Advertisement

ಇಪ್ಪತ್ತು ಸಾವಿರ ಶಾಲೆಗಳಲ್ಲಿ ಇಸಿಇ ಶಿಕ್ಷಣ ಆರಂಭ

06:03 PM Mar 13, 2022 | Team Udayavani |

ಕಾರವಾರ: ಮುಂದಿನ ಶೈಕ್ಷಣಿಕ ವರ್ಷದಿಂದ ರಾಜ್ಯದ 20 ಸಾವಿರ ಶಾಲೆಗಳಲ್ಲಿ ಇಸಿಇ (ಅರ್ಲಿ ಚೈಲ್ಡ್‌ ಎಜ್ಯುಕೇಶನ್‌) ಆರಂಭವಾಗಲಿದೆ ಎಂದು ಶಿಕ್ಷಣ ಸಚಿವ ಸಿ. ನಾಗೇಶ್‌ ಹೇಳಿದರು.

Advertisement

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೂರು ವರ್ಷದ ಮಗುವಿನ ಅಭ್ಯಾಸವನ್ನು ಅಂಗನವಾಡಿಯಿಂದ ಆರಂಭ ಮಾಡಬೇಕೆಂದು ಸರ್ಕಾರ ಹೊರಟಿದೆ. ಅದಕ್ಕೆ ಬೇಕಾದ ತರಬೇತಿ ನೀಡಿ ನಿಧಾನವಾಗಿ ಹೊಸ ಶಿಕ್ಷಣ ನೀಡಲಾಗುತ್ತಿದೆ ಎಂದರು.

ದೇಶದ ಮೇಲೆ ದಾಳಿ ಮಾಡಿದವರ ಬಗ್ಗೆ ಇಂದಿನ ಪಠ್ಯಪುಸ್ತಕದಲ್ಲಿ ಹೆಚ್ಚಿನ ಮಾಹಿತಿ ಇದೆ. ಈ ಬಗ್ಗೆ ವಿರೋಧ ವ್ಯಕ್ತವಾಗುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, 2013ರಲ್ಲಿ ತಂದಿರುವ ಪರಿಷ್ಕರಣೆ ಮಾಡಿರುವ ಪಠ್ಯವನ್ನು ಸರಿಪಡಿಸುವ ಪ್ರಯತ್ನ ನಡೆದಿದೆ.ಸರಿಯಾದ ಪಠ್ಯಕ್ರಮ ಹೊಂದಿರುವ ಪುಸ್ತಕ ಮುಂದಿನ ವರ್ಷದಿಂದ ಜಾರಿಗೆ ತರುವ ಪ್ರಯತ್ನ ನಡೆದಿದೆ ಎಂದರು.

ಮುಂದಿನ ಶೈಕ್ಷಣಿಕ ವರ್ಷದಿಂದ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಾಗಲಿದೆ. ಎನ್‌ಇಪಿಯಲ್ಲಿ ಯಾವ ಪಠ್ಯಪುಸ್ತಕದಲ್ಲಿ ಯಾವ ಪಠ್ಯ ಇರಬೇಕು ಎನ್ನುವುದು ನಿಶ್ಚಯವಾಗಿದೆ. ಸ್ವಾಭಿಮಾನ ವಿಷಯ ಬಂದಾಗ ಇತಿಹಾಸದಲ್ಲಿ ಯಾವುದನ್ನು ಹೇಳಬೇಕು, ಯಾವುದನ್ನು ಹೇಳಬಾರದೆನ್ನುವುದು ಎಚ್ಚರಿಕೆಯಿಂದ ಉಲ್ಲೇಖೀಸಲಾಗಿದೆ ಎಂದರು.

15 ಸಾವಿರ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ ಕೋವಿಡ್‌-19 ಕಾರಣದಿಂದ ಉದ್ಭವವಾಗಿರುವ ವಯಸ್ಸಿನ ಮಿತಿಗೆ ಸಂಬಂಧಿಸಿದಂತೆ ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ಬದಲಾವಣೆ ತರಲಾಗಿದೆ. ಜಿಲ್ಲೆಗಳಲ್ಲಿ ಯಾವ ವಿಷಯದ ಶಿಕ್ಷಕರ ಕೊರತೆ ಇದೆ ಎನ್ನುವ ಮಾಹಿತಿ ಸಂಗ್ರಹಿಸಲಾಗಿದೆ. ಇನ್ನೊಂದು ವಾರದಲ್ಲಿ ಅಧಿಸೂಚನೆ ಹೊರಬೀಳುವ ಸಾಧ್ಯತೆ ಇದೆ ಎಂದು ಅವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

