Advertisement

ಪಶ್ಚಿಮಘಟ್ಟ ಭಾಗದ ಶಾಸಕರ ಜತೆ ಇಂದು ಸಭೆ

09:31 AM Mar 22, 2017 | |

ವಿಧಾನಸಭೆ: ಪಶ್ಚಿಮ ಘಟ್ಟವನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಘೋಷಿಸುವ ಕಸ್ತೂರಿರಂಗನ್‌ ವರದಿಗೆ ಕೇರಳ ಮಾದರಿಯಲ್ಲಿ ಆಕ್ಷೇಪಣೆ ಸಲ್ಲಿಸುವ ಕುರಿತು ತೀರ್ಮಾನ ಕೈಗೊಳ್ಳಲು ಬುಧವಾರ ಪಶ್ಚಿಮ ಘಟ್ಟ ಭಾಗದ ಶಾಸಕರೊಂದಿಗೆ ಸಚಿವ ಸಂಪುಟ ಉಪ ಸಮಿತಿ ಸಭೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ಸರ್ಕಾರ ಹೇಳಿದೆ. 

Advertisement

ಕಸ್ತೂರಿರಂಗನ್‌ ವರದಿ ಕುರಿತಂತೆ ನಿಯಮ 69ರಡಿ ಬಿಜೆಪಿ ಮತ್ತು ಜೆಡಿಎಸ್‌ ಸದಸ್ಯರು ಮಂಡಿಸಿದ್ದ ಪ್ರಸ್ತಾಪಕ್ಕೆ ಸರ್ಕಾರದ ಪರವಾಗಿ ಉತ್ತರಿಸಿದ ಕಾನೂನು ಸಚಿವ ಟಿ.ಬಿ.ಜಯಚಂದ್ರ, ಬುಧವಾರ ಸಚಿವ ಸಂಪುಟ ಉಪಸಮಿತಿ ಸದಸ್ಯರು ಹಾಗೂ ಪಶ್ಚಿಮಘಟ್ಟ ಭಾಗದ ಶಾಸಕರ ಸಭೆ ಕರೆಯಲಾಗುವುದು. ಸಭೆಗೆ ಅಧಿಕಾರಿಗಳನ್ನೂ ಆಹ್ವಾನಿಸಲಾಗುವುದು. ಈ ಸಭೆಯಲ್ಲಿ ಯಾವ
ರೀತಿ ಆಕ್ಷೇಪಣೆ ಸಲ್ಲಿಸಬೇಕೆಂಬ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದರು. ಅಲ್ಲದೆ, ಕಸ್ತೂರಿ ರಂಗನ್‌ ವರದಿ ಕುರಿತಂತೆ
ಕೇಂದ್ರ ಸರ್ಕಾರ ಹೊರಡಿಸಿರುವ ಕರಡು ಅಧಿಸೂಚನೆಗೆ ನಿಗದಿತ ಅವಧಿಯೊಳಗೆ (ಏ. 27) ಆಕ್ಷೇಪಣೆ ಸಲ್ಲಿಸಲು ಸಾಧ್ಯವಾಗದಿದ್ದಲ್ಲಿ,
ಅನಿವಾರ್ಯವಾದರೆ ಕೇಂದ್ರಕ್ಕೆ ಸರ್ವಪಕ್ಷ ನಿಯೋಗ ಕರೆದೊಯ್ದು ಕಾಲಾವಕಾಶ ವಿಸ್ತರಿಸುವಂತೆ ಮನವಿ ಮಾಡಿಕೊಳ್ಳಲು ಸರ್ಕಾರ
ಸಿದ್ಧವಿದೆ ಎಂದು ಹೇಳಿದರು.

