Advertisement

ಕೆಂಪೇಗೌಡ ಅಧ್ಯಯನ ಕೇಂದ್ರಕ್ಕೆ ಗ್ರಹಣ

12:20 PM Jan 02, 2018 | |

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ನಾಡಪ್ರಭು ಕೆಂಪೇಗೌಡ ಅಧ್ಯಯನ ಕೇಂದ್ರಕ್ಕೆ ಸ್ವಂತ ಕಟ್ಟಡ ಸೇರಿದಂತೆ ಯಾವುದೇ ಸೌಲಭ್ಯಗಳಿಲ್ಲ. ಆದರೂ, ಐವರು ಸಂಶೋಧಕರು ಕೆಂಪೇಗೌಡರ ಕುರಿತಾದ ಸಂಶೋಧನೆ ನಡೆಸುತ್ತಿದ್ದಾರೆ.

Advertisement

ಕೆಂಪೇಗೌಡರ ಇತಿಹಾಸ ಮತ್ತು ಸಮಕಾಲೀನ ಸನ್ನಿವೇಶ, ಹೋರಾಟ ಇತ್ಯಾದಿಗಳ ಅಧ್ಯಯನಕ್ಕಾಗಿ ಬೆಂಗಳೂರು ವಿಶ್ವವಿದ್ಯಾಯದಲ್ಲಿ ಅಧ್ಯಯ ಕೇಂದ್ರ ತೆರೆಯಲಾಗಿದೆ. ಅಧ್ಯಯನ ಕೇಂದ್ರ ಕಟ್ಟಡ ನಿರ್ಮಾಣಕ್ಕಾಗಿ 3 ಎಕರೆ ಜಮೀನನ್ನು ಬೆಂವಿವಿಯಿಂದಲೇ ಮೀಸಲಿಟ್ಟಿದೆ. ಕೇಂದ್ರ ಅಭಿವೃದ್ಧಿಗೆ ಬಿಬಿಎಂಪಿಯಿಂದ 50 ಕೋಟಿ ರೂ. ಮಂಜೂರಾಗಿದೆ. ಕಟ್ಟಡದ ಶಂಕುಸ್ಥಾಪನೆ ಮಾಡಿ 3 ತಿಂಗಳು ಕಳೆದರೂ ಕಾಮಗಾರಿ ಆರಂಭವಾಗಿಲ್ಲ.

ಅಧ್ಯಯನ ಕೇಂದ್ರದಲ್ಲಿ ಐವರು ಪ್ರಶಿಕ್ಷಣಾರ್ಥಿಗಳು ಸಂಶೋಧನೆ ಚುಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆ. ಉನ್ನತ ಮಟ್ಟದ ಸಂಶೋಧನೆಗೆ ಪೂರಕವಾದ ಯಾವ ವ್ಯವಸ್ಥೆ ಹಾಗೂ ಸೌಲಭ್ಯವೂ ಇಲ್ಲಿಲ್ಲ. ಅಧ್ಯಯನ ಕೇಂದ್ರವನ್ನು ವ್ಯವಸ್ಥಿತವಾಗಿ ನಡೆಸಿಕೊಂಡು ಹೋಗಲು ಬೇಕಾದ ಪರಿಕರಗಳ ವ್ಯವಸ್ಥೆ ಕೂಡ ಮಾಡಿಕೊಟ್ಟಿಲ್ಲ. ಕಾರಣ, ಸಮಾಜಶಾಸ್ತ್ರ ವಿಭಾಗದ ಕಟ್ಟಡದಲ್ಲೇ ಕೇಂದ್ರ ಕಾರ್ಯ ಚಟುವಟಿಕೆ ನಡೆಯುತ್ತಿದೆ.

