Advertisement
ಇ-ಸೆನ್ಸಸ್ ಎಂದರೇನು?
Related Articles
Advertisement
ಇದುವರೆಗೆ ಜನಗಣತಿ ಮಾಡುತ್ತಿದ್ದುದು ಹೇಗೆ?
ದೇಶದಲ್ಲಿ ಈ ವರೆಗೆ ಪೇಪರ್ ಬಳಸಿಕೊಂಡು ಜನಗಣತಿ ಮಾಡಲಾಗುತ್ತಿತ್ತು. ಸರಕಾರಕ್ಕೆ ಸೇರಿದ ಅಧಿಕಾರಿಯೊಬ್ಬರು ಎಲ್ಲರ ಮನೆಬಾಗಿಲಿಗೆ ಹೋಗಿ, ಅವರ ಬಳಿ ಎಲ್ಲ ಮಾಹಿತಿಗಳನ್ನು ಪಡೆದು ಆಯಾ ಕಾಲಂನಲ್ಲಿ ತುಂಬುತ್ತಿದ್ದರು. ಇದಾದ ಬಳಿಕ ಕಂಪ್ಯೂಟರ್‌ನಲ್ಲಿ ಎಲ್ಲವನ್ನೂ ದಾಖಲು ಮಾಡಬೇಕಾಗಿತ್ತು.
ಜನಗಣತಿಯಲ್ಲಿ ಬದಲಾಗಿರುವುದು ಏನು?
ಕಳೆದ ತಿಂಗಳಷ್ಟೇ ಕೇಂದ್ರ ಸರಕಾರ ಈ ಬಾರಿಯ ಜನಗಣತಿಗಾಗಿ ಕೆಲವೊಂದು ಮಾರ್ಪಾಡುಗಳನ್ನು ಮಾಡಿದೆ. ಇದರ ಪ್ರಕಾರ ಜನಗಣತಿ ವೇಳೆ ಸ್ವಯಂ ನೋಂದಣಿಗೆ ಅವಕಾಶ ಮಾಡಿಕೊಡಲಾಗಿದೆ. ಅಷ್ಟೇ ಅಲ್ಲ, ದೇಶದ ಸ್ವಾಭಾವಿಕ ನಿವಾಸಿಗಳು ಎಂಬ ಕಾಲಂ ಅನ್ನೂ ಸೇರಿಸಲಾಗಿದೆ. ಅಂದರೆ ಒಂದು ಪ್ರದೇಶದಲ್ಲಿ ಹಿಂದಿನ ಆರು ತಿಂಗಳು ಮತ್ತು ಮುಂದಿನ ಆರು ತಿಂಗಳು ವಾಸಿಸುವವರಂಥವರಿಗೆ ಸ್ವಾಭಾವಿಕ ನಿವಾಸಿಗಳು ಎಂದು ಹೇಳಲಾಗುತ್ತದೆ.
ಜನನ ಮತ್ತು ಮರಣವೂ ಸೇರ್ಪಡೆ
ಮಗುವೊಂದು ಹುಟ್ಟಿದ ಕೂಡಲೇ ಈ ಇ-ಸೆನ್ಸಸ್‌ನೊಳಗೆ ಸೇರ್ಪಡೆ ಮಾಡಲಾಗುತ್ತದೆ. ಹಾಗೆಯೇ 18 ವರ್ಷ ತುಂಬಿದ ಕೂಡಲೇ ಮತದಾನ ಪಟ್ಟಿಗೂ ಹೆಸರು ಸೇರ್ಪಡೆಯಾಗುತ್ತದೆ. ಒಮ್ಮೆ ಆತ ವಯಸ್ಸಾಗಿ ಅಥವಾ ಯಾವುದೇ ಕಾರಣಕ್ಕಾಗಿ ಸಾವನ್ನಪ್ಪಿದರೂ ಜನಗಣತಿ ಪಟ್ಟಿಯಿಂದ ಡಿಲೀಟ್ ಕೂಡ ಆಗುತ್ತದೆ. ಜನಗಣತಿ ಪಟ್ಟಿಗೆ ಜನನ ಮತ್ತು ಮರಣ ನೋಂದಣಿಯನ್ನು ಸೇರಿಸಿದರೆ ಈ ಎರಡು ಪ್ರಕ್ರಿಯೆಯೂ ತನ್ನಿಂತಾನೇ ಅಪ್‌ಡೇಟ್ ಆಗುತ್ತದೆ. ಹೀಗಾಗಿ ಜನಗಣತಿ ಪಟ್ಟಿಯೂ ಹೆಚ್ಚು ನಿಖರತೆಯಿಂದ ಕೂಡಿರುತ್ತದೆ ಎಂಬುದು ಅಮಿತ್ ಶಾ ಅವರ ಮಾತು.