ಕೇರಳ ಮಾದರಿ ಅನುಸರಿಸಿಲ್ಲ ಏಕೆ?: ಕಸ್ತೂರಿ ರಂಗನ್‌ ವರದಿ ಜಾರಿ ಕುರಿತ ಕೇಂದ್ರದ ಕರಡು ಅಧಿಸೂಚನೆಗೆ ಆಕ್ಷೇಪಣೆ ಸಲ್ಲಿಸುವಲ್ಲಿ ಸರ್ಕಾರ ಎಡವಿದೆ ಎಂದು ಆರೋಪಿಸಿದ ಬಿಜೆಪಿ ಸದಸ್ಯ ರಾದ ಕೆ.ಜಿ.ಬೋಪಯ್ಯ, ಡಿ.ಎನ್‌.ಜೀವರಾಜ್‌, ಅಪ್ಪಚ್ಚು ರಂಜನ್‌, ಸುನೀಲ್‌ಕುಮಾರ್‌, ಎಸ್‌. ಅಂಗಾರ, ವಿಶ್ವೇಶ್ವರ ಹೆಗಡೆ ಕಾಗೇರಿ, ಜೆಡಿಎಸ್‌ನ ಬಿ.ಬಿ.ನಿಂಗಯ್ಯ ಮತ್ತು ಎಚ್‌.ಕೆ.ಕುಮಾರಸ್ವಾಮಿ, ಕೇರಳ ಮಾದರಿಯಲ್ಲಿ ಆಕ್ಷೇಪಣೆ ಸಲ್ಲಿಸುವಂತೆ ಕೇಂದ್ರ ಸರ್ಕಾರ ಸೂಚಿಸಿದರೂ ಅದನ್ನು ಏಕೆ ಪಾಲಿಸಿಲ್ಲ ಎಂದು ಪ್ರಶ್ನಿಸಿದರು.

ಕೇರಳ ಸರ್ಕಾರ ಆಕ್ಷೇಪಣೆ ಸಲ್ಲಿಸುವ ಮೊದಲು ಗ್ರಾಮಸಭೆಗಳನ್ನು ನಡೆಸಿ ಅಲ್ಲಿನ ಅಭಿಪ್ರಾಯ ಸಂಗ್ರಹಿಸಿತ್ತು. ಅಲ್ಲಿನ ಸಂಸದರು,
ಶಾಸಕರು, ತಜ್ಞರು ಮತ್ತು ಕಸ್ತೂರಿರಂಗನ್‌ ವರದಿ ಪರವಾಗಿರುವ ಪರಿಸರವಾದಿಗಳಿಂದಲೂ ಮಾಹಿತಿ ಪಡೆದಿತ್ತು. ಜತೆಗೆ ಸ್ಥಳೀಯವಾಗಿ ಸರ್ವೇ ನಡೆಸಿ ನೈಸರ್ಗಿಕ ಅರಣ್ಯ ಮತ್ತು ಸಾಂಸ್ಕೃತಿಕ ಅರಣ್ಯ ಎಂಬುದಾಗಿ ವಿಂಗಡಿಸಿ ವರದಿ ಸಿದ್ಧಪಡಿಸಿತ್ತು.
ಈ ವರದಿಯನ್ನು ಆಕ್ಷೇಪಣೆಯೊಂದಿಗೆ ಸೇರಿಸಿ ಕಸ್ತೂರಿರಂಗನ್‌ ವರದಿಯಿಂದ ತಮ್ಮ ರಾಜ್ಯವನ್ನು ಏಕೆ ಹೊರಗಿಡಬೇಕು ಎಂಬುದನ್ನು ಸಮರ್ಥವಾಗಿ ವಿವರಿಸಿತ್ತು ಎಂದು ಹೇಳಿದರು.

