Advertisement

ಪರಿಸರ ಸ್ನೇಹಿ ಗಣೇಶನೇ “ಸೆಲೆಬ್ರಿಟಿ’

12:04 PM Sep 02, 2019 | Lakshmi GovindaRaj |

ಗೌರಿ-ಗಣೇಶನ ಹಬ್ಬಕ್ಕೆ ಈಗ ಕ್ಷಣಗಣನೆ ಆರಂಭವಾಗಿದೆ. ಮನೆಗೆ ಗಣೇಶನನ್ನು ಬರಮಾಡಿಕೊಳ್ಳಲು ಭಕ್ತರು ತುದಿಗಾಲಲ್ಲಿ ನಿಂತಿದ್ದಾರೆ. ಆದರೆ, ನಾವು ಕರೆತರುವ ಗಣೇಶ ಪರಿಸರ ಸ್ನೇಹಿ ಆಗಿರಬೇಕೋ ಅಥವಾ ಮಾರಕವಾಗಿರಬೇಕೋ ಎಂಬುದರ ಬಗ್ಗೆ ಅವಲೋಕನ ಮಾಡಿಕೊಳ್ಳುವ ಸಂದರ್ಭ ಇದಾಗಿದೆ.

Advertisement

ಧಾರ್ಮಿಕ ಮುಖಂಡರು, ನಿಮ್ಮ ನೆಚ್ಚಿನ ಸ್ಯಾಂಡಲ್‌ವುಡ್‌ ಸ್ಟಾರ್‌ಗಳು, ಪರಿಸರವಾದಿಗಳು, ಅಧಿಕಾರಿಗಳು ಸೇರಿದಂತೆ ಬಹುತೇಕರ ಆಯ್ಕೆ “ಪರಿಸರ ಸ್ನೇಹಿ’ ಆಗಿದೆ. ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಆ ಸೆಲೆಬ್ರಿಟಿಗಳೆಲ್ಲರೂ ಈ ಸಂಬಂಧದ ಅಭಿಯಾನಗಳಿಗೆ ಕೈಜೋಡಿಸಿದ್ದಾರೆ. ಜತೆಗೆ ಗಣೇಶನ ಭಕ್ತರಿಗೆ ಮನವಿಯನ್ನೂ ಮಾಡಿದ್ದಾರೆ. ಯಾರ್ಯಾರು ಏನು ಹೇಳಿದ್ದಾರೆ? ವಿವರ ಇಲ್ಲಿದೆ.

ನಾವು ನಮ್ಮ ಪ್ರಕೃತಿಗೆ ಕೊಡುವ ನೋವನ್ನು ಪ್ರಕೃತಿಯು ತಿರುಗಿಸಿ ಕೊಡುತ್ತಿರುವುದನ್ನು ನಾವು ಅನುಭವಿಸಿದ್ದೇವೆ. ಹಾಗಾಗಿ, ಈ ಸಲ ನಮ್ಮ ವಿಘ್ನ ನಿವಾರಕನ ಹಬ್ಬಕ್ಕೆ, ಪಿಒಪಿ ಗಣೇಶನ ಮೂರ್ತಿಗಳನ್ನು ಉಪಯೋಗಿಸದೆ ಪರಿಸರ ಸ್ನೇಹಿ ಗಣೇಶನ ಮೂರ್ತಿಗಳನ್ನ ಮಾತ್ರ ಬಳಸಿ, ಪ್ರಕೃತಿ ಮಾತೆಯನ್ನು ಕಾಪಾಡೋಣ. ಇದು ನನ್ನ, ನಿಮ್ಮ ಮತ್ತು ನಮ್ಮೆಲ್ಲರ ಜವಾಬ್ದಾರಿ.
-ಸುದೀಪ್‌, ನಟ

