Advertisement
ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಇ-ಕೆವೈಸಿ ಪ್ರಾರಂಭ ಮಾಡಿದ್ದು ಪಡಿತರ ಚೀಟಿದಾರರು ತಮ್ಮ ಕುಟುಂಬದ ಸದಸ್ಯರ ಆಧಾರ್ ಸಂಖ್ಯೆ ಮತ್ತು ಬೆರಳಚ್ಚು ನೀಡಬೇಕಿದೆ. ಈ ಪ್ರಕ್ರಿಯೆ ತಿಂಗಳ ಮೊದಲ ವಾರ ಇರುವುದರಿಂದ ಆಹಾರ ನೀಡುವುದನ್ನು ತಾತ್ಕಾಲಿಕವಾಗಿ ಸ್ಥಗಿತ ಮಾಡಲಾಗಿದೆ. ಅನರ್ಹರಿಗೆ ಕಾರ್ಡ್ ಹಿಂಪಡೆಯಲು ಸರ್ಕಾರ ಆದೇಶಿಸಿತ್ತು ಇದರಿಂದ ನೂರಾರು ಮಂದಿ ಹಿಂಪಡೆದಿದ್ದರು.
Related Articles
Advertisement
ತಳಮಳ ಶುರು: ಕಳೆದ ಜುಲೈ ಹಾಗೂ ಆಗಸ್ಟ್ ತಿಂಗಳಿನಲ್ಲಿ ಪಡಿತರ ಚೀಟಿಗೆ ಆಧಾರ್ ಸಂಖ್ಯೆ ಜೋಡಣೆ ಮಾಡಿದ್ದರಿಂದ ಆಹಾರ ಇಲಾಖೆ ಸರ್ವರ್ ಒತ್ತಡಕ್ಕೆ ಸಿಲುಕಿತ್ತು. ಪಡಿತರ ವಿತರಣೆ ಮಂದಗತಿಯಲ್ಲಿ ಸಾಗಿತ್ತು. ಜನ ಆಧಾರ್ ಪಡೆಯಲು ಖಾಸಗಿ ಆನ್ ಲೈನ್ ಸೆಂಟರ್‌ಗಳ ಎದುರು ಆಹಾ ರಾತ್ರಿ ಜಾಗರಣೆ ಮಾಡಿದ್ದರು. ಪದೇ ಪದೆ ಇಂತಹ ಸಮಸ್ಯೆಗಳು ಕಂಡು ಬಂದ ಮೇಲೂ ಸಾಹಸದಿಂದ ಹಿಂದೆ ಸರಿದ ಇಲಾಖೆ ಈಗ ಕಡ್ಡಾಯವಾಗಿ ಇ-ಕೆವೈಸಿ ಮುಗಿಸುವ ಗುರಿಯೊಂದಿಗೆ ಹೆಜ್ಜೆ ಇಟ್ಟಿದೆ. ಈ ಪ್ರಕ್ರಿಯೆಯಲ್ಲಿ ಕುಟುಂಬದ ಒಬ್ಬ ಸದಸ್ಯ ಹೊರಗೆ ಉಳಿದರೂ ಪೂರ್ಣಗೊಳ್ಳುವುದಿಲ್ಲ . ದುಡಿಮೆಗಾಗಿ ಹೊರ ರಾಜ್ಯ ಹೊರ ಜಿಲ್ಲೆಗಳಲ್ಲಿ ಕೆಲಸ ಮಾಡುತ್ತಿರುವ ಕುಟುಂಬಗಳಲ್ಲಿ ತಳಮಳ ಶುರುವಾಗಿದೆ.
ಇಲಾಖೆಯಿಂದ ವೆಚ್ಚ ಪಾವತಿ: ಇ-ಕೆವೈಸಿಗೆ ಸಂಬಂಧಿಸಿದಂತೆ ನ್ಯಾಯಬೆಲೆ ಅಂಗಡಿಗೆ ತಗುಲಲಿರುವ ವೆಚ್ಚವನ್ನು ಇಲಾಖೆ ಭರಿಸಲಿದೆ. ಪ್ರತಿ ಸದಸ್ಯನ ಆಧಾರ್ ಮತ್ತು ಬೆರಳಚ್ಚು ಜೋಡಣೆಗೆ ಐದು ರೂ.ಗಳನ್ನು ನಿಗಧಿ ಪಡಿಸಿದೆ ಕುಟುಂಬಕ್ಕೆ ಗರಿಷ್ಠ 20 ರೂ. ಮಿತಿಯಿದೆ. ಆನ್‌ಲೈನ್‌ನಲ್ಲಿ ದಾಖಲೆಗಳನ್ನು ಪರಿಶೀಲಿಸಿದ ಮೇಲೆ ಒಟ್ಟು ಮೊತ್ತವನ್ನು ಆಯಾ ನ್ಯಾಯಬೆಲೆ ಅಂಗಡಿಗಳಿಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಪಾವತಿ ಮಾಡಲಿದೆ.
