ಹೊಸದಿಲ್ಲಿ : ಮುಂದಿನ ಜುಲೈ ತಿಂಗಳ 17ರಂದು ರಾಷ್ಟ್ರಪತಿ ಚುನಾವಣೆ ನಡೆಯಲಿದ್ದು ಆ ಪ್ರಯುಕ್ತ ಇಂದು ಚುನಾವಣಾ ಆಯೋಗ ಅಧಿಸೂಚನೆಯನ್ನು ಹೊರಡಿಸಿದೆ; ಇದರೊಂದಿಗೆ ನಾಮಪತ್ರ ಸಲ್ಲಿಕೆ ಆರಂಭಗೊಂಡಿದೆ.
ಜೂನ್ 28ರ ವರೆಗೆ ನಾಮಪತ್ರ ಸಲ್ಲಿಕೆ ನಡೆಯಲಿದೆ. ಜು.17ರಂದು ಚುನಾವಣೆ ನಡೆದ ಬಳಿಕ ಜು.20ರಂದು ಫಲಿತಾಂಶ ಘೋಷಿಸಲಾಗುತ್ತದೆ.
ಆಳುವ ಎನ್‌ಡಿಎ ಮತ್ತು ವಿರೋಧ ಪಕ್ಷಗಳು ಪರಸ್ಪರರಿಗೆ ಒಪ್ಪಿಗೆ ಇರುವ ಅಭ್ಯರ್ಥಿಯ ಶೋಧ ಕಾರ್ಯದಲ್ಲಿ ತೊಡಗಿವೆ. ಆದರೆ ಒಮ್ಮತ ಮೂಡದಿದ್ದ ಸಂದರ್ಭದಲ್ಲಿ ಅವು ಪ್ರತ್ಯೇಕ ಮಾರ್ಗದಲ್ಲಿ ಸಾಗುವ ಸಾಧ್ಯತೆ ಇದೆ.
ದೀರ್ಘ ಕಾಲದ ಮೌನದ ಬಳಿಕ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಮೂರು ಸದಸ್ಯರ ಸಮಿತಿಯೊಂದನ್ನು ರಚಿಸಿದ್ದಾರೆ. ಎನ್‌ಡಿಎ ಮೈತ್ರಿ ಕೂಟದ ಸದಸ್ಯರು ಹಾಗೂ ವಿರೋಧ ಪಕ್ಷಗಳೊಂದಿಗೆ ಮಾತುಕತೆ ನಡೆಸುವ ಈ ಸಮಿತಿಯಲ್ಲಿ ರಾಜನಾಥ್ ಸಿಂಗ್, ಅರುಣ್ ಜೇತ್ಲಿ ಮತ್ತು ಎಂ ವೆಂಕಯ್ಯ ನಾಯ್ಡು ಇದ್ದಾರೆ.
ಒಮ್ಮತದ ರಾಷ್ಟ್ರಪತಿ ಅಭ್ಯರ್ಥಿಯನ್ನು ಕಂಡುಕೊಳ್ಳುವ ಸಲುವಾಗಿ ವಿರೋಧ ಪಕ್ಷಗಳು ಇಂದು ಬುಧವಾರ ಮಧ್ಯಾಹ್ನ ನಿರ್ಣಾಯಕ ಸಭೆ ನಡೆಸಲಿವೆ. ಇದಕ್ಕೆ ಮುನ್ನ ವಿಪಕ್ಷಗಳ 10 ಸದಸ್ಯರ ಉಪ ಸಮೂಹವು, ರೂಪಣೆಗೊಂಡ ಬಳಿಕ ಇದೇ ಮೊದಲ ಬಾರಿಗೆ ಇಂದು ಸಭೆ ನಡೆಸಲಿದೆ.