ಪಣಜಿ: ಗೋವಾದ ಜುವಾರಿ ಸೇತುವೆಯಿಂದ ಗುರುವಾರ ಬೆಳಗಿನ ಜಾವ ಕಾರೊಂದು ನದಿಗೆ ಉರುಳಿದ ಘಟನೆ ನಡೆದಿದ್ದು, ಸುಮಾರು 12 ಗಂಟೆಗಳ ಬಳಿಕ ಅಪಘಾತಕ್ಕೀಡಾದ ಕಪ್ಪು ಬಣ್ಣದ ಡಸ್ಟರ್ ಕಾರನ್ನು ಪತ್ತೆ ಹಚ್ಚುವಲ್ಲಿ ಶೋಧ ತಂಡ ಯಶಸ್ವಿಯಾಗಿದೆ. ಇದೀಗ ಕಾರಿನಲ್ಲಿದ್ದ 4 ಮೃತದೇಹಗಳನ್ನೂ ಕಾರಿನ ಶೀಟ್ ಕತ್ತರಿಸಿ ಹೊರ ತೆಗೆಯಲಾಗಿದೆ.
ಜುವಾರಿ ಸೇತುವೆಯಿಂದ ಅಪಘಾತ ಸಂಭವಿಸಿದ ನಂತರ ನೌಕಾಪಡೆ ಮತ್ತು ಕೋಸ್ಟ್ ಗಾರ್ಡ್‍ನಿಂದ ರಕ್ಷಣಾ ಕಾರ್ಯಾಚರಣೆ ಕೈಗೊಳ್ಳಲಾಯಿತು. 12 ಗಂಟೆಗಳ ನಿರಂತರ ಪ್ರಯತ್ನದ ನಂತರ ಕ್ರೇನ್ ಸಹಾಯದಿಂದ ನದಿಯಲ್ಲಿ ಮುಳುಗಿದ್ದ ಕಾರನ್ನು ಹೊರತೆಗೆಯಲಾಯಿತು. ಅಲ್ಲದೇ ಕಾರಿನಲ್ಲಿದ್ದ ನಾಲ್ವರು ಕೂಡ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವುದು ಸ್ಪಷ್ಟವಾಯಿತು
ಅಪಘಾತ ಭೀಕರವಾಗಿದ್ದು ಕಾರಿನಲ್ಲಿದ್ದವರು ಬದುಕುಳಿಯುವ ಸಾಧ್ಯತೆ ಇಲ್ಲ ಎನ್ನುವುದನ್ನು ಮೊದಲೇ ಅಂದಾಜಿಸಲಾಗಿತ್ತು. ಕಟ್ಟರ್ ಸಹಾಯದಿಂದ ಕಾರಿನ ಶೀಟ್ ಕತ್ತರಿಸಿ ನಾಲ್ಕೂ ಶವಗಳನ್ನು ಹೊರ ತೆಗೆಯಲಾಗಿದೆ. ಮೃತದೇಹಗಳನ್ನು ಸಹ ಗುರುತಿಸಲಾಗಿದ್ದು, ಮರಣೋತ್ತರ ಪರೀಕ್ಷೆಯ ನಂತರ ಶವಗಳನ್ನು ಕುಟುಂಬ ಸದಸ್ಯರಿಗೆ ಹಸ್ತಾಂತರಿಸುವುದಾಗಿ ಮಾಹಿತಿ ಲಭ್ಯವಾಗಿದೆ.
ಮೃತ ದುರ್ದೈವಿಗಳು ಅಲ್ವಿನ್ ಅರಾವ್‍ಜಿ, ಹೆನ್ರಿ ಅರಾಜೋ, ಪ್ರೆಸಿಲ್ಲಾ ಕ್ರೂಜ್, ಆಸ್ಟಿನ್ ಫರ್ನಾಂಡಿಸ್ ಎಂದು ಗುರುತಿಸಲಾಗಿದೆ.
ವೇಗವಾಗಿ ಕಾರನ್ನು ಓಡಿಸುತ್ತಿದ್ದುದೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಈ ಕಾರು ಟ್ಯಾಕ್ಸಿಯನ್ನು ಓವರ್ ಟೇಕ್ ಮಾಡಲು ಪ್ರಯತ್ನಿಸಿದಾಗ ಕಾರು ಸೇತುವೆಯ ಬಲಭಾಗಕ್ಕೆ ಢಿಕ್ಕಿ ಹೊಡೆದಿದ್ದು, ಪರಿಣಾಮ ಸೇತುವೆಯ ದಡ ಒಡೆದು ನದಿಗೆ ಬಿದ್ದಿದೆ.
ಬೆಳಗಿನ ಜಾವದಿಂದಲೇ ಶೋಧ ಕಾರ್ಯ ಆರಂಭಗೊಂಡಿದ್ದು, ಕತ್ತಲೆಯಾದ ಕಾರಣ ಹುಡುಕಾಟ ಮುಂದುವರಿಸಲು ತೊಂದರೆಯಾಗಿದ್ದು, ಬೆಳಗ್ಗೆ ಮತ್ತೆ ಕಾರ್ಯಾಚರಣೆ ಆರಂಭಗೊಂಡು ಕಾರನ್ನು ನದಿಯಿಂದ ಮೇಲೆತ್ತುವಲ್ಲಿ ರಕ್ಷಣಾ ತಂಡ ಯಶಸ್ವಿಯಾಗಿದೆ. ಈ ಕಾರು ಲೊಟ್ಲಿಯಿಂದ ಪಣಜಿ ಕಡೆಗೆ ಬರುತ್ತಿತ್ತು ಎನ್ನಲಾಗಿದೆ.
ಈ ಘಟನೆಗೆ ಸಂಬಂಧಿಸಿದಂತೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.