ಸಂತೆಮರಹಳ್ಳಿ: ಈ ಭೂಮಿ ಮೇಲಿನ ಅತ್ಯಂತ ಬುದ್ಧಿವಂತ ಸಾಮಾಜಿಕ ಪ್ರಾಣಿ ಮನುಷ್ಯನಾಗಿದ್ದಾನೆ. ಈತ ಇಡೀ ಭೂ ಮಂಡಲವೇ ನನ್ನದು ಎನ್ನುವಂತೆ ನಿರಂತರವಾಗಿ ಗಿಡ ಮರಗಳು, ಪ್ರಾಣಿ, ಪಕ್ಷಿಗಳ ಮೇಲೆ ತನ್ನ ಪಾಶವೀ ಕೃತ್ಯಗಳನ್ನು ಎಸೆಗುತ್ತಾ ಬಂದಿದ್ದಾನೆ ಭೂಮಿ ಮೇಲೆ ಇರುವ ಸ್ವತ್ತಲ್ಲಾ ನನ್ನದು ಎನ್ನುವಂತೆ ದೌರ್ಜನ್ಯ ನಡೆಸುತ್ತಿದ್ದಾನೆ ಎಂದು ಸಿವಿಲ್ ನ್ಯಾಯಾಧೀಶ ಎನ್. ಶರತ್‌ಚಂದ್ರ ವಿಷಾದ ವ್ಯಕ್ತಪಡಿಸಿದರು.
ಯಳಂದೂರು ಪಟ್ಟಣದ ನ್ಯಾಯಾಲಯದ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವಿಶ್ವ ಭೂ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಪ್ರಕೃತಿ ಇಲ್ಲಿ ವಾಸಿಸುವ ಪ್ರತಿ ಗಿಡಮರ, ಸಣ್ಣಕೀಟ, ಕ್ರಿಮಿಗಳಿಂದ ಹಿಡಿದು ದೊಡ್ಡ ಪ್ರಾಣಿಗಳ ನಿಜವಾದ ಸ್ವತ್ತಾಗಿದೆ. ಮನುಷ್ಯ ಬುದ್ಧಿವಂತ ಪ್ರಾಣಿಯಾಗಿದ್ದು ನಿರಂತರವಾಗಿ ಪ್ರಕೃತಿ ಮೇಲೆ ದಿನನಿತ್ಯ ಒಂದಲ್ಲಾ ಒಂದು ಕೃತ್ಯ ಎಸಗುತ್ತಿದ್ದಾನೆ ಎಂದರು.
ಮನುಷ್ಯರಲ್ಲಿ ಅರಿವಿಲ್ಲ: ಈತನ ಅತಿಯಾದ ಆಸೆಯಿಂದ ವಿಶ್ವ ಇಂದು ಹತ್ತು ಹಲವು ಜಾಗತಿಕ ಸಮಸ್ಯೆ ಎದುರಿಸುತ್ತಿದೆ. ಮುಂದಿನ ಪೀಳಿಗೆ ಬದುಕಲು ಕಷ್ಟವಾಗುವ ದಿನಗಳು ದೂರ ಉಳಿದಿಲ್ಲ. ಪ್ರತಿ ನಿತ್ಯ ಮಾನವನ ದುರಾಸೆಗೆ ಜಾಗತಿಕ ತಾಪಮಾನ ಹೆಚ್ಚಾಗುತ್ತಿದೆ. ಕಾರ್ಖಾನೆಗಳು ಉಗುಳುವ ವಿಷ ಅನಿಲ, ಜಲ ಇಡೀ ಜೀವಜಂತುಗಳ ಕೊಲೆ ಮಾಡುತ್ತಿದೆ. ಪ್ರತಿ ವರ್ಷವೂ ತಾಪಮಾನ ಏರಿಕೆ ಕಾಣುತ್ತಿದೆ. ಜಲ ಬರಿದಾಗುತ್ತಿದೆ. ಭೂಮಿ ಹಿರಿದಾಗುತ್ತಿದೆ.