ನಾವು ನಮ್ಮ ಪ್ರಕೃತಿಯನ್ನು ಚೆನ್ನಾಗಿ ಕಾಪಾಡಿಕೊಂಡರೆ, ಅದು ಕೂಡ ನಮ್ಮನ್ನು ರಕ್ಷಿಸುತ್ತದೆ. ನಮ್ಮ ಯಾವುದೇ ಆಚರಣೆ ಅಕ್ಕ-ಪಕ್ಕ ಇರುವವರಿಗೆ, ಪರಿಸರಕ್ಕೆ ಮಾರಕ ಆಗಬಾರದು. ಈ ಬಾರಿ ಗಣೇಶನ ಹಬ್ಬವನ್ನು ಎಲ್ಲರೂ ಪರಿಸರ ಸ್ನೇಹಿಯಾಗಿ ಆಚರಿಸೋಣ. ಆದಷ್ಟು ಮಣ್ಣಿನ ಗಣೇಶನನ್ನು ಆರಾಧಿಸೋಣ.
-ಪುನೀತ್‌ ರಾಜಕುಮಾರ್‌, ನಟ

ಗಣೇಶನ ಪಿಒಪಿ ವಿಗ್ರಹಗಳನ್ನು ಭಕ್ತಿಯಿಂದ ತಂದು ಅದನ್ನು ಪೂಜಿಸುವುದು. ಹಬ್ಬ ಮುಗಿದ ನಂತರ ಅದೇ ವಿಗ್ರಹಗಳನ್ನು ಎಲ್ಲೆಂದರಲ್ಲಿ ಎಸೆದು ಪರಿಸರವನ್ನು ಹಾಳು ಮಾಡುವುದು ಎಷ್ಟರ ಮಟ್ಟಿಗೆ ಸರಿ? ಇದನ್ನು ಗಣೇಶ ಖಂಡಿತ ಮೆಚ್ಚುವುದಿಲ್ಲ. ನಮ್ಮ ಭಕ್ತಿ, ಆರಾಧನೆ ಎಲ್ಲವೂ ಪರಿಸರಕ್ಕೆ ಪೂರಕವಾಗಿರಬೇಕು. ದಯವಿಟ್ಟು ಎಲ್ಲರೂ ಪರಿಸರ ಸ್ನೇಹಿ ಗಣೇಶನನ್ನು ಬಳಸಿ.
-ರಚಿತಾ ರಾಮ್‌, ನಟಿ

Advertisement

ಪ್ರತಿ ಬಾರಿ ಭಕ್ತಿಯಿಂದ ಗಣೇಶನ ಹಬ್ಬ ಮುಗಿಸಿ, ಬಳಿಕ ಮುರಿದ ಪಿಓಪಿ ವಿಗ್ರಹಗಳನ್ನು ನೋಡುವುದೆಂದರೆ ಮನಸ್ಸಿಗೆ ಹಿಂಸೆ ಎನಿಸುತ್ತದೆ. ಪರಿಸರಕ್ಕೆ ಮಾಲಿನ್ಯವಾಗುವ ಯಾವ ವಸ್ತುಗಳನ್ನು ಆದಷ್ಟು ಈ ಗಣೇಶನ ಹಬ್ಬದಲ್ಲಿ ಬಳಸದಿರಲು ಪ್ರಯತ್ನಿಸಿ. ಇದೇ ನಾವೆಲ್ಲರೂ ಭಕ್ತಿಯಿಂದ ಗಣೇಶನಿಗೆ ನೀಡಬಹುದಾದ ಕಾಣಿಕೆ.
-ಹರಿಪ್ರಿಯಾ, ನಟಿ

ನಾವು ಬಾಲ್ಯದಲ್ಲಿ ಮಣ್ಣಿನ ಗಣಪನನ್ನೇ ಕೂರಿಸಿ, ಆರಾಧನೆ ಮಾಡುತ್ತಿದ್ದೆವು. ನಮಗೆ ಆಗೆಲ್ಲಾ, ಈಗಿನ ಪ್ಲಾಸ್ಟಿಕ್‌ ಗಣಪವಾಗಲಿ, ಪಿಒಪಿ ಗಣಪವಾಗಲಿ ಗೊತ್ತಿರಲಿಲ್ಲ. ನಾವು ಮಣ್ಣಿನ ಗಣಪನನ್ನು ಪೂಜಿಸಿ ವಿಸರ್ಜಿಸಿದ ನಂತರವೂ ಆ ನೀರನ್ನು ಕುಡಿಯುತ್ತಿದ್ದೆವು. ಆದರೆ, ಈಗ ಪರಿಸರ ಹಾಳಾಗುವಂತಹ ಕೆಲಸವಾಗುತ್ತಿದೆ. ಗಣೇಶ ಹಬ್ಬವು ಭಕ್ತಿ, ಗೌರವ, ಜವಾಬ್ದಾರಿಯ ಜೊತೆಗೆ ಪರಿಸರ ಸ್ನೇಹಿಯಾಗಿಯೂ ಇರಬೇಕು.
-ಶರಣ್‌, ನಟ

