Advertisement

“ವಿಶೇಷ ಅರಣ್ಯ ಘಟಕ’ಪ್ರಸ್ತಾವನೆಗೆ ಧೂಳು

06:49 AM Jun 02, 2019 | Team Udayavani |

ಬೆಂಗಳೂರು: ವಿದೇಶ ಹಾಗೂ ಹೊರ ರಾಜ್ಯಗಳಿಗೆ ಅರಣ್ಯ ಸಂಪನ್ಮೂಲ ಹಾಗೂ ವನ್ಯಜೀವಿಗಳ ಕಳ್ಳಸಾಗಣೆ ತಡೆಗಟ್ಟುವ ನಿಟ್ಟಿನಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ “ವಿಶೇಷ ಅರಣ್ಯ ಘಟಕ’ ಆರಂಭಿಸುವ ಕುರಿತು ಅರಣ್ಯ ಇಲಾಖೆ ಸಲ್ಲಿಸಿದ್ದ ಪ್ರಸ್ತಾವನೆ ಒಂದೂವರೆ ವರ್ಷದಿಂದ ವಿಧಾನಸೌಧದಲ್ಲಿ ಧೂಳು ಹಿಡಿಯುತ್ತಿದೆ.

Advertisement

ವಿಮಾನ ನಿಲ್ದಾಣದಲ್ಲಿ ಅರಣ್ಯ ಸಂಬಂಧಿ ಸಂಪನ್ಮೂಲಗಳ ಕಳ್ಳಸಾಗಣೆ ಹೆಚ್ಚು ವರದಿಯಾಗುತ್ತಿರುವುದರಿಂದ ಅಲ್ಲೊಂದು ತಜ್ಞರನ್ನೊಳಗೊಂಡ ವಿಶೇಷ ಅರಣ್ಯ ಘಟಕ ಆರಂಭಿಸಲು ಅರಣ್ಯ ಇಲಾಖೆ ಮುಂದಾಗಿತ್ತು. ಘಟಕ ಸ್ಥಾಪನೆಗೆ ರಾಜ್ಯ ಸರ್ಕಾರದ ಅನುಮತಿ ಜತೆಗೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರದ (ಬಿಐಎಎಲ್‌) ಒಪ್ಪಿಗೆ, ವಿಮಾನ ನಿಲ್ದಾಣದಲ್ಲಿ ಸ್ಥಳಾವಕಾಶ, ಸಿಬ್ಬಂದಿ ಸಹಕಾರದ ಅವಶ್ಯಕತೆ ಇದೆ.

ಹೀಗಾಗೇ, ಅರಣ್ಯ ಇಲಾಖೆ 2018 ಫೆಬ್ರವರಿ ತಿಂಗಳಲ್ಲಿ ರಾಜ್ಯ ಸರ್ಕಾರದ ಅನುಮತಿ ಕೋರಿ ಹಾಗೂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಜತೆ ಚರ್ಚಿಸಿ ಒಪ್ಪಿಗೆ ಕೊಡಿಸುವ ಕುರಿತು ಪ್ರಸ್ತಾವನೆ ಸಲ್ಲಿಸಿದೆ. ಆದರೆ, ರಾಜ್ಯ ಸರ್ಕಾರದ ನಿರ್ಲಕ್ಷ್ಯದಿಂದ ಪ್ರಸ್ತಾವನೆ ಮೂಲೆ ಗುಂಪಾಗಿದೆ.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಾರ್ಗೋ ಸೇವೆ ಹಾಗೂ ಪ್ರಯಾಣಿಕರ ಲಗೇಜು ಮೂಲಕ ಆನೆ ದಂತದ ತುಂಡು ಹಾಗೂ ಉತ್ಪನ್ನಗಳು, ವನ್ಯ ಪ್ರಾಣಿಗಳ ಚರ್ಮ, ಉಗುರಿನ ಉತ್ಪನ್ನಗಳು, ಶ್ರೀಗಂಧ, ರಕ್ತ ಚಂದನ, ಎರಡು ತಲೆ ಹಾವು, ಸ್ಟಾರ್‌ ಆಮೆ ಸೇರಿ ಹಲವು ಅರಣ್ಯ ಉತ್ಪನ್ನಗಳು ಹೊರ ರಾಜ್ಯ ಹಾಗೂ ವಿದೇಶಗಳಿಗೆ ಅಕ್ರಮ ಸಾಗಣೆ ಆಗುತ್ತಿವೆ ಎಂಬ ಮಾಹಿತಿ ಅರಣ್ಯ ಇಲಾಖೆಗೆ ಲಭ್ಯವಾಗಿದೆ.

ಜತೆಗೆ ವಿಮಾನ ನಿಲ್ದಾಣದಲ್ಲಿ ವಾರ್ಷಿಕ ಸುಮಾರು 50ರಿಂದ 60 ಅರಣ್ಯ ಸಂಪನ್ಮೂಲ ಕಳ್ಳಸಾಗಣೆ ಪ್ರಕರಣಗಳು ದಾಖಲಾಗುತ್ತಿವೆ. ಸದ್ಯ ಅರಣ್ಯ ಸಂಪನ್ಮೂಲ ಅಕ್ರಮ ಸಾಗಣೆ ಸಂಶಯ ಬಂದರೆ ಈ ಕುರಿತು ಪ್ರಕರಣ ದಾಖಲಿಸಿಕೊಳ್ಳುತ್ತಿರುವ ವಿಮಾನ ನಿಲ್ದಾಣ ಪೊಲೀಸ್‌ ಠಾಣೆ ಸಿಬ್ಬಂದಿ, ಹೆಚ್ಚುವರಿ ತನಿಖೆಗೆ ಅರಣ್ಯ ಇಲಾಖೆ ಮೊರೆ ಹೋಗಬೇಕಿದೆ.

