Advertisement

ಪಿಜಿ ಸೆಂಟರ್‌ ಆರಂಭಕ್ಕೆ ಮತ್ತೆ ಗ್ರಹಣ!

02:51 PM Mar 27, 2022 | Team Udayavani |

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಪಿ.ಜಿ.ಸೆಂಟರ್‌ (ಸ್ನಾತಕೋತ್ತರ ಶಿಕ್ಷಣ ಕೇಂದ್ರ) ತೆರೆಯಬೇಕೆನ್ನುವುದು ಅನೇಕ ವರ್ಷಗಳ ಕನಸು. ಸರ್ಕಾರದಿಂದ ಪಿ.ಜಿ. ಸೆಂಟರ್‌ ತೆರೆಯಲು ಆದೇಶ ಸಿಕ್ಕರೂ ಸಕಾಲಕ್ಕೆ ಅನುದಾನ ಬಿಡುಗಡೆಯಾಗದೆ ನನೆಗುದಿಗೆ ಬಿದ್ದಿದೆ.

Advertisement

ಬಿ.ಎಸ್‌.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಪ್ರತೀ ಜಿಲ್ಲೆಯಲ್ಲಿ ಪಿ.ಜಿ.ಸೆಂಟರ್‌ ತೆರೆಯುವುದಾಗಿ ಬಜೆಟ್‌ ನಲ್ಲಿ ಘೋಷಿಸಿದ್ದರು. ಅದರಂತೆ ಚಿಕ್ಕಮಗಳೂರು ಜಿಲ್ಲೆಯಲ್ಲೂ ಪಿ.ಜಿ.ಸೆಂಟರ್‌ ತೆರೆಯಲು ಅನುಮತಿ ದೊರೆತಿದೆ. ಪಿ.ಜಿ.ಸೆಂಟರ್‌ ನಿರ್ಮಾಣಕ್ಕಾಗಿ ನಗರದ ಹೊರವಲಯದ ಕದ್ರಿಮಿದ್ರಿಯಲ್ಲಿ 40ಎಕರೆ ಜಮೀನು ಗುರುತಿಸಲಾಗಿದೆ. ಆದರೆ ಸರ್ಕಾರದಿಂದ ಸಕಾಲದಲ್ಲಿ ಅನುದಾನ ಬಿಡುಗಡೆಯಾಗದಿರುವುದರಿಂದ ಪಿ.ಜಿ. ಸೆಂಟರ್‌ ಕನಸು ಕನಸಾಗಿಯೇ ಉಳಿದಿದೆ.

