Advertisement

ಗುರುವಾಯನಕೆರೆ ಜಂಕ್ಷನ್‌ನಲ್ಲಿ ಧೂಳು 

12:02 PM Sep 12, 2018 | Team Udayavani |

ಬೆಳ್ತಂಗಡಿ: ಹೆದ್ದಾರಿಯ ಹೊಂಡಗಳಿಗೆ ಮುಕ್ತಿ ನೀಡುವ ಹಿನ್ನೆಲೆಯಲ್ಲಿ ಇಲಾಖೆಯು ಜಲ್ಲಿ ಹುಡಿ ಹಾಕಿ ತಾತ್ಕಾಲಿಕ ಪರಿಹಾರ ನೀಡಿತ್ತು. ಆದರೆ ಇದೀಗ ಇದೇ ಹುಡಿಯಿಂದ ಧೂಳು ಸೃಷ್ಟಿಯಾಗಿ ಸ್ಥಳೀಯರು ತೊಂದರೆ ಅನುಭವಿಸುವಂತಾಗಿದ್ದು, ಗುರುವಾಯನಕೆರೆ ಜಂಕ್ಷನ್‌ಗೆ ಇದು ದೊಡ್ಡ ಹೊಡೆತ ನೀಡಿದೆ.

Advertisement

ಸಂಬಂಧಪಟ್ಟವರ ಬಳಿ ದೂರಿ ನೀಡಿ ಪರಿಹಾರ ಕಾಣದೆ ಧೂಳು ತಿಂದು ಸೋತಿರುವ ವರ್ತಕರು ಸೇರಿ ಮಂಗಳವಾರದಿಂದ ಪಿಕ್‌ಅಪ್‌ ಮೂಲಕ ಪ್ರತಿ ದಿನ ನೀರು ಹಾಕುವ ಕಾರ್ಯ ಆರಂಭಿಸಿದ್ದು. ಧೂಳಿನ ತೀವ್ರತೆಯನ್ನು ಕಂಡು 1 ಅಥವಾ 2 ಬಾರಿ ನೀರು ಹಾಕುವ ತೀರ್ಮಾನಕ್ಕೆ ಬಂದಿದ್ದಾರೆ.

ಗುರುವಾಯನಕೆರೆ ಜಂಕ್ಷನ್‌ನಲ್ಲಿ ಹೆದ್ದಾರಿ ಪೂರ್ತಿ ಹದಗೆಟ್ಟಿರುವ ಕಾರಣ ಇಲಾಖೆಯು ಇಡೀ ಪೇಟೆಯಲ್ಲಿ ಡಸ್ಟ್‌ ಹಾಕಿದೆ. ಆದರೆ ಕಳೆದ 2 ವಾರಗಳಿಂದ ಮಳೆ ದೂರವಾಗಿರುವ ಕಾರಣ ಸುಮಾರು 50ಕ್ಕೂ ಅಧಿಕ ಅಂಗಡಿಗಳಿಗೆ ಧೂಳು ತಿನ್ನುವ ದೌರ್ಭಾಗ್ಯ ಲಭಿಸಿದೆ. ವರ್ತಕರು ಈಗಾಗಲೇ ಹಲವು ಬಾರಿ ಗುತ್ತಿಗೆದಾರರಿಗೆ ಮನವಿ ಮಾಡಿ ನೀರು ಹಾಕಿಸುವ ಕೆಲಸ ಮಾಡಿದ್ದಾರೆ.

ಧೂಳು ಹಿಡಿಯುತ್ತಿದೆ
ಗುರುವಾಯನಕೆರೆ ಜಂಕ್ಷನ್‌ನಲ್ಲಿ ದಿನಸಿ, ತರಕಾರಿ, ಬೇಕರಿ, ಎಲೆಕ್ಟ್ರಾನಿಕ್ಸ್‌, ಹೊಟೇಲ್‌, ಹಾರ್ಡ್‌ವೇರ್‌ ಹೀಗೆ ಎಲ್ಲ ಬಗೆಯ ಅಂಗಡಿಗಳಿವೆ. ಆದರೆ ಧೂಳಿನಿಂದ ವರ್ತಕರಿಗೆ ವ್ಯಾಪಾರವೇ ಇಲ್ಲದಂತಾಗಿದೆ. ಹೊಸ ವಸ್ತು ಕೂಡ ಒಂದೇ ದಿನದಲ್ಲಿ ಧೂಳು ಹಿಡಿದು ಹಳತಾಗುತ್ತಿದೆ. ಯಾರೋ ಮಾಡಿದ ತಪ್ಪಿನಿಂದಾಗಿ ಪ್ರಸ್ತುತ ವರ್ತಕರು ಧೂಳು ತಿನ್ನಬೇಕಾದ ಸ್ಥಿತಿ ಇದೆ ಎಂದು ಆರೋಪಿಸುತ್ತಾರೆ.