Advertisement

ನುರಿತ ಸಿಬ್ಬಂದಿ ಬೇಕು: ಸದ್ಯ ವಿಮಾನ ನಿಲ್ದಾಣದ ಭದ್ರತೆ ವಹಿಸಿಕೊಂಡಿರುವ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ಸಿಬ್ಬಂದಿಗೆ ಪ್ರಾಣಿಗಳ ಚರ್ಮ, ಉಗುರುಗಳಿಂದ ತಯಾರಿಸಿದ ಉತ್ಪನ್ನಗಳನ್ನು ಗುರುತಿಸುವುದು ಕಷ್ಟವಾಗುತ್ತದೆ.

ಇದಕ್ಕಾಗಿ ಅರಣ್ಯ ಇಲಾಖೆಯಲ್ಲಿ ತರಬೇತಿ ಪಡೆದಿರುವ ನುರಿತ ಸಿಬ್ಬಂದಿ ಅವಶ್ಯಕತೆ ಇದ್ದು, ಅವರು ಸಿಐಎಸ್‌ಎಫ್ ಜತೆ ಜಂಟಿಯಾಗಿ ಕಾರ್ಯನಿರ್ವಹಿಸಿದರೆ ಸುಲಭವಾಗಿ ಅರಣ್ಯ ಸಂಪನ್ಮೂಲಗಳ ಕಳ್ಳಸಾಗಣೆ ತಡೆಗಟ್ಟಬಹುದು ಎಂಬ ಉದ್ದೇಶದೊಂದಿಗೆ ವಿಶೇಷ ಘಟಕ ಸ್ಥಾಪನೆಗೆ ಪ್ರಸ್ತಾವನೆ ಸಿದ್ಧಪಡಿಸಲಾಗಿತ್ತು ಎಂದು ಅರಣ್ಯ ಇಲಾಖೆ ಅಧಿಕಾರಿ ತಿಳಿಸಿದರು.

ಘಟಕ ಸ್ಥಾಪನೆಗೆ ಅನುಮತಿ ದೊರೆತರೆ ಒಬ್ಬ ಉಪವಲಯ ಅರಣ್ಯಾಧಿಕಾರಿಯನ್ನು ನಿಯೋಜನೆ ಮಾಡಲಾಗುತ್ತದೆ. ಜತೆಗೆ ಅರಣ್ಯ ಉತ್ಪನ್ನ ಹಾಗೂ ವನ್ಯ ಜೀವಿಗಳ ಕುರಿತು ಪರಿಣತಿ ಪಡೆದಿರುವ ಹಾಗೂ ತರಬೇತಿ ಪಡೆದ ಸಿಬ್ಬಂದಿ, ನಿತ್ಯ ಮೂರು ಪಾಳಿಯಲ್ಲಿ ತಲಾ ಇಬ್ಬರಂತೆ ಕಾರ್ಯನಿರ್ವಹಿಸುತ್ತಾರೆ. ಜತೆಗೆ ಅರಣ್ಯ ಇಲಾಖೆಯಿಂದ ತರಬೇತಿ ಪಡೆದ ಶ್ವಾನದಳವೂ ಇರಲಿದೆ.

ಸರ್ಕಾರಕ್ಕೆ ಮತ್ತೊಮ್ಮೆ ಪತ್ರ: ವಿಶೇಷ ಅರಣ್ಯ ಘಟಕ ಸ್ಥಾಪಿಸುವ ಪ್ರಸ್ತಾವನೆ ಕುರಿತು ಶೀಘ್ರ ಕ್ರಮ ಕೈಗೊಳ್ಳಲು ಹಾಗೂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರ ಜತೆ ಚರ್ಚಿಸಲು ರಾಜ್ಯ ಸರ್ಕಾರಕ್ಕೆ ಮತ್ತೂಮ್ಮೆ ಪತ್ರ ಬರೆಯಲು ಅರಣ್ಯ ಇಲಾಖೆ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.

ಅರಣ್ಯ ಸಂಪನ್ಮೂಲಗಳ ಕಳ್ಳ ಸಾಗಾಣೆ ತಡೆಗಟ್ಟಲು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಶೇಷ ಅರಣ್ಯ ಘಟಕದ ಅವಶ್ಯಕತೆ ಇದೆ. ಈ ಕುರಿತು ಕಳೆದ ವರ್ಷ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಅನುಮತಿ ಸಿಕ್ಕ ಕೂಡಲೇ ಘಟಕ ಆರಂಭಿಸಿ, ಅರಣ್ಯ ಸಂಪನ್ಮೂಲಗಳ ಅಕ್ರಮ ಸಾಗಣೆಯನ್ನು ಶಾಶ್ವತವಾಗಿ ತಡೆಯಲಾಗುವುದು.
-ಪುನಾಟಿ ಶ್ರೀಧರ್‌, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ

* ಜಯಪ್ರಕಾಶ್‌ ಬಿರಾದಾರ್‌

Advertisement

Udayavani is now on Telegram. Click here to join our channel and stay updated with the latest news.

Next