Advertisement

 ಫೆ. 18-25ರ ವರೆಗೆ ನಾಗಮಂಡಲ

04:57 PM Feb 17, 2018 | |

ಮಾಣಿಲ : ಮಾಣಿಲ ಶ್ರೀಧಾಮ ಶ್ರೀ ಮಹಾಲಕ್ಷ್ಮೀ ಕ್ಷೇತ್ರದಲ್ಲಿ ಲೋಕಕಲ್ಯಾಣಾರ್ಥ ಅಷ್ಟಪವಿತ್ರ ನಾಗಮಂಡಲ ಫೆ. 18ರಿಂದ 25ರ ವರೆಗೆ ನಡೆಯಲಿದೆ. ಪ್ರತಿಷ್ಠಾ ವರ್ಧಂತ್ಯುತ್ಸವ, ಶ್ರೀನಿವಾಸ ಕಲ್ಯಾಣ, ಭಜನೆ, ಮಹಿಳಾ ಸಮಾವೇಶ, ಯಕ್ಷಗಾನ, ನೇಮ ನಡೆಯಲಿದೆ. ನಾಗ, ಭೂಮಿ, ನಾಗಮಂಡಲ ಒಂದಕ್ಕೊಂದು ಪೂರಕವಾಗಿದ್ದು, ಸಮಾಜದಲ್ಲಿ ಋಣಾತ್ಮಕ ಪ್ರಕ್ರಿಯೆಯನ್ನು ಹೋಗಲಾಡಿಸಿ, ಧನಾತ್ಮಕ ಚಿಂತನೆ ಮೂಡಿಸುವುದಕ್ಕೆ ಪ್ರೇರಣೆಯಾಗಲಿದೆ ಎಂದು ಮಾಣಿಲ ಶ್ರೀಧಾಮ ಶ್ರೀ ಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದರು.

Advertisement

ಅವರು ಗುರುವಾರ ಮಾಣಿಲ ಶ್ರೀಧಾಮದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಗ್ರಾಮೀಣ ಕೃಷಿ, ಅರಣ್ಯ ಸಂರಕ್ಷಣೆ ಸಂದೇಶವನ್ನು ಈ ಮೂಲಕ ನೀಡಬಹುದಾಗಿದೆ. ಪ್ರಾಕೃತಿಕ ಅಸಮತೋಲನ, ಸಾಮಾಜಿಕ ತೊಂದರೆ ನಿವಾರಿಸಲು, ದುಶ್ಚಟ ಮುಕ್ತ ಸಮಾಜ ನಿರ್ಮಾಣಕ್ಕೆ ಇಂಥ ಧಾರ್ಮಿಕ ಕಾರ್ಯ ಅಗತ್ಯ. ಮಾನವ ಬದುಕಿಗೂ ಕೃಷಿಗೂ ನಾಗನಿಗೂ ವಿಭಿನ್ನವಾದ ಬಂಧವಿದೆ. ಸಮೃದ್ಧಿ, ಸದ್ಬುದ್ಧಿ, ಸಂತೃಪ್ತಿಯ ಜೀವನಕ್ಕೆ ಚೇತೋಹಾರಿಯಾಗಲಿದೆ ಎಂದರು.

ಹಸಿರುವಾಣಿ ಹೊರೆಕಾಣಿಕೆ, ಸ್ವರ್ಣ ಮಂಟಪ ಮೆರವಣಿಗೆ
ಫೆ. 18ರಂದು ಮಂಗಳೂರು ಶ್ರೀ ಮಂಗಳಾದೇವಿ ದೇವಸ್ಥಾನದಿಂದ ವೈಭವದ ಹಸಿರುವಾಣಿ ಹೊರೆಕಾಣಿಕೆ ಹಾಗೂ ಶ್ರೀ ದುರ್ಗಾಪರಮೇಶ್ವರೀ ದೇವಿಯ ಸ್ವರ್ಣ ಮಂಟಪ ಮೆರವಣಿಗೆ ಕ್ಷೇತ್ರಕ್ಕೆ ಆಗಮಿಸಲಿದೆ ಎಂದರು.

ನಾಡಿನ ಅಭ್ಯುದಯಕ್ಕಾಗಿ ನಾಗಮಂಡಲ
ಕ್ಷೇತ್ರದ ಟ್ರಸ್ಟಿ, ನಾಗಮಂಡಲ ಸಮಿತಿ ಗೌರವ ಸಲಹೆಗಾರ ತಾರಾನಾಥ ಕೊಟ್ಟಾರಿ ಮಾತನಾಡಿ, ಯಜ್ಞ- ಯಾಗಾದಿಗಳಿಗೆ ಅತ್ಯಂತ ಶ್ರೇಷ್ಠವಾದ ಮಾಣಿಲ ಕ್ಷೇತ್ರದಲ್ಲಿ ಸ್ವಾಮೀಜಿ ಅವರು ಜನರ ಕಷ್ಟಗಳಿಗೆ ಸ್ಪಂದಿಸುತ್ತ ದಾನ, ಧರ್ಮಗಳಿಂದ ಸಮಾಜದ ಶ್ರೇಯಸ್ಸಿಗೆ ಕಾರಣರಾಗಿದ್ದಾರೆ. ಅದೇ ರೀತಿಯಲ್ಲಿ ನಾಗಮಂಡಲವು ನಾಡಿನ ಅಭ್ಯುದಯಕ್ಕಾಗಿ ಏರ್ಪಡಿಸಲಾಗಿದೆ. ಮಹಾಲಕ್ಷ್ಮೀ ಸೇವಾ ಪ್ರತಿಷ್ಠಾನ, ಮಹಿಳಾ ಸೇವಾ ಸಮಿತಿ, ವಿವಿಧ ಸಂಘ -ಸಂಸ್ಥೆಗಳು ಸಹಕಾರ ನೀಡುತ್ತಿವೆ. ಭಕ್ತರು ತಂಡೋಪತಂಡವಾಗಿ ಆಗಮಿಸಿ, ಶ್ರಮದಾನ ಸೇವೆ ನಡೆಸುತ್ತಿದ್ದಾರೆ ಎಂದು ವಿವರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ನಾಗಮಂಡಲ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಶೆಟ್ಟಿ ಚೆಲ್ಲಡ್ಕ, ಸಾಂಸ್ಕೃತಿಕ ಸಮಿತಿ ಸಂಚಾಲಕ ಮಂಜು ವಿಟ್ಲ, ಪ್ರಚಾರ ಸಮಿತಿ ಸಂಚಾಲಕ ಪುಷ್ಪರಾಜ ಶೆಟ್ಟಿ ಬಿ.ಸಿ. ರೋಡ್‌, ವ್ಯವಸ್ಥಾಪಕ ವಿಟ್ಠಲ ಶೆಟ್ಟಿ ಸುಣ್ಣಂಬಳ, ಮಹಿಳಾ ಸೇವಾ ಸಮಿತಿ ಅಧ್ಯಕ್ಷೆ ವನಿತಾ ವಿ. ಶೆಟ್ಟಿ ಸುಣ್ಣಂಬಳ ಮತ್ತಿತರರು ಉಪಸ್ಥಿತರಿದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next