ಈ ಆಕ್ಷೇಪಣೆಯನ್ನು ಅಂಗೀಕರಿಸಿದ್ದ ಕೇಂದ್ರ ಸರ್ಕಾರ ಕಸ್ತೂರಿರಂಗನ್‌ ವರದಿಯಿಂದ ಕೇರಳವನ್ನು ಕೈಬಿಟ್ಟಿತ್ತು. ಅಲ್ಲದೆ, ಇದೇ ಮಾದರಿಯಲ್ಲಿ ಆಕ್ಷೇಪಣೆ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೂ ಸೂಚಿಸಿತ್ತು. ಇನ್ನೊಂದೆಡೆ ಪಶ್ಚಿಮ ಘಟ್ಟ ಭಾಗದ ಶಾಸಕರೂ
ಗ್ರಾಮ ಸಭೆಗಳನ್ನು ನಡೆಸಿ ಮತ್ತು ಸ್ಥಳೀಯವಾಗಿ ಸರ್ವೇ ಮಾಡಿ ಪರಿಸರ ಸೂಕ್ಮ ಪ್ರದೇಶ ಗುರುತಿಸಿ ಆಕ್ಷೇಪಣೆ ಸಲ್ಲಿಸಬೇಕು ಎಂದು ಒತ್ತಾಯಿಸಿದ್ದರು. ಆದರೂ ರಾಜ್ಯ ಸರ್ಕಾರ ಅದನ್ನು ಪರಿಗಣಿಸದೆ ಉಪಗ್ರಹ ಸರ್ವೇ ಆಧರಿಸಿ ಮತ್ತು ಮಂತ್ರಿಗಳ ವರದಿಯನ್ವಯ ಆಕ್ಷೇಪಣೆ ಸಲ್ಲಿಸಿದ್ದೇ ರಾಜ್ಯದ ಆಕ್ಷೇಪಣೆಯನ್ನು ಕೇಂದ್ರ ಸರ್ಕಾರ ಪರಿಗಣಿಸಲಿಲ್ಲ ಎಂದು ಆರೋಪಿಸಿದರು.

