Advertisement

ಜೈಲು ಹಕ್ಕಿಗಳಿಗೆ ವರವಾಗದ ಇ-ಮುಲಾಖಾತ್‌!

06:14 PM Feb 15, 2021 | Team Udayavani |

ರಾಯಚೂರು: ಕೋವಿಡ್ ಭೀತಿಯಿಂದ ಕೈದಿಗಳ ಜತೆ ಬಂಧುಗಳ ಕುಶಲೋಪರಿ ಭೇಟಿ ನಿಷೇಧಿಸಿ ಪರ್ಯಾಯವಾಗಿ ಜಾರಿಗೆ ತಂದ “ಇ-ಮುಲಾಖಾತ್‌’ ವಿಡಿಯೋಕಾಲ್‌ ಪದ್ಧತಿಗೆ ನಿರೀಕ್ಷಿತ ಮಟ್ಟದಲ್ಲಿ ಸ್ಪಂದನೆ ಸಿಗುತ್ತಿಲ್ಲ. ಸಾಮಾನ್ಯ ದಿನಗಳಲ್ಲಿ ಪ್ರತಿ ವಾರ ಜೈಲಿನಲ್ಲಿರುವ ಕೈದಿಗಳಿಗೆ ಸಂಬಂಧಿಕರ ನೇರ ಭೇಟಿಗೆ ಅವಕಾಶ ನೀಡಲಾಗುತ್ತಿತ್ತು.

Advertisement

10 ನಿಮಿಷಗಳ ಕಾಲ ಯೋಗಕ್ಷೇಮ ವಿಚಾರಣೆಗೆ ಅವಕಾಶ ನೀಡಲಾಗುತ್ತಿತ್ತು. ಕೋವಿಡ್ ಹರಡುವ ಭೀತಿ ಶುರುವಾಗುತ್ತಿದ್ದಂತೆ ಭೇಟಿ ನಿಷೇಧಿಸಲಾಯಿತು. ಇದರಿಂದ ತಮ್ಮವರನ್ನು ಕಾಣಲು ಜೈಲಿಗೆ ಬಂದರೂ ಅಧಿಕಾರಿಗಳು ಅವಕಾಶ ನೀಡಿರಲಿಲ್ಲ. ಕಟ್ಟುನಿಟ್ಟಿನ ನಿಯಮಗಳಿಂದ ದೂರವಾಣಿ ಮೂಲಕವೂ ಮಾತನಾಡಲಾಗುತ್ತಿರಲಿಲ್ಲ. ಈ ಸಮಸ್ಯೆ ಅರಿತ ಕೇಂದ್ರ ಸರ್ಕಾರ “ಇ-ಮುಲಾಖಾತ್‌’ ಕಾರ್ಯಕ್ರಮ ಪರಿಚಯಿಸಿತು.

ಒಂದೆರಡು ತಿಂಗಳಿಂದ ಇದು ಆರಂಭಗೊಂಡಿದ್ದು, ಆನ್‌ಲೈನ್‌ನಲ್ಲೇ ನೋಂದಣಿ ಮಾಡಿ ವಿಡಿಯೋ ಕಾಲ್‌ ಮಾಡುವ ಮೂಲಕ ತಮ್ಮವರ ಜತೆ ಮಾತನಾಡಬಹುದು. ಆದರೆ ಇದಕ್ಕೆ ಕೆಲ ನಿಯಮ ಪಾಲಿಸಬೇಕಿರುವ ಕಾರಣ ಅನಕ್ಷರಸ್ಥರು, ತಾಂತ್ರಿಕ ಜ್ಞಾನ ಇಲ್ಲದವರಿಗೆ ಈ ವ್ಯವಸ್ಥೆಗೆ ಒಗ್ಗಿಕೊಳ್ಳುವುದು ಕಷ್ಟವಾಗುತ್ತಿದೆ.

ಇ ಮುಲಾಖಾತ್‌ ಹೇಗೆ?: “ಇ ಮುಲಾಕಾತ್‌’ ಪದ್ಧತಿ ಈ ಮುಂಚೆಯಿದ್ದ ನೇರ ಭೇಟಿಗಿಂತ ತುಂಬಾ ಅನುಕೂಲಕರ. ಮನೆಯವರೆಲ್ಲ ಕುಳಿತಲ್ಲಿಯೇ ಜೈಲಿನಲ್ಲಿರುವ ತಮ್ಮ ಸಂಬಂಧಿ  ಜತೆ ಮಾತನಾಡಬಹುದು. ಜೈಲಿಗೆ ಹೋಗಿ ಗಂಟೆಗಟ್ಟಲೇ ಕಾಯುವ ತಾಪತ್ರಯ ಕೂಡ ಇರಲ್ಲ. ಆದರೆ, ಹೀಗೆ ಮಾತನಾಡಬೇಕಾದರೆ ಮೊದಲಿಗೆ ನ್ಯಾಶನಲ್‌ ಪ್ರಿಸನ್‌ ಪೋರ್ಟಲ್‌ ನಲ್ಲಿ ನೋಂದಣಿ ಮಾಡಬೇಕು. ನೋಂದಣಿಗೆ ಇ ಮೇಲ್‌ ವಿಳಾಸ ನೀಡಬೇಕು. ಜತೆಗೆ ಮೊಬೈಲ್‌ ಸಂಖ್ಯೆ ನೋಂದಾಯಿಸಬೇಕು.