ಪಿಒಪಿ ಮುಕ್ತ ಗಣೇಶ ಚತುರ್ಥಿ ಆಚರಣೆಯನ್ನು ಎಲ್ಲರು ಸೇರಿ ಒಟ್ಟಾಗಿ ಮಾಡೋಣ. ನೀರಿನಲ್ಲಿ ಸುಲಭವಾಗಿ ಕರಗುವ, ಜೀವರಾಶಿಗೆ ಯಾವುದೇ ರೀತಿಯಲ್ಲಿ ಹಾನಿ ಮಾಡದ ಮಣ್ಣಿನ ಗಣಪನ ಪೂಜೆ ಮಾಡೋಣ. ಹಬ್ಬದ ಹೆಸರಲ್ಲಿ ನಮ್ಮ ಸುತ್ತಲಿನ ಪರಿಸರಕ್ಕೆ ದಕ್ಕೆ ಮಾಡುವುದು ಬೇಡ. ಪರಿಸರವನ್ನು ಸ್ವಚ್ಛವಾಗಿಡುವುದರ ಮೂಲಕ ಮುಂದಿನ ಪೀಳಿಗೆಗೆ ಉತ್ತಮ ಭವಿಷ್ಯ ಕಟ್ಟಿಕೊಡುವುದು ನಮ್ಮೆಲ್ಲರ ಜವಾಬ್ದಾರಿ. ಸರ್ಕಾರ, ಜನಪ್ರತಿನಿಧಿಗಳು, ಪ್ರಜ್ಞಾವಂತ ನಾಗರೀಕರು ಒಟ್ಟಾಗಿ ಜಾಗೃತಿ ಕಾರ್ಯದಲ್ಲಿ ಭಾಗಿಯಾಗಬೇಕು. ಜನರಲ್ಲಿ ಹೆಚ್ಚು ಅರಿವು ಮೂಡಿಸುವ ಕೆಲಸ ಮಾಡಬೇಕು.
-ಬಿ.ಎಲ್‌. ಭಾರತಿ, ಮಾಜಿ ಅಥ್ಲೀಟ್‌, ಹಾಲಿ ರಾಜ್ಯ ಅಥ್ಲೆಟಿಕ್ಸ್‌ ಸಂಸ್ಥೆ ಉಪಾಧ್ಯಕ್ಷರು

ಪಿಒಪಿ ಗಣೇಶ ಮೂರ್ತಿಯನ್ನು ನಿಷೇಧಿಸಿರುವ ಸರ್ಕಾರ ಪರಿಸರ ರಕ್ಷಣೆ ಬಗ್ಗೆ ತನ್ನ ಬದ್ಧತೆಯನ್ನು ತೋರಿದೆ. ಸಾರ್ವಜನಿಕರು ಸರ್ಕಾರದ ತೀರ್ಮಾನವನ್ನು ಸ್ವಾಗತಿಸಿ ಪ್ರೋತ್ಸಾಹಿಸಬೇಕು. ನಗರದ ಕೆಲವು ಪ್ರದೇಶಗಳಲ್ಲಿ ಇನ್ನೂ ಪಿಒಪಿ ಗಣೇಶ ಮೂರ್ತಿಯನ್ನು ಮಾರಾಟ ಮಾಡಲಾಗುತ್ತಿದೆ. ಇವುಗಳನ್ನು ಅಧಿಕಾರಿಗಳು ಕೂಡಲೇ ವಶಕ್ಕೆ ಪಡೆಯಬೇಕು. ದೇಶದೆಲ್ಲೆಡೆ ಮಣ್ಣಿನ ಗಣೇಶ ಮೂರ್ತಿಯನ್ನು ಪೂಜಿಸುವಂತಾಗಬೇಕು. ಹಬ್ಬವನ್ನು ಭಕ್ತಿಗಾಗಿ ಆಚರಿಸಲಾಗುತ್ತದೆ, ಆಡಂಬರಕ್ಕಲ್ಲ. ಮುಂದಿನ ದಿನಗಳಲ್ಲಿ ಸಂಭ್ರಮಾಚರಣೆ ಹೆಸರಲ್ಲಿ ಪಟಾಕಿ ಸಿಡಿಸುವುದನ್ನು ನಿಷೇಧಿಸಿದರೆ ವಾಯುಮಾಲಿನ್ಯ ನಿಯಂತ್ರಿಸಬಹುದು.
-ಅಶ್ವಥ್‌ ನಾರಾಯಣ, ಅರ್ಚಕರು, ದೊಡ್ಡಗಣಪತಿ ದೇವಸ್ಥಾನ