ಸದ್ಯ ನಗರದ ಐಡಿಎಸ್‌ಜಿ ಕಾಲೇಜು ಆವರಣದಲ್ಲಿ ತಾತ್ಕಾಲಿಕ ಕಟ್ಟಡದಲ್ಲಿ ಪಿ.ಜಿ.ಸೆಂಟರ್‌ ತೆರೆಯಲಾಗಿದೆ. ವಾಣಿಜ್ಯಶಾಸ್ತ್ರ ಮತ್ತು ಗಣಿತಶಾಸ್ತ್ರ ತರಗತಿಗಳು ಮಾತ್ರ ನಡೆಯುತ್ತಿದೆ. ಕಡೂರು ಮತ್ತು ಚಿಕ್ಕಮಗಳೂರು ಪಿ.ಜಿ.ಸೆಂಟರ್‌ಗೆ ಓರ್ವ ಪ್ರಾಧ್ಯಾಪಕರನ್ನು ಮಾತ್ರ ನೇಮಕ ಮಾಡಲಾಗಿದೆ. ಮೂರು ದಿನ ಚಿಕ್ಕಮಗಳೂರು ಮೂರು ದಿನ ಕಡೂರು ಪಿ.ಜಿ. ಸೆಂಟರ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಉಳಿದಂತೆ ಅತಿಥಿ ಪ್ರಾಧ್ಯಾಪಕರ ಮೊರೆ ಹೋಗಲಾಗಿದೆ. ನಗರದ ಐಡಿಎಸ್‌ಜಿ ಕಾಲೇಜು ಆವರಣದಲ್ಲಿ ಕಾಲೇಜು ಶಿಕ್ಷಣ ಇಲಾಖೆಯಿಂದ ತೆರೆಯಲಾಗಿರುವ ಸ್ನಾತಕೋತ್ತರ ಪದವಿ ಶಿಕ್ಷಣವನ್ನು 450 ವಿದ್ಯಾರ್ಥಿಗಳು ಪಡೆದುಕೊಳ್ಳುತ್ತಿದ್ದಾರೆ. ಜಿಲ್ಲೆಯಲ್ಲಿ ಪಿ.ಜಿ. ಸೆಂಟರ್‌ ತೆರೆಯುವುದರಿಂದ ಜಿಲ್ಲೆಯ ಬಹುತೇಕ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಜಿಲ್ಲೆಯಲ್ಲಿರುವ ಪದವಿ ಮತ್ತು ಸ್ನಾತಕೋತ್ತರ ಕಾಲೇಜುಗಳು ಕುವೆಂಪು ವಿಶ್ವ ವಿದ್ಯಾಲಯ ವ್ಯಾಪ್ತಿಗೆ ಒಳಪಟ್ಟಿದೆ. ಜಿಲ್ಲೆಯಲ್ಲಿ ಪಿ.ಜಿ.ಸೆಂಟರ್‌ ತೆರೆಯುವುದರಿಂದ ಚಿಕ್ಕಮಗಳೂರು ಜಿಲ್ಲೆಗೆ ಮುಂದಿನ ವರ್ಷಗಳಲ್ಲಿ ಪ್ರತ್ಯೇಕ ವಿಶ್ವವಿದ್ಯಾಲಯ ತಲೆ ಎತ್ತುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಇದರಿಂದ ಜಿಲ್ಲೆಯ ಜನತೆ ಆಶಯ ಈಡೇರಿದಂತಾಗುತ್ತದೆ. ಕುವೆಂಪು ವಿಶ್ವವಿದ್ಯಾಲಯದಡಿಯಲ್ಲಿ ಶಿವಮೊಗ್ಗ ಜಿಲ್ಲೆ, ದಾವಣಗೆರೆ ಜಿಲ್ಲೆ, ಚಿತ್ರದುರ್ಗ ಜಿಲ್ಲೆ ಮತ್ತು ಚಿಕ್ಕಮಗಳೂರು ಜಿಲ್ಲೆ ಒಳಗೊಂಡಿತ್ತು. ದಾವಣಗೆರೆ ಪ್ರತ್ಯೇಕ ವಿಶ್ವವಿದ್ಯಾಲಯ ಹೊಂದಿದೆ. ಕುವೆಂಪು ವಿಶ್ವವಿದ್ಯಾಲಯದಡಿಯಲ್ಲಿ ಶಿವಮೊಗ್ಗ ಜಿಲ್ಲೆ ಮತ್ತು ಚಿಕ್ಕಮಗಳೂರು ಜಿಲ್ಲೆ 450 ಕಾಲೇಜುಗಳು ಒಳಪಟ್ಟಿವೆ. ಇಲ್ಲಿ ಪಿ.ಜಿ.ಸೆಂಟರ್‌ ಪ್ರಾರಂಭವಾದಲ್ಲಿ ಮುಂದೊಂದು ದಿನ ವಿಶ್ವವಿದ್ಯಾಲಯವಾಗಿ ಮಾರ್ಪಡಲಿದೆ. ಉನ್ನತ ಶಿಕ್ಷಣ ಪಡೆಯಲು ಜಿಲ್ಲೆಯ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎನ್ನುವುದು ಶಿಕ್ಷಣ ತಜ್ಞರ ಅಭಿಪ್ರಾಯ.