ಭಾರತದಲ್ಲಿ ಜನಗಣತಿ ಶುರುವಾಗಿದ್ದು ಯಾವಾಗ?
ಜನಗಣತಿ ಕಾಯ್ದೆ 1948ರ ಪ್ರಕಾರ ಪ್ರತೀ 10 ವರ್ಷಕ್ಕೊಮ್ಮೆ ಜನಗಣತಿ ನಡೆಸಲಾಗುತ್ತದೆ. ಆದರೆ ಭಾರತದಲ್ಲಿ ಮೊದಲ ಬಾರಿಗೆ ಜನಗಣತಿ ಮಾಡಿದ್ದು ಬ್ರಿಟೀಷರ ಕಾಲದಲ್ಲಿ. ಅಂದರೆ 1830ರಲ್ಲಿ. ಆಗ ಪುರುಷ ಮತ್ತು ಮಹಿಳೆಯರು, ವಯೋ ಗುಂಪು ಮತ್ತು ಮನೆಗಳು ಮತ್ತು ಆ ಮನೆಗಳಲ್ಲಿ ಹೊಂದಿರುವ ಸೌಲಭ್ಯಗಳ ಬಗ್ಗೆ ಗಣತಿ ಮಾಡಲಾಗಿತ್ತು. ಆದರೆ ಆಧುನಿಕವಾಗಿ ಜನಗಣತಿ ಮಾಡಿದ್ದು, 1865ರಿಂದ 1872ರ ವರೆಗೆ. ಇದನ್ನು ಇಡೀ ದೇಶಾದ್ಯಂತ ಮಾಡಲಾಗಿತ್ತು. ಅಂದರೆ ಈಗಿನ ಬಾಂಗ್ಲಾ, ಪಾಕಿಸ್ಥಾನವನ್ನೂ ಸೇರಿಸಿಕೊಂಡು ಸಂಪೂರ್ಣ ಜನಸಂಖ್ಯೆಯ ದಾಖಲೀಕರಣ ಮಾಡಲಾಗಿತ್ತು. ಈಗಲೂ ಇದನ್ನೇ ದೇಶದ ಮೊದಲ ಜನಗಣತಿ ಎಂದು ಕರೆಯಲಾಗುತ್ತದೆ.
ಏನಿರುತ್ತದೆ?
ಸಾಮಾನ್ಯವಾಗಿ ಜನಗಣತಿ ಎಂದರೆ ಕೇವಲ ಜನರನ್ನು ಎಣಿಸುವುದಲ್ಲ. ಇದರಲ್ಲಿ ಜನರಿಗೆ ಸಂಬಂಧಿಸಿದ ಬೇರೆ ಬೇರೆ ಸಂಗತಿಗಳೂ ದಾಖಲಾಗುತ್ತವೆ. ಅಂದರೆ ಎಷ್ಟು ಕುಟುಂಬಗಳಿವೆ? ಅವರ ಆರ್ಥಿಕ ಚಟುವಟಿಕೆಗಳು, ಸಾಕ್ಷರತೆ, ಶಿಕ್ಷಣ, ಮನೆ, ನಗರೀಕರಣ, ಹುಟ್ಟು ಮತ್ತು ಸಾವು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಮಾಹಿತಿ, ಭಾಷೆ, ಧರ್ಮ, ವಲಸೆ, ಅಂಗವೈಕಲ್ಯ ಇನ್ನಿತರ ಸಾಮಾಜಿಕ, ಸಾಂಸ್ಕೃತಿಕ ಮತ್ತು ಪ್ರದೇಶಾವಾರು ಜನಸಂಖ್ಯೆಯ ಲೆಕ್ಕಾಚಾರಗಳು ಇರುತ್ತವೆ.