ತಾಲೂಕಿನಲ್ಲಿ 102 ನ್ಯಾಯಬೆಲೆ ಅಂಗಡಿಗಳು: ತಾಲೂಕಿನಲ್ಲಿ 102 ನ್ಯಾಯಬೆಲೆ ಅಂಗಡಿಗಳಿದ್ದು ದಂಡಿಗನಹಳ್ಳಿ ಹೋಬಳಿಯಲ್ಲಿ 18, ಶ್ರವಣಬೆಳಗೊಳ ಹೋಬಳಿ 17, ಹಿರೀಸಾವೆ ಹೋಬಳಿ 18, ಬಾಗೂರು ಹೋಬಳಿ 14, ಕಸಬಾ ಹೋಬಳಿ 10, ನುಗ್ಗೇಹಳ್ಳಿ ಹೋಬಳಿ 14 ಹಾಗೂ ಪುರಸಭೆ ವ್ಯಾಪ್ತಿಯಲ್ಲಿ 11 ನ್ಯಾಯಬೆಲೆ ಅಂಗಡಿಗಳಿದ್ದು 80 ಸಾವಿರ ಕುಟುಂಬಗಳಿಗೆ ಪ್ರತಿ ತಿಂಗಳು ಪಡಿತರ ಆಹಾರ ವಿತರಣೆ ಮಾಡಲಾಗುತ್ತಿದೆ.
ಹೆಚ್ಚುವರಿ 20 ನ್ಯಾಯಬೆಲೆ ಅಂಗಡಿಗೆ ತೆರೆಯಲು ಆಹ್ವಾನ: ಒಂದು ಸಾವಿರಕ್ಕಿಂತ ಹೆಚ್ಚು ಪಡಿತರ ಚೀಟಿ ಹೊಂದಿರುವ ನ್ಯಾಯಬೆಲೆ ಅಂಗಡಿಯ ಕೇಂದ್ರಗಳಲ್ಲಿ ಹೆಚ್ಚುವರಿ ನ್ಯಾಯಬೆಲೆ ಅಂಗಡಿ ತೆರೆಯಲು ಈಗಾಗಲೇ ಅರ್ಜಿ ಆಹ್ವಾನಿಸಲಾಗಿದೆ. ಕಸಬಾ ಹೋಬಳಿಯ ಬೆಲಸಿಂದ, ಶ್ರವಣೇರಿ, ದಿಂಡಗೂರು, ಹಾರಸೋಮನಹಳ್ಳಿ, ಶೆಟ್ಟಿಹಳ್ಳಿ, ಶ್ರವಣಬೆಳಗೊಳ ಹೋಬಳಿ ಹುಳಿಗೆರೆ. ದಂಡಿಗನಹಳ್ಳಿ ಹೋಬಳಿಯಲ್ಲಿ ತಿಪ್ಪೂರು, ಜೋಡಿಘಟ್ಟೆ, ಹಿರೇಹಳ್ಳಿ, ತರಭೇನಹಳ್ಳಿ, ಅಗ್ರಹಾರ, ಪಡುವನಹಳ್ಳಿ. ಬಾಗೂರು ಹೋಬಳಿಯ ಎಂ.ಶಿವರ, ಕೆ.ಬೈರಾಪುರ, ಬಿದರೆ, ಬಾಗೂರು. ನುಗ್ಗೇಹಳ್ಳಿ ಹೋಬಳಿ ಹೊನ್ನಮಾರನಹಳ್ಳಿ ಇಲ್ಲಿಗೆ ಈಗಾಗಲೆ ಅರ್ಜಿಗಳು ಬಂದಿವೆ. ಶ್ರವಣಬೆಳಗೊಳ ಹೋಬಳಿ ರಾಚೇನಹಳ್ಳಿ, ದಂಡಿಗನಹಳ್ಳಿ ಹೋಬಳಿ ಕತ್ತರಿಘಟ್ಟ, ದೊಡ್ಡಮತಿಘಟ್ಟ ಹಾಗೂ ಮಾಳೇನಹಳ್ಳಿಯಲ್ಲಿ ನ್ಯಾಯಬೆಲೆ ಅಂಗಡಿ ತೆರೆಯಲು ಯಾವುದೇ ಅರ್ಜಿಗಳು ಸಲ್ಲಿಕೆಯಾಗಿಲ್ಲ.
ಅನಧಿಕೃತವಾಗಿ ಬಿಪಿಎಲ್ ಕಾರ್ಡ್ ಹೊಂದಿದ್ದ ನೂರಾರು ಮಂದಿ ಸ್ವಯಂ ಪ್ರೇರಣೆಯಿಂದ ಕಾರ್ಡ್ ಹಿಂದಿರುಗಿಸಿದ್ದರು. ಇ-ಕೆವೈಸಿ ಪ್ರಾರಂಭಿಸಲಾಗಿದೆ ಇದು ತಿಂಗಳ ಮೊದಲ ಹತ್ತು ದಿನ ನಡೆಯಲಿದ್ದು ನಂತರ ಎಂದಿನಂತೆ ಪಡಿತರ ಆಹಾರ ನೀಡಲಾಗುತ್ತದೆ.-ಎಚ್.ಎಸ್.ಶಂಕರ್, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿ * ಶಾಮಸುಂದರ್ ಕೆ. ಅಣ್ಣೇನಹಳ್ಳಿ