Advertisement

ಕೇರಳ ಸರ್ಕಾರ ಆಕ್ಷೇಪಣೆ ಸಲ್ಲಿಸಿದ ಬಳಿಕ ಅಲ್ಲಿನ ಮುಖ್ಯಮಂತ್ರಿಗಳು ಹಲವು ಬಾರಿ ಪ್ರಧಾನಿ ಮತ್ತು ಪರಿಸರ ಖಾತೆ ಸಚಿವರನ್ನು ಭೇಟಿಯಾಗಿ ಕೇರಳವನ್ನು ಕಸ್ತೂರಿರಂಗನ್‌ ವರದಿಯಿಂದ ಕೈಬಿಡು ವಂತೆ ಕೋರಿದ್ದರು. ಆದರೆ, ನಮ್ಮ ಮುಖ್ಯಮಂತ್ರಿ ಗಳು ಪ್ರತಿಯೊಂದಕ್ಕೂ ಕೇಂದ್ರ ಸರ್ಕಾರ ಮತ್ತು ಪ್ರಧಾನಿಯವರನ್ನು ದೂರುತ್ತಾ ಕಾಲ ಕಳೆದರೇ ಹೊರತು ಯಾವತ್ತೂ ರಾಜ್ಯದ ಪರವಾಗಿ ಪ್ರಧಾನಿ ಮತ್ತು ಪರಿಸರ ಖಾತೆ ಸಚಿವರನ್ನು ಭೇಟಿ ಮಾಡುವ ಪ್ರಯತ್ನ ಮಾಡಲಿಲ್ಲ ಎಂದರು. ಒಂದು ವೇಳೆ ಈ ಬಾರಿಯೂ ರಾಜ್ಯ ಸರ್ಕಾರ ಆಕ್ಷೇಪಣೆ ಸಲ್ಲಿಸುವಲ್ಲಿ ಎಡವಿದರೆ ಕಸ್ತೂರಿರಂಗನ್‌ ವರದಿ ಕುರಿತು ಅಂತಿಮ ಅಧಿಸೂಚನೆ ಹೊರಡಿಸಬೇಕಾದ ಅನಿವಾರ್ಯ ಸ್ಥಿತಿಯಲ್ಲಿ ಕೇಂದ್ರ ಸರ್ಕಾರ ಇದೆ. ಒಂದು ವೇಳೆ ಅಂತಿಮ ಅಧಿಸೂಚನೆ ಹೊರಡಿಸಿದರೆ ಕಸ್ತೂರಿರಂಗನ್‌ ವರದಿಯಂತೆ ಪರಿಸರ ಸೂಕ್ಷ್ಮ ಪ್ರದೇಶ ಘೋಷಣೆಯಾಗುವುದರ ಜತೆಗೆ ಅದರ ಸುತ್ತಲಿನ 10 ಕಿ.ಮೀ. ವ್ಯಾಪ್ತಿಯಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಕೈಗೊಳ್ಳುವಂತಿಲ್ಲ. ಪಶ್ಚಿಮ ಘಟ್ಟದ ಅನೇಕ ಹಳ್ಳಿಗಳ ಜತೆಗೆ ಕೆಲವು ಪಟ್ಟಣಗಳೂ ಈ ವ್ಯಾಪ್ತಿಗೆ ಬಂದು ಅಭಿವೃದ್ಧಿ ಕುಂಠಿತವಾಗಲಿದೆ. ಜನರು ತಮ್ಮ ಮನೆ, ಆಸ್ತಿ ಕಳೆದುಕೊಂಡು ಬೀದಿಪಾಲಾಗಲಿದ್ದಾರೆ ಎಂದರು. ಇದಕ್ಕೆ ಕಾಂಗ್ರೆಸ್‌ ಸದಸ್ಯ ಕಿಮ್ಮನೆ ರತ್ನಾಕರ ಕೂಡ ದನಿಗೂಡಿಸಿದರು. ಜತೆಗೆ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಕೂಡ ಈ ವಾದಕ್ಕೆ ಬೆಂಬಲ ವ್ಯಕ್ತಪಡಿಸಿದರು. ಸರ್ಕಾರದ ಪರವಾಗಿ ಉತ್ತರಿಸಿದ ಸಚಿವ ಟಿ.ಬಿ.ಜಯಚಂದ್ರ, ಬುಧವಾರ ಸಚಿವ ಸಂಪುಟ ಉಪಸಮಿತಿ ಮತ್ತು ಪಶ್ಚಿಮಘಟ್ಟ ಭಾಗದ ಶಾಸಕರ ಸಭೆ ಕರೆದು ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಜಾರ್ಜ್‌ ಬಂದ್ಮೇಲೆ ಜಗಳ ಶುರುವಾಯ್ತು
ಕಸ್ತೂರಿರಂಗನ್‌ ವರದಿ ಕುರಿತಂತೆ ಸುಮಾರು ಎರಡು ಗಂಟೆ ಗಂಭೀರ ಚರ್ಚೆ ನಡೆಯಿತು. ಇನ್ನೇನು ಚರ್ಚೆ ಮುಗಿಯುತ್ತಿದೆ ಎನ್ನುವಷ್ಟರಲ್ಲಿ ಸದನ ಪ್ರವೇಶಿಸಿದ ಸಚಿವ ಕೆ.ಜೆ.ಜಾರ್ಜ್‌ ಮತ್ತೆ ಕೇಂದ್ರ ಸರ್ಕಾರದ ಮೇಲೆ ಪ್ರಹಾರ ಮುಂದುವರಿಸಿದ್ದರಿಂದ ಸುಮಾರು ಅರ್ಧ ಗಂಟೆ ಸಚಿವ ಜಾರ್ಜ್‌ ಮತ್ತು ಪ್ರತಿಪಕ್ಷ ಬಿಜೆಪಿ ಸದಸ್ಯರ ಮಧ್ಯೆ ವಾಗ್ವಾದ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next