ಕಡೆಯ ಬಾರಿ ಜನಗಣತಿಯಾಗಿದ್ದು ಯಾವಾಗ?
2011ರಲ್ಲಿ ದೇಶದಲ್ಲಿ ಕಡೆಯ ಬಾರಿ ಜನಗಣತಿಯಾಗಿತ್ತು. ಆಗ ಎರಡು ಹಂತಗಳಲ್ಲಿ ಗಣತಿ ನಡೆದಿತ್ತು. ಮೊದಲಿಗೆ ಮನೆಗಳ ಸಂಖ್ಯೆ, ಎರಡನೇಯ ಹಂತದಲ್ಲಿ ಜನರ ಗಣತಿ ಮಾಡಲಾಗಿತ್ತು. ಇದು ದೇಶದ 15ನೇ ಜನಗಣತಿ. ಅಂದರೆ 1872ರಿಂದ ಇಲ್ಲಿವರೆಗೆ ನಡೆಸಿರುವುದು. ಸ್ವತಂತ್ರ ಭಾರತದಲ್ಲಿ ಏಳು ಬಾರಿ ಗಣತಿ ನಡೆಸಲಾಗಿದೆ.
ಈಗ ನಡೆದಿದೆಯೇ?
2020ರ ಮಾರ್ಚ್‌ನಿಂದ ಜನಗಣತಿ ಆರಂಭವಾಗಬೇಕಾಗಿತ್ತು. ಆದರೆ ಕೊರೊನಾ ಕಾರಣದಿಂದಾಗಿ ಅನಿರ್ದಿಷ್ಟಾವಧಿಗೆ ಇದು ಮುಂದೂಡಿಕೆಯಾಯಿತು. ಭಾರತದ ಇತಿಹಾಸದಲ್ಲೇ ಮೊದಲ ಬಾರಿಗೆ ಜನಗಣತಿಯನ್ನು ಮುಂದೂಡಿಕೆ ಮಾಡಲಾಗಿದೆ. ವಿಶೇಷವೆಂದರೆ ಈಗಲೂ ಜನಗಣತಿ ಯಾವಾಗ ಆರಂಭವಾಗಲಿದೆ ಎಂಬ ಮಾಹಿತಿ ಯಾರಿಗೂ ಇಲ್ಲ. ಈ ಬಗ್ಗೆ ಕೇಂದ್ರ ಸರಕಾರ ಇನ್ನೂ ಏನನ್ನೂ ಹೇಳಿಲ್ಲ. ಹೀಗಾಗಿಯೇ ಸದ್ಯ ಎಲ್ಲ ರಾಜ್ಯಗಳಿಗೂ ಕೇಂದ್ರ ಸರಕಾರ ಒಂದು ಸೂಚನೆ ನೀಡಿದ್ದು, ಜಿಲ್ಲೆಗಳು ಸೇರಿದಂತೆ ಯಾವುದೇ ನಾಗರಿಕ, ಪೊಲೀಸ್ ಗಡಿಗಳನ್ನು ಬದಲಾಯಿಸಬೇಡಿ ಎಂದಿದೆ. ಅಂದರೆ 2022ರ ಜೂನ್‌ನವರೆಗೆ ಈ ಆದೇಶ ಜಾರಿಯಲ್ಲಿರುತ್ತದೆ. ಹಾಗೆಯೇ ಇದರ ಮತ್ತೂಂದು ಅಪಾಯವೂ ಇದೆ. ಒಮ್ಮೆ ಜನಗಣತಿ ಡೇಟಾ ಸೋರಿಕೆಯಾದರೆ, ಖಾಸಗಿ ಮಾಹಿತಿಗಳು ಬಹಿರಂಗವಾಗುವ ಅಪಾಯವೂ ಇದೆ ಎಂದು ತಜ್ಞರು ಹೇಳುತ್ತಾರೆ.