ಗದಗ: ಕೋವಿಡ್-19 ಭೀತಿ ಹಿನ್ನೆಲೆಯಲ್ಲಿ ಇತ್ಯರ್ಥವಾಗದ ಲೋಕ ಅದಾಲತ್ ಪ್ರಕರಣಗಳನ್ನು ಸೆ. 19ರಂದು ನಡೆಯುವ ಮೆಗಾ ಇ-ಲೋಕ ಅದಾಲತ್ ಮೂಲಕ ವಿಲೇವಾರಿಗೆ ಕ್ರಮ ವಹಿಸಲಾಗಿದೆ ಎಂದು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷ ನ್ಯಾಯಮೂರ್ತಿ ಅರವಿಂದಕುಮಾರ ತಿಳಿಸಿದರು.
ಜಿಲ್ಲಾ ನ್ಯಾಯಾಲಯದಲ್ಲಿ ವಿಡಿಯೋ ಕಾನ್ಫೆರೆನ್ಸ್ ಮೂಲಕ ಪತ್ರಿಕಾಗೋಷ್ಠಿಯಲ್ಲಿ ನಡೆಸಿ ಮಾತನಾಡಿದ ಅವರು, ಕೋವಿಡ್ ಹಿನ್ನೆಲೆಯಲ್ಲಿ 6 ತಿಂಗಳಿಂದ ನ್ಯಾಯಾಲಯದಲ್ಲಿ ಲೋಕ ಅದಾಲತ್ ಮೂಲಕ ಯಾವುದೇ ರೀತಿಯ ಪ್ರಕರಣ ಇತ್ಯರ್ಥಪಡಿಸಲು ಸಾಧ್ಯವಾಗಿಲ್ಲ. ಆದ್ದರಿಂದ ಕಕ್ಷಿದಾರರು ನ್ಯಾಯಾಲಯಕ್ಕೆ ಬರದೇ ಮನೆಯಲ್ಲೇ ಕುಳಿತು ಇಲ್ಲವೇ ವಕೀಲರ ಕಚೇರಿಯಲ್ಲಿ ಕುಳಿತು ರಾಜಿ ಸಂಧಾನದ ಮೂಲಕ ಪ್ರಕರಣಗಳನ್ನು ಇತ್ಯರ್ಥ ಪಡಿಸಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.
ಸೆ. 19ರಂದು ದೇಶದಲ್ಲೇ ಪ್ರಥಮ ಬಾರಿಗೆ ಇ-ಲೋಕ ಅದಾಲತ್ ಪ್ರಾರಂಭ ಮಾಡಲಾಗುತ್ತಿದೆ. ಸರ್ವರಿಗೂ ನ್ಯಾಯ ದೊರಕಿಸುವ ಕೊಡುವ ಉದ್ದೇಶ, ಧ್ಯೇಯ ವಾಖ್ಯವಾಗಿದೆ. ಇ-ಅದಾಲತ್ ಪ್ರಾರಂಭಿಸುವ ಉದ್ದೇಶದಿಂದ ವಿಮಾ ಕಂಪನಿಗಳ ಮೇಲಾಧಿಕಾರಿಗಳ ಜೊತೆ ಸಂಪರ್ಕ ಮಾಡಿ, ಪರಿಹಾರ ನೀಡಲು ತೊಂದರೆಗಳ ಬಗ್ಗೆ ಚರ್ಚಿಸಿ ಪರಿಹಾರ ಬರದೇ ತೊಂದರೆಗೊಳದಾದವರಿಗೆ ತುರ್ತಾಗಿ ಪರಿಹಾರ ಸಿಗುವಂತೆ ಮಾಡಲಾಗುತ್ತಿದೆ. 4 ತಿಂಗಳಿಂದ ವಕೀಲರುಗಳಿಗೆ ಆದ ತೊಂದರೆ ನಿವಾರಣೆಗೆ ಅನುಕೂಲವಾಗಲಿದೆ ಎಂದು ನ್ಯಾಯಮೂರ್ತಿ ಅರವಿಂದಕುಮಾರ ತಿಳಿಸಿದರು.
