ಕೊಪ್ಪಳ: ಗಣೇಶ ಹಬ್ಬವೆಂದರೆ ಸಾರ್ವಜನಿಕರಿಗೆ ಎಲ್ಲಿಲ್ಲದ ಸಂಭ್ರಮ, ಸಂಘ-ಸಂಸ್ಥೆಗಳಂತೂ ತಿಂಗಳ ಮುಂಚಿತವೇ ಹಬ್ಬಕ್ಕೆ ಸಿದ್ಧವಾಗುತ್ತವೆ. ಆದರೆ ಆಧುನಿಕ ಭರಾಟೆಯಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್ ಮೂರ್ತಿಗಳೇ ಹೆಚ್ಚು ಮಾರಾಟವಾಗುತ್ತಿವೆ. ಇಲ್ಲೊಬ್ಬ ವ್ಯಕ್ತಿ ಪರಿಸರ ಸ್ನೇಹಿ ಗಣಪತಿ ಮೂರ್ತಿ ಸಿದ್ಧಗೊಳಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಹೌದು. ಕೊಪ್ಪಳ ತಾಲೂಕಿನ ಬೆಟಗೇರಿ ಗ್ರಾಮದ ವಿನಾಯಕ ಬಡಿಗೇರ ಅವರು ಎಂಟು ವರ್ಷಗಳಿಂದ ಪರಿಸರ ಸ್ನೇಹಿ ಗಣಪತಿ ಮೂರ್ತಿಗಳನ್ನು ತಯಾರಿಸಿ, ಮಾರಾಟ ಮಾಡುತ್ತಿದ್ದಾರೆ.
ವೃತ್ತಿಯಲ್ಲಿ ಬಡಗಿತನ ಮಾಡುವ ವಿನಾಯಕ ಅವರು, ಗಣೇಶ ಹಬ್ಬ ಬಂದಾಗ ಒಂದು ತಿಂಗಳು ಮುಂಚಿತವಾಗಿ ಮನೆಯಲ್ಲಿ ಮಣ್ಣಿನ ಮೂರ್ತಿಗಳನ್ನು ಸಿದ್ಧಗೊಳಿಸಿ ಮಾರಾಟ ಮಾಡುತ್ತಾರೆ. ಇವರು ಮಾಡಿದ ಮೂರ್ತಿಗಳಿಗೆ ಈ ಭಾಗದಲ್ಲಿ ಭಾರಿ ಬೇಡಿಕೆಯಿದೆ. ಕಾತರಕಿ, ಗುಡ್ಲಾನೂರು, ಮೋರನಾಳ, ಹನುಕುಂಟಿ, ಅಳವಂಡಿ ಸೇರಿದಂತೆ ಸುತ್ತಲಿನ ಜನರು ಮೂರ್ತಿ ಖರೀದಿ ಮಾಡುತ್ತಾರೆ.
ಈ ಮೊದಲು ಪ್ಲಾಸ್ಟರ್ ಆಫ್ ಪ್ಯಾರಿಸ್ ಮೂರ್ತಿಗಳನ್ನು ಮಾಡುತ್ತಿದ್ದ ವಿನಾಯಕ್ ಅವರು ಅದರಿಂದ ಪರಿಸರಕ್ಕೆ ಹಾನಿಯಾಗಲಿದೆ ಎನ್ನುವುದನ್ನು ಅರಿತು, ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ಮಾಡುತ್ತಿದ್ದಾರೆ. ಹಬ್ಬದ ಒಂದು ತಿಂಗಳು ಮುನ್ನ ಕೆಂಪು ಮಣ್ಣು ಸಂಗ್ರಹಿಸಿ 3-4 ದಿನಗಳ ಕಾಲ ಮಣ್ಣನ್ನು ಹದಗೊಳಿಸುತ್ತಾರೆ. ನಂತರ ಅದಕ್ಕೆ ಹತ್ತಿಯನ್ನು ಮಿಶ್ರಣ ಮಾಡುತ್ತಾರೆ. ಬಳಿಕ ಪೂಜಾ ವಿಧಿ ವಿಧಾನದಿಂದಲೇ ಗಣೇಶ ಮೂರ್ತಿಯನ್ನು ತಯಾರು ಮಾಡುತ್ತಿರುವುದು ಎಲ್ಲರ ಗಮನ ಸೆಳೆದಿದೆ.
