ಹಾಸನ: ಲೋಕಸಭಾ ಚುನಾವಣೆಯಲ್ಲಿ ಅಭ್ಯರ್ಥಿಗಳು ಮತದಾರಿಗೆ ಹಣ ಹಂಚಿಕೆ ಸೇರಿದಂತೆ ಯಾವುದೇ ಅಕ್ರಮ ನಡೆಸದಂತೆ ಚುನಾವಣಾ ಆಯೋಗವು ಹದ್ದಿನ ಕಣ್ಣಿರಿಸಿದ್ದು, ಮುಕ್ತ ಮತ್ತು ಪಾರದರ್ಶಕ ಚುನಾವಣೆ ನಡೆಸಲು ಸರ್ವ ಕ್ರಮಗಳನ್ನು ಕೈಗೊಂಡಿದೆ ಎಂದು ರಾಜ್ಯ ಚುನಾವಣಾ ಆಯೋಗದ ಜಾರಿ ವಿಭಾಗದ ವಿಶೇಷ ಅಧಿಕಾರಿ ಮನಿಷ್ ಮೌದ್ಗಿಲ್ ಅವರು ಹೇಳಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮತದಾನದ ದಿನದಂದು 10 ರಿಂದ 12 ಮತಗಟ್ಟೆಗಳಿಗೆ ಒಬ್ಬರಂತೆ ಒಟ್ಟು 237 ಸೆಕ್ಟರ್ ಅಧಿಕಾರಿಗಳನ್ನು ನೇಮಿಸಿದ್ದು, ಅವರಿಗೆ ಮ್ಯಾಜಿಸ್ಟ್ರೀರಿಯಲ್ ಅಧಿಕಾರವನ್ನು ನೀಡಲಾಗಿದೆ. ಈ ಅಧಿಕಾರಿಗಳು ನಿಗದಿಪಡಿಸಿದ ಮತಗಟ್ಟೆ ವ್ಯಾಪ್ತಿಯಲ್ಲಿ ಸಂಚರಿಸಿ ಅಕ್ರಮಗಳು ನಡೆದಯದಂತೆ ನೋಡಿಕೊಳ್ಳುವರು ಎಂದು ತಿಳಿಸಿದರು.
ಅಕ್ರಮದ ಬಗ್ಗೆ ದೂರು ನೀಡಿ: ಅಭ್ಯರ್ಥಿಗಳು, ಅವರ ಬೆಂಬಲಿಗರು, ಯಾವುದೇ ರಾಜಕೀಯಪಕ್ಷಗಳ ಕಾರ್ಯಕರ್ತರು ಹಣ ಹಂಚಿಕೆ, ಮದ್ಯ ಹಂಚಿಕೆ ಅಥವಾ ಯಾವುದೇ ಅಮಿಷಗಳನ್ನು ಮತದಾರಿಗೆ ನೀಡಿದರೆ ಸಾರ್ವಜನಿಕರು ಜಿಲ್ಲಾಧಿಕಾರಿಗಳ ಕಚೇರಿಯ ಕಂಟ್ರೋಲ್ ರೂಂ. ದೂ. 08172 -251028/ 261028, ಮತದಾರರ ಸಹಾಯವಾಣಿ ಕೇಂದ್ರ 1950 ಕ್ಕೆ ಮಾಹಿತಿ ನೀಡಿದರೆ ತಕ್ಷಣ ಕ್ರಮ ಕೈಗೊಳ್ಳಲಾಗುವುದು ಎಂದರು.
18 ಪ್ರಕರಣಗಳು ದಾಖಲು: ಕೆಲವರು ದುರುದ್ದೇಶದಿಂದ ಹಾಗೂ ಅಧಿಕಾರಿಗಳನ್ನು ದಾರಿ ತಪ್ಪಿಸಲು ಮಾಹಿತಿ ನೀಡುವ ಸಾಧ್ಯತೆ ಇರುತ್ತದೆ. ಈ ಬಗ್ಗೆ ಜಿಲ್ಲಾಡಳಿತವು ಪರಿಶೀಲಿಸಿ ತಕ್ಷಣ ಕ್ರಮ ಕೈಗೊಳ್ಳುವುದು ಎಂದ ಅವರು, ಇದುವರೆಗೂ ಹಾಸನ ಲೋಕಸಭಾ ಕ್ಷೇತ್ರದ ಹಾಸನ ಜಿಲ್ಲಾ ವ್ಯಾಪ್ತಿಯಲ್ಲಿ 23.48 ಲಕ್ಷ ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಮಾದರಿ ನೀತಿ ಸಂಹಿತೆ ಉಲ್ಲಂಘನೆಯ 18 ಪ್ರಕರಣಗಳನ್ನು ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ವಿವರ ನೀಡಿದರು.
ಜಿಲ್ಲಾಡಳಿತ ಸಜ್ಜು: ಹಾಸನ ಜಿಲ್ಲೆಯಲ್ಲಿ ಮತದಾನಕ್ಕೆ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿದ್ದು, ಎಲ್ಲಾ ಮತಗಟ್ಟೆಗಳಿಗೂ ಸಿಬ್ಬಂದಿ ತೆರಳಿದ್ದಾರೆ. ಮತಯಂತ್ರಗಳಲ್ಲಿ ಲೋಪ ಕಂಡು ಬಂದರೆ ತಕ್ಷಣವೇ ಬದಲಿ ಮತಯಂತ್ರದ ವ್ಯವಸ್ಥೆ ಮಾಡಲೂ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು. ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಎಸ್ಪಿ ಚೇತನ್‌ಸಿಂಗ್ ರಾಥೋಡ್ ಅವರೂ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.