ಕರ್ನಾಟಕ ಹೈಕೋರ್ಟ್ ಲೀಗಲ್ ಸರ್ವಿಸಸ್ ಕಮಿಟಿ ಅಧ್ಯಕ್ಷ ಅಲೋಕ ಆರಾಧ್ಯ ಮಾತನಾಡಿ, ಸಣ್ಣಪುಟ್ಟ ಪ್ರಕರಣಗಳಿದ್ದರೆ ಇನ್ಮುಂದೆ ಕೋರ್ಟ್‌ಗಳಿಗೆ ಅಲೆದಾಡುವ ಅಗತ್ಯವಿಲ್ಲ. ವಕೀಲರ ಕಚೇರಿ ಇಲ್ಲವೇ ಮನೆಯಲ್ಲಿಯೇ ಇದ್ದು, ಮೊಬೈಲ್ ಆ್ಯಪ್ ಮೂಲಕ ದಾಖಲಾತಿಗಳನ್ನು ಅಪ್ ಲೋಡ್ ಮಾಡಿದರೆ ಅವರಿಗೆ ನ್ಯಾಯವನ್ನು ದೊರೆಕಿಸುವ ಕೆಲಸ ಮಾಡಲಾಗುತ್ತದೆ. ಜಿಲ್ಲಾ, ತಾಲೂಕವಾರು ಈ ಕಾರ್ಯಕ್ರಮ ಮಾಡಲಾಗುತ್ತಿದೆ. ಈ ಕಾರ್ಯಕ್ರಮ ಕುರಿತು ಧಾರವಾಡ ಮತ್ತು ಕಲಬುರಗಿಯಲ್ಲಿ ಸಭೆ ಮಾಡಿ ಸಾಧಕ, ಬಾಧಕಗಳ ಬಗ್ಗೆ ವಿಮರ್ಶೆ ಮಾಡಲಾಗಿದೆ. ವಕೀಲರು ಹಾಗೂ ಬಾರ್ ಕೌನ್ಸಲಿಂಗ್‌ನ ಅಧ್ಯಕ್ಷರ ಜೊತೆ ಸಮಾಲೋಚನೆ ಮಾಡಲಾಗಿದೆ.
ವಿಡಿಯೋ ಕಾನ್ಪರೆನ್ಸ್ ನಂತರ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾ ಧೀಶರಾದ ರಾಜಶೇಖರ ಪಾಟೀಲ ಮಾತನಾಡಿ, ಇ-ಲೋಕ್ ಅದಾಲತ್‌ಗೆ ಸೆ. 18ರ ವರೆಗೆ ನೋಂದಣಿ ಮಾಡಿಕೊಳ್ಳಲಾಗುತ್ತಿದೆ. ಸೆ. 19ರಂದು ಏಕಕಾಲಕ್ಕೆ ಇ-ಲೋಕ ಅದಾಲತ್ ನಡೆಸಲಾಗುತ್ತಿದ್ದು, ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷ ನಿರ್ದೇಶನದ ಮೇರೆಗೆ ಜಿಲ್ಲೆ ಹಾಗೂ ಅಧೀನ ನ್ಯಾಯಾಲಯಗಳಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಸ್.ಜಿ. ಸಲಗರೆ ಉಪಸ್ಥಿತರಿದ್ದರು.
ಜಿಲ್ಲೆಯಲ್ಲಿ ಈಗಾಗಲೇ ಇತ್ಯರ್ಥವಾಗದ ಒಟ್ಟು 11656 ಪ್ರಕರಣಗಳೆವೆ. ಚೆಕ್ ಬೌನ್ಸ, ಅಪಘಾತ ಪರಿಹಾರ, ವಾಹನ ವಿಮಾ ಕಂತು ಬಾಕಿ, ಭೂಮಿ ಖರೀದಿ, ಬಾಡಿಗೆ ಸಂಬಂಧಿ ತ 718 ಪ್ರಕರಣಗಳನ್ನು ರಾಜೀಗಾಗಿ ನಿಗದಿಪಡಿಸಲಾಗಿದ್ದು, 508 ಪ್ರಕರಣಗಳಿಗೆ ಇ-ಅದಾಲತ್‌ಗೆ ಹಾಜರಾಗಲು ತಿಳಿಸಲಾಗಿದೆ.
-ನ್ಯಾ| ರಾಜಶೇಖರ ಪಾಟೀಲ, ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು