Advertisement
ಗಿವ್ ಮಿ ಎ ಚಾನ್ಸ್… ಐ ವಿಲ್ ಶೋ ದ ಮ್ಯಾಜಿಕ್! “ಇಕೋಸ್’ ಎಂಬ ಹೋಟೆಲ್‌ಗೆ ಕಾಲಿಟ್ಟ ಕೂಡಲೇ ಈ ಸ್ಲೋಗನ್ ಇರುವ ಟಿಶರ್ಟ್ ಧರಿಸಿದ ಸರ್ವರ್‌ಗಳು ನಿಮ್ಮನ್ನು ನಗುತ್ತಾ ಸ್ವಾಗತಿಸುತ್ತಾರೆ. “ಹೆಲೋ’ ಎಂದು ನೀವು ಪ್ರತಿಯಾಗಿ ಹೇಳಿದರೆ, ಅವರು ಮಾತಾಡುವುದಿಲ್ಲ. ಹಾಗೆ ಹೇಳಿದ್ದು ಕೂಡ ಅವರ ಕಿವಿಗೆ ಬೀಳುವುದಿಲ್ಲ. ಅವರೆಲ್ಲ ಮಾತು ಬರದವರು, ಕಿವಿ ಕೇಳದವರು! ಕೋರಮಂಗಲದಲ್ಲಿರುವ ಈ ಹೋಟೆಲ್ ನಡೆಯುವುದೇ ಇವರಿಂದ.
Related Articles
ಕಾರ್ತಿಕ್ ಸಾಗಿರಾಜ್, ಅರ್ಜುನ್ ನರಿಂಪಳ್ಳಿ, ಆಕಾಶ್ ರಾಜು ಮತ್ತು ಗಿರೀಶ್ ರಾಜು ಎಂಬ ನಾಲ್ವರು ಸಾಫ್ಟ್ವೇರ್ ಎಂಜಿನಿಯರ್‌ಗಳು, ಮಾತು ಬರದ- ಕಿವಿ ಕೇಳದವರಿಗೆ ಉದ್ಯೋಗ ಕಲ್ಪಿಸುವುದಕ್ಕಾಗಿಯೇ “ಎಕೋಸ್ ರೆಸ್ಟೋರೆಂಟ್’ ಅನ್ನು ಸ್ಥಾಪಿಸಿದ್ದಾರೆ. ಹೋಟೆಲ್‌ಗೆ ಬಂದ ಅನೇಕರಿಗೆ ಸೈನ್ ಲಾಂಗ್ವೇಜ್ (ಸನ್ನೆ ಭಾಷೆ) ಗೊತ್ತಿರುವುದಿಲ್ಲ. ಅದನ್ನು ತಿಳಿಸಲು, ಗೋಡೆ ಮೇಲೆ ನೇತುಬಿದ್ದ ಹಲವು ಫಲಕಗಳು ನೆರವಾಗುತ್ತವೆ. ಇದನ್ನು ನಿಮಗೆ, ಆರಂಭದಲ್ಲಿಯೇ “ಸೈನ್ ಲ್ಯಾಂಗ್ವೇಜ್ ನ್ಪೋಕನ್ ಹಿಯರ್, ಮೈಂಡ್ ಇಟ್’ ಎಂಬ ಫಲಕವೂ ಸೂಚ್ಯವಾಗಿಯೇ ತಿಳಿಸಿರುತ್ತದೆ. “ನಿಮ್ಮೊಳಗಿನ ಪ್ರತಿಧ್ವನಿಯನ್ನು ಕೇಳಿಸಿಕೊಳ್ಳಿ’ ಎನ್ನುವುದು ಈ ರೆಸ್ಟೋರೆಂಟ್‌ನ ಸಂದೇಶ.
