Advertisement

ಪರಿಸರ ಸ್ನೇಹಿ ಸ್ಯಾನಿಟರಿ ಪ್ಯಾಡ್‌ ಬಿಡುಗಡೆ

12:19 PM Jun 06, 2018 | Team Udayavani |

ಬೆಂಗಳೂರು: ಬಡ, ಆರ್ಥಿಕವಾಗಿ ಹಿಂದುಳಿದ ಕುಟುಂಬದ ಹೆಣ್ಣು ಮಕ್ಕಳು, ಮಹಿಳೆಯರಿಗೆ ಸ್ವಾಸ್ಥ್ಯ, ಸ್ವತ್ಛತೆ ಹಾಗೂ ಸುವಿಧಾ ಸೌಲಭ್ಯ ಕಲ್ಪಿಸಲು “ಜನೌಷಧಿ ಸುವಿಧಾ ಓಕ್ಸೋ- ಬಯೋ ಡಿಗ್ರೇಡಬಲ್‌ ಸ್ಯಾನಿಟರಿ ನ್ಯಾಪ್‌ಕಿನ್‌’ ಬಿಡುಗಡೆ ಮಾಡಲಾಗಿದ್ದು, ಅಗ್ಗದ ದರದಲ್ಲಿ ಸಿಗಲಿದೆ ಎಂದು ಕೇಂದ್ರ ಸಚಿವ ಅನಂತ ಕುಮಾರ್‌ ಹೇಳಿದರು.

Advertisement

ನಗರದಲ್ಲಿ ವಿಶ್ವ ಪರಿಸರ ದಿನದ ಹಿನ್ನೆಲೆಯಲ್ಲಿ ಮಂಗಳವಾರ ಜನೌಷಧಿ ಸುವಿಧಾ ಓಕ್ಸೋ- ಬಯೋ ಡಿಗ್ರೇಡಬಲ್‌ ಸ್ಯಾನಿಟರಿ ನ್ಯಾಪ್‌ಕಿನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿ ಮಾತನಾಡಿದ ಅವರು, 2015-2016ನೇ ಸಾಲಿನ ರಾಷ್ಟ್ರೀಯ ಕುಟುಂಬ ಆರೊಗ್ಯ ಸಮೀಕ್ಷೆ ಪ್ರಕಾರ ಶೇ.58ರಷ್ಟು ಹೆಣ್ಣು ಮಕ್ಕಳು, ಮಹಿಳೆಯರು ಆರೋಗ್ಯಕರ ಸ್ಯಾಪ್‌ಕಿನ್‌ ಬಳಸುತ್ತಿಲ್ಲ ಎಂಬ ಅಂಶ ಬೆಳಕಿಗೆ ಬಂದಿದೆ.

ಬೆಂಗಳೂರು, ಮುಂಬೈ, ದೆಹಲಿ ಸೇರಿದಂತೆ ದೇಶದ ಮಹಾನಗರ, ಪಟ್ಟಣ ಪ್ರದೇಶಗಳಲ್ಲಿ ಶೇ.72ರಷ್ಟು ಮಹಿಳೆಯರಷ್ಟೇ ಆರೋಗ್ಯಕರ ನ್ಯಾಪ್‌ಕಿನ್‌ ಬಳಸುತ್ತಿದ್ದಾರೆ. ರಾಜ್ಯದ ಎಲ್ಲ ಮಹಿಳೆಯರಿಗೂ ಇದು ಅಗ್ಗದ ಬೆಲೆಯಲ್ಲಿ ದೊರೆಯುವಂತೆ ಮಾಡಲು ಕೇಂದ್ರ ಮುಂದಾಗಿದೆ ಎಂದರು.

ಪರಿಸರ ಸ್ನೇಹಿ: ದೇಶದಲ್ಲಿ ವಾರ್ಷಿಕವಾಗಿ 12.3 ಬಿಲಿಯನ್‌ ಸ್ಯಾನಿಟರಿ ನ್ಯಾಪ್‌ಕಿನ್‌ ಬಳಕೆಯಾಗುತ್ತಿದ್ದು, ಇದರ ಪ್ರಮಾಣ 1.13 ಲಕ್ಷ ಟನ್‌ ಮೀರುತ್ತದೆ. ಈ ನ್ಯಾಪ್‌ಕಿನ್‌ಗಳು 500 ವರ್ಷ ಕಳೆದರೂ ಕೊಳೆಯುವುದಿಲ್ಲ. ಆದರೆ ಸುಧಾರಿತ ಓಕ್ಸೋ ಸ್ಯಾನಿಟರಿ ನ್ಯಾಪ್‌ಕಿನ್‌ಗಳು ಮೂರರಿಂದ ಆರು ತಿಂಗಳೊಳಗೆ ಜೈವಿಕವಾಗಿ ಕೊಳೆಯುವುದರಿಂದ ಪರಿಸರ ಸ್ನೇಹಿ ಎನಿಸಿದೆ. ಜನೌಷಧ ಮಳಿಗೆಯಲ್ಲಿ ವಿತರಿಸುವ ಮಾತ್ರೆ, ನ್ಯಾಪ್‌ಕಿನ್‌ಗಳು ವಿಶ್ವ ಆರೋಗ್ಯ ಸಂಸ್ಥೆಯ ಗುಡ್‌ ಮ್ಯಾನ್ಯುಫ್ಯಾಕ್ಚರಿಂಗ್‌ ಪ್ರಾಕ್ಟೀಸಸ್‌ನ ದೃಢೀಕರಣ ಹೊಂದಿರುತ್ತವೆ’ ಎಂದು ಹೇಳಿದರು.