Advertisement

ವಿದ್ಯಾರ್ಥಿಗಳಿಗೆ ಸೈಕಲ್‌ ನೀಡುವುದಕ್ಕೆ ಸಂಬಂಧಿಸಿದಂತೆ ಸರ್ಕಾರ ಯಾವುದೇ ನಿರ್ಣಯ ಕೈಗೊಂಡಿಲ್ಲ. ಕಲಿಕಾ ಚೇತರಿಕೆ ಬಗ್ಗೆ ಹೆಚ್ಚು ಗಮನ ನೀಡಲಾಗುತ್ತಿದೆ. ಕೋವಿಡ್‌-19 ಕಾರಣದಿಂದ ಸುಮಾರು ಒಂದೂವರೆ ವರ್ಷ ಶಿಕ್ಷಣಕ್ಕೆ ತೊಂದರೆಯಾಗಿದೆ. ಹಾಗಾಗಿ ಮುಂದಿನ ಶೈಕ್ಷಣಿಕ ವರ್ಷದಲ್ಲಿ 15 ದಿನಕ್ಕೂ ಮುಂಚೆಯೇ ತರಗತಿಗಳನ್ನು ಆರಂಭಿಸುತ್ತಿದ್ದೇವೆ. ಸಮಯ ಹೊಂದಾಣಿಕೆ ಮಾಡಿ ಸುಮಾರು ಆರು ತಿಂಗಳ ಕಾಲ ತರಗತಿ ನಡೆಸಲು ಉದ್ದೇಶಿಸಲಾಗಿದೆ ಎಂದರು.

ಅನುದಾನಿತ ಕಾಲೇಜುಗಳಲ್ಲಿ ಉಪನ್ಯಾಸಕರ ನೇಮಕಾತಿಗೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗೆ, 1700 ಉಪನ್ಯಾಸಕರ ನೇಮಕಾತಿಗೆ ಸಂಬಂಧಿಸಿದಂತೆ ಹಣಕಾಸು ಸಚಿವಾಲಯಕ್ಕೆ ಬೇಡಿಕೆ ಇಟ್ಟಿದ್ದೇವೆ. ಅವರಿಂದ ಒಪ್ಪಿಗೆ ಸಿಕ್ಕ ನಂತರ ನೇಮಕಾತಿ ಪ್ರಕ್ರಿಯೆ ಆರಂಭವಾಗಲಿದೆ ಎಂದರು.

ಪಬ್ಲಿಕ್‌ ಸ್ಕೂಲ್‌ ಪ್ರಯೋಗ ರಾಜ್ಯದಲ್ಲಿ ಯಶಸ್ವಿಯಾಗಿದೆ. ಇನ್ನಷ್ಟು ಶಾಲೆಗಳನ್ನು ತೆರೆಯಬೇಕೆನ್ನುವ ವಿಚಾರ ಸರ್ಕಾರದ ಮುಂದಿದೆ. ಆದರೆ ಇಂಗ್ಲಿಷ್‌ನಲ್ಲಿ ಪಾಠ ಮಾಡುವ ಶಿಕ್ಷಕರು ಎಷ್ಟು ಜನ ಲಭ್ಯವಿದ್ದಾರೆ ಎನ್ನುವ ಆಧಾರದ ಮೇಲೆ ಹೊಸ ಪಬ್ಲಿಕ್‌ ಶಾಲೆಗಳನ್ನು ಆರಂಭಿಸಲಾಗುವುದು. ಸರಿಯಾದ ಶಿಕ್ಷಕರು ಇಲ್ಲದೇ ಪಬ್ಲಿಕ್‌ ಶಾಲೆ ಎಂದು ಬೋರ್ಡ್‌ ಹಾಕಿ ಏನು ಪ್ರಯೋಜನ ಎಂದು ಪ್ರಶ್ನಿಸಿದರು.

