ಹೊಸದಿಲ್ಲಿ : ಚುನಾವಣಾ ಆಯೋಗವು ಕೇಂದ್ರ ಸರಕಾರಕ್ಕೆ ಫೆ.1ರಂದೇ ಬಜೆಟ್ ಮಂಡಿಸುವುದಕ್ಕೆ ಒಪ್ಪಿಗೆ ನೀಡುವ ಸಾಧ್ಯತೆ ಇದೆ; ಆದರೆ ಕೆಲವೊಂದು ನಿರ್ಬಂಧಗಳೊಂದಿಗೆ.
ವಿಧಾನಸಭಾ ಚುನಾವಣೆಯನ್ನು ಕಾಣುವ ಐದು ರಾಜ್ಯಗಳಿಗೆ ಸಂಬಂಧಿಸಿದಂತೆ ಬಜೆಟ್‌ನಲ್ಲಿ ಯಾವುದೇ ನಿರ್ದಿಷ್ಟ ಯೋಜನೆಗಳನ್ನು ಪ್ರಕಟಿಸಕೂಡದೆಂಬುದು ಚುನಾವಣಾ ಆಯೋಗದ ಮುಖ್ಯ ನಿರ್ಬಂಧವಾಗಲಿದೆ.
ಐದು ರಾಜ್ಯಗಳ ವಿಧಾನಸಭಾ ಚುನಾವಣೆಗಳು ಸನ್ನಿಹಿತವಾಗಿರುವುದರಿಂದ ಕೇಂದ್ರ ಸರಕಾರ ಅದಕ್ಕೆ ಮುನ್ನ ಜನ ಮರುಳು ಬಜೆಟ್ ಮಂಡಿಸಿ ರಾಜಕೀಯ ಲಾಭ ಪಡೆಯುವ ಸಾಧ್ಯತೆ ಇರುವುದರಿಂದ ಚುನಾವಣೆಯ ಬಳಿಕವೇ ಬಜೆಟ್ ಮಂಡಿಸುವಂತೆ ತಾಕೀತು ಮಾಡಬೇಕೆಂದು ಪ್ರತಿಪಕ್ಷಗಳು ಚುನಾವಣಾ ಆಯೋಗವನ್ನು ಈ ಮೊದಲು ಆಗ್ರಹಿಸಿದ್ದವು.
ಫೆ.1ರಂದು ಬಜೆಟ್ ಮಂಡನೆಯಾದ ಮೂರು ದಿನಗಳ ತರುವಾಯ ಪಂಜಾಬ್ ಚುನಾವಣೆಗಳು ಬರುತ್ತವೆ. ಹಾಗಾಗಿ ಬಜೆಟ್ ಮಂಡನೆಗೆ ಯಾವುದೇ ಅಡ್ಡಿ ಇರಕೂಡದು ಎಂದು ವಿತ್ತ ಸಚಿವ ಅರುಣ್ ಜೇತ್ಲಿ ಹೇಳಿದ್ದರು.
‘ಐದು ರಾಜ್ಯಗಳೆಂದರೆ ಇಡಿಯ ದೇಶವಲ್ಲ; ಆದುದರಿಂದ ಕೇವಲ ಮೂರ್ಖರು ಮಾತ್ರವೇ ಬಜೆಟ್ ಮಂಡನೆಯನ್ನು ಮುಂದಕ್ಕೆ ಹಾಕಬೇಕೆಂದು ಹೇಳಿಯಾರು’ ಎಂದು ಜೇತ್ಲಿ ವಿಪಕ್ಷವನ್ನು ಲೇವಡಿ ಮಾಡಿದ್ದರು.
ಸಾಮಾನ್ಯವಾಗಿ ಪೆ.28ರಂದು ಕೇಂದ್ರ ಬಜೆಟ್ ಮಂಡಿಸುವುದು ವಾಡಿಕೆ; ಆದರೆ ಈ ಬಾರಿ ಅದನ್ನು ಫೆ.1ರಂದೇ ಮಂಡಿಸುವೆವು ಎಂದು ಜೇತ್ಲಿ ಈ ಹಿಂದೆ ಹೇಳಿದ್ದರು.