ಮುಂಬೈ: ಭಾರತದಲ್ಲಿ ಹರಡುತ್ತಿರುವ ಕೋವಿಡ್ ಎರಡನೇ ಅಲೆಯಿಂದ ದೇಶದ ಆರ್ಥಿಕ ಚೇತರಿಕೆ ಮೇಲೆ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ. ಅಲ್ಲದೇ ಮುಂಬರುವ ಆರ್ಥಿಕ ವರ್ಷದಲ್ಲಿ ಆರ್ ಬಿಐನ ಶೇ.10.5ರ ಅಭಿವೃದ್ಧಿ ಬೆಳವಣಿಗೆಯನ್ನು ಕಾಯ್ದುಕೊಳ್ಳಲಿದೆ ಎಂದು ಆರ್ ಬಿ ಗವರ್ನರ್ ಶಕ್ತಿಕಾಂತ್ ದಾಸ್ ಗುರುವಾರ(ಮಾರ್ಚ್ 25) ತಿಳಿಸಿದ್ದಾರೆ.
ಇದನ್ನೂ ಓದಿ:“ತಂದೆತಾಯಿಗೆ ರಕ್ಷಣೆ ನೀಡಿದರೆ SIT ಮುಂದೆ ಬರುತ್ತೇನೆ!”
ಭಾರತದಲ್ಲಿ ಮತ್ತೆ ಡಬಲ್ ರೂಪಾಂತರಿ ವೈರಸ್ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಹಲವು ನಗರಗಳಲ್ಲಿ ಈಗಾಗಲೇ ಲಾಕ್ ಡೌನ್ ಜಾರಿಗೊಳಿಸಿದ್ದು, ಈ ಸಂದರ್ಭದಲ್ಲಿ ಆರ್ ಬಿಐ ಗವರ್ನರ್ ಆರ್ಥಿಕ ಚೇತರಿಕೆ ಬಗ್ಗೆ ಭರವಸೆ ವ್ಯಕ್ತಪಡಿಸಿರುವುದಾಗಿ ವರದಿ ಹೇಳಿದೆ.
ದೇಶದಲ್ಲಿ ಕೋವಿಡ್ ಎರಡನೇ ಅಲೆ ಹೆಚ್ಚಳವಾಗುತ್ತಿದ್ದರೂ ಕೂಡಾ ಕಳೆದ ತಿಂಗಳು ಆರ್ ಬಿಐ ನೀಡಿರುವ 2022ನೇ ಸಾಲಿನ ಶೇ.10.5ರ ಆರ್ಥಿಕ ಅಭಿವೃದ್ಧಿ ದರದಲ್ಲಿ ಯಾವುದೇ ಸಮಸ್ಯೆ ಎದುರಿಸಲಾರದು ಎಂದು ದ ಟೈಮ್ಸ್ ನೆಟ್ ವರ್ಕ್ ಇಂಡಿಯಾ ಎಕಾನಾಮಿಕ್ ಶೃಂಗದಲ್ಲಿ ಕಾಂತ್ ಅಭಿಪ್ರಾಯವ ವ್ಯಕ್ತಪಡಿಸಿದ್ದಾರೆ.
ಅಷ್ಟೇ ಅಲ್ಲ ಕಳೆದ ವರ್ಷದಂತೆ ಈ ಬಾರಿ ದೇಶಾದ್ಯಂತ ಮತ್ತೆ ಲಾಕ್ ಡೌನ್ ಜಾರಿಯಾಗುವ ಸಂಭವ ಕೂಡಾ ಕಂಡು ಬರುತ್ತಿಲ್ಲ ಎಂದು ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ವಿಶ್ವಾಸವ್ಯಕ್ತಪಡಿಸಿದ್ದಾರೆ. ದೇಶದ ಹಲವು ಭಾಗಗಳಲ್ಲಿ 50 ಸಾವಿರಕ್ಕಿಂತಲೂ ಹೆಚ್ಚು ಕೋವಿಡ್ ಪ್ರಕರಣಗಳು ಪತ್ತೆಯಾಗುತ್ತಿವೆ, ಮಹಾರಾಷ್ಟ್ರದ ಮುಂಬೈನಲ್ಲಿ ಕೋವಿಡ್ ಪ್ರಕರಣ ಹೆಚ್ಚಳವಾಗುತ್ತಿದೆ ಎಂದು ವರದಿ ತಿಳಿಸಿದೆ.
ಕಳೆದ ಮಾರ್ಚ್ ನಲ್ಲಿ ಹರಡಿದ್ದ ಕೋವಿಡ್ 19 ಸೋಂಕಿಗೆ ದೇಶಾದ್ಯಂತ 1.5 ಲಕ್ಷಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದರು, ಸುಮಾರು 1.2 ಕೋಟಿಗೂ ಅಧಿಕ ಮಂದಿ ಕೋವಿಡ್ ಸೋಂಕಿಗೆ ಒಳಗಾಗಿದ್ದರು ಎಂದು ವರದಿ ಹೇಳಿದೆ.