಯಲು ಕೇಂದ್ರ ಸರಕಾರ ಕೈಗೊಳ್ಳುತ್ತಿರುವ ಕ್ರಮಗಳನ್ನು ಸ್ವಾಗತಿಸಿದರು. ಕಾಶ್ಮೀರದ ವಿಷಯ ಸಂಬಂಧ ಸದಾನಂದಗೌಡರು ಕೇಳಿದ ಪ್ರಶ್ನೆಗೆ, ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿದ್ದು, ನಮ್ಮ ಆಂತರಿಕ ವಿಷಯ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next