ಬೆಂಗಳೂರು ನಿರ್ಮಾತೃ ಕೆಂಪೇಗೌಡ ಹೆಸರಿನ ಅಧ್ಯಯನ ಪೀಠವನ್ನು ಬೆಂಗಳೂರು ವಿವಿಯಲ್ಲಿ ಸ್ಥಾಪನೆ ಮಾಡಬೇಕೆಂಬ ಬೇಡಿಕೆ ಹಲವು ವರ್ಷಗಳಿಂದಲೂ ಇತ್ತು. ಪ್ರೊ.ತಿಮ್ಮೇಗೌಡ ಅವರು ಕುಲಪತಿಯಾಗಿದ್ದ ಸಂದರ್ಭದಲ್ಲಿ ಅಧ್ಯಯನ ಕೇಂದ್ರ ತೆರೆಯಲಾಯಿತು. ಬಿಬಿಎಂಪಿ ಕೌನ್ಸಿಲ್‌ ಸಭೆಯ ನಿರ್ಣಯದಂತೆ 50 ಕೋಟಿ ರೂ.ಗಳನ್ನು ಅಧ್ಯಯನ ಕೇಂದ್ರದ ಅಭಿವೃದ್ಧಿಗೆ ಮೀಸಲಿಡಲಾಯಿತ್ತು. ಇದಕ್ಕೆ ಪೂರಕವಾಗಿ ಬೆಂಗಳೂರು ವಿವಿ 3 ಎಕೆರೆ ಜಾಗವನ್ನೂ ಮೀಸಲಿಟ್ಟಿತ್ತು.

ಸಂಶೋಧನಾ ಪ್ರಕ್ರಿಯೆ: ಸೌಲಭ್ಯ ನೀಡಿಲ್ಲ ಎಂದ ಮಾತ್ರಕ್ಕೆ ಕೆಂಪೇಗೌಡರ ಕುರಿತಾದ ಸಂಶೋಧನಾ ಕಾರ್ಯ ಮೊಟಕಾಗಿಲ್ಲ. ಅಧ್ಯಯನ ಕೇಂದ್ರ ಸ್ಥಾಪನೆಯಾದ ದಿನದಿಂದಲೂ ಸಂಶೋಧನೆ ನಡೆಯುತ್ತಲೇ ಇದೆ. ಕೆಂಪೇಗೌಡರ ಇತಿಹಾಸ, ಅಂದಿನ ಜನಜೀವನ, ಆರ್ಥಿಕ ಪರಿಸ್ಥಿತಿ ಇತ್ಯಾದಿ ಸೇರಿದಂತೆ ಅವರ ಕಾಲಘಟ್ಟದ ಅಧ್ಯಯನವನ್ನು ಐವರು ಬೇರೆ ಬೇರೆ ಆಯಾಮಗಳಲ್ಲಿ ಸಂಶೋಧನೆ ನಡೆಸುತ್ತಿದ್ದಾರೆ. ಇದರೊಂದಿಗೆ ಕೇಂದ್ರಕ್ಕೆ ನಿರ್ದೇಶಕರನ್ನು ನೇಮಕ ಮಾಡಲಾಗಿದೆ.

Advertisement

ಕೆಂಪೇಗೌಡ ಅಧ್ಯಯನ ಕೇಂದ್ರಕ್ಕೆ ಜಾಗ ನೀಡಲಾಗಿದೆ. ಆದರೆ, ಕಟ್ಟಡ ಕಾಮಗಾರಿ ಆರಂಭವಾಗಿಲ್ಲ. ಸಮಾಜಶಾಸ್ತ್ರ ವಿಭಾಗದಲ್ಲಿ ಸಂಶೋಧನಾ ಕಾರ್ಯ ನಡೆಸುತ್ತಿದ್ದೇವೆ. ಅಧ್ಯಯನ ಕೇಂದ್ರಕ್ಕೆ ಬೇಕಾದ ಯಾವ ಸೌಲಭ್ಯವೂ ಸರಿಯಾಗಿ ಸಿಕ್ಕಿಲ್ಲ.
-ಡಾ.ಎನ್‌.ಶೈಖ್‌ ಮಸ್ತಾನ್‌, ಕೇಂದ್ರದ ನಿರ್ದೇಶಕ

ಕೆಂಪೇಗೌಡ ಅಧ್ಯಯನ ಪೀಠದ ಕಟ್ಟಡ ನಿರ್ಮಾಣ ಪ್ರಕ್ರಿಯೆಯನ್ನು ಆದಷ್ಟು ಬೇಗ ಪೂರ್ಣಗೊಳಿಸುವಂತೆ ಸಚಿವರು ಸೂಚನೆ ನೀಡಿದ್ದಾರೆ. ಮುಂದಿನ ವಾರದಲ್ಲಿ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಕಾರ್ಯಾದೇಶ ನೀಡಲಾಗುವುದು.
-ಆರ್‌.ಸಂಪತ್‌ರಾಜ್‌, ಮೇಯರ್‌

* ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next