ಅನುಕೂಲ ಆಯ್ತು…
Advertisement
ಬೀದರ್‌ನಿಂದ ಬಂದಂಥ, ಶ್ರವಣ- ವಾಕ್‌ದೋಷವಿರುವ ಮೂವರು ಇಲ್ಲಿ ಸರ್ವರ್‌ಗಳಾಗಿದ್ದಾರೆ. ಇವರು ಸಿಟಿಯನ್ನು ನೋಡಿದ್ದು ಕೂಡ ಇದೇ ಮೊದಲು. ಅಂಥವರಿಗೆ ತರಬೇತಿ ಕೊಟ್ಟು, ಇಲ್ಲಿ ಸರ್ವರ್‌ಗಳನ್ನಾಗಿ ಮಾಡಲಾಗಿದೆ. ವಾಕ್- ಶ್ರವಣ ದೋಷವಿರುವ ನಾಲ್ವರನ್ನು ಆರಂಭದಲ್ಲಿ ನೇಮಿಸಲಾಗಿತ್ತು. ಈಗ ಇಂಥವರ ಸಂಖ್ಯೆ ಹದಿಮೂರು. ಎಲ್ಲರೂ 12 ಸಾವಿರ ರೂ.ಗಿಂತ ಮೇಲ್ಪಟ್ಟು ಸಂಭಾವನೆ ಪಡೆದು, ಸ್ವಂತ ಬದುಕು ಕಟ್ಟಿಕೊಂಡಿದ್ದಾರೆ. “ವಾಕ್- ಶ್ರವಣ ದೋಷ ಇರುವವರು ಬೆಂಗಳೂರಿನಲ್ಲಿನ ಖಾಸಗಿ ಕಂಪನಿಗಳಲ್ಲಿ ದುಡಿಯುವುದು ಕಷ್ಟದ ಮಾತು. ಅವರಿಗೆ ಪೂರಕ ವಾತಾವರಣವಾಗಲೀ, ಅವರ ಮೌನಭಾಷೆಗೊಂದು ಬೆಲೆಯಾಗಲೀ, ಅಲ್ಲಿ ಸಿಗುವುದು ಕಷ್ಟ. ಇದನ್ನು ಅರಿತೇ, ನಾವು ಅಂಥವರಿಗೆ ನೆರವಾಗಲೆಂದೇ ಇಕೋಸ್ ಆರಂಭಿಸಿದೆವು’ ಎನ್ನುತ್ತಾರೆ ಹೋಟೆಲ್ ಸ್ಥಾಪಕರಲ್ಲಿ ಒಬ್ಬರಾದ ಆಕಾಶ್ ರಾಜು.
ಅಂದಹಾಗೆ, ಈ ಹೋಟೆಲ್‌ನಲ್ಲಿ ಇಂಡಿಯನ್, ಅಮೆರಿಕನ್, ಚೈನೀಸ್, ಟಿಬೆಟಿಯನ್ ಶೈಲಿಯ ಖಾದ್ಯಗಳು ಹೈಲೈಟ್. ಹನಿ ಚಿಲ್ಲಿ ಪೊಟೇಟೊ, ವೆಜ್ ಪಕೋಡ, ತಂದೂರಿ ಮೊಮೊಸ್ ಅನ್ನು ಇಲ್ಲಿ ಸವಿಯುವುದೇ ಒಂದು ಸೊಗಸು.
ನಮ್ಮ ಹೋಟೆಲ್‌ಗೆ ಬಂದಂಥವರು ಹೊಟ್ಟೆ ತುಂಬಾ ತಿಂದು ಹೋಗುವುದಿಲ್ಲ, ಬೇರೆ ಏನೋ ಒಂದು ಮಾನವೀಯ ಸಂದೇಶವನ್ನು ತಮ್ಮೊಂದಿಗೆ ಒಯ್ಯುತ್ತಾರೆ. ಅದೇ ನಮಗೆ ಖುಷಿ.– ಆಕಾಶ್ ರಾಜು, “ಇಕೋಸ್’ ಹೋಟೆಲ್ ಲ್ಲಿದೆ?: #44, ಶ್ರೀಕಂಠ, 4ನೇ ಬಿ ಕ್ರಾಸ್, ಕೋರಮಂಗಲ ಇಂಡಸ್ಟ್ರಿಯಲ್ ಲೇಔಟ್