ಚಾಮರಾಜನಗರ: ನಗರದ ದೀನಬಂಧು ಟ್ರಸ್ಟ್ ಮತ್ತು ರಾಮಸಮುದ್ರ ಗ್ರಾಮಸ್ಥರ ಸಹಯೋಗದೊಂದಿಗೆ ಗಿಡಗಳನ್ನು ನೆಡುವ ಯೋಜನೆಗೆ ರಾಮಸಮುದ್ರದಲ್ಲಿ ಚಾಲನೆ ನೀಡಲಾಯಿತು. ಪ್ರಥಮ ಹಂತವಾಗಿ ರಾಮಸಮುದ್ರದ ಸಾರ್ವಜನಿಕರ ಸಹಯೋಗದೊಂದಿಗೆ ಬಾಗೆಮರ ಹಾಗೂ ತಿಬ್ಬಳ್ಳಿ ಕಟ್ಟೆಯಲ್ಲಿ ಗಿಡಗಳನ್ನು ನೆಡಲಾಯಿತು.
ರಸ್ತೆ ಅಗಲೀಕರಣಕ್ಕಾಗಿ ಡಾ.ಅಂಬೇಡ್ಕರ್ ಪ್ರತಿಮೆ ಬಳಿ, ರಾಮಸಮುದ್ರದ ಹೆಗ್ಗುರಾತಾಗಿದ್ದ ಬಾಗೆ ಮರವನ್ನು ಕಡಿದು ಹಾಕಲಾಗಿತ್ತು. ಹಾಗಾಗಿ ಅದೇ ಸ್ಥಳದಲ್ಲಿ ಬಾಗೆ ಗಿಡವನ್ನೇಡುವ ಮೂಲಕ ಯೋಜನೆಗೆ ಚಾಲನೆ ನೀಡಲಾಯಿತು.
ದೀನಬಂಧು ಸಂಸ್ಥೆಯ ಸಂಸ್ಥಾಪಕ ಪ್ರೊ.ಜಿ.ಎಸ್.ಜಯದೇವ, ರಾಮಸಮುದ್ರದ ದೊಡ್ಡ ಬೀದಿಯ ಯಜಮಾನರಾದ ಚನ್ನಂಜಯ್ಯ, ನಂಜಯ್ಯ, ಶಿವನಂಜಯ್ಯ, ನಗರಸಭಾ ಸದಸ್ಯ ಪ್ರಕಾಶ್ ಬಾಗೆ ಗಿಡ ನೆಟ್ಟು ನೀರೆರೆದರು.
ಮೊದಲ ಹಂತವಾಗಿ ರಾಮಸಮುದ್ರದ ಸಾರ್ವಜನಿಕರ ಸಹಯೋಗದಲ್ಲಿ ಗಿಡಗಳನ್ನು ನೆಡಲಾಗುತ್ತಿದೆ. ಮುಂದಿನ ಹಂತದಲ್ಲಿ ಸಮೀಪದ ಬಡಾವಣೆಯ ಮನೆಗಳ ಮುಂದೆ ವಿವಿಧ ಜಾತಿಯ ಸಸ್ಯಗಳನ್ನು ನೆಡಲಾಗುವುದು.
ಸಾರ್ವಜನಿಕರೇ ಗಿಡಗಳನ್ನು ಬೆಳೆಸುವ ಜವಾಬ್ದಾರಿ ವಹಿಸಿಕೊಂಡು ಪೋಷಿಸಬೇಕು. ಗಿಡಗಳನ್ನು ಬೆಳೆಸಲು ಸಾರ್ವಜನಿಕರ ಸಹಭಾಗಿತ್ವ ಅಗತ್ಯ ಎಂದು ದೀನಬಂಧು ಸಂಸ್ಥೆಯ ಸಂಸ್ಥಾಪಕ ಜಿ.ಎಸ್. ಜಯದೇವ ತಿಳಿಸಿದರು.
ಬಳಿಕ ತಿಬ್ಬಳ್ಳಿ ಕಟ್ಟೆಯ ಬಳಿ ಅರಳಿ ಗಿಡವನ್ನು ನೆಡಲಾಯಿತು. ಶನಿ ಧಾರಾವಾಹಿಯ ಪ್ರಮುಖ ಪಾತ್ರಧಾರಿ, ದೀನಬಂಧು ಶಾಲೆ ವಿದ್ಯಾರ್ಥಿ ಸುನೀಲ್ ಗಿಡ ನೆಟ್ಟರು. ಟಿಆರ್‌ಸಿ ಸಂಯೋಜಕ ಸುನೀಲ್, ಮುಖ್ಯ ಶಿಕ್ಷಕ ಪ್ರಕಾಶ್, ದೈಹಿಕ ಶಿಕ್ಷಕ ಗುರುಸಿದ್ದಯ್ಯ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.