ಆಧುನಿಕ ಭರಾಟೆಯಲ್ಲೂ: ಪ್ರಸ್ತುತ ಆಧುನಿಕ ಭರಾಟೆಯಲ್ಲಿ ಪಿಒಪಿ ಗಣೇಶ ಮೂರ್ತಿಗಳ ಮೊರೆ ಹೋಗುತ್ತಿದ್ದ ಈ ಭಾಗದ ಜನರು, ವಿನಾಯಕ ಬಡಿಗೇರ ಅವರು ತಯಾರಿಸಿದ ಮೂರ್ತಿಗಳನ್ನೇ ಖರೀದಿ ಮಾಡಿ ಪೂಜೆ ಮಾಡಿ ವಿಸರ್ಜನೆ ಮಾಡುತ್ತಿರುವುದು ಹಲವು ವರ್ಷಗಳಿಂದ ನಡೆದಿದೆ.
ಅಚ್ಚರಿಯಂದರೆ, ಬೆಟಗೇರಿ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ಮಣ್ಣಿನ ಮೂರ್ತಿಗಳೇ ಹೆಚ್ಚು ಪ್ರತಿಷ್ಠಾಪನೆ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆ. ಗ್ರಾಮಸ್ಥರು ಸಾರ್ವಜನಿಕವಾಗಿ ಮೂರ್ತಿ ಪ್ರತಿಷ್ಠಾಪನೆ ಮಾಡಬೇಕೆನ್ನುವ ಇಚ್ಛೆಯಿದ್ದರೆ, ತಿಂಗಳು ಮೊದಲೇ ಇವರಿಗೆ ಮೂರ್ತಿಬೇಕೆಂದು ಹೇಳಿರುತ್ತಾರೆ. ಇನ್ನೂ ಆಧುನಿಕತೆಗೆ ತಕ್ಕಂತೆ ವಿವಿಧ ಶೈಲಿಯ, ಮನಮೋಹಕ ಮೂರ್ತಿಗಳನ್ನು ತಯಾರಿಸಿ ಪಿಒಪಿ ಮೂರ್ತಿಗಳಿಗೂ ಸಡ್ಡು ಹೊಡೆಯುವಂತೆ ಮಾಡುತ್ತಿರುವುದು ಎಲ್ಲರ ಗಮನ ಸೆಳೆದಿದೆ.
ನಮ್ಮ ತಂದೆಯವರು ಮೊದಲು ನಮ್ಮ ಮನೆಗೆ ಅವಶ್ಯವಿದ್ದಷ್ಟು ಮಣ್ಣಿನ ಗಣೇಶ ಮೂರ್ತಿ ಮಾಡುತ್ತಿದ್ದರು. ಅವರ ಬಳಿಕ ನಾವು ವ್ಯಾಪಾರಕ್ಕಾಗಿ ಮಣ್ಣಿನ ಮೂರ್ತಿ ಸಿದ್ದಗೊಳಿಸಿ ಮಾರಾಟ ಮಾಡುತ್ತೇವೆ. ನಮ್ಮ ಮಣ್ಣಿನ ಗಣೇಶ ಮೂರ್ತಿಗಳಿಗೆ ಭಾರಿ ಬೇಡಿಕೆಯಿದೆ. ಉತ್ತಮ ಬೆಲೆಗೂ ಮಾರಾಟವಾಗುತ್ತವೆ. ನಮ್ಮ ವೃತ್ತಿಯ ಜೊತೆಗೆ ಇದನ್ನೊಂದು ಉಪ ಕಸುಬನ್ನಾಗಿ ಮಾಡಿಕೊಂಡಿದ್ದೇವೆ.
ವಿನಾಯಕ ಬಡಿಗೇರ,
ಮೂರ್ತಿ ತಯಾರಕ, ಬೆಟಗೇರಿ.
ದತ್ತು ಕಮ್ಮಾರ