Advertisement

ಪೂರ್ವ ಮುಂಗಾರು ಚುರುಕು: ಕೃಷಿ ಚಟುವಟಿಕೆ ಜೋರು

12:58 PM May 18, 2018 | |

ಮೈಸೂರು: ವಿಧಾನಸಭೆ ಚುನಾವಣೆ ಪ್ರಚಾರದ ಅಬ್ಬರದ ನಡುವೆ ಪೂರ್ವ ಮುಂಗಾರು ಆರ್ಭಟಿಸಿ ಉತ್ತಮ ಮಳೆ ಬಿದ್ದ ಪರಿಣಾಮ ರೈತರು ತಮ್ಮ ಜಮೀನಿನತ್ತ ಮುಖ ಮಾಡಿ ಕೃಷಿ ಚಟುವಟಿಕೆಯಲ್ಲಿ ನಿರತರಾಗಿದ್ದು, ಜಿಲ್ಲೆಯಲ್ಲಿ ಈವರೆಗೆ 78 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿದೆ.

Advertisement

ಜಿಲ್ಲೆಯ ಏಪ್ರಿಲ್‌, ಮೇ ತಿಂಗಳ ವಾಡಿಕೆ ಮಳೆ 135 ಮಿ.ಮೀ ಎಂದು ಅಂದಾಜಿಸಲಾಗಿದ್ದು, ಶೇ.46ರಷ್ಟು ಹೆಚ್ಚುವರಿಯಾಗಿ 197.3 ಮಿ.ಮೀ ಮಳೆಯಾಗಿದ್ದು, ವಾಡಿಕೆಗಿಂತ 62 ಮಿ.ಮೀ ಹೆಚ್ಚು ಮಳೆ ಬಿದ್ದಿದೆ. ಮೇ 1ರಿಂದ 15ವರೆಗೆ 53.6 ಮಿ.ಮೀ ವಾಡಿಕೆ ಮಳೆ ಬರಬೇಕಿತ್ತು. ಆದರೆ, ಈ ಅವಧಿಯಲ್ಲಿ 91.7 ಮಿ.ಮೀ ಮಳೆಯಾಗಿದೆ.

ಪ್ರಸಕ್ತ ವರ್ಷದ ಮುಂಗಾರು ಹಂಗಾಮಿನಲ್ಲಿ 4.32 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದ್ದು, ಈವರೆಗೆ 78637 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿದ್ದು, ಸತತ ಬರದಿಂದ ಕಂಗೆಟ್ಟಿದ್ದ ಜಿಲ್ಲೆಯ ರೈತರು ಮಂದಹಾಸದಿಂದ ಜಮೀನಿನತ್ತ ಮುಖ ಮಾಡಿರುವುದರಿಂದ ಬಿತ್ತನೆ ಕಾರ್ಯ ಬಿರುಸಿನಿಂದ ನಡೆದಿದೆ.

ಜಿಲ್ಲೆಯ ತಿ.ನರಸೀಪುರ, ನಂಜನಗೂಡು ಹಾಗೂ ಕೆ.ಆರ್‌.ನಗರ ತಾಲೂಕುಗಳಲ್ಲಿ ನೀರಾವರಿ ಅಚ್ಚುಕಟ್ಟು ಪ್ರದೇಶ ಹೆಚ್ಚಿರುವುದರಿಂದ ಇನ್ನಷ್ಟೇ ಕೃಷಿ ಚಟುವಟಿಕೆ ಆರಂಭವಾಗಬೇಕಿದೆ. ಆದರೆ, ಮಳೆ ಆಶ್ರಿತ ಪ್ರದೇಶ ಹೆಚ್ಚಿರುವ ಎಚ್‌.ಡಿ.ಕೋಟೆ, ಹುಣಸೂರು, ಪಿರಿಯಾಪಟ್ಟಣ ಹಾಗೂ ಮೈಸೂರು ತಾಲೂಕುಗಳಲ್ಲಿ ರೈತರು ಹತ್ತಿ, ತಂಬಾಕು, ಮುಸುಕಿನ ಜೋಳದ ಜೊತೆಗೆ ದ್ವಿದಳ ಧಾನ್ಯಗಳಾದ ಉದ್ದು, ಹೆಸರು, ಅಲಸಂದೆ, ಜೋಳ, ರಾಗಿ, ಎಳ್ಳು ಬಿತ್ತನೆ ಮಾಡಿದ್ದಾರೆ. 