ನೋಂದಣಿ ಮಾಡಿದ ಬಳಿಕ ಇಮೇಲ್‌ ಗೆ ವಿಡಿಯೋಕಾಲ್‌ ಮಾಡುವ ಸಮಯ ಹಾಗೂ ಕೈದಿ ಕೋಣೆ ಸಂಖ್ಯೆ ಮತ್ತು ಒಟಿಪಿ ಬರುತ್ತದೆ. ಅದನ್ನು ಜಿಟ್ಸೆಮೀಟ್‌ ಎನ್ನುವ ಅಪ್ಲಿಕೇಶನ್‌ನಲ್ಲಿ ದಾಖಲಿಸಿದ ಬಳಿಕವೇ ಐದು ನಿಮಿಷಗಳ ಕಾಲ ಮಾತನಾಡಬಹುದು. ಒಮ್ಮೆ ನೋಂದಣಿ ಆದರೆ ಜೈಲಿನ ಸಿಬ್ಬಂದಿಯೇ ಕರೆ ಮಾಡಿ ತಿಳಿಸುತ್ತಾರೆ. ಒಮ್ಮೆ ನೋಂದಣಿ ಮಾಡಿದರೆ ಒಮ್ಮೆ ಮಾತ್ರ ಮಾತನಾಡಬಹುದು.

Advertisement

ತಿಳಿವಳಿಕೆ ಸಮಸ್ಯೆ: ಜೈಲಿಗೆ ಮಾತನಾಡಿಸಲು ಬರುವವರಿಗೆ ಆನ್‌ಲೈನ್‌ನಲ್ಲೇ ಮಾತನಾಡಿ ಎನ್ನಲಾಗುತ್ತಿದೆ. ಆದರೆ, ಅದು ಹೇಗೆಂಬುದು ಸಾಕಷ್ಟು ಜನರಿಗೆ ಗೊತ್ತಿಲ್ಲ. ನೋಂದಣಿ ಪ್ರಕ್ರಿಯೆ ಸರಿಯಾಗಿ ಮಾಡದಿದ್ದಲ್ಲಿ ಒಟಿಪಿ ಬರಲ್ಲ. ಅಲ್ಲದೇ ಇಮೇಲ್‌ ವಿಳಾಸ, ಮೊಬೈಲ್‌ ಸಂಖ್ಯೆ ಒಬ್ಬರದ್ದೇ ಆಗಿರಬೇಕು. ಸಾಕಷ್ಟು ಜನರಲ್ಲಿ ಆಂಡ್ರಾಯ್ಡ ಮೊಬೈಲ್‌ಗ‌ಳು ಇರಲ್ಲ. ಈ ಎಲ್ಲ ಕಾರಣಕ್ಕೆ ಇ-ಮುಲಾಖಾತ್‌ ಅಷ್ಟು ಸುಲಭಕ್ಕೆ ಸಾಧ್ಯವಾಗುತ್ತಿಲ್ಲ.

ನೇರ ಭೇಟಿಗೆ ಅವಕಾಶ ಕೊಡಿ
ಈಗ ಎಲ್ಲೆಡೆ ಕೊರೊನಾ ಪ್ರಮಾಣ ಸಂಪೂರ್ಣ ಕುಗ್ಗಿದೆ. ಜನ ರಾಜಾರೋಷವಾಗಿ ತಿರುಗುತ್ತಿದ್ದಾರೆ. ಹೀಗಾಗಿ ಕೈದಿಗಳ ನೇರ ಭೇಟಿಗೂ ಅವಕಾಶ ನೀಡಲೆಂಬುದು ಸಂಬಂಧಿಕರ ವಾದ. ನಾವು ಅನೇಕ ಬಾರಿ ಬಂದು ಭೇಟಿ ಮಾಡದೆ ಹೋಗುತ್ತಿದ್ದೇವೆ. ನಮಗೆ ಮೊಬೈಲ್‌ನಲ್ಲಿ ಹೇಗೆ ನೋಂದಣಿ ಮಾಡಬೇಕೆಂಬುದು ಗೊತ್ತಿಲ್ಲ. ಕೊರೊನಾ ತಗ್ಗಿದ್ದರಿಂದ ನೇರ ಭೇಟಿಗೆ ಅವಕಾಶ ನೀಡಲಿ ಎಂಬುದು ಸಂಬಂಧಿಕರ ಒತ್ತಾಯ.

ಲಾಕ್‌ಡೌನ್‌ ಜಾರಿಯಾದ ಬಳಿಕ ಕೈದಿಗಳ ಸಂಬಂಧಿಕರ ಭೇಟಿ ನಿಷೇಧಿಸಲಾಗಿದೆ. ಅದರ ಬದಲಿಗೆ “ಇ ಮುಲಾಖಾತ್‌’ ಆರಂಭಿಸಲಾಗಿದೆ. ನಿತ್ಯ 4-5 ಜನ ಮಾತನಾಡುತ್ತಾರೆ. ಹೈಕೋರ್ಟ್‌ ಸೂಚನೆ ನೀಡುವವರೆಗೂ ನೇರ ಭೇಟಿಗೆ ಅವಕಾಶ ನೀಡಲ್ಲ. ಆನ್‌ಲೈನ್‌ ನೋಂದಣಿಗೆ ಸಂದೇಹಗಳಿದ್ದರೆ ನಮ್ಮ ಸಿಬ್ಬಂದಿ ವಿವರಿಸುತ್ತಾರೆ.
*ಬಿ.ಆರ್‌.ಅಂದಾನಿ,
ಜೈಲು ಅಧೀಕ್ಷಕ, ರಾಯಚೂರು

*ಸಿದ್ಧಯ್ಯಸ್ವಾಮಿ ಕುಕುನೂರ

Advertisement

Udayavani is now on Telegram. Click here to join our channel and stay updated with the latest news.

Next