Advertisement

ಕಾಂಗ್ರೆಸ್‌, ಬಿಜೆಪಿಯಲ್ಲಿ  ತಲಾ ಮೂರು ಹೆಸರು ಪ್ರಸ್ತಾವ

06:10 AM Sep 19, 2017 | |

ಪುತ್ತೂರು: ಜಿಲ್ಲಾ ಕೇಂದ್ರದ ಕನಸು ಹೊತ್ತಿರುವ ಪುತ್ತೂರಿ ನಲ್ಲಿ ಮುಂದಿನ ವಿಧಾನಸಭಾ ಚುನಾ ವಣೆಗೆ ಸಂಬಂಧಿಸಿ ರಾಜಕೀಯ ಚಟು ವಟಿಕೆಗಳು ಕಾವೇರುತ್ತಿವೆ. ಪ್ರಮುಖ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್‌ನಲ್ಲಿ ಟಿಕೆಟ್‌ಗಾಗಿ ಪಕ್ಷದೊಳಗೆಯೇ ಸ್ಪರ್ಧೆ ಆರಂಭಗೊಂಡಿದೆ!

Advertisement

ಕಾಂಗ್ರೆಸ್‌ನಲ್ಲಿ ಬಹಿರಂಗವಾಗಿಯೇ ಆಕಾಂಕ್ಷೆ ತೋಡಿಕೊಂಡಿದ್ದರೆ, ಬಿಜೆಪಿ ಯಲ್ಲಿ ತೆರೆಮರೆಯಲ್ಲೇ ಕಸರತ್ತು ಬಿರು ಸಾಗಿದೆ. ಉಳಿದಂತೆ ಜೆಡಿಎಸ್‌, ಎಸ್‌ಡಿಪಿಐ ಸ್ಪರ್ಧಾ ಕಣಕ್ಕೆ ಧುಮುಕುವುದು ಖಾತರಿಯೆನಿಸಿದೆ.

ಯಾರು ಸ್ಪರ್ಧಿಗಳು?
ಪುತ್ತೂರಿನಲ್ಲಿ ಕಾಂಗ್ರೆಸ್‌ನಿಂದ ಯಾರಿಗೆ ಟಿಕೆಟ್‌ ಎನ್ನುವ ಪ್ರಶ್ನೆಯೀಗ ಪಕ್ಷದ ಕಾರ್ಯಕರ್ತರಲ್ಲೂ ಕುತೂಹಲ ಮೂಡಿಸಿದೆ. ಸದ್ಯಕ್ಕೆ ಹಾಲಿ ಶಾಸಕಿ ಶಕುಂತಳಾ ಟಿ. ಶೆಟ್ಟಿ, ಬ್ಲಾಕ್‌ ಕಾಂಗ್ರೆಸ್‌ ಮಾಜಿ ಅಧ್ಯಕ್ಷ ಎ. ಹೇಮನಾಥ ಶೆಟ್ಟಿ, ರಾಜ್ಯ ಸಮಾಜ ಕಲ್ಯಾಣ ಮಂಡಳಿಯ ಮಾಜಿ ಅಧ್ಯಕ್ಷೆ ದಿವ್ಯಪ್ರಭಾ ಚಿಲ್ತಡ್ಕ ಹೆಸರು ಮುಂಚೂಣಿಯಲ್ಲಿದೆ. 
ಈ ಹಿಂದಿನ ಬ್ಲಾಕ್‌ ಕಾಂಗ್ರೆಸ್‌ ಸಮಿತಿಯು ಹಾಲಿ ಶಾಸಕಿ ಶಕುಂತಳಾ ಟಿ. ಶೆಟ್ಟಿ ಅವರಿಗೆ ಟಿಕೆಟ್‌ ಎಂದಿದ್ದರೂ ಕೆಲ ದಿನಗಳ ಹಿಂದೆ ಹೊಸ ಸಮಿತಿ ರಚನೆಯ ಅನಂತರ ಹಳೆ ತಂಡದ ನಿರ್ಧಾರ ಅಷ್ಟು ಬಲವಾಗಿಲ್ಲ. ಕಾರಣ ಹೊಸ ಅಧ್ಯಕ್ಷರ ನೇಮಕ ಪ್ರಕ್ರಿಯೆಯಲ್ಲಿ ಅನುಸರಿಸಿದ ಮಾನದಂಡ ನಿಕಟ ಪೂರ್ವ ಅಧ್ಯಕ್ಷ ಫಝÉಲ್‌ ಬಣಕ್ಕೆ ಪೂರ್ತಿ ಸಮಾಧಾನ ತಂದಿಲ್ಲ ಅನ್ನು ವುದು ಪಕ್ಷದ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾಬೀತಾಗಿದೆ.

ಕಳೆದ ಬಾರಿಯೇ ಆಕಾಂಕ್ಷಿಯಾಗಿದ್ದ ಹೇಮನಾಥ ಶೆಟ್ಟಿ ತನಗೆ ಈ ಬಾರಿ ಅವಕಾಶ ಬೇಕು ಅನ್ನುವುದನ್ನು ಬಹಿರಂಗ ವಾಗಿಯೇ ಹೇಳಿದ್ದಾರೆ. ಶಕುಂತಳಾ ಶೆಟ್ಟಿ ಅವರು ಪತ್ರಿಕಾಗೋಷ್ಠಿಯೊಂದರಲ್ಲಿ ತನಗೆ ಇನ್ನೊಂದು ಬಾರಿ ಅವಕಾಶ ಸಿಕ್ಕರೆ ಸ್ಪರ್ಧಿಸುವುದಾಗಿ ತಿಳಿಸಿದ್ದಾರೆ. ಆದರೆ ಶಕುಂತಳಾ ಶೆಟ್ಟಿ ಈ ಹಿಂದೆ ಬಿಜೆಪಿಯಿಂದ ಕಾಂಗ್ರೆಸ್‌ಗೆ ಸೇರುವ ಸಂದರ್ಭ ಒಂದೇ ಒಂದು ಬಾರಿ ಅವಕಾಶ ಕೊಟ್ಟರೆ ಸಾಕು ಎಂದು ಹೇಳಿದ್ದು, ಹಾಗಾಗಿ ಈ ಬಾರಿ ಬೇರೆಯವರಿಗೆ ಅವಕಾಶ ಸಿಗಲಿದೆ ಎನ್ನುವುದು ಹೇಮನಾಥ ಶೆಟ್ಟಿ ಬಣದ ಉತ್ತರ. ಹಾಗಾಗಿ ಇವರಿಬ್ಬರ ಮಧ್ಯೆ ಟಿಕೆಟ್‌ಗೆ ಸ್ಪರ್ಧೆ ಇರುವುದು ಖಾತರಿಯೆನಿಸಿದೆ.

ಈ ಮಧ್ಯೆ ಸಮಾಜ ಕಲ್ಯಾಣ ಮಂಡಳಿ ಮಾಜಿ ಅಧ್ಯಕ್ಷೆ ಸುಳ್ಯದ ದಿವ್ಯಪ್ರಭಾ ಚಿಲ್ತಡ್ಕ ಅವರು ಟಿಕೆಟ್‌ ಗಿಟ್ಟಿಸಲು ಪ್ರಯತ್ನ ಮಾಡುತ್ತಿದ್ದಾರೆ. ಒಕ್ಕಲಿಗ ಕೋಟಾ ದಡಿ ತನಗೆ ಅವಕಾಶ ನೀಡಿ ಎನ್ನುವ ಬೇಡಿಕೆ ಅವರದ್ದು ಎನ್ನಲಾಗಿದೆ. ಹೈಕಮಾಂಡ್‌ನ‌ ಪ್ರಭಾವಿ ನಾಯಕರ ಜತೆ ನಿಕಟ ಸಂಪರ್ಕದಲ್ಲಿರುವ ಕಾರಣ ಟಿಕೆಟ್‌ ಸಿಕ್ಕರೆ ಅಚ್ಚರಿಯೇನಿಲ್ಲ ಅನ್ನು ತ್ತಾರೆ ಪಕ್ಷದ ಕೆಲ ಮುಖಂಡರು.