ಜಿಲ್ಲೆಯಲ್ಲಿ ಕೇರಳದ ಗಡಿಗೆ ಹೊಂದಿಕೊಂಡಿರುವ ಎಚ್‌.ಡಿ.ಕೋಟೆ ತಾಲೂಕಿಗೆ ಮೊದಲು ಮಳೆಯಾಗುವುದರಿಂದ ಆ ತಾಲೂಕಿನ ರೈತರು ವಾಣಿಜ್ಯ ಬೆಳೆ ಹತ್ತಿಯನ್ನು ಹೆಚ್ಚಾಗಿ ಬಿತ್ತನೆ ಮಾಡಿದ್ದು, ಕೆಲವಡೆ ಈಗಾಗಲೇ ಹತ್ತಿ ಗಿಡಗಳು ಸುಮಾರು ಒಂದು ಅಡಿಯಷ್ಟು ಎತ್ತರಕ್ಕೆ ಬೆಳೆದಿವೆ. ವಾಣಿಜ್ಯ ಬೆಳೆ ವರ್ಜೀನಿಯಾ ತಂಬಾಕು ಬೆಳೆಯುವ ಪಿರಿಯಾಪಟ್ಟಣ, ಹುಣಸೂರು, ಎಚ್‌.ಡಿ.ಕೋಟೆ ತಾಲೂಕುಗಳಲ್ಲಿ ಸಸಿ ನಾಟಿ ಜೋರಾಗಿದೆ.

Advertisement

ಒಟ್ಟಾರೆ ಜಿಲ್ಲೆಯಲ್ಲಿ 11744 ಹೆಕ್ಟೇರ್‌ ಪ್ರದೇಶದಲ್ಲಿ ಮುಸುಕಿನ ಜೋಳ, ಅಲಸಂದೆ(11019 ಹೆ), ಉದ್ದು(3422 ಹೆ), ಹೆಸರು(1550 ಹೆ), ಎಳ್ಳು(1870 ಹೆ), ಜೋಳ(875 ಹೆ), ರಾಗಿ(350 ಹೆ), ನೆಲಗಡಲೆ( 110 ಹೆ), ಸೂರ್ಯಕಾಂತಿ(87 ಹೆ), ಹತ್ತಿ(29125 ಹೆ), ತಂಬಾಕು(15425 ಹೆ) ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ ಕೃಷಿ ಇಲಾಖೆ ಅಧಿಕಾರಿ ಪ್ರಕಾಶ್‌ ಮಾಹಿತಿ ನೀಡಿದ್ದಾರೆ.

ರೈತರಿಗೆ ಸಲಹೆ: ಅಲಸಂದೆ-ಟಿ.ವಿ ಎಕ್ಸ್‌-994,ಕೆಬಿಸಿ-1 ಉದು ª-ಕರಗಾಂವ್‌-3, ಟಿ9, ರಶ್ಮಿ(ಎಲ್‌ಬಿಜೆ -625), ಹೆಸರು-ಪಿ.ಎಸ್‌-16,ಪಿ.ಡಿ.ಎಮ್‌-84-178 ತಳಿಗಳನ್ನು ಮೇ ತಿಂಗಳಲ್ಲಿ ಬಿತ್ತನೆ ಮಾಡಬಹುದಾಗಿದೆ ಎಂದು ಕೃಷಿ ಅಧಿಕಾರಿಗಳು ಸಲಹೆ ನೀಡಿದ್ದಾರೆ. ಮಳೆ ಬಂದಿರುವ ಕಡೆ ರೈತರು ಇಳಿಜಾರಿಗೆ ಅಡ್ಡಲಾಗಿ ಮಾಗಿ ಉಳುಮೆ ಮಾಡಬೇಕು, ಇದರಿಂದ ನೀರು ಇಂಗುವಿಕೆ ಹೆಚ್ಚಾಗುತ್ತದೆ ಮತ್ತು ಮಣ್ಣಿನ ಸವಕಳಿ ಕಡಿಮೆಯಾಗುತ್ತದೆ. ರೈತರು ಪ್ರಮಾಣೀಕರಿಸಿದ ಬಿತ್ತನೆ ಬೀಜಗಳನ್ನು ಅಧಿಕೃತ ಮಾರಾಟಗಾರರಿಂದಲೇ ಖರೀದಿಸಬೇಕು.

ದ್ವಿದಳ ಧಾನ್ಯ: ಮಳೆ ಬಂದಿರುವ ಕಡೆ ರೈತರು ಸೆಣಬು ಅಥವಾ ಡಯಾಂಚ ಮತ್ತು ದ್ವಿದಳ ಧಾನ್ಯಗಳಾದ ಅಲಸಂದೆ, ಹೆಸರು, ಅವರೆ, ಹುರುಳಿ, ಉದು ಇತ್ಯಾದಿ ಬೆಳೆಗಳನ್ನು ಸೂಕ್ತ ಪ್ರದೇಶಗಳಲ್ಲಿ ಬಿತ್ತನೆ ಮಾಡುವುದು. ದ್ವಿದಳ ಧಾನ್ಯಗಳನ್ನು ಬಿತ್ತನೆ ಮಾಡುವಾಗ ರೈತರು ಬೀಜಗಳನ್ನು ಪ್ರತಿ ಕೆ.ಜಿಗೆ 20 ಗ್ರಾಂ ರೈಜೋಬಿಯಂ ಸೂಕ್ಷ್ಮಾಣು ಜೀವಿಗಳಿಂದ ಉಪಚರಿಸಬೇಕು. ಬಿತ್ತನೆ ಮಾಡುವಾಗ ಏಕದಳ ಧಾನ್ಯದ ಬೀಜಗಳಿಗೆ ಅಝೊಸ್ಟಿರಿಲಮ್‌ + ಪಿಎಸ್‌ಬಿ ಹಾಗೂ ದ್ವಿದಳ ಧಾನ್ಯದ ಬೀಜಗಳಿಗೆ ರೈಝೊàಬಿಯಮ್‌ + ಪಿಎಸ್‌ಬಿಯಿಂದ ಉಪಚಾರ ಮಾಡಿ ಬಿತ್ತಬೇಕು. 