ಶಾಲೆಗಳನ್ನು ಎರಡು ರೀತಿಯಲ್ಲಿ ರಿಪೇರಿ ಮಾಡಲು ನಿರ್ಧರಿಸಲಾಗಿದೆ. ಗ್ರಾಪಂ ಮಟ್ಟದಲ್ಲಿ ಒಂದು ಮಾದರಿ ಶಾಲೆ ಆರಂಭಿಸಬೇಕೆನ್ನುವ ವಿಚಾರ ಸರ್ಕಾರದ ಮುಂದಿದೆ. ರಾಜ್ಯದ 13 ಸಾವಿರ ಶಾಲೆಗಳಲ್ಲಿ 1ರಿಂದ 7ನೇ ತರಗತಿಯವರೆಗೆ 25ಕ್ಕಿಂತ ಕಡಿಮೆ ಮಕ್ಕಳಿದ್ದಾರೆ. 3800 ಶಾಲೆಯಲ್ಲಿ ಐದಕ್ಕಿಂತ ಕಡಿಮೆ ಮಕ್ಕಳಿದ್ದಾರೆ. ಕಡಿಮೆ ಮಕ್ಕಳಿರುವ ಶಾಲೆಗಳ ಕೊಠಡಿಗಳನ್ನು ರಿಪೇರಿ ಮಾಡಿ ಹೆಚ್ಚು ಮಕ್ಕಳಿರುವ ಶಾಲೆಗಳಲ್ಲಿ ಹೊಸ ಕೊಠಡಿ ನಿರ್ಮಿಸಲಾಗುವುದು ಎಂದರು.

ಹಿಜಾಬ್‌ ಕುರಿತು ಮಾತನಾಡಿದ ಅವರು, ಹೈಕೋರ್ಟ್‌ ಆದೇಶವನ್ನು ಎಲ್ಲರೂ ಪಾಲಿಸಬೇಕು. ಹಿಜಾಬ್‌ ಅಥವಾ ಮತ್ತೂಂದು ಕಾರಣಕ್ಕೆ ಪರೀಕ್ಷೆಯಿಂದ ದೂರ ಉಳಿದವರಿಗೆ ಮತ್ತೆ ಪರೀಕ್ಷೆ ಬರೆಯಲು ಅವಕಾಶ ನೀಡಲ್ಲ. ಹಿಜಾಬ್‌ಗೂ ಪರೀಕ್ಷೆಗೂ ಯಾವುದೇ ಸಂಬಂಧವಿಲ್ಲ. ಅವರ ಭವಿಷ್ಯಕ್ಕೆ ಅವರೇ ಜವಾಬ್ದಾರರು. ತುಂಬ ಸಂತಸದ ಸಂಗತಿಯೆಂದರೆ 86 ಸಾವಿರ ವಿದ್ಯಾರ್ಥಿಗಳಲ್ಲಿ ಹಿಜಾಬ್‌, ಮತ್ತೂಂದು ಮಗದೊಂದು ಎಂದು ಶಾಲೆಗೆ ಬರದೇ ಇರುವವರು 400ರಿಂದ 500 ಮಕ್ಕಳು ಅಷ್ಟೇ. ಯಾವ ಸಮಾಜದಿಂದ ಹೆಚ್ಚಿನ ವಿದ್ಯಾರ್ಥಿಗಳು ಶಾಲೆಗೆ ಬರುತ್ತಿರಲಿಲ್ಲವೋ ಅವರು ಖುಷಿಯಿಂದ ಶಾಲೆಗೆ ಬರುತ್ತಿದ್ದಾರೆ. ಅವರ್ಯಾರೂ ಹಿಜಾಬ್‌ ವಿವಾದದಲ್ಲಿ ಸಿಲುಕಿಲ್ಲ ಎಂದರು. ಬಿಸಿಯೂಟದ ಸಮಸ್ಯೆ ಎಲ್ಲೂ ಇಲ್ಲ. ಸಮಸ್ಯೆಗಳು ಇರುವ ಬಗ್ಗೆ ಮಾಹಿತಿ ನೀಡಿದರೆ ತಕ್ಷಣ ಕ್ರಮ ಕೈಗೊಳ್ಳಲಾಗುವುದು ಎಂದರು.

ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಮಸ್ಯೆಗಳು ಅನೇಕ ವರ್ಷಗಳಿಂದ ಬಾಕಿ ಇವೆ. ಅವರ ಸಮಸ್ಯೆಗಳನ್ನು ಒಂದೊಂದಾಗಿ ಬಗೆಹರಿಸುವ ಪ್ರಯತ್ನಗಳನ್ನು ಸರ್ಕಾರ ಮಾಡುತ್ತಿದೆ ಎಂದು ಹೇಳಿದರು

Advertisement

Udayavani is now on Telegram. Click here to join our channel and stay updated with the latest news.

Next