ಕಡಿಮೆ ಬೆಲೆ, ಆರೋಗ್ಯಕರ: ಮಾರುಕಟ್ಟೆಯಲ್ಲಿ ಪ್ರತಿಷ್ಠಿನ ಬ್ರಾಂಡ್‌ನ‌ ನಾಲ್ಕು ನ್ಯಾಪ್‌ಕಿನ್‌ಗಳಿಗೆ 38 ರೂ. ಇದ್ದು, ಪ್ರತಿ ನ್ಯಾಪ್‌ಕಿನ್‌ಗೆ 8ರಿಂದ 10 ರೂ. ತಗುಲಲಿದೆ. ಅದೇ ಗುಣಮಟ್ಟದ ಜೈವಿಕವಾಗಿ ಕೊಳೆಯುವ ನ್ಯಾಪ್‌ಕಿನ್‌ ಬಿಡುಗಡೆಗೊಳಿಸಲಾಗಿದೆ. ದೇಶದ ಜನಸಂಖ್ಯೆಯಲ್ಲಿ ಅರ್ಧದಷ್ಟು ಮಹಿಳೆಯರಿದ್ದಾರೆ. 61 ಕೋಟಿ ಮಹಿಳೆಯರಲ್ಲಿ 30 ಕೋಟಿ ಮಹಿಳೆಯರು ಸುರಕ್ಷಿತ ನ್ಯಾಪ್‌ಕಿನ್‌ ಬಳಸುತ್ತಿಲ್ಲ.

Advertisement

ಇದರಲ್ಲಿ ಗಾರ್ಮೆಂಟ್‌ ಮಹಿಳೆಯರು, ಕಟ್ಟಡ ನಿರ್ಮಾಣ ಮಹಿಳಾ ಕಾರ್ಮಿಕರು, ಸಫಾಯಿ ಕರ್ಮಚಾರಿಗಳು, ಪೌರ ಕಾರ್ಮಿಕ ಮಹಿಳೆಯರು ಸೇರಿದಂತೆ ಶ್ರಮಿಕ ವರ್ಗದವರೇ ಹೆಚ್ಚು. ಇದೀಗ ಅಗ್ಗದ ಬೆಲೆಯಲ್ಲಿ ನ್ಯಾಪ್‌ಕಿನ್‌ಗಳು ಸಿಗಲಿದ್ದು, ಆರೋಗ್ಯ, ನೈರ್ಮಲ್ಯ ಕಾಪಾಡಿಕೊಳ್ಳಲು ಅನುಕೂಲವಾಗಲಿದೆ ಎಂದು ತಿಳಿಸಿದರು.

ಜನೌಷಧ ಕೇಂದ್ರದ ಹೆಚ್ಚಳ: ಈ ಹಿಂದೆ ಸ್ಥಾಯಿ ಸಮಿತಿ ಅಧ್ಯಕ್ಷನಾಗಿದ್ದಾಗ 200 ಜನೌಷಧಿ ಮಳಿಗೆ ತೆರೆಯುವ ಗುರಿಯಿದ್ದರೂ 99 ಮಾತ್ರ ಆರಂಭವಾಗಿದ್ದು ಗಮನಕ್ಕೆ ಬಂದಿತ್ತು. ಆಗ 3000 ಜನೌಷಧ ಮಳಿಗೆ ತೆರೆಯಲು ಶಿಫಾರಸು ಮಾಡಲಾಗಿತ್ತು. ಕ್ರಮೇಣ ನನಗೆ ಈ ಖಾತೆ ದೊರೆತ ಬಳಿಕ ಮಳಿಗೆ ತೆರೆಯಲು ಆದ್ಯತೆ ನೀಡಲಾಗಿದ್ದು, ಸದ್ಯ 3,603 ಜನೌಷಧ ಮಳಿಗೆಗಳಿವೆ.

ಆ ಮೂಲಕ 3 ಕೋಟಿ ರೂ. ಇದ್ದ ವಹಿವಾಟು 400 ಕೋಟಿ ರೂ.ಗೆ ವಿಸ್ತರಿಸುವ ಗುರಿ ಇದೆ ಎಂದು ಹೇಳಿದರು. ಸಂಸದ ಪಿ.ಸಿ.ಮೋಹನ್‌ ಮಾತನಾಡಿ, ಕೇಂದ್ರ ಸರ್ಕಾರವು ಸಾಮಾನ್ಯರ ಕೈಗೆಟುವ ದರದಲ್ಲಿ ಪರಿಸರ ಸ್ನೇಹಿ ಸ್ಯಾನಿಟರಿ ನ್ಯಾಪ್‌ಕಿನ್‌ ಸಿಗುವ ವ್ಯವಸ್ಥೆ ಕಲ್ಪಿಸಿ ಮಹಿಳೆಯರ ಆರೋಗ್ಯ, ನೈರ್ಮಲ್ಯ ಸಂರಕ್ಷಣೆಗೆ ಒತ್ತು ನೀಡಿದೆ ಎಂದರು.

