Advertisement

Vijayapura: 53 ನಿಮಿಷಗಳ ಅಂತರದಲ್ಲಿ ಮತ್ತೆ ಎರಡು ಬಾರಿ ಲಘು ಭೂಕಂಪನ

09:17 AM Jan 29, 2024 | Team Udayavani |

ವಿಜಯಪುರ: ವಿಜಯಪುರ ನಗರದ ಸುತ್ತಲೂ ಐದು ದಿನಗಳ ಅಂತರದಲ್ಲಿ ಭಾನುವಾರ ತಡರಾತ್ರಿ ಮತ್ತೆ ಎರಡು ಬಾರಿ ಲಘು ಭೂಕಂಪನ‌ಗಳು ಸಂಭವಿಸಿವೆ.

Advertisement

ಜಿಲ್ಲೆಯ ಮನಗೂಳಿ ಪರಿಸರದಲ್ಲಿ ಕೇಂದ್ರಿತವಾಗಿದ್ದ ಎರಡೂ ಭೂಕಂಪನಗಳು 2.6 ತೀವ್ರತೆ ಹೊಂದಿದ್ದವು. ಎರಡು ಬಾರಿ ಭೂಕಂಪನಗಳು ಸಂಭವಿಸಿದರೂ ಯಾವುದೇ ಅಪಾಯ ಸಂಭವಿಸಿಲ್ಲ.

53 ನಿಮಿಷಗಳ ಅಂತರದಲ್ಲಿ ಎರಡು ಬಾರಿ ಭೂಮಿ ಕಂಪಿಸಿದೆ. ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಮನಗೂಳಿ, ಯರನಾಳ ಗ್ರಾ.ಪಂ. ಪರಿಸರದ ಹತ್ತರಕಿಹಾಳ, ನಂದಿಹಾಳ, ವಿಜಯಪುರ ನಗರದ ವಿವಿಧ ಬಡಾವಣೆಗಳ ವ್ಯಾಪ್ತಿಯಲ್ಲಿ ಸರಣಿ ಭೂಕಂಪನಗಳು ಸಂಭವಿಸಿರುವುದು ದೃಢಪಟ್ಟಿದೆ.

ವಿಜಯಪುರ ನಗರದ ಜಲನಗರ, ಇಬ್ರಾಹಿಂಪುರ, ಗಣೇಶನಗರ, ಕೀರ್ತಿನಗರ, ಬಸವನಗರ, ವಜ್ರಹನುಮಾನ ಪ್ರದೇಶ ಹೀಗೆ ವಿವಿಧ ಪ್ರದೇಶಗಳಲ್ಲಿ ಭೂಕಂಪನದ ಅನುಭವವಾಗಿದೆ.

ಮೊದಲ ಭೂಕಂಪ ಭಾನುವಾರ ಮಧ್ಯರಾತ್ರಿ 12 ಗಂಟೆ 22ನಿಮಿಷ 52 ಸೆಕೆಂಡಿಗೆ ಸಂಭವಿಸಿದ್ದು, ಭೂಮಿಯ 5 ಕಿ.ಮೀ. ಆಳದಲ್ಲಿ ಕೇಂದ್ರೀಕೃತವಾಗಿತ್ತು.

Advertisement

ಇದಾದ 53 ನಿಮಿಷಕ್ಕೆ ಅಂದರೆ ಮಧ್ಯರಾತ್ರಿ 1 ಗಂಟೆ 15 ನಿಮಿಷ 14 ಸೆಕೆಂಡಿಗೆ ಸಂಭವಿಸಿದ ಎರಡನೇ ಭೂಕಂಪ ಭೂಮಿಯ 7 ಕಿ.ಮೀ. ಆಳದಲ್ಲಿ ಕೇಂದ್ರೀತ ವಾಗಿತ್ತು. ಎರಡೂ ಭೂಕಂಪನಗಳು 2.6 ತೀವ್ರತೆ ಹೊಂದಿದ್ದವು.

ಗಾಢ ನಿದ್ದೆಯಲ್ಲಿದ್ದ‌ ಜನರಿಗೆ ಭೂಮಿ ನಡುಗುವ ಅನುಭವ ಆಗುತ್ತಲೇ ಮನೆಗಳ ಗೋಡೆಗಳಿಗೆ ಹಾಕಿದ್ದ ಪಾತ್ರೆಗಳು ಸೇರಿದಂತೆ ಇತರೆ ವಸ್ತುಗಳು ಅಲುಗಾಡಿ ಸದ್ದು ಮಾಡಿವೆ.

ಜನರು ಗಾಢ ನಿದ್ರೆಯಲ್ಲಿದ್ದರೂ ಎಚ್ಚರಗೊಂಡ ಹಲವರು ತಮ್ಮ ಮನೆಯವರನ್ನು ಎಬ್ಬಿಸಿಕೊಂಡು ಹೊರಗೆ ಓಡಿ ಬಂದಿದ್ದಾರೆ.

ಜಿಲ್ಲೆಯಲ್ಲಿ ಗುರುವಾರವಷ್ಟೇ ಲಘು ಭೂಕಂಪನ ಸಂಭವಿಸಿದ್ದು, ಇದೀಗ ಐದು ದಿನಗಳ ಅಂತರದಲ್ಲಿ ಮತ್ತೊಮ್ಮೆ ಸರಣಿ ಭೂಕಂಪ ಸಂಭವಿಸಿರುವುದು ಜನರಲ್ಲಿ ಆತಂಕ ಮೂಡುವಂತೆ ಮಾಡಿದೆ.

ವಿಜಯಪುರ ಜಿಲ್ಲೆಯಲ್ಲಿ ಭೂಕಂಪನ ಆಗಿರುವುದನ್ನು ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರ ದೃಢೀಕರಿಸಿದೆ ಎಂದು ಜಿಲ್ಲಾಡಳಿತ ಸ್ಪಷ್ಟಪಡಿಸಿದೆ.

ಲಘು ಭೂಕಂಪನ ಅಪಾಯ ರಹಿತವಾಗಿದ್ದು, ಜನರು ಆತಂಕ ಪಡುವ ಅಗತ್ಯವಿಲ್ಲ ಎಂದು ರಾಜ್ಯದ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರ ಮನವಿ ಮಾಡಿದೆ.

ಇದನ್ನೂ ಓದಿ: ಕಾಲುವೆಯಲ್ಲಿ ಪತ್ತೆಯಾಯ್ತು ದೆಹಲಿಯ ಉನ್ನತ ಪೊಲೀಸ್ ಅಧಿಕಾರಿಯ ಮಗನ ಶವ, ಪ್ರಮುಖ ಆರೋಪಿ ಬಂಧನ

Advertisement

Udayavani is now on Telegram. Click here to join our channel and stay updated with the latest news.

Next