Advertisement

ಬಿಜೆಪಿಯದ್ದು  ತೆರೆಯೊಳಗಿನ ಆಟ!
ಕಾಂಗ್ರೆಸ್‌ ಪಕ್ಷದ ಆಕಾಂಕ್ಷಿಗಳು ಬಹಿ ರಂಗವಾಗಿಯೇ ತಮ್ಮ ಹೆಸರು ತೋಡಿ ಕೊಂಡಿದ್ದರೆ ಇತ್ತ ಬಿಜೆಪಿಯದ್ದು ತದ್ವಿರುದ್ಧ ಸ್ಥಿತಿ. ಇಲ್ಲಿಯೂ ಆಕಾಂಕ್ಷಿಗಳು ಹೆಚ್ಚಿದ್ದರೂ ಅವರ್ಯಾರೂ ಅದನ್ನು ಬಹಿ ರಂಗವಾಗಿ ಪ್ರಕಟಿಸುತ್ತಿಲ್ಲ. ಹತ್ತಾರು ಹೆಸರುಗಳು ಮಧ್ಯೆ ಬಿಜೆಪಿಯ ಹಾಲಿ ಜಿಲ್ಲಾಧ್ಯಕ್ಷ, ಕಳೆದ ಬಾರಿ ಪುತ್ತೂರಿನಿಂದ ಸ್ಪರ್ಧಿಸಿ ಪರಾಜಿತಗೊಂಡಿದ್ದ ಸಂಜೀವ ಮಠಂದೂರು, ಬಿಜೆಪಿ ಜಿಲ್ಲಾ ಕಾರ್ಯ ಕಾರಿಣಿ ಸದಸ್ಯ ಅಶೋಕ್‌ ಕುಮಾರ್‌ ರೈ ಕೋಡಿಂಬಾಡಿ, ಹಿಂದೂ ಸಂಘಟನೆಯ ಮುಂದಾಳು ಅರುಣ್‌ ಕುಮಾರ್‌ ಪುತ್ತಿಲ ಹೆಸರು ಪ್ರಮುಖ ವಾಗಿ ಕೇಳಿ ಬರುತ್ತಿದೆ. ಸಂಜೀವ ಮಠಂದೂರು ಅವರನ್ನೇ ಕಣಕ್ಕಿಳಿಸಬೇಕು ಎಂದು ಒಂದು ತಂಡ ಪಟ್ಟು ಹಿಡಿದಿದ್ದರೆ, ಇತ್ತ ಅಶೋಕ್‌ ಕುಮಾರ್‌ ರೈ ಅವರ ಸ್ಪರ್ಧೆಗೂ ಒತ್ತಡ ಹೆಚ್ಚಾಗಿದೆ. ಇಬ್ಬರು ಕೂಡ ಆಕಾಂಕ್ಷೆ ಯನ್ನು ಬಹಿರಂಗವಾಗಿ ಪ್ರಕಟಿಸುತ್ತಿಲ್ಲ. ಸ್ಪರ್ಧೆಯ ಬಗ್ಗೆ ಪ್ರಶ್ನಿಸಿದರೆ, ವರಿಷ್ಠರ ನಿಲುವಿಗೆ ಬದ್ಧ ಎಂದರೂ ಟಿಕೆಟ್‌ ಗಿಟ್ಟಿಸುವ ತಂತ್ರಗಾರಿಕೆಯಿಂದ ಹಿಂದೆ ಸರಿದಿಲ್ಲ ಅನ್ನುವುದು ಗಮನಾರ್ಹ ಸಂಗತಿ.