ಕಾಡು ಕಿರಿದಾಗುತ್ತಿದೆ. ಇಷ್ಟೆಲ್ಲಾ ಸಮಸ್ಯೆಗಳಿಗೆ ಮನುಷ್ಯನೇ ನೇರ ಹೊಣೆಯಾಗಿದ್ದಾನೆ. ಕಾಡು ಪ್ರಾಣಿಗಳು, ಜೀವ ಜಂತುಗಳು ಪರಿಸರದ, ಆಹಾರದ ಸರಪಳಿಗಳಾಗಿವೆ. ಹುಲಿ ಸೇರಿದಂತೆ ಅಪರೂಪದ ಪ್ರಾಣಿಗಳ ಸಂತತಿ ಕಡಿಮೆಯಾಗುತ್ತಿದೆ ಇದನ್ನು ನಾಶ ಮಾಡಿದರೆ ನಮ್ಮ ನಾಶ ಸನಿಹವಾಗುತ್ತದೆ ಎಂಬ ಅರಿವು ಮನುಷ್ಯನಲ್ಲಿ ಇಲ್ಲವಾಗಿದೆ ಎಂದು ತಿಳಿಸಿದರು.
ಶಪಥ ಮಾಡಿ: ಹಾಗಾಗಿ ಈ ಅಮೂಲ್ಯವಾದ ಪರಿಸರ ರಕ್ಷಣೆ ಹೊಣೆಯನ್ನು ನಾವೆಲ್ಲಾ ಹೊರಬೇಕು. ಮರಗಿಡಗಳನ್ನು ರಕ್ಷಿಸಿ ಪೋಷಿಸಬೇಕು. ಪ್ರತಿ ಪ್ರಾಣಿಯ ರಕ್ಷಣೆ ನಮ್ಮೆಲ್ಲರ ಹೊಣೆಯಾಗಬೇಕು. ನೀರು ಮಿತವಾಗಿ ಬಳಸುವ, ಉಷ್ಣತೆ ಕಡಿಮೆ ಮಾಡುವ ನಿಟ್ಟಿನಲ್ಲಿ ನಾವೆಲ್ಲಾ ಶಪಥ ಮಾಡಬೇಕು ಎಂದರು.
ಅದ್ಭುತ ಸೃಷ್ಟಿ: ವಕೀಲ ಸಿದ್ದರಾಜು ಮಾತನಾಡಿ, 1970ರಲ್ಲಿ ಜಗತ್ತಿನ 193 ದೇಶಗಳು ಒಟ್ಟಿಗೆ ಸೇರಿ ನಭೋ ಮಂಡಲದ ಅದ್ಭುತ ಸೃಷ್ಟಿಯಾಗಿರುವ ಭೂಮಿ ರಕ್ಷಿಸುವ ಶಪಥ ಮಾಡಿ ಪ್ರತಿ ವರ್ಷವೂ ವಿಶ್ವ ಭೂ ದಿನಾಚರಣೆ ಮಾಡಲು ಯೋಜನೆ ರೂಪಿಸಿದವು.
4.45 ಮಿಲಿಯನ್ ವರ್ಷಗಳ ಹಿಂದೆ ರಚನೆಯಾಗಿರುವ ಈ ಭೂಮಿಯಲ್ಲಿ ಎಲ್ಲಾ ಗಿಡ ಮರಗಳು, ಜೀವಜಂತುಗಳು ಸೃಷ್ಟಿಯಾದ ನಂತರ ಮನುಷ್ಯನ ಸೃಷ್ಟಿಯಾಗಿದ್ದು ಇದನ್ನು ರಕ್ಷಿಸಿಕೊಳ್ಳಲು ಇದರ ಬಗ್ಗೆ ಅರಿವು ಮೂಡಿಸಲು ಜಾಗತಿಕ ಮಟ್ಟದಲ್ಲಿ ವಿಶ್ವ ಭೂ ದಿನಾಚರಣೆ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ ಎಂದು ಹೇಳಿದರು.
ವಕೀಲ ಸಂಘದ ಅಧ್ಯಕ್ಷ ಕೆ.ಬಿ. ಶಶಿಧರ್, ಕಾರ್ಯದರ್ಶಿ ಎಂ.ಶಾಂತರಾಜು, ಉಪಾಧ್ಯಕ್ಷ ಕಾಂತರಾಜು ಸದಸ್ಯರಾದ ಬಿ.ಎಂ.ಮಹಾದೇವಸ್ವಾಮಿ, ಸಂತೋಷ್, ಹರಿಶ್ಚಂದ್ರ, ರಂಗಸ್ವಾಮಿ ಇತರರು ಇದ್ದರು.