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಂಟಿ ಕಾರ್ಯದರ್ಶಿ ನವದೀಪ್‌ ರಿನ್ವಾ ಮಾತನಾಡಿದರು. ಹಿಂದುಸ್ತಾನ್‌ ಆ್ಯಂಟಿಬಯೋಟಿಕ್ಸ್‌ ಲಿಮಿಟೆಡ್‌ನ‌ ವ್ಯವಸ್ಥಾಪಕ ನಿರ್ದೇಶಕರಾದ ನೀರ್ಜಾ ಶರಾಫ್, ಅದಮ್ಯ ಚೇತನ ಸಂಸ್ಥೆಯ ಅಧ್ಯಕ್ಷೆ ತೇಜಸ್ವಿನಿ ಅನಂತ ಕುಮಾರ್‌, ಬ್ಯೂರೋ ಆಫ್ ಫಾರ್ಮಾ ಪಬ್ಲಿಕ್‌ ಸೆಕ್ಟರ್‌ ಅಂಡರ್‌ಟೇಕಿಂಗ್ಸ್‌ ಆಫ್ ಇಂಡಿಯಾ (ಬಿಪಿಪಿಐ) ಸಿಇಒ ಸಚಿನ್‌ ಕುಮಾರ್‌ ಸಿಂಗ್‌ ಇತರರು ಉಪಸ್ಥಿತರಿದ್ದರು.

ಮೊದಲ ಹಂತದಲ್ಲಿ 3603 ಜನೌಷಧ ಮಳಿಗೆಗಳಲ್ಲಿ ಜೈವಿಕವಾಗಿ ಕೊಳೆಯುವ ನ್ಯಾಪ್‌ಕಿನ್‌ಗಳು ದೊರೆಯಲಿವೆ. ಮುಂದೆ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು, ಆರೋಗ್ಯ ಸಚಿವರೊಂದಿಗೆ ಸಭೆ ನಡೆಸಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ ದೊರೆಯುವ ವ್ಯವಸ್ಥೆ ಕಲಿಸಲು ಒಡಂಬಡಿಕೆ ಮಾಡಿಕೊಳ್ಳಲಾಗುವುದು. ಗ್ರೀನ್‌ ಪಾಲಿಮರ್‌, ಬಯೋಡಿಗ್ರೇಡಬಲ್‌ ಪ್ಲಾಸ್ಟಿಕ್‌ ಅನ್ವೇಷಣೆಗೆ ಸಂಶೋಧನೆ ನಡೆದಿದೆ.
-ಅನಂತ ಕುಮಾರ್‌, ಕೇಂದ್ರ ಸಚಿವ

ರಾಜ್ಯದಲ್ಲಿ ಐದು ಕಡೆ ಲಭ್ಯ: ದೇಶದಲ್ಲಿ 3,603 ಜನೌಷಧ ಮಳಿಗೆಗಳಿದ್ದು, ಈ ಪೈಕಿ ಮೊದಲ ಹಂತದಲ್ಲಿ ಪಾಯೋಗಿಕವಾಗಿ 103 ಮಳಿಗೆಗಳಲ್ಲಿ ಬಯೋಡಿಗ್ರೇಡಬಲ್‌ ಸ್ಯಾನಿಟರಿ ನ್ಯಾಪ್‌ಕಿನ್‌ಗಳು ದೊರೆಯಲಿವೆ. ಅದರಂತೆ ಕರ್ನಾಟಕದಲ್ಲಿ ಐದು ಮಳಿಗೆಗಳಲ್ಲಿ ಲಭ್ಯವಿರಲಿವೆ. ಗದಗ ಜನೌಷಧ ಮಳಿಗೆ ಹಾಗೂ ಬೆಂಗಳೂರಿನ ಎನ್‌.ಆರ್‌.ಕಾಲೋನಿ, ಯಲಹಂಕ, ಮತ್ತಿಕೆರೆ, ಭಾಷ್ಯಂ ವೃತ್ತದ ಜನೌಷಧ ಮಳಿಗೆಗಳಲ್ಲಿ ಸಿಗಲಿವೆ. ಜು. 10ರ ವೇಳೆಗೆ ಎಲ್ಲ ಜನೌಷಧ ಮಳಿಗೆಗಳಲ್ಲಿ ದೊರೆಯಲಿವೆ ಎಂದು ಬಿಪಿಪಿಐ ಸಿಇಒ ಸಚಿನ್‌ ಕುಮಾರ್‌ ಸಿಂಗ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next