8 ಸ್ನಾತಕೋತ್ತರ ಪದವಿ

Advertisement

ನಗರದ ಐಡಿಎಸ್‌ಜಿ ಕಾಲೇಜು ಆವರಣದಲ್ಲಿ ಕಾಲೇಜು ಶಿಕ್ಷಣ ಇಲಾಖೆಯಡಿ ನಡೆಯುತ್ತಿರುವ ಸ್ನಾತಕೋತ್ತರ ಕನ್ನಡ ಎಂ.ಎ., ಇಂಗ್ಲೀಷ್‌ ಎಂ.ಎ., ಇತಿಹಾಸ ಎಂ.ಎ., ಅರ್ಥಶಾಸ್ತ್ರ ಎಂ.ಎ., ಪ್ರಾಣಿಶಾಸ್ತ್ರ, ಜೀವಶಾಸ್ತ್ರ, ರಾಸಾಯನಶಾಸ್ತ್ರ, ವಾಣಿಜ್ಯಶಾಸ್ತ್ರ ಸೇರಿ 8 ಪಿ.ಜಿ. ಕೋರ್ಸ್‌ಗಳು ನಡೆಯುತ್ತಿದ್ದು, 450 ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಐಡಿಎಸ್‌ಜಿ ಕಾಲೇಜಿನಲ್ಲಿ ತಾತ್ಕಾಲಿಕವಾಗಿ ತೆರೆಯಲಾಗಿರುವ ಪಿ.ಜಿ.ಸೆಂಟರ್‌ ನಲ್ಲಿ ವಾಣಿಜ್ಯಶಾಸ್ತ್ರ ವಿಭಾಗ ಮತ್ತು ಗಣಿತಶಾಸ್ತ್ರ ವಿಭಾಗವನ್ನು ಮಾತ್ರ ಹೊಂದಿದ್ದು, ಅಂದಾಜು 80 ರಿಂದ 100 ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಸ್ವಂತ ಕಟ್ಟಡದಲ್ಲಿ ಪಿ.ಜಿ. ಸೆಂಟರ್‌ ತೆರೆಯುವುದರಿಂದ ಹೆಚ್ಚಿನ ಕೋರ್ಸ್‌ಗಳು ಬರಲಿದೆ. ಉನ್ನತ ಶಿಕ್ಷಣ ಪಡೆಯಬೇಕೆಂಬ ಸಾವಿರಾರು ವಿದ್ಯಾರ್ಥಿಗಳಿಗೆ ಅವಕಾಶ ದೊರೆಯುತ್ತದೆ. ವಿದ್ಯಾರ್ಥಿಗಳಿಗೆ ಕಾಲೇಜು ಆಯ್ಕೆ ಮಾಡಿಕೊಳ್ಳಲು ಅವಕಾಶ ಸಿಗುತ್ತದೆ.

ಜನಪ್ರತಿನಿಧಿಗಳ ಆಸಕ್ತಿ ಅಗತ್ಯ

ಜಿಲ್ಲೆಯಲ್ಲಿ ಪಿ.ಜಿ. ಸೆಂಟರ್‌ ತೆರೆಯಲು ಕದ್ರಿಮಿದ್ರಿಯಲ್ಲಿ 40ಎಕರೆ ಜಾಗ ಗುರುತಿಸಲಾಗಿದೆ. ಕಟ್ಟಡ, ಮೂಲಭೂತ ಸೌಲಭ್ಯ ನಿರ್ಮಾಣಕ್ಕೆ ಸರ್ಕಾರದಿಂದ ಇದುವರೆಗೂ ಅನುದಾನ ಬಿಡುಗಡೆಯಾಗಿಲ್ಲ, ಎರಡು ವರ್ಷಗಳ ಕಾಲ ಕೋವಿಡ್‌ ಇದ್ದಿದ್ದರಿಂದ ಅನುದಾನ ಬಿಡುಗಡೆಯಾಗಿಲ್ಲ ಎಂದು ಹೇಳಲಾಗುತ್ತಿದೆ. ಈ ಸಂಬಂಧ ಜಿಲ್ಲೆಯ ಶಾಸಕರು, ಸಂಸದರು, ಜಿಲ್ಲಾಡಳಿತ ಆಸಕ್ತಿ ವಹಿಸಿ ಪಿ.ಜಿ. ಸೆಂಟರ್‌ ತೆರೆಯಲು ಮುಂದಾಗಬೇಕಿದೆ.

ಪಿ.ಜಿ.ಸೆಂಟರ್‌ ತೆರೆಯಲು ನಗರದ ಕದ್ರಿಮಿದ್ರಿಯಲ್ಲಿ 40ಎಕರೆ ಜಾಗ ಮಂಜೂರಾಗಿದೆ. ಕಟ್ಟಡ ನಿರ್ಮಾಣಕ್ಕೆ ಸರ್ಕಾರಕ್ಕೆ ಪ್ರಪೋಸಲ್‌ ಕಳುಹಿಸಲಾಗಿದೆ. ಕೋವಿಡ್‌-19 ಹಿನ್ನೆಲೆಯಲ್ಲಿ ಸರ್ಕಾರದಿಂದ ಅನುದಾನ ಬಿಡುಗೆಡೆಗೆ ಹಿನ್ನಡೆಯಾಗಿದೆ. ಅನುದಾನ ಬಿಡುಗಡೆಯಾದ ತಕ್ಷಣ ಕಾಮಗಾರಿ ಆರಂಭವಾಗಲಿದೆ. -ಬಿ.ಪಿ. ವೀರಭದ್ರಪ್ಪ, ಕುವೆಂಪು ವಿಶ್ವವಿದ್ಯಾಲಯ ಕುಲಪತಿ

Advertisement

Udayavani is now on Telegram. Click here to join our channel and stay updated with the latest news.

Next