ಮಣ್ಣು ಪರೀಕ್ಷೆ: ರೈತರು ಮಣ್ಣಿನ ಪರೀಕ್ಷೆಯ ಆಧಾರದ ಮೇಲೆ ರಾಸಾಯನಿಕ ಗೊಬ್ಬರ ಮತ್ತು ಕಾಂಪೋಸ್ಟ್‌ ಗೊಬ್ಬರದ ಪ್ರಮಾಣವನ್ನು ನಿರ್ಧರಿಸಿ, ಉಪಯೋಗಿಸಬೇಕು. ಮುಂಗಾರು ಮಳೆ ಪ್ರಾರಂಭವಾಗುವ ಮುನ್ನ ಎಲ್ಲ ಜಾನುವಾರುಗಳಿಗೆ ಜಂತು ನಾಶಕ ಔಷ‌ಧಿ ಹಾಗೂ ಕಾಲು ಮತ್ತು ಬಾಯಿ ಬೇನೆ , ಚೆಪ್ಪೆ$ ಬೇನೆಗೆ ಮುನ್ನೆಚ್ಚರಿಕೆ ಕ್ರಮವಾಗಿ ಸೂಕ್ತ ಚುಚ್ಚುಮದ್ದನ್ನು ಹಾಕಿಸಬೇಕು. ಆಡು ಮತ್ತು ಕುರಿಗಳಿಗೆ ಎಂಟರೊಟಾಕ್ಸೀಮಿಯಾ ರೋಗ ನಿರೋಧಕ ಹಾಕಿಸಬೇಕು ಎಂದು ನಾಗನಹಳ್ಳಿ ಸಾವಯವ ಕೃಷಿ ವಿಜಾnನ ಕೇಂದ್ರದ ಹಿರಿಯ ಕ್ಷೇತ್ರ ಅಧೀಕ್ಷಕ ಪ್ರಕಾಶ್‌ ಸಲಹೆ ನೀಡಿದ್ದಾರೆ.

ತಾಲೂಕುವಾರು ಬಿದ್ದ ಮಳೆ(ಮಿ.ಮೀ ಗಳಲ್ಲಿ)
ತಾಲೂಕು    ವಾಡಿಕೆ    ಬಿದ್ದ ಮಳೆ

-ಎಚ್‌.ಡಿ.ಕೋಟೆ    153.7    242.1
-ಹುಣಸೂರು        137.8    160.6
-ಕೆ.ಆರ್‌.ನಗರ    130.8    170.8
-ಮೈಸೂರು    132.8    140.76
-ನಂಜನಗೂಡು    130.5    271.1
-ಪಿರಿಯಾಪಟ್ಟಣ    117.9    230.6
-ತಿ.ನರಸೀಪುರ    120.4    148.8

ತಾಲೂಕುವಾರು ಬಿತ್ತನೆ (ಹೆಕ್ಟೇರ್‌ಗಳಲ್ಲಿ)
ತಾಲೂಕು    ಹೆಕ್ಟೇರ್‌ ಪ್ರದೇಶ

-ಎಚ್‌.ಡಿ.ಕೋಟೆ    30729
-ಕೆ.ಆರ್‌.ನಗರ    8923
-ಮೈಸೂರು    12463
-ನಂಜನಗೂಡು    9917
-ಪಿರಿಯಾಪಟ್ಟಣ    12505
-ತಿ.ನರಸೀಪುರ    2100
-ಹುಣಸೂರು        2000

ಜಿಲ್ಲೆಯಲ್ಲಿ ಪೂರ್ವ ಮುಂಗಾರು ವಾಡಿಕೆಗಿಂತ ಹೆಚ್ಚಿನ ಮಳೆ ಸುರಿಸಿದ್ದು, ಮಳೆ ಆಶ್ರಿತ ಖುಷ್ಕಿ ಪ್ರದೇಶದ ರೈತರು ಕೃಷಿ ಚಟುವಟಿಕೆಯಲ್ಲಿ ನಿರತರಾಗಿದ್ದಾರೆ. ಅಗತ್ಯ ಬಿತ್ತನೆ ಬೀಜ, ರಸಗೊಬ್ಬರ ದಾಸ್ತಾನಿದ್ದು, ವಿತರಣೆ ಮಾಡಲಾಗುವುದು. 
-ಸೋಮಸುಂದ್ರು, ಜಂಟಿ ಕೃಷಿ ನಿರ್ದೇಶಕ

* ಗಿರೀಶ್‌ ಹುಣಸೂರು

Advertisement

Udayavani is now on Telegram. Click here to join our channel and stay updated with the latest news.

Next