ಗುಂಡ್ಲುಪೇಟೆ(ಚಾಮರಾಜನಗರ): ತಾಲೂಕಿನ ಬಂಡೀಪುರ ಅಭಯಾರಣ್ಯದಿಂದ ವಿಶ್ವ ವಿಖ್ಯಾತ ದಸರಾ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳಲು ಹೊರಟ ಮೂರು ಆನೆಗಳ ಪೈಕಿ ರೋಹಿತಾ(17) ಮತ್ತು ಹಿರಣ್ಯ(47) ಎಂಬ ಎರಡು ಆನೆಗಳಿಗೆ ಶಾಸಕ ಎಚ್.ಎಂ.ಗಣೇಶಪ್ರಸಾದ್ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸುವ ಮೂಲಕ ಪಯಣಕ್ಕೆ ಗುರುವಾರ ಚಾಲನೆ ನೀಡಿದರು.
ಬಂಡೀಪುರ ರಾಷ್ಟ್ರೀಯ ಉದ್ಯಾನದ ಮದ್ದೂರು ಅರಣ್ಯ ವಲಯ ಕಚೇರಿ ಆವರಣದಲ್ಲಿ ನಡೆದ ಸಮಾರಂಭದಲ್ಲಿ ರಾಂಪುರ ಸಾಕಾನೆ ಶಿಬಿರದ ರೋಹಿತ ಮತ್ತು ಹಿರಣ್ಯ ಆನೆಗಳಿಗೆ ಬಣ್ಣದ ಚಿತ್ತಾರ, ವಿವಿಧ ಬಗೆಯ ಹೂವುಗಳಿಂದ ಅಲಂಕರಿಸಲಾಗಿತ್ತು. ಅರ್ಚಕರು ಆನೆಗಳಿಗೆ ವಿಶೇಷ ಪೂಜೆ ಸಲ್ಲಿಸಿದರು. ಶಾಸಕ ಎಚ್.ಎಂ.ಗಣೇಶ್‍ಪ್ರಸಾದ್ ಕಬ್ಬು, ಬೆಲ್ಲ ತಿನಿಸಿ, ಪೂಜೆ ಸಲ್ಲಿಸುವ ಮೂಲಕ ಪುಷ್ಪಾರ್ಚನೆ ನೆರವೇರಿಸಿ ಗಜ ಪಯಣಕ್ಕೆ ಶುಭ ಕೋರಿ ಆನೆಗಳಿಂದ ಆರ್ಶೀವಾದ ಪಡೆದರು.
ಈ ವೇಳೆ ಮಾತನಾಡಿದ ಶಾಸಕ ಎಚ್.ಎಂ.ಗಣೇಶಪ್ರಸಾದ್, ಬಂಡೀಪುರದಿಂದ ನಾಡ ಹಬ್ಬ ದಸರಾದಲ್ಲಿ ಪಾಲ್ಗೊಳ್ಳಲು ಮೂರು ಆನೆಗಳು ಹೋಗುತ್ತಿರುವುದು ಹೆಮ್ಮೆಯ ವಿಚಾರ. ಇಂದು ಸಾಂಪ್ರದಾಯಿಕವಾಗಿ ರೋಹಿತ ಮತ್ತು ಹಿರಣ್ಯ ಎಂಬ ಎರಡು ಆನೆಗಳಿಗೆ ಪೂಜೆ ಸಲ್ಲಿಸಿರುವುದು ಖುಷಿ ಕೊಟ್ಟಿದೆ. ಈ ಮೂಲಕ ದಸರಾ ಹಬ್ಬ ಯಶಸ್ವಿಯಾಗಲಿ ಎಂದು ಹಾರೈಸಿದರು.
ಬಂಡೀಪುರ ನೂತನ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಪ್ರಭಾಕರನ್ ಮಾತನಾಡಿ, ಬಂಡೀಪುರ ರಾಷ್ಟ್ರೀಯ ಉದ್ಯಾನದಿಂದ ನಾಡಹಬ್ಬ ದಸರಾದಲ್ಲಿ ಪಾಲ್ಗೊಳ್ಳಲಿರುವ ಸಾಕಾನೆಗಳಿಗೆ ಎಲ್ಲಾ ರೀತಿಯ ತರಬೇತಿ ನೀಡಲಾಗಿದೆ. ರಾಂಪುರ ಆನೆ ಶಿಬಿರದ ಸೌಮ್ಯ ಸ್ವಭಾವದ ಆನೆಗಳು ಯಶಸ್ವಿಯಾಗಿ ದಸರಾದಲ್ಲಿ ಭಾವವಹಿಸಿ ವಾಪಸ್ಸಾಗಲಿ ಎಂದು ಹಾರೈಸಿದರು.
ತಹಸೀಲ್ದಾರ್ ಟಿ.ರಮೇಶ್‍ಬಾಬು, ಚಾಮುಲ್ ನಿರ್ದೇಶಕ ಎಚ್.ಎಸ್.ನಂಜುಂಡಪ್ರಸಾದ್, ಜಿಪಂ ಮಾಜಿ ಉಪಾಧ್ಯಕ್ಷ ಕೆ.ಎಸ್.ಮಹೇಶ್, ಮಾಜಿ ಸದಸ್ಯರಾದ ಕೆರೆಹಳ್ಳಿನವೀನ್, ಬಿ.ಎಂ.ಮುನಿರಾಜು, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷರಾದ ಎಚ್.ಎನ್.ಬಸವರಾಜು, ಎಸ್.ಎಸ್.ಮಧುಶಂಕರ್, ಮಾಜಿ ಸದಸ್ಯ ಬೆಟ್ಟಹಳ್ಳಿ ಕೆಂಪರಾಜು, ವನ್ಯಜೀವಿ ತಜ್ಞೆ ಶೃತಿ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಬಿ.ಆರ್.ರಾಜೇಶ್, ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ಬಿ.ಎಸ್.ಸಿದ್ದಪ್ಪಾಜಿ, ಎಸಿಎಫ್‍ಗಳಾದ ನವೀನ್, ರವೀಂದ್ರ, ಕೆ.ಪರಮೇಶ್, ವಲಯ ಅರಣ್ಯಾಧಿಕಾರಿ ಬಿ.ಎಂ.ಮಲ್ಲೇಶ್, ಸತೀಶ್, ನವೀನ್‍ಕುಮಾರ್, ನರೇಶ್, ಪುಟ್ಟರಾಜು ಸೇರಿದಂತೆ ಅರಣ್ಯ ಇಲಾಖೆ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.
ಆಯ್ಕೆಯಾಗಿದ್ದ ಮತ್ತೊಂದು ಆನೆ ಪಾರ್ಥಸಾರಥಿಯನ್ನು ಮದವೇರಿದ್ದ ಕಾರಣ ನಂತರದಲ್ಲಿ ಕಳುಹಿಸಿಕೊಡಲಾಗುವುದು ಎಂದು ಹೆಡಿಯಾಲ ಎಸಿಎಫ್ ಕೆ.ಪರಮೇಶ್ ತಿಳಿಸಿದರು.