ಈ ಇಬ್ಬರ ಮಧ್ಯೆ ಹಿಂದೂ ಸಂಘಟನೆಯ ಮುಖಂಡ ಅರುಣ್‌ ಕುಮಾರ್‌ ಪುತ್ತಿಲ ಅವರ ಹೆಸರು ಪ್ರಬಲ ವಾಗಿ ಕೇಳಿ ಬರುತ್ತಿದೆ. ಇಬ್ಬರ ಜಗಳದಲ್ಲಿ ಮೂರನೆಯವನಿಗೆ ಲಾಭ ಎಂದಾದರೆ ಆ ಲಾಭ ಪುತ್ತಿಲರಿಗೆ ಪಕ್ಕಾ ಎನ್ನುತ್ತಾರೆ ಹೆಸರು ಹೇಳಲಿಚ್ಛಿಸದ ಪಕ್ಷದ ಮುಖಂಡರೋರ್ವರು. ಸಂಜೀವ ಮಠಂದೂರು, ಅಶೋಕ್‌ ರೈ ಆಯ್ಕೆ ಮಧ್ಯೆ ಒಮ್ಮತ ಮೂಡದೇ ಇದ್ದಲ್ಲಿ ಹೊಸ ಅಭ್ಯìರ್ಥಿಗಳ ಆಯ್ಕೆ ಅನಿವಾರ್ಯ. ಈ ಸಂದರ್ಭ ಅರುಣ್‌ ಕುಮಾರ್‌ ಪುತ್ತಿಲ ಹೆಸರು ಮುಂಚೂಣಿಯಲ್ಲಿ ಇರುವುದು ನಿಶ್ಚಿತ ಅನ್ನುತ್ತದೆ ಸದ್ಯದ ಚಿತ್ರಣ.

ಸೋಲು-ಗೆಲುವು
ಕಳೆದ ಬಾರಿ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಶೇ. 46.46ರಷ್ಟು ಮತ ಪಡೆದು ಬಿಜೆಪಿ ಅಭ್ಯರ್ಥಿ ವಿರುದ್ಧ 4,289 ಮತಗಳ ಅಂತರದಿಂದ ಗೆದ್ದಿದ್ದರು. ಕಾಂಗ್ರೆಸ್‌ ಅಭ್ಯರ್ಥಿ ಶಕುಂತಳಾ ಶೆಟ್ಟಿ 66,345 ಮತ ಪಡೆದಿದ್ದರೆ, ಬಿಜೆಪಿ ಅಭ್ಯರ್ಥಿ ಸಂಜೀವ ಮಠಂದೂರು 62,056 ಮತ ಪಡೆದಿದ್ದರು. 19 ವರ್ಷದ ಅನಂತರದ ಕಾಂಗ್ರೆಸ್‌ ಗೆಲುವಿನಲ್ಲಿ ಶಕುಂತಳಾ ಶೆಟ್ಟಿ ಅವರ ವೈಯಕ್ತಿಕ ವರ್ಚಸ್ಸು ಕೂಡ ಸಹಕಾರಿ ಆಗಿತ್ತು ಅನ್ನುವುದು ಗಮನಾರ್ಹ ಸಂಗತಿ. ಸುಳ್ಯದಲ್ಲಿ ಬಿಜೆಪಿ ಅಭ್ಯರ್ಥಿ ಎಸ್‌. ಅಂಗಾರ ಅವರು ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಡಾ| ರಘು ಅವರ ವಿರುದ್ಧ  1,373 ಮತಗಳ ಕನಿಷ್ಠ ಅಂತರದಿಂದ ಗೆದ್ದಿದ್ದರು. 