ನಾವು ಸಣ್ಣ ತಪ್ಪು ಮಾಡಿದರೂ ಗ್ರಾ.ಪಂ. ನವರು ಓಡಿಕೊಂಡು ಬರುತ್ತಾರೆ. ಎಲ್ಲಿಯಾದರೂ ಕಸ ಹಾಕಿದರೆ ನೋಟಿಸ್‌ ನೀಡುತ್ತಾರೆ. ಆದರೆ ಈಗ ಧೂಳಿನಿಂದ ನಮಗೆ ಆರೋಗ್ಯ ತೊಂದರೆ ಎದುರಾದರೂ ಯಾರೂ ಮಾತನಾಡುತ್ತಿಲ್ಲ ಎಂದು ಸ್ಥಳೀಯ ವರ್ತಕರೊಬ್ಬರು ತಿಳಿಸಿದ್ದಾರೆ.

Advertisement

30 ರೂ.ನಂತೆ ಸಂಗ್ರಹ
ಮಂಗಳವಾರದಿಂದ ಸ್ಥಳೀಯ ನವಶಕ್ತಿ ಹಾರ್ಡ್‌ವೇರ್‌ ಸಂಸ್ಥೆಯ ಕೊಳವೆಬಾವಿ ಹಾಗೂ ಟ್ಯಾಂಕ್‌ನ ಮೂಲಕ ಪಿಕ್‌ ಅಪ್‌ ವಾಹನದಲ್ಲಿ ಹೆದ್ದಾರಿಗೆ ನೀರು ಹಾಕಲಾಗುತ್ತಿದೆ. ಇಡೀ ಪೇಟೆಗೆ ನೀರು ಹಾಕಬೇಕಾದರೆ ಸುಮಾರು 3-4 ಟ್ರಿಪ್‌ ನೀರು ಬೇಕಾಗುತ್ತದೆ. ಹೀಗಾಗಿ ಪಿಕ್‌ಅಪ್‌ಗೆ ಬಾಡಿಗೆ ನೀಡುವುದಕ್ಕಾಗಿ ಪ್ರತಿಯೊಬ್ಬರೂ ದಿನಕ್ಕೆ 30 ರೂ. ನೀಡುವ ನಿರ್ಧಾರಕ್ಕೆ ಬಂದಿದ್ದಾರೆ. 750 ಲೀ.ನ ಎರಡು ಟ್ಯಾಂಕ್‌ಗಳನ್ನು ಪಿಕ್‌ಅಪ್‌ನಲ್ಲಿಟ್ಟು ನೀರು ಹಾಕಲಾಗುತ್ತಿದೆ.

ಇಲಾಖೆಗೆ ಬರೆಯುತ್ತೇವೆ
ಗ್ರಾ.ಪಂ.ನಿಂದ ಹೆದ್ದಾರಿ ಇಲಾಖೆಗೆ ಬರೆಯುವ ನಿರ್ಣಯ ತೆಗೆದುಕೊಳ್ಳಲಾಗಿದೆ. ಜತೆಗೆ ತಾ.ಪಂ. ಗೂ ರಸ್ತೆಗೆ ನೀರು ಹಾಕುವುದಕ್ಕೆ ಮನವಿ ಮಾಡಲಾಗುವುದು. ಧೂಳಿನ ಸಮಸ್ಯೆಗೆ ಗಾ.ಪಂ.ನಿಂದ ಸಾಧ್ಯವಾದಷ್ಟು ಕ್ರಮ ಕೈಗೊಳ್ಳುವ ಪ್ರಯತ್ನ ಮಾಡಲಾಗುತ್ತದೆ. ಜತೆಗೆ ಡಾಮರು ಆಗುತ್ತದೆ ಎಂಬ ಮಾತುಗಳೂ ಕೇಳಿಬರುತ್ತಿವೆ.
– ಅಶೋಕ್‌ ಕೋಟ್ಯಾನ್‌
ಅಧ್ಯಕ್ಷರು, ಕುವೆಟ್ಟು ಗ್ರಾ.ಪಂ.

Advertisement

Udayavani is now on Telegram. Click here to join our channel and stay updated with the latest news.

Next