ನಮ್ಮ ಮನೆಯಲ್ಲಿ ಕೂಡ ಕಳೆದ ಆರು ವರ್ಷಗಳಿಂದ ಮಣ್ಣಿನ ಗಣಪ ಮೂರ್ತಿ ಪ್ರತಿಷ್ಠಾಪನೆ ಮಾಡಿ ಪೂಜಿಸುತ್ತೇವೆ. ಮಣ್ಣಿನ ಗಣಪ ಬಳಕೆ ಕುರಿತು “ಉದಯವಾಣಿ’ಯ ಜಾಗೃತಿ ಅಭಿಯಾನ ಅತ್ಯಂತ ಶ್ಲಾಘನೀಯ ಕಾರ್ಯವಾಗಿದೆ. ಸಾರ್ವಜನಿಕರು ರಾಸಾಯನಿಕಯುಕ್ತ ಪಿಒಪಿ ಗಣಪನ ಬಳಕೆಯನ್ನು ಕೈಬಿಟ್ಟು ಮಣ್ಣಿನ, ಗಣಪ ಬಳಸಬೇಕು.
-ಭಾಸ್ಕರ್‌ ರಾವ್‌, ಆಯುಕ್ತರು, ನಗರ ಪೊಲೀಸ್‌

ಪಾಲಿಕೆ ವ್ಯಾಪ್ತಿಯಲ್ಲಿ ಪಿಒಪಿ ಗಣೇಶ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದು, ಸಾರ್ವಜನಿಕರು ಪಿಒಪಿ ಗಣೇಶ ಮೂರ್ತಿಯನ್ನು ಖರೀದಿ ಮಾಡದಂತೆ ಮನವಿ ಮಾಡಲಾಗಿದೆ. ಪಿಒಪಿ ಮಣ್ಣಿನ ಮೂರ್ತಿಯನ್ನು ಆಚರಣೆಗೆ ಬಲಸುವ ಮೂಲಕ ಪರಿಸರ ರಕ್ಷಣೆ ಮಾಡುವುದು ನಮ್ಮ ನಿಮ್ಮೆಲ್ಲರ ಜವಾಬ್ದಾರಿ. “ಉದಯವಾಣಿ’ಯ ಪರಿಸರ ಕಾಳಜಿಗೆ ಅಭಿನಂದನೆ.
-ಬಿ.ಎಚ್‌. ಅನಿಲ್‌ ಕುಮಾರ್‌, ಆಯುಕ್ತರು, ಬಿಬಿಎಂಪಿ

ಪರಿಸರ ಸ್ನೇಹಿ ಗಣಪತಿಗೆ ನಮ್ಮ ಬೆಂಬಲ ಇದೆ ಮತ್ತು ಅನೇಕ ವರ್ಷಗಳಿಂದಲೂ ಪರಿಸರ ಸ್ನೇಹಿ ಗಣಪತಿಯಿಂದಲೇ ಉತ್ಸವ ಮಾಡಬೇಕು ಎಂದು ಪ್ರತಿಪಾದಿಸಿಕೊಂಡು ಬರುತ್ತಿದ್ದೇವೆ. ಮನೆಗಳಲ್ಲಿ ಪರಿಸರ ಸ್ನೇಹಿ ಗಣಪತಿಯನ್ನು ಸುಲಭವಾಗಿ ಕೂರಿಸಬಹುದು. ಸಾರ್ವಜನಿಕವಾಗಿ ಪ್ರತಿಷ್ಠಾಪಿಸುವಾಗ ಎತ್ತರದ ಗಣೇಶನ ಮೂರ್ತಿಗಳಿಗೂ ಅವಕಾಶ ನೀಡಬೇಕು. ಇಂತಹ ಪ್ರದೇಶದಲ್ಲಿ ಗಣಪತಿ ವಿಸರ್ಜನೆಗೆ ಪ್ರತ್ಯೇಕ ವ್ಯವಸ್ಥೆ ಮಾಡಬೇಕು. ಕೆರೆ, ಬಾವಿ ಅಥವಾ ನದಿಗೆ ಪಿಒಪಿ ಗಣಪತಿ ಹೋಗದಂತೆ ಆಡಳಿತವರ್ಗ ಎಚ್ಚರ ವಹಿಸಬೇಕು.
-ಕೆ.ಟಿ. ಉಲ್ಲಾಸ್‌, ಪ್ರಾಂತ ಪ್ರಧಾನ ಕಾರ್ಯದರ್ಶಿ, ಹಿಂದೂ ಜಾಗರಣ ವೇದಿಕೆ