ಸುಳ್ಯದಲ್ಲಿ  ಯಾರು?
ಕಳೆದ ಬಾರಿ ಬಿಜೆಪಿ ಜಿಲ್ಲೆಯ ಎಂಟು ಸ್ಥಾನಗಳಲ್ಲಿ ಏಳು ಸ್ಥಾನಗಳಲ್ಲಿ ಸೋತರೂ ಸುಳ್ಯವನ್ನು ಕಳೆದುಕೊಂಡಿರಲಿಲ್ಲ. 1994ರಿಂದ ನಿರಂತರವಾಗಿ ಇಲ್ಲಿ ಗೆದ್ದಿರುವ ಬಿಜೆಪಿಯಲ್ಲಿ ಐದು ಬಾರಿ ಗೆದ್ದಿರುವ ಹಾಲಿ ಶಾಸಕ ಎಸ್‌. ಅಂಗಾರ ಅವರನ್ನೇ ಮತ್ತೆ ಕಣಕ್ಕಿಳಿಸುವ ಉಮೇದಿ ನಲ್ಲಿದೆ. ಕಳೆದ ಬಾರಿ ಜಿ.ಪಂ. ಮಾಜಿ ಸದಸ್ಯೆ ಭಾಗೀರಥಿ ಮುರುಳ್ಯ ಅವರ ಹೆಸರು ಕೇಳಿ ಬಂದಿದ್ದರೂ ಅಂಗಾರ ಅವರಿಗೆ ಮತ್ತೆ ಟಿಕೆಟ್‌ ಸಿಕ್ಕಿತ್ತು. ಈ ಬಾರಿ ಹೊಸ ಮುಖಕ್ಕೆ ಅವಕಾಶ ನೀಡುವ ಬಗ್ಗೆ ಪಕ್ಷದ ಮೂಲಗಳು ಉತ್ಸಾಹ ಹೊಂದಿಲ್ಲ ಎನ್ನಲಾಗಿದೆ. 

ಕಾಂಗ್ರೆಸ್‌ನಿಂದ ಮೂರು ಬಾರಿ ಸೋತಿ ರುವ ಡಾ| ರಘು ಅವರನ್ನು ಮತ್ತೆ ಕಣಕ್ಕೆ ಇಳಿಸ ಲಾಗುತ್ತದೆ ಎನ್ನಲಾಗುತ್ತಿದೆ. ಪ್ರತಿ ಬಾರಿಯೂ ಸೋಲಿನ ಅಂತರ ಇಳಿಮುಖಗೊಂಡಿರುವುದು ರಘು ಅವರನ್ನು ಮತ್ತೆ ಕಣಕ್ಕೆ ಇಳಿಸಲು ಕಾರಣವೆನ್ನಲಾಗಿದೆ. ಕಳೆದ ಬಾರಿ ಸುಳ್ಯದ ಸಭೆಯೊಂದರಲ್ಲಿ ಕಾಂಗ್ರೆಸ್‌ನ ಪ್ರಭಾವಿ ನಾಯಕ ಡಿ.ಕೆ. ಶಿವಕುಮಾರ್‌ ಅವರು, ಡಾ| ರಘು ನನ್ನೊಂದಿಗೆ ವಿಧಾನಸಭೆಗೆ ಬರಬೇಕು ಎಂದಿರುವುದು ಕೂಡ ಅವರ ಸ್ಪರ್ಧೆಯ ಸಾಧ್ಯತೆಗೆ ಪುಷ್ಟಿ ನೀಡಿದೆ.

ಡಾ| ರಘು ಮತ್ತು ಎಸ್‌. ಅಂಗಾರ ಅವರು ಮತ್ತೆ ಸ್ಪರ್ಧಿಸಿದರೆ ಇವರಿಬ್ಬರು ಮುಖಾ ಮುಖೀ ಯಾಗುವುದು ನಾಲ್ಕನೇ ಬಾರಿಯಾಗುತ್ತದೆ. ಮೂರು ಬಾರಿಯ ವಿಧಾನಸಭಾ ಚುನಾವಣೆಗೆ ಸಂಬಂಧಿಸಿ ಚಲಾಯಿತ ಮತಗಳ ಲೆಕ್ಕಾಚಾರ ಪರಿಗಣಿಸಿದರೆ, ಎಸ್‌. ಅಂಗಾರ ಅವರ ಗೆಲುವಿನ ಅಂತರ ಕುಸಿತದತ್ತ ಸಾಗಿರುವುದು, ಕಾಂಗ್ರೆಸ್‌ನ ಡಾ| ರಘು ಅವರ ಮತ ಗಳಿಕೆ ಹೆಚ್ಚಳಗೊಂಡಿರುವುದು ಗೊತ್ತಾಗುತ್ತದೆ. ಹೀಗಾಗಿ ಮತ್ತೆ ಇವರಿಬ್ಬರ ಸ್ಪರ್ಧೆ ರಾಜಕೀಯ ಅಂಗಳದಲ್ಲಿ ಕೌತುಕ ಮೂಡಿಸಿದೆ.

– ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next