ಪಿಒಪಿ ಗಣೇಶ ಮೂರ್ತಿ ಬಳಸುವುದರಿಂದ ಕೆರೆಗಳು ವಿಷಮಯವಾಗುತ್ತಿವೆ, ಹೆಚ್ಚಿನ ಕಸ ಉತ್ಪತ್ತಿಯಾಗುತ್ತಿದೆ. ಹಾಗಾಗಿ, ಬೆಂಗಳೂರಿನ ಕೆರೆಗಳನ್ನು ವಿಷಮುಕ್ತಗೊಳಿಸುವುದರ ಜತೆಗೆ ಕಸದಿಂದ ವಿಮುಕ್ತಗೊಳಿಸಲು ಪರಿಸರ ಸ್ನೇಹಿ ಮಣ್ಣಿನ ಗಣಪನನ್ನು ಬಳಸಬೇಕಿದೆ. ಸರಳವಾಗಿ ಹಬ್ಬವನ್ನು ಆಚರಿಸುವುದರ ಮೂಲಕ ಬಾಕಿ ಉಳಿಯುವ ಹಣವನ್ನು ಉತ್ತರ ಕರ್ನಾಟಕದ ನೆರೆ ಸಂತ್ರಸ್ತರ ಬದುಕು ಕಟ್ಟಿಕೊಳ್ಳಲು ನೀಡಿದರೆ ಉತ್ತಮ.
-ಯಲ್ಲಪ್ಪ ರೆಡ್ಡಿ , ಪರಿಸರವಾದಿ.

ಪರಿಸರ ಸ್ನೇಹಿ ಗಣೇಶೋತ್ಸವದ ಬಗ್ಗೆ ಅನೇಕ ವರ್ಷಗಳಿಂದಲೇ ಜಾಗೃತಿ ಮೂಡಿಸಿಕೊಂಡು ಬರುತ್ತಿದ್ದೇವೆ. ಇಂದು ಪರಿಸರ ಶೋಚನೀಯ ಸ್ಥಿತಿಗೆ ತಲುಪುತ್ತಿದೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಖೀಲ ಭಾರತೀಯ ಪ್ರತಿನಿಧಿ ಸಭಾದಲ್ಲೂ ಪರಿಸರ ಸ್ನೇಹಿ ಗಣೇಶೋತ್ಸವ ಸಹಿತವಾಗಿ ಪರಿಸರ ರಕ್ಷಣೆಗೆ ನಿರ್ಣಯ ತೆಗೆದುಕೊಳ್ಳಲಾಗಿದೆ. ಕೇಶವ ಕೃಪಾದಲ್ಲಿ ಅನೇಕ ವರ್ಷಗಳಿಂದ ಪರಿಸರ ಸ್ನೇಹಿ ಗಣಪತಿಯನ್ನೇ ಇಟ್ಟು ಪೂಜೆಮಾಡಿಕೊಂಡು ಬರುತ್ತಿದ್ದೇವೆ. ಹೀಗಾಗಿ ಗಣೇಶೋತ್ಸವ ಪರಿಸರ ಸ್ನೇಹಿಯಾಗಿಯೇ ನಡೆಯಬೇಕು.
-ವಿ.ನಾಗರಾಜ, ದಕ್ಷಿಣ ಮಧ್ಯಕ್ಷೇತ್ರೀಯ ಸಂಘಚಾಲಕ, ಆರೆಸ್ಸೆಸ್‌

Advertisement

Udayavani is now on Telegram. Click here to join our channel and stay updated with the latest news.

Next